ಮೈಸೂರು: ಶಾಸಕ ಸಾ.ರಾ.ಮಹೇಶ್ ಪತ್ನಿ ಮಾಲೀಕತ್ವದ ಕಲ್ಯಾಣ ಮಂಟಪ ನಿರ್ಮಾಣದಲ್ಲಿ ಭೂ ಅಕ್ರಮ ನಡೆಸಿದ್ದಾರೆ ಎನ್ನಲಾದ ದಾಖಲೆಗಳನ್ನು ಆರ್.ಟಿ.ಐ. ಕಾರ್ಯಕರ್ತ ಗಂಗರಾಜು ಬಿಡುಗಡೆ ಮಾಡಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲೇ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದಾರೆ. ಹಾಗೂ ಸಾ.ರಾ. ಮಹೇಶ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಗಂಗರಾಜು ಒತ್ತಾಯಿಸಿದರು.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಗಂಗರಾಜು, 19 ವರ್ಷಗಳ ಹಿಂದೆ ಕಲ್ಯಾಣ ಮಂಟಪಕ್ಕಾಗಿ ಒತ್ತುವರಿ ಮಾಡಿಕೊಂಡಿದ್ದ ಜಾಗವನ್ನು ಕಳೆದ ವರ್ಷ ಹರಾಜಿನಲ್ಲಿ ಸಾ.ರ. ಮಹೇಶ್ ತಾಯಿ, ಅತ್ತೆ, ನಾದಿನಿ ಹೆಸರಿಗೆ ಮಂಜೂರು ಮಾಡಲಾಗಿತ್ತು. ಆ ಜಾಗವನ್ನು ಕೆಲವು ವರ್ಷಗಳ ಹಿಂದೆಯೇ ಡಿನೋಟಿಫಿಕೇಷನ್ ಮಾಡಲಾಗಿತ್ತು. ಆದರೆ, ಆ ವ್ಯಾಪ್ತಿಯಲ್ಲಿ ಮುಡಾದಿಂದ ನಿವೇಶನ ಪಡೆದಿದ್ದರು. ಈ ಕುರಿತು ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಲಾಗಿತ್ತು. ನಂತರ ಎಚ್ಚೆತ್ತ ಸಾ.ರಾ.ಮಹೇಶ್ ಮುಡಾದಿಂದ ನಿವೇಶನ ಪಡೆದಿದ್ದವರಿಗೆ ಬದಲಿ ನಿವೇಶನ ಮಂಜೂರು ಮಾಡಿದ್ದಾರೆ.
ಈ ಪ್ರಕರಣದಲ್ಲಿ ಮುಡಾ ಆಯುಕ್ತ ಡಾ. ಡಿ.ಬಿ ನಟೇಶ್ ಕೂಡ ಶಾಮೀಲಾಗಿದ್ದಾರೆ ಎಂದು ಗಂಗರಾಜು ತಿಳಿಸಿದ್ದಾರೆ. ಕಲ್ಯಾಣ ಮಂಟಪಕ್ಕಾಗಿ ಕಬಳಿಸಿದ್ದ ಜಾಗವನ್ನು ವಿವಿಧ ಅಳತೆಯ ನಿವೇಶನಗಳನ್ನಾಗಿ ಗುರುತಿಸಿ, ಮುಡಾದಿಂದ ಹರಾಜಿಗೆ ಒಳಪಡಿಸಿ ಸಾ.ರಾ. ಮಹೇಶ್ ಖರೀದಿ ಮಾಡಲು ನಟೇಶ್ ನೆರವು ಮಾಡಿಕೊಟ್ಟಿದ್ದಾರೆ. ಈ ಬಗ್ಗೆ ದೂರು ನೀಡಿದರೂ ನಟೇಶ್ ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ, ಅನ್ಲೈನ್ ಹರಾಜಿನಲ್ಲಿ ಆಯುಕ್ತರ ಮೌಖಿಕ ಆದೇಶದ ಮೇಲೆ ಸಾರಾ ಮಹೇಶ್ ಸಂಬಂಧಿಕರಿಗೆ ನಿವೇಶನಗಳು ಮಂಜೂರು ಮಾಡಲಾಗಿದೆ. ನಟೇಶ್ ಅವರನ್ನು ತಕ್ಷಣ ಬೇರೆಡೆ ವರ್ಗಾವಣೆ ಮಾಡಬೇಕು ಹಾಗೂ ಸಾ.ರಾ. ಮಹೇಶ್ ವಿರುದ್ಧ ತನಿಖೆ ಆಗಬೇಕು ಎಂದು ಗಂಗರಾಜು ಒತ್ತಾಯಿಸಿದ್ದಾರೆ.
ಈ ಹಿಂದೆ ಕೆ.ಆರ್. ನಗರದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸಾ.ರಾ. ಮಹೇಶ್ ವಿರುದ್ಧ ಭೂ ಅಕ್ರಮದ ಕುರಿತು ಆರೋಪಿಸಿದ್ದರು. ರಾಜಕಾಲುವೆ ಹಾಗೂ ಗೋಮಾಳಕ್ಕೆ ಸಂಬಂಧಿಸಿದ ಪ್ರಕರ್ಣದಲ್ಲಿ, ಸಾ.ರಾ. ಮಹೇಶ್ ಆ ಜಾಗದಲ್ಲಿ ಅಕ್ರಮವಾಗಿ ಕಲ್ಯಾಣ ಮಂಟಪವನ್ನು ನಿರ್ಮಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ ಆಗ ಮಾಜಿ ಸಚಿವ ಸಾ.ರಾ. ಮಹೇಶ್ ʼರೋಹಿಣಿ ಸಿಂಧೂರಿ ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ತರಲು ನನ್ನ ಮೇಲೆ ಸುಳ್ಳು ಆರೋಪವನ್ನು ಮಾಡುತ್ತಿದ್ದಾರೆʼ ಎಂದು ಆರೋಪವನ್ನು ಖಂಡಿಸಿದ್ದರು. ಅಲ್ಲದೆ, ಆದಾಯ ವಿಭಾಗದ ಅಧಿಕಾರಿಗಳು ಮಾಜಿ ಸಚಿವ ಸಾ.ರಾ. ಮಹೇಶ್ ಅವರಿಗೆ ಕ್ಲೀನ್ ಚಿಟ್ ನೀಡಿದ್ದರು.
ಇದನ್ನೂ ಓದಿ: ನನಗೆ ಗೃಹ ಸಚಿವನಾಗುವ ಶಕ್ತಿ ಇದೆ: ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿಕೆ