Site icon Vistara News

Semi conductor Unit : ರಾಜ್ಯದ ಕೈತಪ್ಪಿದ ಸೆಮಿ ಕಂಡಕ್ಟರ್‌ ಘಟಕ; ತೆಲಂಗಾಣಕ್ಕೆ ಶಿಫ್ಟ್

Mohan das pai MB Patil semi conductor unit

ಬೆಂಗಳೂರು: ಮೈಸೂರಿನಲ್ಲಿ ಆರಂಭವಾಗಲಿದೆ ಎಂದು ಹೇಳಲಾಗಿದ್ದ ಕೇಯ್ನ್ಸ್ ಟೆಕ್ನಾಲಜೀಸ್ (Kaynes Technology) ಇಂಡಿಯಾ ಲಿಮಿಟೆಡ್‌ ಕಂಪನಿಯ ಸೆಮಿ ಕಂಡಕ್ಟರ್‌ ಘಟಕ (Semi conductor Unit) ಈಗ ತೆಲಂಗಾಣಕ್ಕೆ ಶಿಫ್ಟ್‌ ಆಗಿದೆ. ಈ ವಿಚಾರದಲ್ಲಿ ಈಗ ಉದ್ಯಮಿ ಮೋಹನ್‌ದಾಸ್‌ ಪೈ (Mohandas pai) ಮತ್ತು ರಾಜ್ಯದ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ (MB Patil) ನಡುವೆ ಸಣ್ಣಮಟ್ಟದ ಜಟಾಪಟಿ ನಡೆದಿದೆ.

ಕೇಯ್ನ್‌ ಟೆಕ್ನಾಲಜಿ ಸಂಸ್ಥೆ ಮೈಸೂರಿನಲ್ಲಿ 2800 ಕೋಟಿ ರೂ. ಹೂಡಿಕೆಯ ಸೆಮಿ ಕಂಡಕ್ಟರ್‌ ಯೋಜನೆಯನ್ನು ಆರಂಭಿಸಲು ಉದ್ದೇಶಿಸಿತ್ತು. ಅದಕ್ಕಾಗಿ ಸರ್ಕಾರದ ಜತೆ ಒಡಂಬಡಿಕೆಯನ್ನು ಕೂಡಾ ಮಾಡಿಕೊಂಡಿತ್ತು. ಈ ಯೋಜನೆ ಬಂದರೆ ಸುಮಾರು 3200 ಉದ್ಯೋಗವಕಾಶ ಸಿಗುವ ಸಾಧ್ಯತೆ ಇತ್ತು. ಎಲ್ಲವೂ ಸರಿಯಾಗಿಯೇ ನಡೆಯುತ್ತಿದೆ ಎನ್ನುವಾಗಲೇ ಸಂಸ್ಥೆಯೂ ಹೈದರಾಬಾದ್‌ ಸಮೀಪ ಸೆಮಿ ಕಂಡಕ್ಟರ್‌ ಘಟಕ ಸ್ಥಾಪನೆಗೆ ಭೂಮಿ ಪೂಜೆಯನ್ನು ಮಾಡಿ ಅಚ್ಚರಿ ಮೂಡಿಸಿದೆ.

ಸರ್ಕಾರಕ್ಕೆ ಮೋಹನ್‌ ದಾಸ್‌ ಪೈ ತರಾಟೆ

ಈ ಸುದ್ದಿಯ ತುಣುಕನ್ನು ಇಟ್ಟುಕೊಂಡು ಹಿರಿಯ ಉದ್ಯಮಿ ಮೋಹನ್‌ ದಾಸ್‌ ಪೈ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅದಕ್ಕಿಂತಲೂ ಹೆಚ್ಚಾಗಿ ಬೇಸರ ವ್ಯಕ್ತಪಡಿಸಿದ್ದಾರೆ.

ನಮ್ಮ ಉದಾಸೀನ ಮತ್ತು ನಿರ್ಲಕ್ಷ್ಯದ ಪ್ರತಿಕ್ರಿಯೆಗಳಿಂದಾಗಿ ಮೈಸೂರಿನಿಂದ ಒಂದು ಒಳ್ಳೆಯ ಕಂಪನಿಯನ್ನು ನಾವು ಹೊರಗೆ ಓಡಿಸಿದ್ದೇವೆ. ಇದು ಕರ್ನಾಟಕದ ಪಾಲಿಗೆ ಅತ್ಯಂತ ಬೇಸರದ ದಿನ. ಯಾಕೆ ನಾವು ಹೀಗೆ ಕೈಗಾರಿಕೆಗಳನ್ನು ಓಡಿಸುತ್ತಿದ್ದೇವೆ. ಹೀಗೆ ಮಾಡಿದರೆ ನಾವು ಉದ್ಯೋಗ ಸೃಷ್ಟಿ ಮಾಡುವುದು ಹೇಗೆ? ಎಂದು ಕೇಳಿದ್ದಾರೆ. ಸಿದ್ದರಾಮಯ್ಯ, ಪ್ರಿಯಾಂಕ ಖರ್ಗೆ, ಡಿ.ಕೆ. ಶಿವಕುಮAರ್‌ ಮತ್ತು ಎಂ.ಬಿ. ಪಾಟೀಲ್‌ ಅವರನ್ನು ಪ್ರಶ್ನೆ ಮಾಡಿದ್ದಾರೆ.

ಸರ್ಕಾರದಿಂದ ಸಣ್ಣ ಲೋಪವೂ ಆಗಿಲ್ಲ ಎಂದ ಎಂ.ಬಿ ಪಾಟೀಲ್‌

ಈ ನಡುವೆ, ಸೆಮಿಕಂಡಕ್ಟರ್ ವಲಯದ ಕೇಯ್ನ್ಸ್ ಟೆಕ್ನಾಲಜೀಸ್ ಇಂಡಿಯಾ ಲಿಮಿಟೆಡ್ ರಾಜ್ಯದಲ್ಲಿ ತನ್ನ ಘಟಕ ಸ್ಥಾಪಿಸುವ ಸಂಬಂಧ ಸಲ್ಲಿಸಿದ್ದ ಪ್ರಸ್ತಾವಕ್ಕೆ ಸ್ಪಂದಿಸುವುದರಲ್ಲಿ ಸರ್ಕಾರದ ಕಡೆಯಿಂದ ಒಂದು ಸಣ್ಣ ಲೋಪವೂ ಆಗಿಲ್ಲ ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಶುಕ್ರವಾರ ಸಮರ್ಥಿಸಿಕೊಂಡಿದ್ದಾರೆ.

ಉದ್ಯಮಿ ಮೋಹನ್ ದಾಸ್ ಪೈ ಅವರು ಕೇಯ್ನ್ಸ್ ಟೆಕ್ನಾಲಜೀಸ್ ಕಂಪನಿಯು ಮೈಸೂರಿಗೆ ಬದಲಾಗಿ ತೆಲಂಗಾಣದಲ್ಲಿ ತನ್ನ ಒ ಎಸ್ ಎ ಟಿ (ಔಟ್ ಸೋರ್ಸ್ಡ್ ಸೆಮಿಕಂಡಕ್ಟರ್ ಅಸೆಂಬ್ಲಿ ಆಂಡ್ ಟೆಸ್ಟ್) ಘಟಕದ ನಿರ್ಮಾಣ ಕಾರ್ಯ ಆರಂಭಿಸಿದೆ. ಕರ್ನಾಟಕದ ವಿಳಂಬ ಧೋರಣೆ ಇದಕ್ಕೆ ಕಾರಣ ಎಂದು ಎಕ್ಸ್ ನಲ್ಲಿ ಹಾಕಿರುವ ಸಂಬಂಧ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ ಅವರು ಹೀಗೆ ಹೇಳಿದರು.

ರೂ. 500 ಕೋಟಿಗಿಂತ ಹೆಚ್ಚಿನ ಮೊತ್ತದ ಉದ್ದಿಮೆ ಸ್ಥಾಪನೆ ಪ್ರಸ್ತಾವಗಳಿಗೆ ಮುಖ್ಯಮಂತ್ರಿ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿಯಲ್ಲಿ ಅನುಮೋದನೆ ಅಗತ್ಯ. ಹೀಗಿದ್ದರೂ, ನಾವು ಕೇಯ್ನ್ಸ್ ಕಂಪನಿಗೆ ಸಮಿತಿ ಸಭೆ ನಡೆಯುವುದಕ್ಕೆ ಮುಂಚಿತವಾಗಿಯೇ ಅನುಮೋದನೆ ಕೊಟ್ಟು ಸರ್ಕಾರಿ ಆದೇಶ (ಜಿಒ) ನೀಡಿದ್ದೆವು. ಇಷ್ಟೆಲ್ಲಾ ಮಾಡಿರುವಾಗ ಸರ್ಕಾರದಿಂದ ವಿಳಂಬ ಧೋರಣೆ ಎಂದು ದೂಷಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ಕೇಯ್ನ್ಸ್ ಕಂಪನಿಯು ತೆಲಂಗಾಣಕ್ಕೆ ಹೋಗಿರುವುದಕ್ಕೆ ತನ್ನದೇ ಕಾರಣಗಳಿರಬಹುದು. ಅವರು ನಮ್ಮಿಂದ ಇನ್ನೂ ಹೆಚ್ಚಿನ ವಿನಾಯಿತಿಗಳನ್ನು ಬಯಸಿದ್ದರೋ ಏನೋ ಗೊತ್ತಿಲ್ಲ. ನಾವು ಸರ್ಕಾರದ ನಿಯಮಗಳ ಪ್ರಕಾರ ನಿಗದಿತ ವಿನಾಯಿತಿಗಳನ್ನು ಕೊಡಲು ಸಿದ್ಧರಿದ್ದೇವೆ‌. ಈ ಸಂಬಂಧ ಅವರು ಮುಖ್ಯಮಂತ್ರಿ ಜತೆಗೂ ಚರ್ಚಿಸಿದ್ದರು. ಆದರೆ ಕಂಪನಿಯ ನಿರೀಕ್ಷೆ ಅದಕ್ಕಿಂತ ಹೆಚ್ಚಿಗೆ ಇದ್ದಾಗ ನಾವು ನಿಯಮ ಮೀರಲು ಸಾಧ್ಯವಾಗುವುದಿಲ್ಲ ಎಂದು ಪಾಟೀಲ ಸ್ಪಷ್ಟಪಡಿಸಿದರು.

ನಾವು ಅಮೆರಿಕಕ್ಕೆ ನಿಯೋಗ ಹೋಗಿದ್ದ ಸಂದರ್ಭದಲ್ಲಿಯೂ ಕೇಯ್ನ್ಸ್ ಕಂಪನಿಯ ಜೊತೆ ಸಂಪರ್ಕದಲ್ಲಿದ್ದು ಸ್ಪಂದಿಸಿದ್ದೆವು ಎಂದು ಅವರು ಹೇಳಿದರು.

ಇದನ್ನೂ ಓದಿ: MB Patil : ಬೆಂಗಳೂರಿನಲ್ಲಿ 800 ಕೋಟಿ ರೂ. ಹೂಡಲು ಕ್ರಿಪ್ಟನ್ ಸೊಲ್ಯೂಷನ್ಸ್ ಒಲವು: ಎಂ.ಬಿ. ಪಾಟೀಲ್

ಮೋಹನದಾಸ್‌ ಪೈ ಅವರಿಗೆ ವಿಷಯ ಗೊತ್ತಿಲ್ಲ ಎಂದ ಪಾಟೀಲ್‌

ಮೋಹನ್ ದಾಸ್ ಪೈ ಅವರಿಗೆ ಬಹುಶಃ ಈ ಬೆಳವಣಿಗೆಗಳ ಬಗ್ಗೆ ಮಾಹಿತಿ ಇಲ್ಲದೇ ಇರಬಹುದು. ನಮ್ಮ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಆಯುಕ್ತರು ಅವರೊಂದಿಗೆ ಮಾತನಾಡಿ ವಿವರಿಸಲಿದ್ದಾರೆ ಎಂದು ಸಚಿವರು ಹೇಳಿದರು. ರಾಜ್ಯವು ಹೂಡಿಕೆಯನ್ನು ಸೆಳೆಯುವುದರಲ್ಲಿ ಮುಂಚೂಣಿಯಲ್ಲೇ ಇದೆ. ಸದ್ಯದಲ್ಲೇ 25 ಸಾವಿರ ಕೋಟಿ ರೂಪಾಯಿಗಳಷ್ಟು ಹೂಡಿಕೆಗಳು ಇಲ್ಲಿ ಆಗಲಿವೆ ಎಂದರು.

Exit mobile version