ಮೈಸೂರು: ಮಾಜಿ ಸಿಎಂ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವರುಣ ಕ್ಷೇತ್ರದಲ್ಲಿ ಗುರುವಾರ ಭರ್ಜರಿ ಪ್ರವಾಸ ಮಾಡಿದ್ದಾರೆ.
ಈ ಹಿಂದೆ ತಾವು ಪ್ರತಿನಿಧಿಸಿದ್ದ ಕ್ಷೇತ್ರದಲ್ಲಿ ಈಗ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಇದ್ದು, ಮೇಲ್ನೋಟಕ್ಕೆ ಪುತ್ರನಿಗಾಗಿ ಕ್ಷೇತ್ರ ಸಂಚಾರ ಮಾಡುತ್ತಿರುವುದಾಗಿ ಭಾಸವಾಗುತ್ತಿದೆ. ಆದರೆ ಅವರ ಪ್ರವಾಸದ ಶೈಲಿ ಬೇರೆಯದೇ ಕಥೆ ಹೇಳುತ್ತಿದೆ.
ಈ ಬಾರಿ ಎರಡು ದಿನಗಳ ಕಾಲ ವರುಣ ಕ್ಷೇತ್ರ ಪ್ರವಾಸ ಹಮ್ಮಿಕೊಂಡಿರುವ ಸಿದ್ದರಾಮಯ್ಯ, ಸೇತುವೆ ಉದ್ಘಾಟನೆ, ಹಾಲು ಶಿಥಿಲಿಕರಣ ಘಟಕ, ಭವನಗಳ ಉದ್ಘಾಟನೆ ನೆಪದಲ್ಲಿ ಗ್ರಾಮ ಗ್ರಾಮಗಳ ಸಂಚಾರ ಮಾಡುತ್ತಿದ್ದಾರೆ. ತಾಂಡವಪುರ, ಬಸವನಪುರ, ಕೆಂಪಿಸಿದ್ದನಹುಂಡಿ, ಹಿಮ್ಮಾವು, ಬೊಕ್ಕಳ್ಳಿ, ಹದಿನಾರು, ಮಲ್ಲರಾಜಯ್ಯನ ಹುಂಡಿ ಹದಿನಾರು ಮೊಳೆ, ಸುತ್ತೂರು ಗ್ರಾಮಗಳಲ್ಲಿ ಸಂಚರಿಸಲಿದ್ದಾರೆ.
ಗ್ರಾಮಗಳ ಭೇಟಿ ನೆಪದಲ್ಲಿ ಪರಿಸ್ಥಿತಿ ಅವಲೋಕನ ನಡೆಸುತ್ತಿರುವ ಸಿದ್ದರಾಮಯ್ಯ, ವರುಣ ಕ್ಷೇತ್ರದಿಂದಲೇ ಸ್ಪರ್ಧೆಗೆ ಹೆಚ್ಚು ಒಲವು ತೋರಿಸಿರುವಂತೆ ಭಾಸವಾಗುತ್ತಿದೆ. ನಂಜನಗೂಡು ನಂಜನಗೂಡು ಹದಿನಾರು ಮೋಳೆ ಗ್ರಾಮದಲ್ಲಿ ಸಿದ್ದರಾಮಯ್ಯ ಅವರಿಗೆ ಅದ್ಧೂರಿ ಸ್ವಾಗತ ನೀಡಲಾಯಿತು. ಗ್ರಾಮದ ಮಹಿಳೆಯರು ಆರತಿ ಬೆಳಗಿ ಬರಮಾಡಿಕೊಂಡರು. ತೆರೆದ ಜೀಪ್‌ನಲ್ಲಿ ಸಿದ್ದರಾಮಯ್ಯ ರೋಡ್ ಶೋ ನಡೆಸುತತಿರುವಾಗ ಜೆಸಿಬಿ ಮೂಲಕ ನೆಚ್ಚಿನ ನಾಯಕನಿಗೆ ಹೂಮಳೆ ಸುರಿಸಲಾಯಿತು. ಭಗೀರಥ ಭವನ ಉದ್ಘಾಟಿಸಿದ ಸಿದ್ದರಾಮಯ್ಯ ಅವರಿಗೆ ಮಾಜಿ ಸಚಿವ ಡಾ. ಎಚ್.ಸಿ. ಮಹದೇವಪ್ಪ, ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಎಂಎಲ್‌ಸಿ ಡಾ.ತಿಮ್ಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ, ಮಹದೇವಪ್ಪ ಪುತ್ರ ಸುನೀಲ್ ಬೋಸ್ ಸಾಥ್ ನೀಡಿದರು.
ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಜಾತಿ ವ್ಯವಸ್ಥೆಯಿಂದಾಗಿ ಅಸಮಾನತೆ ಉಂಟಾಗಿದೆ. ರೈತರು, ಶ್ರಮಿಕರು, ಕಾಯಕ ಸಮುದಾಯವರು ಜಾತಿ ಕಾರಣಕ್ಕೆ ಅನ್ಯಾಯಕ್ಕೆ ಒಳಗಾಗಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದ ಮೂಲಕ ಸಮಾನತೆ ತರಲು ಪ್ರಯತ್ನ ಮಾಡಿದ್ದಾರೆ. ಅವಕಾಶ ವಂಚಿತರಿಗೆ ಶಕ್ತಿ ತುಂಬಬೇಕು.
ಅಸಮಾನತೆ ತೊಡೆದು ಹಾಕದೇ ಹೋದರೆ ಅನ್ಯಾಯ ಆಗುತ್ತದೆ. ಎಸ್‌ಸಿ, ಎಸ್‌ಟಿ ಅಭಿವೃದ್ಧಿ ವಿಚಾರಕ್ಕೆ ಸ್ಪಷ್ಟ ಕಾನೂನು ಇರಲಿಲ್ಲ. ನಾನು ಸಿಎಂ ಆಗಿದ್ದಾಗ 2013ರಲ್ಲಿ ಕಾನೂನು ರೂಪಿಸಿದೆವು. ಪರಿಶಿಷ್ಟ ವರ್ಗದವರು ಶೇ.7ರಷ್ಟು, ಪರಿಶಿಷ್ಟ ಜಾತಿಯವರು ಶೇ.17.15ರಷ್ಟು ಇದ್ದಾರೆ. ನಾನು ಮುಖ್ಯಮಂತ್ರಿ ಆಗಿದ್ದಾಗ ಉಪ್ಪಾರ ಸಮುದಾಯದವರನ್ನು ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಿಸಿದೆ. ಉಪ್ಪಾರ ಸಮುದಾಯದ ಸ್ವಾಮೀಜಿ ಕೇಳಿದ್ದನ್ನೆಲ್ಲ ಮಾಡಿಕೊಟ್ಟಿದ್ದೇನೆ. ಮುಂದೆ ನಾವು ಅಧಿಕಾರಕ್ಕೆ ಬಂದರೆ ಮುಂದುವರಿಸುತ್ತೇವೆ ಎಂದರು.
ಈ ವೇಳೆ ಸಾರ್ವಜನಿಕರು, ʼವರುಣ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ ಎಂದು ಘೋಷಿಸಿʼ ಎಂದು ಕೂಗಿದರು. ಅದಕ್ಕೆ ಹೇ ಸುಮ್ನಿರೋ, ಸುಮ್ನೆ ಕೂತೋಕೋಳೋ ಎಂದು ನಗುನಗುತ್ತಲೆ ಗದರಿದರು. ನಾನು ಅರ್ಜಿ ಹಾಕಿದ್ದೇನೆ. ನಿರ್ಧಾರ ಲೆಫ್ಟ್ ಟು ಹೈಕಮಾಂಡ್ (ಹೈಕಮಾಂಡ್‌ಗೆ ಬಿಟ್ಟಿದ್ದು) ಎಂದು ನಮೂದಿಸಿದ್ದೇನೆ. ಬಾದಾಮಿ, ಕೋಲಾರ, ವರುಣಾ ಈ ಮೂರರಲ್ಲಿ ಹೈಕಮಾಂಡ್ ಎಲ್ಲಿ ಸೂಚಿಸುತ್ತದೆಯೋ ಅಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದರು.
ಸಿದ್ದರಾಮಯ್ಯ ಸ್ಪರ್ಧೆ ಮಾಡಬಹುದು ಎಂಬ ಸಂಭಾವ್ಯತೆ ಇರುವ ಚಾಮರಾಜಪೇಟೆಯನ್ನು ಎಲ್ಲಿಯೂ ಹೆಸರಿಸಲಿಲ್ಲ. ಹಾಗೆಯೇ, ವರುಣ ಕ್ಷೇತ್ರದಲ್ಲಿ ಸಂಚರಿಸಿದ್ದು ಪತ್ರನಿಗೆ ಶಕ್ತಿ ತುಂಬಲೋ ಅಥವಾ ತಾವೇ ಸ್ಪರ್ಧಿಸುವ ವಾತಾವರಣವಿದೆಯೇ ಎಂದು ಪರಿಶೀಲಿಸಲೋ ಎಂಬುದನ್ನು ಮಾತ್ರ ಪ್ರಶ್ನೆಯಾಗಿಯೇ ಉಳಿಸಿದರು.
ಇದನ್ನೂ ಓದಿ | ಕೋಲಾರ ಕಾಂಗ್ರೆಸ್‌ನಲ್ಲಿ ಕೋಲಾಹಲ: ಸಿದ್ದರಾಮಯ್ಯ ಸ್ಪರ್ಧೆ ಕುರಿತು ಮುನಿಯಪ್ಪ ಎದುರೇ ಜಟಾಪಟಿ