ಮೈಸೂರು: ಮನೆಯಲ್ಲೇ ದಂಪತಿ ಅನುಮಾನಾಸ್ಪದವಾಗಿ (Suspicious Case) ಮೃತಪಟ್ಟಿದ್ದಾರೆ. ಮೈಸೂರಿನ ಪಿರಿಯಾಪಟ್ಟಣದ ಗೊಲ್ಲರ ಬೀದಿಯಲ್ಲಿ ಘಟನೆ ನಡೆದಿದೆ. ಪ್ರಕಾಶ್ (51), ಯಶೋಧ (48) ಮೃತಪಟ್ಟವರು.
ಪ್ರಕಾಶ್ ಅವರು ರಸ್ತೆ ಬದಿ ಕ್ಯಾಂಟಿನ್ ನಡೆಸುತ್ತಿದ್ದರೆ, ಯಶೋಧಾ ಪ್ಲೋರ್ ಮಿಲ್ ನಡೆಸುತ್ತಿದ್ದರು. ಭಾನುವಾರ ಇಬ್ಬರು ಮನೆಯಲ್ಲೇ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಇನ್ನೂ ದೇಹದ ಮೇಲೂ ಯಾವುದೇ ಗಾಯದ ಗುರುತು ಇಲ್ಲ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದನ್ನು ತಿಳಿಯಲು ಎಲ್ಲ ಆಯಾಮದಲ್ಲೂ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ಮೃತರ ಮೊಬೈಲ್‌ಗಳನ್ನು ವಶಕ್ಕೆ ಪಡೆದು, ಅಕ್ಕ-ಪಕ್ಕದ ಸಿಸಿಟಿವಿಯನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಮೋರಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ
35 ವರ್ಷದಿಂದ 40 ವರ್ಷದ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಮೈಸೂರಿನ ಹೂಟಗಳ್ಳಿ ಬಳಿಯ ಮೋರಿಯಲ್ಲಿ ಶವ ಪತ್ತೆಯಾಗಿದ್ದು, ಸ್ಥಳಕ್ಕೆ ವಿಜಯನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಹೀಗಾಗಿ ವ್ಯಕ್ತಿ ಕುರಿತು ಮಾಹಿತಿ ತಿಳಿದರೇ ವಿಜಯನಗರ ಠಾಣೆ ಪೊಲೀಸರಿಗೆ ತಿಳಿಸುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: Yelahanka flyover : ಯುವತಿಯನ್ನು ತೊಡೆ ಮೇಲೆ ಕೂರಿಸಿಕೊಂಡು ಯುವಕನ ಡೆಡ್ಲಿ ಬೈಕ್ ರೈಡಿಂಗ್!
ಕಲ್ಲಿನಿಂದ ಜಜ್ಜಿ ಯುವಕನ ಬರ್ಬರ ಹತ್ಯೆ; ಕೆಆರ್ ಮಾರ್ಕೆಟ್‌ನಲ್ಲಿ ಶವ ಪತ್ತೆ
ವಿಜಯಪುರ: ಕಲ್ಲಿನಿಂದ ಜಜ್ಜಿ ಯುವಕನ ಬರ್ಬರ ಹತ್ಯೆ (Murder Case) ಆಗಿದೆ. ವಿಜಯಪುರ ನಗರದ ಎಪಿಎಂಸಿ ಮೇಕೆ ಹಾಗೂ ಕುರಿ ಮಾರುಕಟ್ಟೆಯ ಬಳಿ (Vijayapura Murder Case) ಘಟನೆ ನಡೆದಿದೆ. ರೋಹಿತ್ ಸುಭಾಶ ಪವಾರ (22) ಕೊಲೆಯಾದವನು.
ವಿಜಯಪುರ ನಗರದ ಕಂಬಾರ ಓಣಿ ನಿವಾಸಿ ರೋಹಿತ್‌ನನ್ನು ಕಲ್ಲಿನಿಂದ ಜಜ್ಜಿ ಕೊಲೆಗೈದು ಬಳಿಕ ಮುಳ್ಳುಕಂಟಿಯಲ್ಲಿ ಶವ ಬಿಸಾಡಿದ್ದಾರೆ. ಸ್ಥಳದಲ್ಲಿ ಬಿಯರ್ ಬಾಟಲ್, ಚಿಪ್ಸ್ ಪ್ಯಾಕೇಟ್ ಪತ್ತೆಯಾಗಿದೆ. ಹೀಗಾಗಿ ಕುಡಿದ ಮತ್ತಿನಲ್ಲಿ ಪರಿಚಯಸ್ಥರಿಂದ ಕೊಲೆ ಆಗಿರಬಹುದೆಂದು ಶಂಕಿಸಲಾಗಿದೆ.
ಖಾಲಿದ್ ಇನಾಂದಾರ್ ಎಂಬಾತ ರೋಹಿತ್ ಪೋಷಕರಿಗೆ ನಿನ್ನೆ ಭಾನುವಾರ ತಡರಾತ್ರಿ 2.21ಕ್ಕೆ ಕರೆ ಮಾಡಿ ರೋಹಿತ್ ಕೊಲೆಯಾಗಿದೆ ಎಂದು ಮಾಹಿತಿ ನೀಡಿದ್ದ. ಕರೆ ಅನ್ವಯ ರೋಹಿತ್ ಮನೆಯವರು ಆತನಿಗಾಗಿ ಹುಡುಕಾಡಿದ್ದರು. ಖಾಲೀದ್ ಮನೆಗೆ ಹೋದರೂ ಆತ ಅಲ್ಲಿರಲಿಲ್ಲ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ನಂತರ ರೋಹಿತ್‌ಗಾಗಿ ಹುಡುಕಾಡಿದಾಗ ಆತನ ಶವ ಎಪಿಎಂಸಿ ಆವರಣದಲ್ಲಿ ಕಂಡು ಬಂದಿದೆ.
ಇದನ್ನೂ ಓದಿ: IPL 2024 : ಐಪಿಎಲ್ ಬೆಟ್ಟಿಂಗ್‌ಗಾಗಿ ಮೈ ತುಂಬಾ ಸಾಲ; ನೇಣಿಗೆ ಶರಣಾದ ಯುವಕ
ಕೂಡಲೇ ರೋಹಿತ್ ಕುಟುಂಬಸ್ಥರು ಎಪಿಎಂಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ವಿಜಯಪುರ ಡಿವೈಎಸ್‌ಪಿ ಬಸವರಾಜ ಯಲಿಗಾರ ಹಾಗೂ ಇತರೆ ಅಧಿಕಾರಿಗಳು ಪ್ರಾಥಮಿಕ ತನಿಖೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ. ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ. ಕೊಲೆಗಾರರಿಗಾಗಿ ಹುಡುಕಾಟ ನಡೆಸಿದ್ದಾರೆ.
ಬೆಂಗಳೂರು ಸಿಟಿ ಮಾರ್ಕೆಟ್‌ನಲ್ಲಿ ಅಪರಿಚಿತ ಶವ ಪತ್ತೆ
ಬೆಂಗಳೂರಿನಲ್ಲಿ ಅಪರಿಚಿತ ವ್ಯಕ್ತಿಯ ಕೊಲೆಯಾಗಿದೆ. ಸಿಟಿ ಮಾರ್ಕೆಟ್ ಕಾಂಪ್ಲೆಕ್ಸ್ ಹಿಂಭಾಗದಲ್ಲಿ ಮೃತದೇಹ ಪತ್ತೆಯಾಗಿದೆ. ವ್ಯಕ್ತಿ ತಲೆ ಮೇಲೆ ಕಲ್ಲು ಎತ್ತುಹಾಕಿ ಕೊಲೆ ಮಾಡಿದ್ದಾರೆ. ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಸ್ಥಳಕ್ಕೆ ಸಿಟಿ ಮಾರ್ಕೆಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಕರಣ ಸಂಬಂಧ ತನಿಖೆಯನ್ನು ನಡೆಸುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ