ಮೈಸೂರು: ರಾಜ್ಯದಲ್ಲಿ ಕಾಡುಪ್ರಾಣಿಗಳು ಮತ್ತು ಮನುಷ್ಯ ಸಂಘರ್ಷಕ್ಕೆ ((Human-Animal Conflict) ಮತ್ತೊಂದು ಬಲಿಯಾಗಿದೆ. ಆನೆ, ಚಿರತೆಗಳ ದಾಂಗುಡಿಯಿಂದ ಬದುಕುವುದೇ ಕಷ್ಟ ಎನಿಸುವ ಹೊತ್ತಿನಲ್ಲಿ ಹುಲಿಯೊಂದು (Tiger attack) ರೈತನನ್ನು ಕೊಂದು (Farmer dead) ಹಾಕಿದೆ.
ಮೈಸೂರು ಜಿಲ್ಲೆ (Mysore News) ಹುಣಸೂರು ತಾಲೂಕಿನ ಉಡುವೆಪುರದಲ್ಲಿ ಘಟನೆ ನಡೆದ ಘಟನೆಯಲ್ಲಿ ಮೃತಪಟ್ಟ ರೈತನನ್ನು ಉಡುವೆಪುರದ ಗಣೇಶ್ (58) ಎಂದು ಗುರುತಿಸಲಾಗಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನದ (Nagarahole National park) ಮುದ್ದನಹಳ್ಳಿ ಅರಣ್ಯ ಪ್ರದೇಶ ಸಮೀಪದ ಗ್ರಾಮದ ನಿವಾಸಿಯಾಗಿರುವ ಗಣೇಶ ಅವರು ಸೋಮವಾರ ಜಾನುವಾರುಗಳನ್ನು ಮೇಯಿಸಲು ಹೋಗಿದ್ದರು. ಆದರೆ, ಸಂಜೆ ಜಾನುವಾರುಗಳು ಮಾತ್ರ ಮನೆಗೆ ವಾಪಸ್ ಆಗಿವೆ. ಗಣೇಶ್ ಮರಳಿ ಬಂದಿರಲಿಲ್ಲ.
ಗಾಬರಿಗೊಂಡ ಮನೆಯವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಹುಡುಕಾಟದ ವೇಳೆ ಮುದ್ದನಹಳ್ಳಿ ಅರಣ್ಯದ ಬಫರ್ ವಲಯದಲ್ಲಿ ಕೆರೆ ಬಳಿ ಗಣೇಶ್ ಶವ ಪತ್ತೆಯಾಗಿದೆ. ವಿಷಯ ತಿಳಿದ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದರು.
ಪರಿಶೀಲಿಸಿದಾಗ ಅವರು ಹುಲಿ ದಾಳಿಯಿಂದ ಪ್ರಾಣ ಕಳೆದುಕೊಂಡಿರುವುದು ದೃಢವಾಯಿತು. ಪತ್ನಿ ಮತ್ತು ಮೂವರು ಮಕ್ಕಳನ್ನು ಹೊಂದಿರುವ ಗಣೇಶ್ ಅವರ ಸಾವಿಗೆ ಊರಿನ ಜನ ಆಕ್ರೋಶ ವ್ಯಕ್ತಪಡಿಸಿದರು.
ಕಾಡು ಪ್ರಾಣಿಗಳ ಹಾವಳಿ ವಿಚಾರದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ಉಂಟಾಯಿತು. ಸ್ಥಳಕ್ಕೆ ಹುಲಿ ಯೋಜನೆ ನಿರ್ದೇಶಕ ಹರ್ಷಕುಮಾರ್ ಭೇಟಿ, ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದೆ.
ಘಟನಾ ಸ್ಥಳಕ್ಕೆ ಶಾಸಕ ಜಿ.ಡಿ. ಹರೀಶ್ ಗೌಡ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಶಾಸಕರು 50 ಸಾವಿರ ರೂ. ಪರಿಹಾರ ನೀಡಿದರು. ಕಾಡು ಪ್ರಾಣಿಗಳ ಹಾವಳಿ ಇರುವ ಪ್ರದೇಶಕ್ಕೆ ಜಾನುವಾರುಗಳನ್ನು ಬಿಡಬೇಡಿ ಎನ್ನುವ ಸಲಹೆಯನ್ನು ಅಧಿಕಾರಿಗಳು ನೀಡಿದ್ದರು. ಆದರೆ, ಇದು ಜನರನ್ನು ಕೆರಳಿಸಿತ್ತು. ಅಲ್ಲಿಗೆ ಬಿಡದೆ ಮತ್ತೆಲ್ಲಿ ಬಿಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಡಾನೆಗಳ ದಾಳಿಗೆ ಕೊಡಗು ಕಂಗಾಲು
ಮೈಸೂರಿನ ಕಥೆ ಹೀಗಾದರೆ ಕೊಡಗಿನಲ್ಲಿ ಕಾಡಾನೆಗಳ ದಾಂಗುಡಿ ಜನರನ್ನು ಆತಂಕಕ್ಕೆ ತಳ್ಳಿದೆ. ದಾಳಿಯ ಘಟನೆಗಳು ನಿತ್ಯ ಎಂಬಂತೆ ನಡೆಯುತ್ತಿವೆ. ಕಳೆದ ಒಂದೆರಡು ತಿಂಗಳ ಅವಧಿಯಲ್ಲೇ ಹಲವಾರು ಮಂದಿ ಆನೆ ದಾಳಿಗೆ ಪ್ರಾಣ ಕಳೆದುಕೊಂಡಿದ್ದಾರೆ.
ಕೊಡಗಿನ ಆನೆಕಾಡು ಅರಣ್ಯ ಪ್ರದೇಶದಲ್ಲಿ ಕ್ಷಿಪ್ರ ಪ್ರತಿಕ್ರಿಯೆ ದಳದಲ್ಲಿ (Rapid Response Team- RRT) ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಗಿರೀಶ್ (35) ಅವರನ್ನೇ ಆನೆ ಇತ್ತೀಚೆಗೆ ಬಲಿ ಪಡೆದಿದೆ. ಆನೆ ಗಿರೀಶ್ ಅವರನ್ನು ಅಟ್ಟಾಡಿಸಿಕೊಂಡು ಹೋಗಿ ದಾಳಿ ಮಾಡಿದೆ. ಅದಕ್ಕೂ ಮುನ್ನ ಆನೆ ಅದೇ ಭಾಗದಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದ ದ್ವಿಚಕ್ರ ವಾಹನವೊಂದರ ಮೇಲೆ ದಾಳಿ ಮಾಡಿತ್ತು.
ಕಳೆದ ಆಗಸ್ಟ್ 27ರಂದು ಸೋಮವಾಪೇಟೆ ತಾಲ್ಲೂಕಿನ ಅಡಿಯನಾಡೂರು ಗ್ರಾಮದಲ್ಲಿ ಶುಕ್ರವಾರ ಮುಂಜಾನೆ ಆನೆಯೊಂದು 60 ವರ್ಷದ ಕೃಷಿಕ ಈರಪ್ಪ ಎಂಬವರನ್ನು ಆನೆ ಕೊಂದು ಹಾಕಿತ್ತು. ಅಂದು ಮುಂಜಾನೆ ಈರಪ್ಪ ತಮ್ಮ ಮನೆಯ ಹಾಲು ಕರೆಯುವ ಹಸು ಕಾಣುತ್ತಿಲ್ಲ ಅಂತ ಹುಡುಕಿಕೊಂಡು ಹೋಗಿದ್ದರು. ಈ ಸಂದರ್ಭದಲ್ಲಿ ಗೌರಿ ಗದ್ದೆಯ ಸಮೀಪ ಏಕಾಏಕಿ ನುಗ್ಗಿ ಬಂದ ಕಾಡಾನೆ ಈರಪ್ಪ ಮೇಲೆ ದಾಳಿ ನಡೆಸಿದೆ. ಆನೆ ಈರಪ್ಪ ಅವರ ಎದೆಯ ಮೇಲೆಯೇ ನೇರವಾಗಿ ಕಾಲಿಟ್ಟಿದೆ. ದಾಳಿಗೆ ಸಿಲುಕಿದ ಈರಪ್ಪ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು.
ಇದನ್ನೂ ಓದಿ: Elephant attack : ಕಾಡಾನೆ ದಾಳಿಗೆ ಮತ್ತೊಬ್ಬ ವೃದ್ಧ ಬಲಿ!
ಕಳೆದ ಆಗಸ್ಟ್ 2೦ರಂದು ವಿರಾಜಪೇಟೆ ತಾಲೂಕಿನ ಬಾಡಗ ಬಾಣಂಗಾಲ ಗ್ರಾಮದಲ್ಲಿ ಮನೆ ಸಮೀಪ ವಾಕಿಂಗ್ ಮಾಡುತ್ತಿದ್ದ ಆಯಿಶಾ (63) ಎಂಬವರು ಆನೆ ದಾಳಿಗೆ ಒಳಗಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು.
ಅದಕ್ಕಿಂತ ಒಂದು ವಾರದ ಹಿಂದೆ ಕೂಡ ಆನೆ ದಾಳಿಗೆ ಟ್ರಾಕ್ಟರ್ ಚಾಲಕರೊಬ್ಬರು ಮೃತ ಪಟ್ಟಿದ್ದರು. ಕಳೆದ ಒಂದು ತಿಂಗಳಲ್ಲಿ ಮರಗೋಡು, ಸಿದ್ದಾಪುರ ಸಮೀಪದ ಬಾಣಂಗಾಲ ಇದೀಗ ಸೋಮವಾರಪೇಟೆ ಭಾಗದಲ್ಲಿ ಕಾಡಾನೆ ದಾಳಿಯಾಗಿದ್ದು ಕಾಡಾನೆ ದಾಳಿಯಲ್ಲಿ ಮೂರು ಜನ ಮೃತಪಟ್ಟಂತಾಗಿದೆ. ನಾಲ್ಕು ದಿನದ ಹಿಂದೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನಲ್ಲಿ ಮಹಿಳೆ ಮೇಲೆ ಆನೆ ದಾಳಿ ಮಾಡಿ ಮೃತಪಟ್ಟಿದ್ದರು. ಕೆಲವು ತಿಂಗಳ ಹಿಂದೆ ಕೊಡಗಿನಲ್ಲಿ ಒಂದೇ ದಿನ ಅಜ್ಜ ಮತ್ತು ಮೊಮ್ಮಗನನ್ನು ಆನೆ ಬಲಿ ಪಡೆದಿತ್ತು.