ಮೈಸೂರು: ಮೈಸೂರಿನ ಸುತ್ತೂರು ಮಹಾಸಂಸ್ಥಾನದಲ್ಲಿ ಏರ್ಪಡಿಸಲಾಗಿದ್ದ ಸುತ್ತೂರು ಜಾತ್ರಾ ಮಹೋತ್ಸವ (Suttur Jatra Mahotsava) ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಭೇಟಿ ನೀಡಿದ್ದಾರೆ. ಈ ವೇಳೆ ಸುತ್ತೂರು ವೇದಿಕೆಯಲ್ಲಿ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಅತಿಥಿ ಗೃಹದ ಉದ್ಘಾಟನೆಯನ್ನು ಅಮಿತ್ ಶಾ ನೆರವೇರಿಸಿದರು. ಈ ವೇಳೆ ಅಯೋಧ್ಯೆ ರಾಮಲಲ್ಲಾ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj) ಅವರಿಗೆ ಶ್ರೀ ಶಿವರಾತ್ರಿ ಶಿವಯೋಗಿಗಳ ಮೂರ್ತಿ ಉಡುಗೆ ನೀಡುವ ಮೂಲಕ ಅಮಿತ್ ಶಾ ಅವರು ಸನ್ಮಾನಿಸಿದರು.
ಅಮಿತ್ ಶಾ ಹಣೆಯಲ್ಲಿ ವಿಭೂತಿ
ಇದಕ್ಕೂ ಮೊದಲು ಗದ್ದುಗೆ ಪೂಜೆ ನೆರವೇರಿಸಿದ ಅಮಿತ್ ಶಾ ಅವರು ವಿಭೂತಿ ಧಾರಣೆ ಮಾಡಿಕೊಂಡಿದ್ದರು. ಇದು ಎಲ್ಲರನ್ನೂ ಗಮನ ಸೆಳೆಯಿತು. ಅಮಿತ್ ಶಾ ಅವರಿಗೆ ಈ ವೇಳೆ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಶಾಲು ಹೊದಿಸಿ ಸನ್ಮಾನ ಮಾಡಿದರು. ಶ್ರೀಗಂಧದಲ್ಲಿ ನಿರ್ಮಿಸಿದ ಚಾಮುಂಡೇಶ್ವರಿ ವಿಗ್ರಹ ಹಾಗೂ ಅಮಿತ್ ಶಾ ಭಾವಚಿತ್ರವನ್ನು ನೀಡಲಾಯಿತು.
ಸುತ್ತೂರು ಮಠವು ಎಲ್ಲ ಕ್ಷೇತ್ರಗಳಲ್ಲೂ ಸೇವೆ ಮಾಡುತ್ತಿದೆ: ಬಿ.ವೈ. ವಿಜಯೇಂದ್ರ
ಬಳಿಕ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಅಮಿತ್ ಶಾ ಭಾಗಿಯಾಗಿದರು. ಈ ವೇಳೆ ಮಾತನಾಡಿದ ಬಿ.ವೈ.ವಿಜಯೇಂದ್ರ, ಸುತ್ತೂರು ಶಿವಯೋಗಿಗಳ ತಪೋ ಭೂಮಿ ಇದಾಗಿದೆ. ಇಂತಹ ಭೂಮಿಯ ಜಾತ್ರೆಯಲ್ಲಿ ಅಮಿತ್ ಶಾ ಅವರು ಭಾಗಿಯಾಗಿರುವುದು ಸಂತಸ ತಂದಿದೆ. ಸುತ್ತೂರು ಶ್ರೀಗಳು ಮಠ, ಶಿಕ್ಷಣ, ಆರೋಗ್ಯ ಸೇವೆಗಳ ಮೂಲಕ ರಾಜ್ಯದಲ್ಲಿ ಸಾಧನೆ ಮಾಡಿದ್ದಾರೆ. ಕರ್ನಾಟಕವು ಮಠ ಮಾನ್ಯಗಳ ಸಂಸ್ಕೃತಿ ಇರುವ ನಾಡು ಇದಾಗಿದೆ. ಸುತ್ತೂರು ಮಠವು ಎಲ್ಲ ಕ್ಷೇತ್ರಗಳಲ್ಲೂ ಸೇವೆ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೂ ಸುತ್ತೂರು ಮಠದ ಬಗ್ಗೆ ಭಕ್ತಿ ಇದೆ. ಈಗ ಅಮಿತ್ ಶಾ ಅವರು ಮಠದ ಸದ್ಭಕ್ತರಾಗಿ ಇಲ್ಲಿಗೆ ಬಂದಿದ್ದಾರೆ ಎಂದು ತಿಳಿಸಿದರು.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ನಾಲ್ಕು ಬಾರಿ ಸಿಎಂ ಆಗಿದ್ದು, ಶ್ರೀ ಶಿವಕುಮಾರ ಸ್ವಾಮೀಜಿ, ಸುತ್ತೂರು ಸ್ವಾಮೀಜಿ ಅವರ ಮಾರ್ಗದರ್ಶನದಿಂದ ಕಾರ್ಯನಿರ್ವಹಣೆ ಮಾಡಿದ್ದಾರೆ. ಅಮಿತ್ ಶಾ ಅವರ ಸಲಹೆಯಿಂದ ಹಲವು ಅಭಿವೃದ್ಧಿ ಕೆಲಸಗಳು ಆಗುತ್ತಿವೆ. ಕಾಶ್ಮೀರದಲ್ಲಿ 370 ಅನ್ನು ಕಿತ್ತೆಸೆಯಲು ಅಮಿತ್ ಶಾ ಅವರ ಶ್ರಮ ಅಪಾರ. ಈಗ ಕಾಶ್ಮೀರ ಶಾಂತವಾಗಿದೆ. ಅಮಿತ್ ಶಾ ಬಂದಿರೋದು ರಾಜಕೀಯ ಹಾಗೂ ರಾಜ್ಯದಲ್ಲಿ ಸಂಚಲನ ಮೂಡಿಸಿದೆ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.
ಇದನ್ನೂ ಓದಿ: Congress Guarantee: ಧಮ್ಮು, ತಾಕತ್ತು ಇದ್ದರೆ ಬಿಜೆಪಿ ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆ ನಿಲ್ಲಿಸಲಿ; ಬಿಜೆಪಿಗೆ ಸಿದ್ದರಾಮಯ್ಯ ನೇರ ಸವಾಲು
ವೇದಿಕೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಆರ್.ಅಶೋಕ, ಶಿಲ್ಪಿ ಅರುಣ್ ಯೋಗಿರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.