ಮೈಸೂರು: ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಮತದಾರರಿಗೆ ಕುಕ್ಕರ್, ಇಸ್ತಿಪೆಟ್ಟಿಗೆ ಹಂಚಿ ಅಕ್ರಮವಾಗಿ (Cooker, Iron box distribution) ಗೆಲುವು ಸಾಧಿಸಿದ್ದಾರೆ ಎಂಬ ಆರೋಪ ಜೋರಾಗಿ ಅದು ಕೋರ್ಟ್ ಮೆಟ್ಟಿಲು ಹತ್ತುವ ಸಾಧ್ಯತೆಗಳು ಕಂಡುಬಂದಿರುವ ನಡುವೆಯೇ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಅವರು ಉಲ್ಟಾ ಹೊಡೆದಿದ್ದಾರೆ. ಸಿದ್ದರಾಮಯ್ಯ ಅವರ ಚುನಾವಣೆ ನಿಮಿತ್ತವಾಗಿ ಇದನ್ನು ಹಂಚಿದ್ದಲ್ಲ, ಚುನಾವಣೆಗೂ ಇದಕ್ಕೂ ಸಂಬಂಧವೇ ಇಲ್ಲ ಎಂದು ವಿವರಣೆ ನೀಡಿದ್ದಾರೆ.
ʻʻನಾನು ಹೇಳಿರುವುದೇ ಒಂದು ಮಾಧ್ಯಮಗಳು ತೋರಿಸುತ್ತಿರುವುದೇ ಒಂದು. ನಾನು ಸಿದ್ದರಾಮಯ್ಯ ಚುನಾವಣೆಗೊಸ್ಕರ ಕುಕ್ಕರ ಕೊಟ್ಟಿದ್ದಾರೆ ಅಂತ ಎಲ್ಲೂ ಹೇಳಿಲ್ಲ. ಆದರೂ ನಾನು ಮಾತನಾಡುವಾಗ ಸರಿಯಾಗಿ ಮಾತನಾಡದೇ ಇರಬಹುದು. ನನ್ನ ಹೇಳಿಕೆ ಆ ರೀತಿಯ ಅರ್ಥವನ್ನೂ ಕೊಟ್ಟಿರಬಹುದು. ಆದರೆ, ಇದು ಚುನಾವಣೆಗೆ ಸಂಬಂಧಿಸಿದ ಕಾರ್ಯಕ್ರಮವೇ ಅಲ್ಲʼʼ ಎಂದು ಹೇಳಿದರು.
ʻʻಈ ನಡೆದಿರುವುದು ಚುನಾವಣೆ ನೀತಿ ಸಂಹಿತೆ ಜಾರಿಯಾಗುವುದಕ್ಕೂ ಮೊದಲು. ಜನವರಿ 26ರಂದು ಮಡಿವಾಳ ಸಂಘದ ರಾಜ್ಯಾಧ್ಯಕ್ಷ ನಂಜಪ್ಪ ಅವರ ಹುಟ್ಟುಹಬ್ಬದ ಪ್ರಯಕ್ತ ವಿತರಣೆ ಮಾಡಲಾಗಿದೆ. ನನ್ನ ತಂದೆ ಸ್ವತಃ ಕೈಯಿಂದ ಕೂಡಾ ಇದನ್ನು ಕೊಟ್ಟಿಲ್ಲ. ಇದರ ಬಗ್ಗೆ ನಾನು ಮಾತನಾಡಿದ್ದೆ. ಆದರೆ ಮಾಧ್ಯಮದಲ್ಲಿ ಚುನಾವಣೆಗಾಗಿ ಹಂಚಿಕೆ ಮಾಡಲಾಗಿದೆ ಎಂದು ಬರುತ್ತಿದೆʼʼ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ʻʻಆ ಕಾರ್ಯಕ್ರಮದ ವೀಡಿಯೋ, ಫೋಟೋಗಳೂ ಇವೆ. ನಮ್ಮ ತಂದೆ ಅವರ ಕೈಯಿಂದ ದುಡ್ಡು ಕೊಟ್ಟು ಎಲ್ಲಿಯೂ ಏನನ್ನೂ ಹಂಚಿಲ್ಲʼʼ ಎಂದು ಮಡಿವಾಳ ಸಮುದಾಯಕ್ಕೆ ಕುಕ್ಕರ್ ಹಾಗೂ ಐರನ್ ಬಾಕ್ಸ್ ಹಂಚಿಕೆ ವಿಚಾರಕ್ಕೆ ಸಂಬಂಧಿಸಿ ಡಾ.ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.
ಎಲ್ಲ ಕಡೆ ಕುಕ್ಕರ್, ಐರನ್ ಬಾಕ್ಸ್ ಹಂಚಲಾಗಿದೆ, ಇಲ್ಲಷ್ಟೇ ಅಲ್ಲ
ವರುಣ ಕ್ಷೇತ್ರದಲ್ಲಿ ಮಡಿವಾಳ ಸಮುದಾಯದವರು ಇರೋದೇ 1500 ಜನ. ಹೀಗಾಗಿ ಮತದಾರರಿಗೆ ಕುಕ್ಕರ್ ಹಂಚಿದ್ದಾರೆ ಅನ್ನುವುದರಲ್ಲಿ ಅರ್ಥವೇ ಇಲ್ಲ. ಚುನಾವಣೆಗೂ ಮುಂಚಿನ ನನ್ನ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ವಿಸ್ತಾರ ನ್ಯೂಸ್‌ಗೆ ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.
ʻʻಮಡಿವಾಳ ಸಂಘದ ರಾಜ್ಯಾಧ್ಯಕ್ಷ ನಂಜಪ್ಪ ಹುಟ್ಟುಹಬ್ಬದ ಸಂದರ್ಭದಲ್ಲಿ ಕುಕ್ಕರ್, ಐರನ್ ಬಾಕ್ಸ್ ಹಂಚುತ್ತಾರೆ. ಪ್ರತಿ ವರ್ಷ ಕಾರ್ಯಕ್ರಮ ಮಾಡುತ್ತಾರೆ. ದಾವಣಗೆರೆ, ಹಾವೇರಿ, ಯಾದಗಿರಿ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಕುಕ್ಕರ್, ಐರನ್ ಬಾಕ್ಸ್ ಹಂಚುತ್ತಾರೆ. ನಂಜಪ್ಪ ಅವರು ಹುಟ್ಟುಹಬ್ಬದ ಪ್ರಯುಕ್ತ ವರುಣದಲ್ಲೂ ಐರನ್ ಬಾಕ್ಸ್, ಕುಕ್ಕರ್ ಹಂಚಿದ್ದರು. ಅದಕ್ಕೂ ಚುನಾವಣೆಗೂ ಸಂಬಂಧ ಇಲ್ಲʼʼ ಹೇಳಿದ ಯತೀಂದ್ರ, ನನ್ನ ತಂದೆ ಹಣ, ಆಮಿಷಗಳಿಂದ ಚುನಾವಣೆ ಗೆದ್ದಿಲ್ಲ. ನನ್ನ ಹೇಳಿಕೆಯನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗಿದೆ ಎಂದು ವರುಣ ಕ್ಷೇತ್ರದ ಬೊಕ್ಕಹಳ್ಳಿಯಲ್ಲಿ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಅಂದು ಯತೀಂದ್ರ ಹೇಳಿದ್ದೇನು?
“ವಿಧಾನಸಭಾ ಚುನಾವಣೆ ವೇಳೆ ವರುಣ ಕ್ಷೇತ್ರದಲ್ಲಿ ಮಡಿವಾಳ ಸಮುದಾಯದವರನ್ನು ಸಂಘಟನೆ ಮಾಡಲು ಸಾವಿರಾರು ಜನರನ್ನು ಸೇರಿಸಿದ್ದಲ್ಲದೆ, ಅವರೆಲ್ಲರಿಗೂ ಕುಕ್ಕರ್ ಮತ್ತು ಇಸ್ತ್ರಿ ಪೆಟ್ಟಿಗೆಯನ್ನು ನೀಡಲಾಗಿತ್ತು. ಆ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ನಂಜಪ್ಪ ಅವರು ನನ್ನ ತಂದೆ ಸಿದ್ದರಾಮಯ್ಯ ಅವರ ಕೈಯಿಂದಲೇ ಅವುಗಳನ್ನು ಕೊಡಿಸಿದ್ದರು” ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಇದು ಈಗ ವಿವಾದಕ್ಕೆ ಕಾರಣವಾಗಿತ್ತು.
ಕಾಂಗ್ರೆಸ್ ಸರ್ಕಾರದ ವಜಾಕ್ಕೆ ಆಗ್ರಹ
ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದು ಅಪಮಾನಕಾರಿ. ಹೀಗಾಗಿ ಸರ್ಕಾರವನ್ನೇ ವಜಾ ಮಾಡಬೇಕು ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಆಗ್ರಹಿಸಿದ್ದರೆ, ಚುನಾವಣಾ ಮಾರ್ಗಸೂಚಿ ಉಲ್ಲಂಘನೆ ಮಾಡಿದ್ದಾರೆಂದು ದೂರು ಕೊಡಲು ಬಿಜೆಪಿ ನಿರ್ಧಾರ ಮಾಡಿತ್ತು. ಖಾಸಗಿಯಾಗಿಯೂ ಕೆಲವರು ಸಿದ್ದರಾಮಯ್ಯ ಆಯ್ಕೆ ಪ್ರಶ್ನಿಸಿ ಕೋರ್ಟ್ ಮೆಟ್ಟಿಲು ಏರಿದ್ದರು.
ಇದರ ಜತೆಗೆ ನಾನಾ ರಾಜಕೀಯ ಪಕ್ಷಗಳ ನಾಯಕರು ಗಿಫ್ಟ್ ಪಾಲಿಟಿಕ್ಸ್ ವಿಷಯದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದು ಸಿದ್ದರಾಮಯ್ಯ ಮತ್ತು ಸರ್ಕಾರಕ್ಕೆ ಭಾರಿ ಮುಜುಗರ ಉಂಟು ಮಾಡಿತ್ತು.
ಇದನ್ನೂ ಓದಿ: Gift Politics : ಸಿದ್ದರಾಮಯ್ಯಗೆ ಕಂಟಕವಾಗುತ್ತಾ ಗಿಫ್ಟ್ ಪಾಲಿಟಿಕ್ಸ್; ಯತೀಂದ್ರ ಹೇಳಿಕೆ ವಿರುದ್ಧ ಬಿಜೆಪಿ ದೂರಿಗೆ ಸಜ್ಜು