Site icon Vistara News

Mysterious death : 8 ವರ್ಷದ ಬಾಲಕನ ಸಾವಿನ ರಹಸ್ಯ ಬಯಲು, ಕೇವಲ ಐದು ರೂಪಾಯಿಗಾಗಿ ನಡೆಯಿತು ಕೊಲೆ!

Murder Ravi and Nadeem

#image_title

ಹುಬ್ಬಳ್ಳಿ: ಮಾರ್ಚ್‌ 30ರಂದು ಇಲ್ಲಿನ ದೊಡ್ಡ ಮನಿ ಕಾಲೊನಿಯ ಪಾಳು ಬಿದ್ದ ನಿರ್ಜನ ಜಾಗದಲ್ಲಿ ಶವವಾಗಿ ಪತ್ತೆಯಾದ (Mysterious death) ಎಂಟು ವರ್ಷದ ಬಾಲಕ ನದೀಮ್ ಹಸನಸಾಬ್‌ನ ಸಾವಿನ ರಹಸ್ಯವನ್ನು ಪೊಲೀಸರು ಭೇದಿಸಿದ್ದಾರೆ. ಅಜ್ಜಿ ಮನೆಗೆ ಹೋಗಿದ್ದ ನದೀಂ ಅಲ್ಲೊಬ್ಬ ವ್ಯಕ್ತಿಯ ಬಳಿ ಐದು ರೂ. ಕೇಳಿದ್ದೇ ಆತನ ಸಾವಿಗೆ ಕಾರಣವಾಗಿದೆ. ಇದೀಗ ಪೊಲೀಸರು ಆರೋಪಿ ರವಿ ಬಳ್ಳಾರಿಯನ್ನು ಬಂಧಿಸಿದ್ದಾರೆ.

ಮೂರನೇ ತರಗತಿಯಲ್ಲಿ ಓದುತ್ತಿರುವ ನದೀಂ ಶಾಲೆಗೆ ರಜೆ ಸಿಕ್ಕಿದ ಹಿನ್ನೆಲೆಯಲ್ಲಿ ಆತ ಘಂಟಿಕೇರಿಯಲ್ಲಿರುವ ಅಜ್ಜಿ‌ ಮನೆಗೆ ಬಂದಿದ್ದ. ಸಂಜೆಯವರೆಗೂ ಆಟವಾಡುತ್ತಿದ್ದ ಆತ ಇದ್ದಕ್ಕಿದ್ದಂತೆಯೇ ನಾಪತ್ತೆಯಾಗಿದ್ದ. ಶುಕ್ರವಾರ ಮನೆಯಿಂದ ಸ್ವಲ್ಪ ದೂರದಲ್ಲಿರುವ ದೊಡ್ಡಮನಿ ಕಾಲನಿಯ ಪಾಳುಬಿದ್ದ ಜಾಗದಲ್ಲಿ ಶವವಾಗಿ ಪತ್ತೆಯಾಗಿದ್ದ. ಆತನ ತಲೆಗೆ ಕಲ್ಲು ಎತ್ತಿಹಾಕಿದ ರೀತಿಯಲ್ಲಿ ಕೊಲೆಯಾಗಿತ್ತು. ಈ ಪ್ರಕರಣದ ಬೆನ್ನು ಹತ್ತಿದ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸರು ಈಗ ರವಿ ಬಳ್ಳಾರಿ ಎಂಬ ಕೊಲೆಗಾರನನ್ನು ಬಂಧಿಸಿದ್ದಾರೆ.

ಕೊಲೆ ನಡೆದದ್ದು ಹೇಗೆ? ಕಾರಣವೇನು

ಶುಕ್ರವಾರ ಕುರುಚಲು ಗಿಡಗಳಿರುವ ನಿರ್ಜನ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗುವ ಮುನ್ನ ನದೀಂ ಮತ್ತು ರವಿ ಬಳ್ಳಾರಿಯ ಮುಖಾಮುಖಿ ಆಗಿತ್ತು. ನದೀಂ ಆಗಾಗ ಅಜ್ಜಿ ಮನೆಗೆ ಬರುತ್ತಿದ್ದುದರಿಂದ ಆ ಭಾಗದ ನಿವಾಸಿಯಾಗಿದ್ದ ರವಿಯ ಪರಿಚಯ ಇತ್ತು. ಬಾಲಕ ರವಿಯ ಬಳಿ ಐದು ರೂಪಾಯಿ ಕೊಡುವಂತೆ ಕೇಳಿದ್ದಾನೆ ಎನ್ನಲಾಗಿದೆ. ರವಿ ಅದನ್ನು ಕೊಟ್ಟ ನಂತರವೂ ಬಾಲಕ ಮತ್ತೆ ಐದು ರೂಪಾಯಿಗೆ ಪೀಡಿಸಿದ್ದಾನೆ ಎನ್ನಲಾಗುತ್ತಿದೆ.

ಇದರಿಂದ ಕೋಪಗೊಂಡ ರವಿ ಬಾಲಕನ ಕೆನ್ನೆಗೆ ಜೋರಾಗಿ ಹೊಡೆದ. ಹೊಡೆತಕ್ಕೆ ನದೀಂ ಮೂರ್ಛೆ ಹೋದ. ಇದಾದ ಬಳಿಕ ರವಿ ಬಾಲಕನನ್ನು ಬಾಲಕನನ್ನು ಪಾಳು ಬಿದ್ದ ಜಾಗಕ್ಕೆ ಹೊತ್ತೊಯ್ದು ತಲೆಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಸಿಸಿಟಿವಿಯಲ್ಲಿ ರವಿಯ ಚಲನವಲನ ಗಮನಿಸಿದ ಪೊಲೀಸರು ಆತನನ್ನು ವಶಕ್ಕೆ ಪಡೆದು ಬಾಯಿ ಬಿಡಿಸಿದಾಗ ಇಷ್ಟ ವಿಚಾರ ಹೊರಗೆ ಬಂದಿದೆ. ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

ಆದರೆ, ಕೇವಲ ಐದು ರೂಪಾಯಿಗಾಗಿ ಯಾರಾದರೂ ಕೊಲೆ ಮಾಡುತ್ತಾರಾ? ಹುಡುಗ ಕೇಳಿದ ಎಂಬ ಕಾರಣಕ್ಕೆ ಕಪಾಳಕ್ಕೆ ಹೊಡೆಯುತ್ತಾರಾ? ಹೊಡೆದ ಏಟಿಗೆ ತಲೆ ತಿರುಗಿ ಬಿದ್ದ ಎಂದೇ ಹೇಳಿದರೂ ಬಳಿಕ ತಲೆಗೆ ಕಲ್ಲು ಹೊತ್ತು ಹಾಕಿ ಸಾಯಿಸುವ ಅವಶ್ಯಕತೆ ಏನಿತ್ತು ಎಂಬ ಪ್ರಶ್ನೆಗಳು ಇನ್ನೂ ಉಳಿದುಕೊಂಡಿವೆ.

ಈ ನಡುವೆ, ಬಾಲಕನ ಶವ ಅರೆಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಕೆಲವೊಂದು ಸಂಶಯಗಳಿಗೆ ಕಾರಣವಾಗಿವೆ. ಯಾವ ಹಂತದಲ್ಲೂ ಅವನು ಬೆತ್ತಲೆಯಾಗುವುದಕ್ಕೆ ಸಹಜ ಕಾರಣ ಇರಲಿಲ್ಲ. ಹಾಗಿದ್ದರೂ ಬಾಲಕನ ಬಟ್ಟೆ ಬಿಚ್ಚಿದ್ದು ಯಾಕೆ? ಕೊಲೆ ಮಾಡುವವನಿಗೆ ಬಟ್ಟೆ ಬಿಚ್ಚುವ ಉಸಾಬರಿ ಯಾಕೆ ಎಂಬಿತ್ಯಾದಿ ಪ್ರಶ್ನೆಗಳು ಎದ್ದು ನಿಂತಿವೆ. ಪೊಲೀಸರು ಈ ಅಂಶಗಳನ್ನೂ ಸೇರಿಸಿ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : New Born Baby Death: ಮೆಗ್ಗಾನ್ ಆಸ್ಪತ್ರೆಯ ಹೆರಿಗೆ ವಾರ್ಡ್ ಬಳಿ ನವಜಾತ ಶಿಶುವನ್ನು ಕಚ್ಚಿ ಓಡಿದ ನಾಯಿ

Exit mobile version