Site icon Vistara News

Dasara 2022 | ಸಾಂಪ್ರದಾಯಿಕ, ಅದ್ಧೂರಿ, ಅಂತಾರಾಷ್ಟ್ರೀಯ ಮೈಸೂರು ದಸರಾ: ಸಿಎಂ ಸಭೆಯಲ್ಲಿ ತೀರ್ಮಾನ

basavaraj bommai st somashekhar

ಬೆಂಗಳೂರು: ಈ ವರ್ಷದ ಮೈಸೂರು ದಸರಾ ಉತ್ಸವವನ್ನು ವೈಭವಯುತವಾಗಿ ಆಚರಣೆ ಮಾಡಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದ್ದು, ಉದ್ಘಾಟನೆ ಮಾಡುವವರು ಯಾರು ಎಂಬುದನ್ನು ತಿಳಿಸಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ನಡೆದ ಉನ್ನತಾಧಿಕಾರ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಸಭೆಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಮೈಸೂರು, ಚಾಮರಾಜನಗರ ಜನರ ಅಪೇಕ್ಷೆಯಂತೆ ಈ ಬಾರಿ ಅದ್ಧೂರಿಯಾಗಿ ದಸರಾ ಆಚರಿಸಲಾಗುವುದು. ಕೋವಿಡ್‌ ನಂತರ ಅದ್ಧೂರಿ ದಸರಾ ಆಚರಣೆ ನಡೆಸಲಾಗುತ್ತಿದ್ದು, ಮುಂದಿನ ಎರಡು ತಿಂಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ನೀಡಲು ನಿರ್ಧಾರ ಮಾಡಲಾಗಿದೆ ಎಂದರು.  

15 ದಿನಗಳ ಮುಂಚಿತವಾಗಿಯೇ ವಸ್ತು ಪ್ರದರ್ಶನ ಪ್ರಾರಂಭಕ್ಕೆ ಸೂಚನೆ ನೀಡಲಾಗಿದ್ದು, ‌ಸ್ಥಳೀಯ ಕಲಾಕಾರರಿಗೆ ಹೆಚ್ಚಿನ ಒತ್ತು‌ ನೀಡಲಾಗುವುದು. ದಿನಕ್ಕೆ ಒಬ್ಬರಂತೆ ರಾಷ್ಟ್ರೀಯ ಮಟ್ಟದ ಕಲಾಕಾರರನ್ನು ಮುಖ್ಯ ಆಕರ್ಷಣೆಗೆ ಕರೆಸಲು ತೀರ್ಮಾನಿಸಲಾಗಿದೆ. ಪಕ್ಕದ ಶ್ರೀರಂಗಪಟ್ಟಣ ಮತ್ತು ಚಾಮರಾಜನಗರದಲ್ಲಿ ಅದ್ಧೂರಿ ದಸರಾ ನಡೆಸಲಾಗುವುದು ಎಂದರು.

ಬಾಗಿನ ಅರ್ಪಣೆ

ಬಾಗಿನ‌ ಅರ್ಪಣೆಗೆ ರಾಜವಂಶಸ್ಥರಿಗೆ ಕರೆದಿಲ್ಲ ಎಂಬ ವಿಪಕ್ಷಗಳ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಈ ಹಿಂದೆ ರಾಜವಂಶಸ್ಥರನ್ನು ಬಾಗಿನ ಅರ್ಪಣೆಗೆ ಕರೆದಿರಲಿಲ್ಲ. ಆದರೆ ಈಗ ಅವರನ್ನು ಕರೆಯುವುದರಲ್ಲಿ ತಪ್ಪೇನೂ ಇಲ್ಲ. ಇದರ ಬಗ್ಗೆ ಸಂಬಂಧಪಟ್ಟವರ ಬಳಿ ಮಾತನಾಡುವುದಾಗಿ ಹೇಳಿದರು.

ದಸರಾ ವೆಚ್ಚ

ದಸರಾ ವೆಚ್ಚಕ್ಕೆ ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರ (ಮುಡಾದಿಂದ) ಹತ್ತು‌ ಕೋಟಿ ಕೊಡಲಿದ್ದು, ಸಿಎಸ್ಆರ್‌ ನಿಧಿ ಬಳಕೆಗೂ ಸಲಹೆ ಬಂದಿದೆ. ಇದರ ಹೊಣೆಯನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಅರಮನೆ ಹೊರಗಿನ ವೆಚ್ಚದ ವಿವರ ಕೇಳಲಾಗಿದ್ದು, ಉಳಿದ ವೆಚ್ಚ ಸರ್ಕಾರ ಭರಿಸಲಿದೆ ಎಂದರು.

ಬೆಂಗಳೂರು-ಮೈಸೂರು ದಶಪಥ ಕಾಮಗಾರಿ ವಿಳಂಬ

ಬೆಂಗಳೂರು- ಮೈಸೂರು ದಶಪಥವನ್ನು ಮುಂದಿನ ದಸರಾ ಹಬ್ಬದೊಳಗೆ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು ಎಂದು ಮೈಸೂರು- ಕೊಡಗು ಸಂಸದ ಪ್ರತಾಪ್‌ ಸಿಂಹ ಹೇಳಿದ್ದರು. ಆದರೆ ದಸರಾ ಹೊತ್ತಿಗೆ ಬೆಂಗಳೂರು-ಮೈಸೂರು ದಶಪಥ ರಸ್ತೆ ಕಾಮಗಾರಿ ಮುಗಿಯುವುದಿಲ್ಲವೆಂದು ಸಿಎಂ ಸ್ಪಷ್ಟಪಡಿಸಿದ್ದಾರೆ. ಮಳೆಯ ಕಾರಣದಿಂದಾಗಿ ಕಾಮಗಾರಿ ಮುಗಿಯಲು ಇನ್ನಷ್ಟು ಸಮಯ ಹಿಡಿಯಬಹುದು ಎಂದಿದ್ದಾರೆ.

ಬಳಿಕ ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್ ಕಳೆದ ಎರಡು ವರ್ಷ ಸರಳವಾಗಿ ಮೈಸೂರು ದಸರಾ ಆಚರಣೆ ಮಾಡಿದ್ದೇವೆ. ಈ ಬಾರಿ ಮಳೆ- ಬೆಳೆ ಚೆನ್ನಾಗಿ ಆಗಿದ್ದು, ವಿಜೃಂಭಣೆ ಹಾಗೂ ಸಾಂಪ್ರದಾಯಿಕವಾಗಿ ಆಚರಣೆ ಮಾಡಲಾಗುವುದು ಎಂದರು.

ಉದ್ಘಾಟಕರ ಆಯ್ಕೆ ಸಿಎಂರಿಂದ

ಮೈಸೂರು ದಸರಾ ಉತ್ಸವ ಯಾರಿಂದ ಉದ್ಘಾಟನೆ ಮಾಡಿಸಬೇಕು ಎಂಬುದು ಇನ್ನೂ ತೀರ್ಮಾನವಾಗಿಲ್ಲ. ಮೈಸೂರು ದಸರಾ ಉತ್ಸವ ಉದ್ಘಾಟನೆಗೆ ಯಾರನ್ನು ಕರೆಯಬೇಕು ಎಂಬುದು ಸಿಎಂ ಬಸವರಾಜ ಬೊಮ್ಮಾಯಿ ಅವರ ಪರಮಾಧಿಕಾರಕ್ಕೆ ಬಿಟ್ಟಿದ್ದು ಎಂದು ಸಚಿವರು ಹೇಳಿದರು.

ಕೈಗೆ ಸಿಗದ ಅಧಿಕಾರಿಗಳು

ಇಂದಿನ ಸಭೆಯಲ್ಲಿ ಕೆಲವು ದೂರುಗಳು ಬಂದಿದ್ದು, ದಸರಾ ಹಬ್ಬದ ಸಮಯದಲ್ಲಿ ಅಧಿಕಾರಿಗಳು ಸರಿಯಾಗಿ ಕೈಗೆ ಸಿಗುವುದಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮೈಸೂರು ದಸರಾ ಸಮಯದಲ್ಲಿ ಜನರಿಗೆ ಯಾವುದೇ  ಸಮಸ್ಯೆ ಆಗದಂತೆ ನೋಡಿಕೊಳ್ಳುವಂತೆ ತಿಳಿಸಲಾಗಿದೆ ಎಂದರು.

ಕಾರ್ಯಸೂಚಿ ಪುಸ್ತಕದಲ್ಲಿ ದೋಷ

ಅಂದು ಸರ್ಕಾರಿ‌ ಆದೇಶದಲ್ಲಿ ಅಕ್ಷರ ದೋಷ, ಇಂದು ದಸರಾ ಉನ್ನತ ಮಟ್ಟದ ಪೂರ್ವಭಾವಿ ಸಭೆಯ ಕಾರ್ಯಸೂಚಿ ಪುಸ್ತಕದಲ್ಲಿ ಇಸವಿ ದೋಷ ಆಗಿರುವುದು ಕಂಡು ಬಂದಿದೆ. 2022ರ ನಾಡಹಬ್ಬದ ಪೂರ್ವಭಾವಿ ಸಭೆಯ ಕಾರ್ಯಸೂಚಿ ಪುಸ್ತಕದಲ್ಲಿ 2022ರ ಬದಲು 2021 ಎಂದು ಮುದ್ರಣವಾಗಿರುವುದು ಕಂಡು ಬಂತು.

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್, ಶಾಸಕ ಜಿ.ಟಿ. ದೇವೇಗೌಡ, ಸಂಸದ
ಪ್ರತಾಪ್ ಸಿಂಹ, ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ತನ್ವೀರ್ ಸೇಠ್, ಸಾ.ರಾ. ಮಹೇಶ್, ಹರ್ಷವರ್ಧನ್, ರಾಮದಾಸ್, ಪರಿಷತ್ ಸದಸ್ಯ ವಿಶ್ವನಾಥ್ ಸೇರಿ ಮೈಸೂರು, ಮಂಡ್ಯ ಭಾಗದ ಜನಪ್ರತಿನಿಧಿಗಳು ಭಾಗಿಯಾಗಿದ್ದರು.

Exit mobile version