Site icon Vistara News

MYSURU DASARA | ಜಂಬೂ ಸವಾರಿ ದಿನ ಪುಷ್ಪಾರ್ಚನೆ ಮಾಡಲು ಬರ್ತಾರಾ ಪ್ರಧಾನಿ ನರೇಂದ್ರ ಮೋದಿ?

modi mysuru

ಬೆಂಗಳೂರು: ಈಗ ನಡೆಯುತ್ತಿರುವ ಚರ್ಚೆ, ಆಗುತ್ತಿರುವ ಪ್ರಯತ್ನಗಳು ಸಫಲವಾದರೆ ಈ ಬಾರಿಯ ಮೈಸೂರು ದಸರಾ ಹೊಸ ಇತಿಹಾಸವನ್ನೇ ನಿರ್ಮಿಸಲಿದೆ. ಈ ಬಾರಿಯ ದಸರಾ ಮಹೋತ್ಸವವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉದ್ಘಾಟಿಸುವುದು ಪಕ್ಕಾ ಆಗಿದೆ. ಈ ನಡುವೆ ದಸರಾ ಮಹೋತ್ಸವದ ಕೊನೆಯ ದಿನವಾದ ವಿಜಯ ದಶಮಿಯಂದು ನಡೆಯಲಿರುವ ಜಂಬೂ ಸವಾರಿ ವೈಭವಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಸಿಕೊಳ್ಳುವ ಪ್ರಯತ್ನ ನಡೆದಿದೆ. ರಾಜ್ಯ ಸರಕಾರದ ಮಟ್ಟದಲ್ಲಿ ಮತ್ತು ಬಿಜೆಪಿಯ ಆಂತರಿಕ ವಲಯದಲ್ಲಿ ಈ ಪ್ರಯತ್ನ ಜೋರಾಗಿ ನಡೆಯುತ್ತಿದೆ.

ʻʻಪ್ರಧಾನಿ ನರೇಂದ್ರ ಮೋದಿ ಅವರನ್ನು ಅಕ್ಟೋಬರ್‌ ೫ರಂದು ನಡೆಯಲಿರುವ ವಿಜಯ ದಶಮಿ ಜಂಬೂ ಸವಾರಿ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ಮಾಡಲು ಬರಬೇಕು ಎಂದು ಆಹ್ವಾನ ನೀಡಿದ್ದೇವೆ. ಪ್ರಧಾನ ಮಂತ್ರಿಗಳ ಕಚೇರಿ ಅಂದಿನ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ಕೇಳಿದೆ. ಕಾರ್ಯಕ್ರಮಕ್ಕೆ ಬರುವ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ. ಆದರೆ, ಬರುವ ಆಶಾವಾದ ಹೊಂದಿದ್ದೇವೆʼʼ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಈ ಬಾರಿಯ ದಸರಾ ಉತ್ಸವದ ಉದ್ಘಾಟನೆ ಸೆಪ್ಟೆಂಬರ್‌ ೨೬ರಂದು ನಡೆಯಲಿದೆ. ಇದೇ ಮೊದಲ ಬಾರಿಗೆ ರಾಷ್ಟ್ರದ ಮೊದಲ ಪ್ರಜೆ, ರಾಷ್ಟ್ರಪತಿಯವರು ಇದನ್ನು ಉದ್ಘಾಟಿಸಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಚಾಮುಂಡಿ ಬೆಟ್ಟದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅವರು ದಸರೆಗೆ ಚಾಲನೆ ನೀಡಲಿದ್ದಾರೆ. ರಾಷ್ಟ್ರಪತಿಯಾಗಿ ಮಾತ್ರವಲ್ಲ, ಬುಡಕಟ್ಟು ಜನಾಂಗ ಸಾಧಕ ಮಹಿಳೆಯಾಗಿಯೂ ಗಮನ ಸೆಳೆದ ಮುರ್ಮು ಅವರಿಂದ ದಸರಾ ಉದ್ಘಾಟನೆಯಾಗುತ್ತಿರುವುದೇ ಒಂದು ಐತಿಹಾಸಿಕ ಘಟನೆ. ಇದರ ಜತೆ ಇದಕ್ಕೆ ಇನ್ನಷ್ಟು ರಂಗು ತುಂಬುವ ಪ್ರಯತ್ನವಾಗಿ ಮೋದಿ ಅವರನ್ನೇ ಆಹ್ವಾನಿಸಲಾಗಿದೆ ಎನ್ನಲಾಗಿದೆ.

ಅಕ್ಟೋಬರ್‌ ಐದರಂದು ನಡೆಯುವ ವಿಜಯದಶಮಿ ಜಂಬೂ ಸವಾರಿ ವೇಳೆ ಮುಖ್ಯಮಂತ್ರಿ ಮತ್ತು ಮೈಸೂರು ಮೇಯರ್‌ ಅವರು ಅಂಬಾರಿ ಮೇಲೆ ಸಾಗಿ ಬರುವ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಪುಷ್ಟಾರ್ಚನೆ ಮಾಡುವುದು ರೂಢಿ. ಈ ಬಾರಿ ಅದಕ್ಕೆ ಪ್ರಧಾನಿಯವರನ್ನೇ ಆಹ್ವಾನಿಸಲಾಗಿದೆ. ಒಂದು ವೇಳೆ ಅವರು ಒಪ್ಪಿದರೆ ಇದು ಐತಿಹಾಸಿಕವಾಗಲಿದೆ. ಸಾಮಾನ್ಯವಾಗಿ ಜಂಬೂ ಸವಾರಿ ದಿನ ಸಭಾ ಕಾರ್ಯಕ್ರಮ ಇರುವುದಿಲ್ಲ. ಆದರೆ, ಒಂದೊಮ್ಮೆ ಪ್ರಧಾನಿಯವರು ಬಂದರೆ ಸಭಾ ಕಾರ್ಯಕ್ರಮ ಆಯೋಜನೆಯಾಗುವ ಸಾಧ್ಯತೆ ಇದೆ.

ಚುನಾವಣೆಗೆ ಕನೆಕ್ಷನ್‌?
ಮೈಸೂರು ದಸರಾ ಉತ್ಸವಕ್ಕೆ ರಾಷ್ಟ್ರಪತಿ ಮತ್ತು ಪ್ರಧಾನಿ ಮೋದಿ ಅವರನ್ನು ಕರೆಸುವ ಪ್ರಯತ್ನದ ಹಿಂದೆ ಚುನಾವಣಾ ರಾಜಕೀಯ ಲೆಕ್ಕಾಚಾರವಿದೆ ಎನ್ನಲಾಗಿದೆ. ಮೈಸೂರು ಭಾಗದಲ್ಲಿ ಸಾಕಷ್ಟು ಆದಿವಾಸಿಗಳಿದ್ದಾರೆ. ಜತೆಗೆ ಬಿಜೆಪಿ ಅತ್ಯಂತ ಹಿಂದುಳಿದ ವರ್ಗಕ್ಕೂ ಗೌರವ ನೀಡುತ್ತದೆ ಎಂಬುದನ್ನು ತೋರಿಸುವುದಕ್ಕಾಗಿ ಮುರ್ಮು ಅವರನ್ನು ಕರೆಸಲಾಗಿದೆ ಎನ್ನಲಾಗಿದೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಈ ಬಾರಿ ʻಹಿಂದʼ (ಹಿಂದುಳಿದ ಮತ್ತು ದಲಿತ) ಕಾರ್ಡನ್ನು ಉರುಳಿಸುವ ಪ್ಲಾನ್‌ ಮಾಡಿದ್ದು ಅದಕ್ಕೆ ಮುರ್ಮು ಅವರ ಆಗಮನ ಪೂರಕವಾಗಲಿದೆ.

ಇನ್ನೊಂದು ಕಡೆ ಬಿಜೆಪಿಗೆ ಸದ್ಯ ಹಳೆ ಮೈಸೂರು ಪ್ರಾಂತ್ಯದಲ್ಲಿ ಅಷ್ಟೊಂದು ಬಲವಿಲ್ಲ. ಮೋದಿ ಅವರನ್ನು ದಸರೆಗೆ ಕರೆಸಿಕೊಂಡರೆ ಈ ಪ್ರಾಂತ್ಯದಲ್ಲಿ ಮತಗಳನ್ನು ಸೆಳೆದು, ಕ್ರೋಡೀಕರಣ ಮಾಡಬಹುದು ಎನ್ನುವ ಯೋಚನೆಯೂ ಬಿಜೆಪಿಗಿದೆ ಎನ್ನಲಾಗಿದೆ. ಈ ಹಿನ್ನೆಲೆ ಇಟ್ಟುಕೊಂಡೇ ಅವರನ್ನು ಆಹ್ವಾನಿಸಲಾಗಿದೆ, ಜತೆಗೆ ಮನವೊಲಿಸಲಾಗುತ್ತಿದೆ ಎನ್ನಲಾಗಿದೆ. ಪ್ರಧಾನಿ ಮೋದಿ ಅವರು ಜೂನ್‌ ೨೧ರಂದು ನಡೆದ ಯೋಗ ದಿನಾಚರಣೆಗೆ ಮೈಸೂರಿಗೆ ಬಂದಿದ್ದರು.

Exit mobile version