ಮೈಸೂರು/ಕಲಬುರಗಿ: ಈ ಬಾರಿಯ ಮೈಸೂರು ದಸರಾ ಸಂಭ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಬರುವುದಿಲ್ಲ. ಇದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರು ದೃಢಪಡಿಸಿದ್ದಾರೆ.
ಈ ಬಾರಿಯ ದಸರಾ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬರುವುದು ನಿಗದಿಯಾಗಿದೆ. ಸೆಪ್ಟೆಂಬರ್ ೨೬ರಂದು ಚಾಮುಂಡೇಶ್ವರಿ ಬೆಟ್ಟದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅವರು ವೈಭವದ ದಸರಾ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಈ ನಡುವೆ, ಅಕ್ಟೋಬರ್ ೫ರಂದು ನಡೆಯುವ ವಿಜಯ ದಶಮಿ ಜಂಬೂ ಸವಾರಿಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆ ತರುವ ಎಲ್ಲ ಪ್ರಯತ್ನಗಳು ನಡೆದಿದ್ದವು. ಆದರೆ, ಅದು ಸಾಧ್ಯವಾಗಿಲ್ಲ.
ರಾಜ್ಯ ಸರಕಾರದ ವತಿಯಿಂದ ಪ್ರಧಾನಿಗಳಿಗೆ ಮನವಿ ಸಲ್ಲಿಸಲಾಗಿದೆ. ಪ್ರಧಾನ ಮಂತ್ರಿಗಳ ಕಚೇರಿಯಿಂದ ಅಂದಿನ ಕಾರ್ಯಕ್ರಮಗಳ ವಿವರ ಕೇಳಿದ್ದರಿಂದ ಪ್ರಧಾನಿಗಳು ಬರುವ ಸಾಧ್ಯತೆಯ ಸಣ್ಣ ಆಶಾವಾದವೊಂದು ಗೋಚರಿಸಿತ್ತು. ಆದರೆ, ಈಗ ಪ್ರಧಾನಿ ಕಚೇರಿಯಿಂದ ಅಧಿಕೃತವಾಗಿ ಸಂದೇಶ ಬಂದಿದೆ. ಪ್ರಧಾನಿಯವರು ಅಂದು ಮೈಸೂರು ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಅದರಲ್ಲಿ ಸ್ಪಷ್ಟಪಡಿಸಲಾಗಿದೆ. ಇದನ್ನು ಕಲಬುರಗಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ರಾಷ್ಟ್ರಪತಿಗಳು ಅರಮನೆಗೆ ಹೋಗ್ತಾರಾ?
ಈ ನಡುವೆ ಸೆಪ್ಟೆಂಬರ್ ೨೬ರಂದು ಮೈಸೂರಿಗೆ ಬರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂದು ಅರಮನೆಗೆ ಭೇಟಿ ನೀಡುವ ಸಾಧ್ಯತೆಗಳ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ದಸರಾ ಉದ್ಘಾಟನೆ ನಡೆಯುವುದು ಮೈಸೂರು ನಗರದ ಹೊರವಲಯದ ಚಾಮುಂಡಿ ಬೆಟ್ಟದಲ್ಲಿ. ಬೆಳ್ಳಿಯ ರಥದಲ್ಲಿರುವ ಚಾಮುಂಡಿ ದೇವಿಯ ಉತ್ಸವ ಮೂರ್ತಿಗೆ ಪುಷ್ಟಾರ್ಚನೆ ಮಾಡಿದ ಬಳಿಕ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಾಮಾನ್ಯವಾಗಿ ಉದ್ಘಾಟಕರ ಜವಾಬ್ದಾರಿ ಅಲ್ಲಿಗೆ ಮುಕ್ತಾಯವಾಗುತ್ತದೆ.
ಆದರೆ, ಈ ಬಾರಿ ರಾಷ್ಟ್ರಪತಿಗಳೇ ಉದ್ಘಾಟನೆಗೆ ಬರುತ್ತಿರುವುದರಿಂದ ಅವರು ಮೈಸೂರಿನ ಅರಮನೆ ವೀಕ್ಷಣೆಗೆ ಹೋಗುವ ಸಾಧ್ಯತೆಗಳು ಇವೆ ಎನ್ನಲಾಗಿದೆ. ಅರಮನೆಯಲ್ಲಿ ಅಂದಿನಿಂದಲೇ ಖಾಸಗಿ ದರ್ಬಾರ್ ಆರಂಭವಾಗುತ್ತಿದ್ದು, ಅವರು ಅದನ್ನು ಕಣ್ತುಂಬಿಕೊಳ್ಳುವ ಒಂದು ಸಾಧ್ಯತೆ ಕಂಡುಬಂದಿಎ. ಆದರೆ, ಇನ್ನೂ ಇದರ ಬಗ್ಗೆ ಮಾಹಿತಿ ಇಲ್ಲ ಎಂದು ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಹೇಳಿದ್ದಾರೆ.
ʻʻರಾಷ್ಟ್ರಪತಿ ಭಾಗವಹಿಸುವ ಕಾರ್ಯಕ್ರಮದ ಪಟ್ಟಿ ಅಂತಿಮವಾಗುತ್ತಿದೆ. ಅರಮನೆಯ ಭೇಟಿ ಬಗ್ಗೆ ಮಾಹಿತಿ ಕೇಳಲಾಗಿದೆ. ಇನ್ನೂ ರಾಷ್ಟ್ರಪತಿಗಳಿಂದ ಅದಕ್ಕೆ ಅಧಿಕೃತ ಒಪ್ಪಿಗೆ ಸಿಕ್ಕಿಲ್ಲʼʼ ಎಂದು ಸಚಿವ ಸೋಮಶೇಖರ್ ಹೇಳಿದರು.
ʻʻಕೇಂದ್ರದ ನಾಲ್ಕು ಮಂತ್ರಿಗಳು ದಸರಾ ಉದ್ಘಾಟನೆ ಕಾರ್ಯಕ್ರಮಕ್ಕೆ ಬರುವ ಸಾಧ್ಯತೆ ಇದೆ. ಅದರ ಆಧಾರದ ಮೇಲೆ ವೇದಿಕೆ ಮೇಲೆ ಕೂರುವವರ ಪಟ್ಟಿ ಅಂತಿಮಗೊಳ್ಳುತ್ತದೆ. ದಸರಾ ಪಾಸ್ ಮತ್ತು ಗೋಲ್ಡ್ ಕಾರ್ಡ್ ಬಗ್ಗೆ ಕೂಡಾ ಶನಿವಾರ ಸಂಜೆಯೊಳಗೆ ಅಂತಿಮ ತೀರ್ಮಾನ ಆಗಲಿದೆʼʼʼ ಎಂದು ಅವರು ಹೇಳಿದರು.
ʻʻದಸರಾ ಉತ್ಸವಕ್ಕೆ ಹಣ ಬಿಡುಗಡೆ ಮಾಡಿರುವುದಾಗಿ ಸ್ವತಃ ಸಿಎಂ ಹೇಳಿದ್ದಾರೆ. ವಿದ್ಯುತ್ ದೀಪಾಲಂಕರಕ್ಕೆ 4.5 ಕೋಟಿ ರೂ. ನಿಗದಿ ಮಾಡಲಾಗಿದೆ. ಎಲ್ಲವನ್ನೂ ವ್ಯವಸ್ಥಿತವಾಗಿ ಮಾಡುತ್ತೇವೆʼʼ ಎಂದರು ಸೋಮಶೇಖರ್.
ಇದನ್ನೂ ಓದಿ | MYSURU DASARA | ಜಂಬೂ ಸವಾರಿ ದಿನ ಪುಷ್ಪಾರ್ಚನೆ ಮಾಡಲು ಬರ್ತಾರಾ ಪ್ರಧಾನಿ ನರೇಂದ್ರ ಮೋದಿ?