Site icon Vistara News

Mysuru Dasara | ಅಪ್ಪು ನಮನದ ಹೆಸರಿನ ಯುವ ದಸರಾಗೆ ಚಾಲನೆ, ಅಭಿಮಾನಿಗಳ ಸಂಭ್ರಮ

puneet

ಮೈಸೂರು: ವೈಭವದ ಮೈಸೂರು ದಸರಾದ ಮೂರನೇ ದಿನವಾದ ಬುಧವಾರ ಸಂಜೆ ಯುವ ದಸರಾಕ್ಕೆ ಯುವ ದಸರಾಕಕ್ಕೆ ಸಂಭ್ರಮದ ಚಾಲನೆ ದೊರೆಯಿತು. ಪುನೀತ್‌ ರಾಜ್‌ ಕುಮಾರ್‌ ಅವರ ಹೆಸರಿನಲ್ಲಿ ನಡೆಯುವ ಯುವ ದಸರಾವನ್ನು ಅವರ ಪತ್ನಿ ಅಶ್ವಿನಿ ಪುನೀತ್‌ ರಾಜ್‌ ಕುಮಾರ್‌ ಉದ್ಘಾಟಿಸಿದರು.

ಇಡೀ ಕಾರ್ಯಕ್ರಮವೇ ಅಪ್ಪುಮಯವಾಗಿದ್ದು, ಮಹಾರಾಜ ಕಾಲೇಜು ಮೈದಾನದಲ್ಲಿ ನಿರ್ಮಿಸಲಾಗಿರುವ ಯುವ ದಸರಾ ವೇದಿಕೆಯ ಮುಂಭಾಗದಲ್ಲಿ ಅಪ್ಪು ಡ್ಯಾನ್ಸ್‌ ಮಾಡುತ್ತಿರುವ ೫೦ ಅಡಿ ಉದ್ದದ ಬೃಹತ್‌ ಕಟೌಟ್‌ ಎಲ್ಲರ ಗಮನ ಸೆಳೆಯುತ್ತಿದೆ.

ಹಾಡು ಹಾಡಿದ ರಾಘವೇಂದ್ರ ರಾಜ್‌ ಕುಮಾರ್‌

ಉದ್ಘಾಟನೆಗೆ ರಾಘವೇಂದ್ರ ರಾಜ್ ಕುಮಾರ್, ವಿನಯ್ ರಾಜ್ ಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಸೋಮ ಶೇಖರ್, ಸಂಸದ ಪ್ರತಾಪ್ ಸಿಂಹ ಸಾಥ್‌ ನೀಡಿದರು. ಅಶ್ವಿನಿ ಅವರು ತಾನು ಮಾತನಾಡುವುದಿಲ್ಲ ಎಂದು ಹೇಳಿದರು. ಮೊದಲೇ ನಿರ್ಧರಿಸಿದಂತೆ ಕುಟುಂಬದ ಪರವಾಗಿ ರಾಘವೇಂದ್ರ ರಾಜ್ ಕುಮಾರ್ ಮಾತನಾಡಿದರು. ʻʻಎಲ್ಲಾ ಅಭಿಮಾನಿ‌ ದೇವರಿಗೆ ನಮಸ್ಕಾರ. ಆಗ ಅಪ್ಪುನ ಪ್ರೀತಿಸ್ತಿದ್ರಿ. ಈಗ ಪೂಜಿಸ್ತಿದ್ದೀರಿ. ನಂಗೆ ಎಲ್ಲರಲ್ಲೂ ಅಪ್ಪು ಕಾಣ್ತಿದ್ದಾನೆʼʼ ಎಂದು ಹೇಳಿದರು.

ಗಂಧದ ಗುಡಿ ಟೀಸರ್‌ ಪ್ರದರ್ಶನ
ಯುವ ದಸರಾದ ಅಪ್ಪು ನಮನ‌ ಕಾರ್ಯಕ್ರಮದಲ್ಲಿ ಪುನೀತ್‌ ರಾಜ್‌ ಕುಮಾರ್‌ ನಟನೆಯ ಗಂಧದ ಗುಡಿ‌ ಚಿತ್ರದ ಟೀಸರ್ ಪ್ರದರ್ಶನ ನಡೆಯಿತು. ಈ ವೇಳೆ ಮಾತನಾಡಿದ ಗಂಧದ ಗುಡಿ ಚಿತ್ರದ ನಿರ್ದೇಶಕ ಹರ್ಷವರ್ಧನ್, ʻʻಅಪ್ಪು ಅವರ ಜೊತೆ ಒಂದು ವರ್ಷ ಕಳೆದ ಪುಣ್ಯ ನನ್ನದು. ಅಪ್ಪು ಅವರು ಬಹಳ ಪ್ರೀತಿಯಿಂದ ನಾನು‌ ಇರೋ ಹಾಗೆ ತೋರಿಸಿ ಎಂದು ಮಾಡಿಸಿದ ಚಿತ್ರ‌‌ ಇದು. ಅಕ್ಟೋಬರ್ 28 ರಂದು ಚಿತ್ರ ಬಿಡುಗಡೆಯಾಗಲಿದೆʼʼ ಎಂದರು.

ಅಭಿಮಾನಿಗಳಿಗೆ ದೇವರು ಅಪ್ಪು
ಯುವ ದಸರಾದಲ್ಲಿ ಮಾತನಾಡಿದ ನಟ ವಸಿಷ್ಟಸಿಂಹ ಅವರು, ʻʻಅಪ್ಪು ನಮನದ ಹೆಸರಿನಲ್ಲಿ ಯುವ ದಸರಾ ಆರಂಭವಾಗ್ತಿರೋದು ಪುಣ್ಯ. ಅಭಿಮಾನಿಗಳನ್ನು ದೇವರು ಎನ್ನುತ್ತಿದ್ದವರು ಈಗ ಅವರೇ ಅಭಿಮಾನಿಗಳ ಪಾಲಿಗೆ ದೇವರಾಗಿದ್ದಾರೆ. ಅವರು ಬಿಟ್ಟು ಹೋಗಿರೋ ದಾರಿಯಲ್ಲಿ ನಡೆಯೋಣʼʼ ಎಂದರು. ಅಪ್ಪು ನಟನೆಯ ರಾಜಕುಮಾರ ಚಿತ್ರದ ʻʻನೀನೆ ರಾಜಕುಮಾರʼʼ ಹಾಡನ್ನು ಹಾಡಿ ರಂಜಿಸಿದರು.

ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್, ಗಾಯಕರಾದ ಕುನಾಲ್ ಗಾಂಜಾವಾಲ, ವಿಜಯಪ್ರಕಾಶ್ ಅವರ ಗಾಯನ ಸಂಭ್ರಮ ಗಮನ ಸೆಳೆಯಿತು. ಅಪ್ಪು ಸಿನಿಮಾದ ಹಾಡುಗಳಿಗೆ ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ನೃತ್ಯ ಮಾಡಿದರು.

Exit mobile version