–ಪ್ರೊ. ವಿದ್ವಾನ್ ನವೀನಶಾಸ್ತ್ರಿ ರಾ. ಪುರಾಣಿಕ
(ಲೇಖಕರು, ಸಂಸ್ಕೃತ ಉಪನ್ಯಾಸಕರು, ಸಂಸ್ಕೃತಿ ಚಿಂತಕರು ಹಾಗೂ ಜ್ಯೋತಿಷಿಗಳು)
ಜಾತಕದಲ್ಲಿ ನವಗ್ರಹಗಳ ಪೈಕಿ ಎರಡು (Nagara Panchami 2024) ಗ್ರಹಗಳಾದ ರಾಹು ಮತ್ತು ಕೇತು ಗ್ರಹಗಳಿಂದ ಉಂಟಾಗುವ ದೋಷಗಳಿಗೆ ಸರ್ಪದೋಷ (ನಾಗದೋಷ) ಎಂದು ಕರೆಯುವರು. ರಾಹು ಕೇತುಗಳನ್ನು ಹೋರಾಸಂಹಿತೆ,ಬೃಹಜ್ಜಾತಕ ಇತ್ಯಾದಿ ಗ್ರಂಥ ಬರೆದ ವರಾಹಮಿಹಿರ ಉಲ್ಲೇಖ ನೀಡಿಲ್ಲವಾದರೂ, ಸೂರ್ಯ ಸಿದ್ದಾಂತದಂತ ಗ್ರಂಥಗಳು ಗ್ರಹಣದ ವಿಷಯದಲ್ಲಿ ಕಂಡುಬರುವ ಛಾಯಾಬಿಂದುಗಳನ್ನು ರಾಹು ಕೇತುಗಳೆಂಬ ಉಲ್ಲೇಖ ಕಂಡುಬರುತ್ತದೆ.
ಅದರಂತೆ ರಾಹು ಕೇತು ಗ್ರಹಗಳು ಛಾಯಾ ಗ್ರಹಗಳು ಇವುಗಳಿಗೆ ತಮ್ಮದೇ ಅಸ್ತಿತ್ವ ಇಲ್ಲ. ಇವುಗಳಿಗೆ ಸದಾ ವಕ್ರಗತಿ. ಆದರೆ ಶನಿವತ್ ರಾಹು, ಕುಜವತ್ ಕೇತು ಎಂಬುದನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಕೆಲವು ಗ್ರಂಥಕಾರರು ಹೇಳಿದ್ದಾರೆ. ಅಂದರೆ ಶನಿಗ್ರಹದಿಂದ ಉಂಟಾಗುವ ಫಲ ಮತ್ತು ದೋಷಗಳಷ್ಟೇ ಪರಿಣಾಮ ರಾಹು ಗ್ರಹದಿಂದ ಉಂಟಾಗುವುದು ಹಾಗೂ ಕುಜಗ್ರಹದಿಂದ ಉಂಟಾಗುವ ಫಲ ಮತ್ತು ದೋಷಗಳಷ್ಟೇ ಪರಿಣಾಮ ಕೇತು ಗ್ರಹದಿಂದ ಉಂಟಾಗುತ್ತದೆ.
ಛಾಯಾಗ್ರಹಗಳು
ರಾಹುಕೇತುಗಳು ಛಾಯಾಗ್ರಹವಾದರೂ ಜಾತಕದಲ್ಲಿ ಅನಿಷ್ಟಸ್ಥಾನದಲ್ಲಿರುವಾಗ ಹಾಗೂ ಗೋಚಾರದಲ್ಲಿ ಅಶುಭ ಸ್ಥಾನದಲ್ಲಿದ್ಧಾಗ ಜಾತಕನಿಗೆ ತೀವ್ರತರವಾದ ಬಾಧೆ ಕೊಡುತ್ತದೆ. ದಶಾ ಮತ್ತು ದಶಾಭುಕ್ತಿ ನಡೆಯುವಾಗ ಇನ್ನೂ ಹೆಚ್ಚು ಬಾಧಿಸುತ್ತದೆ. ದೇಶಾಂತರ ಹೊರಡುವ ಪ್ರಸಂಗವೂ ಸಹ ಬರಬಹುದು.ಮನೆಮಠಬಿಟ್ಟು ಬೀದಿ ಪಾಲಾಗುವ ಸಂಭವ ಇರುತ್ತದೆ.ಉಳಿದ ಗ್ರಹಗಳಿಗಿಂತ ಹೆಚ್ಚು ಬಾಧಕವನ್ನು ಕೊಡುತ್ತವೆ.
ದೋಷ ಗುರುತಿಸುವುದು ಹೇಗೆ?
ಜಾತಕದಲ್ಲಿ ಸುಮಾರಾಗಿ 100ಕ್ಕೆ ಪ್ರತಿಶತ ಒಂದೆರಡು ಮಾತ್ರ ಕಾಲಸರ್ಪದೋಷದಿಂದ ಬಂಧಿತವಾಗಿರುತ್ತದೆ. ಹಾಗಾದರೆ ಕಾಲಸರ್ಪ ದೋಷ ಎಂದರೇನು? ಅದನ್ನು ಜಾತಕದಲ್ಲಿ ಗುರುತಿಸುವುದು ಹೇಗೆ?
ಜಾತಕ(ಕುಂಡಲಿ)ಯಲ್ಲಿ ರಾಹು ಕೇತು ಗ್ರಹಗಳ ಮಧ್ಯದಲ್ಲಿ ಇತರ ಗ್ರಹಗಳು ಅಂದರೆ ರವಿ, ಚಂದ್ರ, ಕುಜ, ಬುಧ, ಗುರು, ಶುಕ್ರ, ಶನಿ ಗ್ರಹಗಳು ಇದ್ದರೆ ಅದು ಕಾಲಸರ್ಪ ದೋಷ ಎನಿಸುತ್ತದೆ. ರಾಹುಕೇತು ಗ್ರಹಗಳು ಸದಾ ವಕ್ರಗತಿಯನ್ನು ಹೊಂದಿದೆ. ರಾಹು ಕೇತು ಗ್ರಹಗಳನ್ನು ಬಿಟ್ಟು ಉಳಿದ ಗ್ರಹಗಳು ತಾವಿರುವ ಮನೆಯಿಂದ ಮುಂದೆ ಚಲಿಸಿದರೆ ರಾಹು ಕೇತು ಗ್ರಹಗಳು ಹಿಂದಕ್ಕೆ ಚಲಿಸುತ್ತವೆ. ಆದ್ದರಿಂದ ಕಾಳಸರ್ಪ ದೋಷದಲ್ಲಿ ರಾಹು ಕೇತು ಗ್ರಹಗಳ ಮಧ್ಯದಲ್ಲಿ ಇತರ ಗ್ರಹಗಳು ಬಂಧಿಯಾದಂತೆ ಇರಬೇಕೇ ವಿನಃ ಉಳಿದ ಗ್ರಹಗಳ ಮಧ್ಯದಲ್ಲಿ ರಾಹು ಕೇತು ಇದ್ದರೆ ಅಲ್ಲ.
ಕಾಳಸರ್ಪ ದೋಷ
ಕಾಳಸರ್ಪ ದೋಷ ಚಿಂತನೆಯ ಬಗ್ಗೆ ಉದಾಹರಣೆ ಮೇಷಲಗ್ನದಲ್ಲಿ ರಾಹು ಇದ್ದು ಸಪ್ತಮವಾದ ತುಲಾದಲ್ಲಿ ಕೇತುವಿದ್ದು ಉಳಿದ ಗ್ರಹಗಳು ಮೇಷದಿಂದ ತುಲಾದ ಒಳಗಡೆ ಇದ್ದರೆ ಕಾಳಸರ್ಪ ದೋಷ ಎಂದು ತಿಳಿಯಬೇಕು.ಇದೇ ರೀತಿ ಉಳಿದ ಹನ್ನೆರಡು ಲಗ್ನಗಳಲ್ಲೂ ಇದರಂತೆ ತಿಳಿದುಕೊಳ್ಳಬೇಕು.
ರಾಹು ಕೇತುಗಳು ಸಮಸಪ್ತಕರಾಗಿ( 7ರಾಶಿ ಅಂತರದಲ್ಲಿ)ಯಾವಾಗಲೂ ಇರುತ್ತಾರೆ.
ಜೋತಿಷ್ಯಶಾಸ್ತ್ರದಿಂದ ತಿಳಿಯುವ ಸರ್ಪದೋಷ, ಆಶ್ಲೇಷಾ ಬಲಿ
ಜ್ಯೋತಿಷ್ಯದಲ್ಲಿ ರಾಹುವಿಗೂ ನಾಗನಿಗೂ ಅನ್ಯೋನ್ಯ ಸಂಬಂಧವಿರುವುದರಿಂದ ಅನೇಕ ರೀತಿಯಾಗಿ ನಾಗಾನುಗ್ರಹ ಹಾಗೂ ನಾಗ ದೋಷಗಳ ಬಗ್ಗೆ ಪರಿಕಲ್ಪನೆಯಿದೆ ಅಂದರೆ ರಾಹುವಿನ ಆದಿ ದೇವತಾ ಹಾಗೂ ಪ್ರತ್ಯಧಿದೇವತಾ ಕಾಲ ಹಾಗೂ ಸರ್ಪ, ದೋಷಗಳನ್ನು ಅತಿಶಯೋಕ್ತಿ ಮಾಡದೆ ಸಣ್ಣ – ಪುಟ್ಟ ಪ್ರಾಯಶ್ಚಿತ್ತದಿಂದಲೇ ನಿವೃತ್ತಿ ಮಾಡಿಸಿ, ನಿರ್ಭೀತಿಯಿಂದಲೇ ಜೀವನ ಮಾಡುವುದಕ್ಕೆ ಜ್ಯೋತಿಷ್ಯದಿಂದ ಪರಿಹರಿಸಿಕೊಳ್ಳುವದಾಗಿದೆ.
ಆಶ್ಲೇಷ ನಕ್ಷತ್ರವು ತಾರಾ ಮಂಡಲದಲ್ಲಿ ಗುರುತಿಸಲಾದ ಇಪ್ಪತ್ತೇಳು ಮಹಾ ನಕ್ಷತ್ರಗಳಲ್ಲಿ ಒಂಭತ್ತನೆಯದು. ಜ್ಯೋತಿಷ್ಯ ಶಾಸ್ತ್ರಾಧಾರದಂತೆ ಪ್ರತಿನಕ್ಷತ್ರಕ್ಕೂ ಒಂದೊಂದು ನಕ್ಷತ್ರ ದೇವತೆ. ಆಶ್ಲೇಷ ನಕ್ಷತ್ರದ ನಕ್ಷತ್ರ ದೇವತೆಯು ಸರ್ಪ. ತನ್ನಿಂದ ಘಟಿಸಿದ ಪ್ರಮಾದದ ಪ್ರಾಯಶ್ಚಿತ್ತಕ್ಕಾಗಿ, ನಾಗದೇವತೆಯ ಅನುಗ್ರಹಕ್ಕಾಗಿ ನಾಗನಿಗೆ ಬಲಿ ಅಥವಾ ಆಹುತಿ ನೀಡುವ ಮೂಲಕ ನಡೆಸುವ ವಿಶೇಷ ಆರಾಧನೆಯೇ ಆಶ್ಲೇಷಾ ಬಲಿ.
ನಾಗಾಲಯಗಳು-ಆಶ್ಲೇಷಾ ಬಲಿ
ನಾಗಾರಾಧನೆಯು ಜಗತ್ತಿನ ಇತಿಹಾಸದಲ್ಲಿ ಅತ್ಯಂತ ಪ್ರಾಚೀನವಾದುದು. ನಾಗಾರಾಧನೆ ಎಂಬುದು ಕೇವಲ ಗ್ರಾಮೀಣ ಜನತೆಯ ನಂಬಿಕೆಯಾಗಿ ಉಳಿದಿಲ್ಲ. ಈ ನಂಬಿಕೆಯು ಇಂದು ನಾಗರಿಕರೆನಿಸಿದ ವಿದ್ಯಾವಂತರ ಮನೆ ಮನಗಳಲ್ಲೂ ಆಳವಾಗಿ ಬೇರೂರಿ ನಿಂತಿದೆ. ನಾಗರ ಪಂಚಮಿಯಂದು ನಾಗದೇವತೆಗೆ ತನಿ ಹಾಕುವಲ್ಲಿಂದ, ತಂಬಿಲ ನೀಡುವಲ್ಲಿಂದ ತೊಡಗಿ ಅಷ್ಟ ಪವಿತ್ರ ನಾಗಮಂಡಲದಂತಹ ವಿಶಿಷ್ಟ ಆರಾಧನಾ ಕ್ರಮಗಳವರೆಗೆ ಅವರವರ ಶ್ರದ್ಧಾಭಕ್ತಿ, ಆರ್ಥಿಕ ಸ್ಥಿತಿಗತಿಗಳನ್ನು ಅವಲಂಬಿಸಿ ನಾಗಾರಾಧನೆಯನ್ನು ಈಗಲೂ ನಡೆಸಿಕೊಂಡು ಬರಲಾಗುತ್ತಿದೆ. ನಾಗಾರಾಧನೆಯು ಒಟ್ಟಿನಲ್ಲಿ ನಾಗ ಪ್ರೀತಿಗಾಗಿ. ಆದರೆ ನಾಗಾರಾಧನೆಯ ಒಂದು ಅಂಗವಾದ ಆಶ್ಲೇಷಾ ಬಲಿ ಎಂಬುದು ನಾಗ ದೇವತೆಗೆ, ಸರ್ಪ ಸಂಕುಲಕ್ಕೆ ಮಾನವನಿಂದ ಒದಗಿದ ಹಾನಿಯ, ಅಪಚಾರದ ದೆಸೆಯಿಂದ ಉಂಟಾದ ಸರ್ಪ ಶಾಪದ ಪರಿಹಾರಾರ್ಥವಾಗಿ ನಡೆದು ಬಂದಿದೆ.
ಆಶ್ಲೇಷಾ ಬಲಿ ಎಂಬ ಪದಗಳನ್ನು ಕೇಳಿದೊಡನೆಯೇ ಶ್ರೀ ಪರಶುರಾಮ ಸೃಷ್ಟಿಯ ಕ್ಷೇತ್ರಗಳಾದ ಶ್ರೀ ಕುಕ್ಕೆಸುಬ್ರಹ್ಮಣ್ಯ, ಗುತ್ತಿಗಾರು ಸಮೀಪದ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ವಳಲಂಬೆ, ಮಂಗಳೂರು ತಾಲೂಕಿನ ಕುಡುಪು, ಕಾಸರಗೋಡು ತಾಲೂಕಿನ ಮಂಜೇಶ್ವರ, ಬೆಳ್ತಂಗಡಿ ತಾಲೂಕಿನ ಬಳ್ಳಮಂಜ, ಪುತ್ತೂರು ತಾಲೂಕಿನ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಶ್ರೀ ವಾಸುಕಿ ಸನ್ನಿಧಿ, ಆರ್ಯಾಪು ಗ್ರಾಮದ ಕಾರ್ಪಾಡಿ ಇಂತಹ ನಾಗಾಲಯಗಳಲ್ಲಿ ವಿಶೇಷವಾಗಿ ಆಶ್ಲೇಷ ನಕ್ಷತ್ರದ ತಿಥಿಯಂದು ಈ ಆರಾಧನೆ ನಡೆಯುತ್ತದೆ. ಪಂಚಮಿ ಅಥವಾ ಷಷ್ಠಿ ತಿಥಿಯಿದ್ದರೂ ಈ ಆರಾಧನೆಗೆ ಪ್ರಶಸ್ತವೆಂಬ ನಂಬಿಕೆಯಿದೆ.
ಪುರಾಣಗಳಲ್ಲಿ ಉಲ್ಲೇಖಿತವಾದ ಸರ್ಪಗಳ ಜನ್ಮ, ಸರ್ಪ ಸಂಕುಲ
ಕದ್ರೂ ಮತ್ತು ಕಶ್ಯಪ ದಂಪತಿಗಳಿಂದ ಎಂಟು ಪ್ರಧಾನ ನಾಗದೇವತೆಗಳ ಸೃಷ್ಟಿಯಾಯಿತು. ಇದರ ಉಲ್ಲೇಖ “ವರಾಹ ಪುರಾಣ”ದಲ್ಲಿದೆ.
ಸೃಜತಾಃ ಬ್ರಹ್ಮಣಾಃ ಸೃಷ್ಠಿಂ
ಮರೀಚಃ ಸೂರಿಕಾರಣಂ ।
ಪ್ರಥಮಂ ಮನಸಾ
ಧ್ಯಾತಸ್ತಸ್ಯ ಪುತ್ರಸ್ತು ಕಾಶ್ಯಪಃ ।।
ತಸ್ಯ ದಾಕ್ಷಾಯಣೀ ಭಾರ್ಯಾ
ಕದ್ರೂರ್ನಾಮ ಶುಚಿಸ್ಮಿತಾ ।
ಮಾರೀಚೋ ಜನಯಾಮಾಸಾ
ತಸ್ಯಾಂ ಪುತ್ರಾನ್ ಮಹಾ ಬಲಾನ್ ।।
ಅನಂತಂ ವಾಸುಕಿಂ ಚೈವ
ಕಂಬಳಂ ಚ ಮಹಾಬಲಂ ।
ಕರ್ಕೋಟಕಂ ಚ ರಾಜೇಂದ್ರ
ಪದ್ಮಂ ಜಾನ್ಯಂ ಸರೀಸೃಪಮ್ ।।
ಮಹಾ ಪದ್ಮಂ ತಥ ಶಂಖಂ
ಕುಲಿಕಂ ಚಾಪರಾಜಿತಂ ।
ಏತೇ ಕಶ್ಯಪದಾಯದಾಃ
ಪ್ರಧಾನಾಃ ಪರಿಕೀರ್ತಿತಾಃ ।।
ಸರ್ಪಗಳ ಮಾತೆ
ಕಶ್ಯಪ ಮಹರ್ಷಿಯ ಹದಿಮೂರು ಮಂದಿ ಪತ್ನಿಯರಲ್ಲಿ ಕದ್ರೂ ಎಂಬಾಕೆ ಸರ್ಪಗಳ ಮಾತೆ. ಅವಳ ಮಕ್ಕಳಲ್ಲಿ ತಕ್ಷಕ, ವಾಸುಕಿ ಪ್ರಧಾನರು. ಅನಂತ, ಮಹಾಶೇಷ, ಕಪಿಲ, ನಾಗ, ಕುಳಿಕ, ಶಂಖಪಾಲ, ಭೂಧರ, ತಕ್ಷಕ, ವಾಸುಕಿ ಇವರು ನವನಾಗರೆಂದು ಪ್ರಸಿದ್ಧರು. ಇವರಲ್ಲೇ ಐವತ್ತೆರಡು ಮಂದಿ ಸರ್ಪಶ್ರೇಷ್ಠರೂ ಹದಿನಾರು ಸಾವಿರ ಪ್ರಕಾರಗಳ ಸರ್ಪಗಳೂ ಇವೆಯೆಂದು ಬ್ರಹ್ಮ ಪುರಾಣದಲ್ಲಿಯೂ ಸಹ ವರ್ಣಿತವಾಗಿದೆ. ವಿಷಮಯವಾದ ಹಲ್ಲುಗಳು, ಅಗ್ನಿ ಜ್ವಾಲೆಗಳನ್ನು ಹೊರಸೂಸುವಂತೆ ತೀಕ್ಷ್ಣವಾಗಿ ಹೊಳೆಯುವ ಕೆಂಗಣ್ಣುಗಳು, ಭಯಂಕರವಾದ ಕಡುಕೋಪವಿದ್ದರೂ ನಂಬಿ ಪೂಜಿಸಿದವರಿಗೆ ತಾರಕ ಶಕ್ತಿ- ನಂಬದೆ ಹಾನಿಯುಂಟು ಮಾಡಿದರೆ ಮಾರಕ ಶಕ್ತಿಯೂ ಹೌದು.ನಾಗದೇವತೆಗೆ ಕಾಯೇನ, ವಾಚಾ, ಮನಸಾ ಹಾನಿಯುಂಟು ಮಾಡಿದರೆ, ಅಪಚಾರವೆಸಗಿದರೆ ಸರ್ಪಶಾಪದಿಂದ ವಿಧ ವಿಧದ ಅನಿಷ್ಟಗಳು ಎದುರಾಗಿ ಕಾಡುತ್ತವೆ ಎಂಬುದು ಪೂರ್ವಜರ ಮಾತು. ಆದುದರಿಂದ ಸರ್ಪಶಾಪದಿಂದ ಮುಕ್ತಿ ಪಡೆಯುವ ಮಾರ್ಗಗಳಲ್ಲಿ ಆಶ್ಲೇಷಾ ಬಲಿ ಆರಾಧನೆಯೂ ಒಂದು. ನಾಗರ ಪಂಚಮಿ, ಆಶ್ಲೇಷ ನಕ್ಷತ್ರದ ತಿಥಿ, ಷಷ್ಠಿಯದಿನ ಆಶ್ಲೇಷಾ ಬಲಿಗೆ ಪ್ರಶಸ್ತ. ಕುಕ್ಕೇ ಸುಬ್ರಹ್ಮಣ್ಯ ದೇವಸ್ತಾನದಲ್ಲಿ ಬಹುತೇಕ ಎಲ್ಲ ದಿನಗಳಲ್ಲೂ ಈ ಪೂಜೆ ನಡೆಯುತ್ತದೆ.
ಸರ್ಪ ಶಾಪ ಬರುವುದು ಹೇಗೆ?
ನಾಗ ದೇವತೆಗೆ ಹಾನಿಯುಂಟಾಗುವ, ಅಪಚಾರ ತರುವ ಪ್ರಸಂಗಗಳು ಹಲವು. ಈ ಜನ್ಮದ, ಪೂರ್ವಜನ್ಮದ, ಜನ್ಮ ಜನ್ಮಾಂತರಗಳ ಜೀವಿತಾವಧಿಯ ವಿವಿಧ ಅವಸ್ಥೆಗಳಲ್ಲಿ ಮನಸ್ಸು, ಮಾತು, ಶರೀರ, ಕರ್ಮೇಂದ್ರಿಯ ವ್ಯಾಪಾರಗಳಿಂದ, ಶರೀರದ ಅಂಗಾಂಗಗಳಿಂದ, ಅರಿಷಡ್ವರ್ಗಗಳ ದೆಸೆಯಿಂದ, ತಿಳಿದೋ, ತಿಳಿಯದೆಯೋ ಓರ್ವ ವ್ಯಕ್ತಿ, ಆತನ ಕುಟುಂಬಸ್ಥರು ಪೂರ್ವಜರಿಂದ ನಡೆದ ಸರ್ಪವಧೆ, ದಂಡದಿಂದ ಹೊಡೆಯುವಿಕೆ, ಹುತ್ತಗಳ ಅಗೆತ, ವೃಕ್ಷನಾಶ ಅಥವಾ ಇಂತಹ ದುಷ್ಕೃತ್ಯಗಳಿಗೆ ಪ್ರೇರಣೆ ನೀಡುವುದರಿಂದ ಸರ್ಪಶಾಪ ಉಂಟಾಗುತ್ತದೆ. ತನ್ಮೂಲಕ ಕುಟುಂಬದಲ್ಲಿ ವಿವಾಹ ವಿಳಂಬ,ಬಂಜೆತನ, ಸಂತತಿ ನಾಶ, ಕುಷ್ಠಾದಿ ಮಹಾರೋಗಗಳೂ ಇನ್ನಿತರ ಭಯಂಕರ ಆಪತ್ತುಗಳೂ ಉಂಟಾಗುತ್ತವೆ ಎಂದು ಆಶ್ಲೇಷಾ ಬಲಿ ವಿಧಾನದ ಸಂಕಲ್ಪದಲ್ಲಿ ಹೇಳಲಾಗಿದೆ. ಸರ್ಪಗಳ ಮೊಟ್ಟೆಗಳ ನಾಶವೂ ಇಂತಹ ಅಕೃತ್ಯಗಳ ಸಾಲಿಗೆ ಸೇರುತ್ತದೆ. ಕೃಷಿ ಕ್ಷೇತ್ರದಲ್ಲಿ ಕೃಷಿಕನಿಗೆ ತಿಳಿಯದೆಯೇ ಇಂತಹ ಹಾನಿಗಳು ಸಂಭವಿಸುತ್ತಿರುತ್ತವೆ. ಆದುದರಿಂದ ಕೃಷಿಕರು ವಿಶೇಷವಾಗಿ ನಾಗದೇವತೆಯ ಆರಾಧನೆ ಮಾಡುತ್ತಲೇ ಇರುವುದು ಅನಿವಾರ್ಯವಾಗಿದೆ. ಸಮಸ್ತ ಸರ್ಪದೋಷ, ಸರ್ಪ ಶಾಪಗಳ ಪ್ರಾಯಶ್ಚಿತ್ತ ಪರಿಹಾರಾರ್ಥವಾಗಿ, ಸಕಲೈಶ್ವರ್ಯ ಸಿದ್ಧಿಗಾಗಿ ಆಶ್ಲೇಷಾ ಬಲಿಯನ್ನು ನೀಡಲಾಗುತ್ತದೆ.
ಆಶ್ಲೇಷಾ ಬಲಿ ವಿಧಾನ
ಆಶ್ಲೇಷಾ ಬಲಿಗೆ ಪ್ರಶಸ್ತವಾದ ಶುಭದಿನದಂದು ಕುಟುಂಬದ ಯಜಮಾನನು ಕುಟುಂಬದ ಸದಸ್ಯರೊಡಗೂಡಿ ಶುಚಿರ್ಭೂತನಾಗಿ, ಉಪವಾಸವಿದ್ದು, ಕ್ಷೇತ್ರ ವಿಧಿಗನುಸಾರವಾಗಿ, ವೇದ ಪಾರಂಗತರಾದ ನಿಷ್ಠಾವಂತ ವಿಪ್ರೋತ್ತಮರ ದ್ವಾರಾ ಆಶ್ಲೇಷಾ ಬಲಿಯನ್ನು ನೀಡಬೇಕು. ಸಾಮೂಹಿಕವಾಗಿ ಈ ಪೂಜೆ ನಡೆಸುವುದೂ ಇದೆ. ವ್ಯಕ್ತಿಗತವಾಗಿ ನಡೆಸುವ ಪದ್ಧತಿಯೂ ಉಂಟು. ಶ್ರೀ ಗುರು ಗಣಪತಿ, ನವಶಕ್ತ್ಯಾದಿ ದೇವತೆಗಳನ್ನು ಆವಾಹಿಸಿ ಸಂಕಲ್ಪ ಮಾಡುವುದರೊಂದಿಗೆ ಆಶ್ಲೇಷಾ ಬಲಿ ವಿಧಾನ ಆರಂಭವಾಗುತ್ತದೆ. ತಳಿರು ತೋರಣಗಳಿಂದ ಅಲಂಕೃತವಾದ ನಾಗ ಸನ್ನಿಧಿಯಲ್ಲಿ ಹರಿದ್ರಾ, ಕುಂಕುಮ, ರಂಗೋಲಿ ಪುಡಿಗಳಿಂದ ಸರ್ಪ ನವಪದಮಂಡಲವನ್ನೂ ಆಶ್ಲೇಷಾ ಬಲಿ ಮಂಡಲವನ್ನೂ ಆಕರ್ಷಕವಾಗಿ ಬರೆಯಲಾಗುತ್ತದೆ. ಸರ್ಪ ನವಪದ ಮಂಡಲದ ಕೇಂದ್ರ ಪದದಲ್ಲಿ ಶ್ರೀ ವಾಸುಕೀ ನಾಗರಾಜನಿಗೆ ಅಗ್ರಸ್ಥಾನ. ಉಳಿದ ಅಷ್ಟ ಪದಗಳಲ್ಲಿ ಅಷ್ಟಕುಲ ಸಂಜಾತರಾದ ಅನಂತ, ಶೇಷ, ಕಪಿಲ, ನಾಗ, ಕುಳಿಕ, ಶಂಖಪಾಲ, ಭೂಧರ, ತಕ್ಷಕ ಅವರ ಆವಾಹನೆ. ಆಶ್ಲೇಷಾ ಬಲಿ ಮಂಡಲದ 52 ಪದಗಳು ಸರ್ಪಕುಲದ ೫೨ ಮಂದಿ ಸರ್ಪ ಶ್ರೇಷ್ಟರ ಆವಾಹನೆಗಾಗಿವೆ. ಸರ್ಪಗಳ ಪತ್ನಿಯರು, ಪುತ್ರರು, ಪುತ್ರಿಯರು, ಮೊಮ್ಮಕ್ಕಳು, ಮರಿ ಮಕ್ಕಳ ಸಹಿತ ಸರ್ಪ ಸಂಕುಲವನ್ನೂ ಇಂದ್ರಾದಿ ಅಷ್ಟದಿಕ್ಪಾಲಕರನ್ನೂ ದೇವಗಣಗಳನ್ನೂ ನಾಗಗಣಗಳನ್ನೂ ಅವಾಹಿಸಲಾಗುತ್ತದೆ.
ಆಶ್ಲೇಷಾ ಬಲಿ ವಿಧಾನದಂತೆ ಶ್ರೀ ವಾಸುಕೀ ನಾಗರಾಜನನ್ನೂ ಆತನ ಸರ್ಪ ಸಂಕುಲವನ್ನೂ ಧ್ಯಾನಿಸಲಾಗುತ್ತದೆ. ಅನಂತರ ಕಲ್ಪೋಕ್ತವಾಗಿ ಆಸನ, ಸ್ವಾಗತ, ಪಾದ್ಯ, ಅರ್ಘ್ಯ, ಆಚಮನೀಯ, ಮಧುಪರ್ಕ, ಆಚಮನ, ಸ್ನಾನ, ವಸನ, ಆಭರಣ, ಗಂಧ, ಪುಷ್ಪ, ಧೂಪ, ದೀಪ, ನೈವೇದ್ಯ, ವಂದನೆಗಳೆಂಬ ಷೋಡಶೋಪಚಾರ ಪೂಜೆಯನ್ನು ಸಲ್ಲಿಸಲಾಗುತ್ತದೆ. ಸಮಸ್ತ ಸರ್ಪಶಾಪ ಪರಿಹಾರಕ್ಕಾಗಿ ಕ್ಷೀರ, ಶರ್ಕರ, ಕದಳಿ, ಮಧು, ಆಜ್ಯ, ಹರಿದ್ರಾಯುಕ್ತ ಪಿಂಡಗಳನ್ನು ಸರ್ಪಗಳಿಗೆ ಮಂಡಲಗಳ ಪದಗಳಲ್ಲಿರಿಸಿ, ಸಮರ್ಪಿಸಲಾಗುತ್ತದೆ. ದೇವತೆಗಳಿಗೆ ಪ್ರಿಯವಾಗುವಂತೆ ಜ್ಯೋತಿಗಳನ್ನು ಬೆಳಗಿಸಿ ದೇದಿಪ್ಯವಾದ ವಾತಾವರಣವನ್ನು ನಿರ್ಮಿಸಲಾಗುತ್ತದೆ. ಮಹಾಮಂಗಳಾರತಿಯನ್ನು ಬೆಳಗಿ ಮಂತ್ರ ಪುಷ್ಪಾಂಜಲಿಯನ್ನು ಸಮರ್ಪಿಸಲಾಗುತ್ತದೆ. ಆನಂತರ ಪ್ರದಕ್ಷಿಣೆ ಗೈದು, ಸಾಷ್ಟಾಂಗ ನಮಸ್ಕಾರ ಮಾಡಿ, ನಾಗದೇವತೆಯನ್ನು ಪ್ರಸನ್ನಗೊಳಿಸಿ,ಮಹಾಮಹಿಮರಾದ ಸರ್ಪಗಳೇ, ಶ್ರದ್ಧಾ ಭಕ್ತಿಯಿಂದ ಯಥಾಶಕ್ತಿಯಾಗಿ ನಡೆಸಿದ ಈ ಪೂಜೆಯನ್ನು ಅಂಗೀಕರಿಸಿ, ಬಲಿದಾನವನ್ನು ಸ್ವೀಕರಿಸಿರಿ. ಸುಪ್ರೀತರಾಗಿರಿ, ಯಜಮಾನನಿಂದ, ಆತನ ಕುಟುಂಬದವರಿಂದ, ಪೂರ್ವಜರಿಂದ ನಿಮಗಾಗಿರ ಬಹುದಾದ ಸಕಲ ಹಾನಿಯನ್ನು, ಅಪಚಾರಗಳನ್ನು ಮನ್ನಿಸಿ, ಯಜಮಾನನನ್ನು, ಆತನ ಕುಟುಂಬವನ್ನು ಸಕಲ ದುರಿತಗಳಿಂದ ರಕ್ಷಿಸಿರಿ, ಅವರಿಗುಂಟಾಗಿರುವ ಸರ್ಪ ಶಾಪವನ್ನು ನಿವೃತ್ತಿ ಪಡಿಸಿ ಅನುಗ್ರಹಿಸಿರಿ. ಕುಷ್ಠಾದಿ ರೋಗಗಳನ್ನು ನಾಶಗೊಳಿಸಿರಿ. ಆಯುಷ್ಮಂತರಾದ ಪುತ್ರ ಪೌತ್ರರ ಉತ್ತಮ ಸಂತಾನ ಭಾಗ್ಯವನ್ನು ಅನುಗ್ರಹಿಸಿ ಉತ್ತರೋತ್ತರ ಅಭಿವೃದ್ಧಿಯಾಗುವಂತೆ ಆಶಿರ್ವದಿಸಿ, ಅಷ್ಟ್ಯೆಶ್ವರ್ಯಗಳನ್ನು ದಯಪಾಲಿಸುವ ಕೃಪೆ ಮಾಡಿರಿ ಎಂದು ಮನಃಪೂರ್ವಕವಾಗಿ ಪ್ರಾರ್ಥನೆಯನ್ನು ಸಲ್ಲಿಸಲಾಗುತ್ತದೆ. ತದನಂತರ ಅರ್ಘ್ಯದಾನ, ಮತ್ತು ವಾಯನಗಳ ದಾನ ನೀಡಲಾಗುತ್ತದೆ. ಪ್ರಸಾದವನ್ನು ವಿತರಿಸಿ, ವಿಸರ್ಜನ ಪೂಜೆಯನ್ನು ನೆರವೇರಿಸಿ ಆಶ್ಲೇಷಾ ಬಲಿ ವಿಧಾನವನ್ನು ಪರಿಸಮಾಪ್ತಿಗೊಳಿಸಲಾಗುತ್ತದೆ.
ಅನಂತರ ಪೂಜೆಯನ್ನು ನೆರವೇರಿಸಿದ ಆಚಾರ್ಯರಿಗೆ ಫಲ, ತಾಂಬೂಲ ಯಥಾಶಕ್ತಿ ದಕ್ಷಿಣೆ ನೀಡಿ ನಮಸ್ಕರಿಸಿ, ಆರ್ಶಿರ್ವಾದ ಪಡೆಯುವುದರೊಂದಿಗೆ ಆಶ್ಲೇಷಾ ಬಲಿ ಪೂಜೆಯು ಮುಕ್ತಾಯವಾಗುತ್ತದೆ.
ಆದಿತ್ಯಾದಿ ನವಗ್ರಹ ಪ್ರಸಾದ ಸಿದ್ಧಿರಸ್ತು.
ಇದನ್ನೂ ಓದಿ: Nagara Panchami : ಶ್ರಾವಣದ ಮೊದಲ ಹಬ್ಬ ನಾಗರ ಪಂಚಮಿ; ಏನಿದರ ಹಿನ್ನೆಲೆ, ವಿಶೇಷ?