ಬೆಂಗಳೂರು: ಬೆಂಗಳೂರು ಹಾಗೂ ತಮಿಳುನಾಡಿನಲ್ಲಿ ಬಂಧಿತರಾಗಿದ್ದ ಶಂಕಿತ ಉಗ್ರರ ಮೇಲೆ ರಾಷ್ಟ್ರೀಯ ತನಿಖಾ ದಳ (NIA) ಎನ್‌ಎಐ, ಎಫ್ಐಆರ್ ದಾಖಲಿಸಿಕೊಂಡಿದೆ.
ನಿಷೇಧಿತ ಅಲ್‌ಖೈದಾ ಭಯೋತ್ಪಾದಕ ಸಂಘಟನೆ ಜತೆ ಆರೋಪಿಗಳು ಸಂಪರ್ಕ ಹೊಂದಿದ್ದರು. ಕಾಶ್ಮೀರ ಕಣಿವೆಯ ಮೂಲಕ ಆಫ್ಘಾನಿಸ್ತಾನಕ್ಕೆ ಹೊರಡಲು ಸಿದ್ದರಾಗಿದ್ದರು. ಆದರೆ ನಗರ ಪೊಲೀಸರು ಮತ್ತು ಕೇಂದ್ರದ ತನಿಖಾ ಸಂಸ್ಥೆಗಳ ಬಲೆಗೆ ಕಳೆದ ಜುಲೈನಲ್ಲಿ ಅಸ್ಸಾಂ ಮೂಲದ ಅಖ್ತರ್ ಹುಸೇನ್ ಲಷ್ಕರ್ ಮತ್ತು ತಮಿಳುನಾಡಿನ ಜುಬಾನಾ ಬಿದ್ದಿದ್ದರು. ಈ ಪ್ರಕರಣವನ್ನು ಎನ್‌ಐಎಗೆ ವರ್ಗಾವಣೆ ಮಾಡಲಾಗಿತ್ತು.
ಬಂಧಿತರ ವಿರುದ್ಧ ಎನ್‌ಐಎ ಅಧಿಕಾರಿಗಳು ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳ ಜತೆಗೆ ಅಸ್ಸಾಂ ಮತ್ತು ಕರ್ನಾಟಕದಲ್ಲಿ ಯಾರೆಲ್ಲ ಸಂಪರ್ಕದಲ್ಲಿದ್ದರು, ಅವರ ಉದ್ದೇಶವೇನು? ಎಂಬ ಬಗ್ಗೆ ತನಿಖೆ ನಡೆಸಬೇಕಿದೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ.
ಮತ್ತೊಂದೆಡೆ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಸ್ತರಿಸಲಾಗಿದೆ. ಅಸ್ಸಾಂ ಮೂಲದ ಅಖ್ತರ್, ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದು, ತಿಲಕನಗರದ ಬಿಟಿಬಿ ಲೇಔಟ್‌ನ 3ನೇ ಕ್ರಾಸ್‌ನಲ್ಲಿ ಬಾಡಿಗೆ ಮನೆಯೊಂದರಲ್ಲಿ ಸಹೋದರ ಮತ್ತು ಸ್ನೇಹಿತರು ಸೇರಿ ಮೂವರ ಜತೆ ವಾಸವಾಗಿದ್ದ.
ಫುಡ್ ಡೆಲಿವರಿ ಸಿಬ್ಬಂದಿಯಾಗಿದ್ದ ಶಂಕಿತ ಉಗ್ರ
ಬೆಂಗಳೂರಿನಲ್ಲಿ ಫುಡ್‌ಡೆಲಿವರಿ ಸಿಬ್ಬಂದಿ ಆಗಿದ್ದ ಶಂಕಿತ ಉಗ್ರ ಅಖ್ತರ್ ಹುಸೇನ್ ಲಷ್ಕರ್, ಫೇಸ್‌ಬುಕ್, ಇನ್‌ಸ್ಟ್ರಾಗ್ರಾಂ ಹಾಗೂ ಟೆಲಿಗ್ರಾಂಗಳಲ್ಲಿ ಸಕ್ರಿಯವಾಗಿದ್ದ. ಟೆಲಿಗ್ರಾಂನಲ್ಲಿ ‘ದಿ ಈಗಲ್ ಆಫ್ ಖೊರಸಾನ್ ಆ್ಯಂಡ್ ಹಿಂಡರ್-ಈಗಲ್’ ಎಂಬ ಗ್ರೂಪ್‌ಗಳನ್ನು ರಚಿಸಿಕೊಂಡಿದ್ದ.
ಈತನ ಪ್ರಚೋದನಕಾರಿ ಪೋಸ್ಟ್ ಹಾಗೂ ವಿಚಾರಗಳು ಮತ್ತು ಉಗ್ರ ಚಟುವಟಿಕೆಗಳ ಬಗ್ಗೆ ಆಸಕ್ತಿ ಹೊಂದಿದ್ದ ಯುವಕರನ್ನು ಕಾಶ್ಮೀರ ಮತ್ತು ಅಫಘಾನಿಸ್ತಾನದ ಖೋರಸಾನ್ ಪ್ರಾಂತ್ಯಕ್ಕೆ ಕಳುಹಿಸಿ, ಭಯೋತ್ಫಾದನಾ ತರಬೇತಿ ನೀಡಲು ಸಂಚು ರೂಪಿಸಿದ್ದ.
ಹಗಲು ವೇಳೆ ಅಲ್‌ಖೈದಾ ಸಂಘಟನೆ ಸದಸ್ಯರ ಜತೆ ಆನ್‌ಲೈನ್ ಮೂಲಕ ಸಂಪರ್ಕಿಸಿ ಸಂಘಟನೆ ಬಗ್ಗೆ ಚರ್ಚಿಸುತ್ತಿದ್ದರೆ, ಸಂಜೆ ನಾಲ್ಕು ಗಂಟೆ ನಂತರ ಫುಡ್‌ಡೆಲಿವರಿ ಸಿಬ್ಬಂದಿ ಆಗಿ ಕೆಲಸ ಮಾಡುತ್ತಿದ್ದ. ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಸಿಎಎ ಮತ್ತು ಎನ್‌ಆರ್‌ಸಿ ವಿರೋಧಿಸುತ್ತಿದ್ದ. ಅದನ್ನು ಗಮನಿಸಿದ್ದ ಅಲ್‌ಖೈದಾ ಸಂಘಟನೆ ಸದಸ್ಯರು ಅಖ್ತರ್‌ನನ್ನು ಸಂಪರ್ಕಿಸಿದ್ದರು.