Site icon Vistara News

Karnataka Election: ನಂಜನಗೂಡಿನಲ್ಲಿ ಹರ್ಷವರ್ಧನ್‌, ರಾಜ್ಯದಲ್ಲಿ ಬಿಜೆಪಿ ಗೆಲುವು 200% ಖಚಿತ ಎಂದ ಕಟೀಲ್‌

Nalin Kumar Kateel says Bjp 200% sure of coming to power in karnataka

ಮೈಸೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣಾ (Karnataka Election) ಕಣ ರಂಗೇರಿದೆ. ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮತ್ತು ನಾಯಕರು ಪ್ರಚಾರದಲ್ಲಿ ನಿರತರಾಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ ಅವರು, ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ಬಿ. ಹರ್ಷವರ್ಧನ್ ಅವರ ಪರ ಶುಕ್ರವಾರ ರ‍್ಯಾಲಿ ನಡೆಸುವ ಮೂಲಕ ಅಬ್ಬರದ ಪ್ರಚಾರ ನಡೆಸಿದರು. ಸುಮಾರು 20 ಸಾವಿರಕ್ಕೂ ಅಧಿಕ ಮಂದಿ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು.

ಭಾರತ್ ಮಾತಾಕೀ ಜೈ ಎಂದು ಘೋಷಣೆಯನ್ನು ಹಾಕುವ ಮೂಲಕ ಭಾಷಣ ಆರಂಭಿಸಿದ ನಳಿನ್ ಕುಮಾರ್‌ ಕಟೀಲ್‌ ಅವರು, ಇಡೀ ರಾಜ್ಯವನ್ನು ಸುತ್ತಿಬಂದಿದ್ದೇನೆ. ಎಲ್ಲ ಕಡೆ ಬಿಜೆಪಿ ಪರ ಸುನಾಮಿ ಎದ್ದಿದ್ದು, ಬಿಜೆಪಿ ಅಧಿಕಾರಕ್ಕೆ ಬರುವುದು ಶೇ. 200ರಷ್ಟು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದಕ್ಷಿಣ ಕಾಶಿ ಎಂದು ಪ್ರಸಿದ್ಧವಾಗಿರುವ ನಂಜನಗೂಡು ಕ್ಷೇತ್ರದ ಅಭಿವೃದ್ಧಿ ಮಂತ್ರ ಜಪಿಸುತ್ತಿರುವ ಹರ್ಷವರ್ಧನ್ ಅವರನ್ನು ಮತ್ತೊಮ್ಮೆ ವಿಧಾನಸೌಧಕ್ಕೆ ಕಳುಹಿಸುವ ಜವಾಬ್ದಾರಿ ಕ್ಷೇತ್ರದ ಮತದಾರರ ಮೇಲಿದೆ ಎಂದರು.

ಇದನ್ನೂ ಓದಿ | Karnataka Election 2023: ರಾಜ್ಯದ ಭವಿಷ್ಯ ಈ ಚುನಾವಣೆ ಮೇಲೆ ನಿಂತಿದೆ: ಅಮಿತ್‌ ಶಾ

ಈ ಬಾರಿ ಅಭಿವೃದ್ಧಿಗೆ ಮತವೇ ಅಥವಾ ಅನುಕಂಪಕ್ಕೆ ಮತವೇ ಎಂದು ಮಾಧ್ಯಮದವರು ಪ್ರಶ್ನಿಸಿದಾಗ, ನಂಜನಗೂಡಿನ ಮತದಾರ ದೇವರು ಅಭಿವೃದ್ಧಿಗೆ ಮತ ಹಾಕುತ್ತಾರೆ ಅಂತ ಹೇಳಿದ್ದೇನೆ. ಹರ್ಷವರ್ಧನ್ ಕಳೆದ ಐದು ವರ್ಷಗಳಲ್ಲಿ ಸುಮಾರು 800 ಕೋಟಿ ರೂ.ಗಳಿಗೂ ಅಧಿಕ ಅನುದಾನ ತರುವ ಮೂಲಕ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಳೆ ಹರಿಸಿದ್ದಾರೆ ಎಂದರು.

ನಂಜನಗೂಡಿನಲ್ಲಿ ನಳಿನ್‌ ಕುಮಾರ್‌ ಕಟೀಲ್‌ ನೇತೃತ್ವದಲ್ಲಿ ನಡೆದ ರೋಡ್‌ ಶೋದಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

ಸಂಸದ ಶ್ರೀನಿವಾಸ್ ಪ್ರಸಾದ್ ಅವರ ಆಶೀರ್ವಾದ, ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿರುವ ಹರ್ಷವರ್ಧನ್ ಅವರು ನಂಜನಗೂಡನ್ನು ಅಭಿವೃದ್ಧಿ ಮಾಡುವ ಮೂಲಕ ಇಡೀ ರಾಜ್ಯದಲ್ಲಿ ದಕ್ಷಿಣ ಕಾಶಿಯನ್ನು ಹೆಸರುವಾಸಿ ಮಾಡಿದ್ದಾರೆ ಎಂದು ಹೇಳಿದರು.

ನುಗು ಏತ ನೀರಾವರಿಯ ಮೂಲಕ ಹಲವು ಹಳ್ಳಿಗಳು ಹಸಿರು ತಾಣವಾಗಿದೆ. ಜನರ ಮನೆಗಳಲ್ಲಿ ದವಸ ಧಾನ್ಯಗಳು ತುಂಬುವಂತೆ ಮಾಡಿದ್ದಾರೆ. ಪ್ರತಿಯೊಂದು ಹಳ್ಳಿಯಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣ ಕುಡಿಯುವ ನೀರು, ಶಾಲಾ ಕಟ್ಟಡ ಸೇರಿ ಮೂಲಸೌಕರ್ಯಕ್ಕೆ ಒತ್ತು ನೀಡಿದ್ದಾರೆ. ಅಭಿವೃದ್ಧಿಯೇ ಉಸಿರು ಎನ್ನುತ್ತಿರುವ ಹರ್ಷವರ್ಧನ್ ಅವರನ್ನು ಮತ್ತೆ ಗೆಲ್ಲಿಸುವ ಮೂಲಕ ನೀವು ಅಭಿವೃದ್ಧಿಯೇ ನಮ್ಮ ಮೂಲಮಂತ್ರ ಎಂದು ಸಾರಬೇಕು ಎಂದು ಮತದಾರರನ್ನು ಕೋರಿದರು.

ದೇಶದಲ್ಲಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ದೇಶ ಸಾಕಷ್ಟು ಅಭಿವೃದ್ಧಿ ಕಂಡಿದೆ. ಮೋದಿ ಅವರನ್ನು ವಿದೇಶಗಳೂ ಹಾಡಿ ಹೊಗಳುತ್ತಿವೆ. ಆದರೆ ಅವರನ್ನು ಸೋನಿಯಾ ಗಾಂಧಿ ಅವರು ಸಾವಿನ ವ್ಯಾಪಾರಿ ಎಂದು ಕರೆದರು. ಖರ್ಗೆ ಅವರು ಮೋದಿ ವಿಷದ ಹಾವು, ಅವರು ನೆಕ್ಕಿದರೆ ಸಾಕು ಸಾವು ಖಚಿತ ಎಂದು ಹೇಳುವ ಮೂಲಕ ಅವರ ಕೊಳಕು ಮನಸ್ಸಿನ ಭಾವನೆ ಹೊರಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಹರ್ಷವರ್ಧನ್ ಅವರು ಮಾತನಾಡಿ, ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿರುವೆ, ಅಭಿವೃದ್ಧಿ ನೋಡಿ ಮತ್ತೆ ನನ್ನನ್ನು ಚುನಾಯಿಸುವಂತೆ ಕೋರಿದರು.

ಇದನ್ನೂ ಓದಿ | Karnataka Election 2023: ಸೋನಿಯಾ ಗಾಂಧಿ ವಿಷಕನ್ಯೆ, ರಾಹುಲ್ ಹುಚ್ಚ: ಬಿಜೆಪಿ ನಾಯಕ ಯತ್ನಾಳ್ ವಿವಾದಾತ್ಮಕ ಹೇಳಿಕೆ

ನಗರಸಭಾ ಅಧ್ಯಕ್ಷ ಮಹದೇವ ಸ್ವಾಮಿ, ಪಕ್ಷದ ನಗರ ಮಂಡಲ ಅಧ್ಯಕ್ಷ ಶ್ರೀನಿವಾಸ್ ರೆಡ್ಡಿ, ಸುಬ್ಬಣ್ಣ, ಬಾಲಚಂದ್ರು, ಮಹಿಳಾ ಮೋರ್ಚಾ ಅಧ್ಯಕ್ಷೆ ನಂದಿನಿ ಮಹೇಶ್, ಕೋಮಲ, ವಾರ್ಡ್ ಬಿಜೆಪಿ ಸದಸ್ಯರು ಸೇರಿ ಹಲವು ಮುಖಂಡರು ಇದ್ದರು.

Exit mobile version