ಬೆಂಗಳೂರು: ʻʻಕರ್ನಾಟಕದ ಕಾಂಗ್ರೆಸ್ ಸರಕಾರದ ಸಚಿವ ಸಂಪುಟದಲ್ಲಿ (Karnataka Cabinet) ಯಾರು ಮಂತ್ರಿಗಳಾಗಿರಬೇಕು ಎಂದು ನಿರ್ಧರಿಸುವ ಸ್ವಾತಂತ್ರ್ಯ ಕೂಡ ಸಿದ್ದರಾಮಯ್ಯ (Siddaramaiah) ಅವರಿಗೆ ಇಲ್ಲʼʼ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin kumar kateel) ಅವರು ಲೇವಡಿ ಮಾಡಿದ್ದಾರೆ. ʻʻಸಮಾಜವಾದಿ ತತ್ವದ ಸಿಎಂ ಸಿದ್ಧರಾಮಯ್ಯನವರು (Karnataka CM) ಮೊದಲ ದಿನವೇ ತಾವು ಕಾಂಗ್ರೆಸ್ ಹೈಕಮಾಂಡಿನ ಕೈಗೊಂಬೆಯಾಗಿದ್ದು, ರಬ್ಬರ್ ಸ್ಟ್ಯಾಂಪ್ ಸಿಎಂ ಆಗಿದ್ದಾರೆʼʼ ಎಂದು ಅವರು ಹೇಳಿದ್ದಾರೆ.
ಅವರ ಈ ಮಾತಿಗೆ ಆಧಾರವಾಗಿರುವುದು, ರಾಜ್ಯದಲ್ಲಿ ಮಂತ್ರಿಗಳ ಆಯ್ಕೆ ಮಾಡಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಕಳುಹಿಸಿರುವ ಪತ್ರ.
ಕೆ.ಸಿ. ವೇಣುಗೋಪಾಲ್ ಅವರು ಸಿದ್ದರಾಮಯ್ಯ ಅವರಿಗೆ ಬರೆದಿರುವ ಪತ್ರದಲ್ಲಿ, ʻʻಸಿದ್ದರಾಮಯ್ಯ ಅವರೇ, ಕರ್ನಾಟಕ ಸರ್ಕಾರದ ಸಂಪುಟಕ್ಕೆ ಸೇರಿಸಿಕೊಳ್ಳಬೇಕಾದ ಸಂಪುಟ ಸಚಿವರ ಪಟ್ಟಿಯನ್ನು ಕಳುಹಿಸಿದ್ದೇವೆ. ಇದಕ್ಕೆ ಎಐಸಿಸಿ ಅಧ್ಯಕ್ಷರು ನೀಡಿದ್ದಾರೆʼʼ ಎಂದು ತಿಳಿಸಲಾಗಿದೆ. ಮತ್ತು ಸಂಪುಟಕ್ಕೆ ಸೇರಿಸಿಕೊಳ್ಳಬೇಕಾದ ಸಚಿವರ ಪಟ್ಟಿಯನ್ನು ನೀಡಲಾಗಿದೆ. ಕಾನೂನಿನ ಸೂಕ್ತ ಪ್ರಸ್ತಾವನೆಗಳ ಅಡಿಯಲ್ಲಿ ಈ ಸೂಚನೆಯನ್ನು ಜಾರಿ ಮಾಡುವುದು ಎಂದು ಅದರಲ್ಲಿ ತಿಳಿಸಲಾಗಿದೆ.
ಈ ಪತ್ರವನ್ನು ಇಟ್ಟುಕೊಂಡು ಕಾಂಗ್ರೆಸ್‌ನ ಹೈಕಮಾಂಡ್ ಸಂಸ್ಕೃತಿಯನ್ನು ಪ್ರಶ್ನಿಸಿ ನಳಿನ್ ಕುಮಾರ್ ಕಟೀಲ್ ಅವರು ಟ್ವೀಟ್ ಮಾಡಿದ್ದಾರೆ. ಸಿದ್ದರಾಮಯ್ಯನವರಿಗೆ ಯಾವುದೇ ಸ್ವಾತಂತ್ರ್ಯ ಇಲ್ಲ ಎನ್ನುವುದಕ್ಕೆ ಈ ಪತ್ರವೇ ಸಾಕ್ಷಿ ಎಂದು ಕಟೀಲ್ ಕಾಲೆಳೆದಿದ್ದಾರೆ.
ನಳಿನ್ ಕುಮಾರ್ ಕಟೀಲ್ ಅವರ ಟ್ವೀಟ್‌ಗೆ ಜನರ ಪ್ರತಿಕ್ರಿಯೆ ಹೇಗಿದೆ?
ಕಾಂಗ್ರೆಸ್‌ನ ಹೈಕಮಾಂಡ್ ಸಂಸ್ಕೃತಿಯನ್ನು ಲೇವಡಿ ಮಾಡಿ ಸಿದ್ದರಾಮಯ್ಯ ಅವರ ಕಾಲೆಳೆದ ನಳಿನ್ ಕುಮಾರ್ ಕಟೀಲ್ ಅವರನ್ನೂ ನೆಟ್ಟಿಗರು ಬಿಟ್ಟಿಲ್ಲ. ನಿಮ್ಮ ಸ್ಥಿತಿ ಮತ್ತು ನಿಮ್ಮ ಪಕ್ಷದ ಸ್ಥಿತಿ ಹೇಗಿದೆ ಎಂದು ಮೊದಲು ನೋಡಿಕೊಳ್ಳಿ ಎಂದು ಹೇಳಿದ್ದಾರೆ.
ನೀವೇನು ಮೋದಿ ಷಾ ಒಪ್ಪಿಗೆ ಇಲ್ದೆ ಮಾಡ್ತಿದ್ರಾ…? ನಿಮ್ಮ ರಾಷ್ಟ್ರೀಯ ಪಕ್ಷಗಳ ಕತೆ ಅಷ್ಟೇ, ದೆಹಲಿಯವರ ಮುಂದೆ ನಡು ಬಗ್ಗಿಸಿ ಗುಲಾಮರ ಹಾಗೆ ನಿಲ್ಲೋದು.- ಎಂದು ಭದ್ರಾವತಿಯ ಪಂಚಲಿಂಗ ಎಂಬವರು ಪ್ರಶ್ನಿಸಿದ್ದಾರೆ.
ಅಯ್ಯೋ ಬಿಡಿ, ನಾವು ನೋಡಿಲ್ಲ ವ ನಿಮ್ಮ ಬಿಜೆಪಿ candidates ನ ಡೆಲ್ಲಿ ಯಿಂದ announce ಮಾಡಿದ್ದು. ಅದು ಕನ್ನಡ ದ ಹೆಸರನ್ನು pronounce ಮಾಡಕ್ಕೆ ಬರದೇ ಇರುವವರ ಬಾಯಲ್ಲಿ- ಎಂದು ಶ್ರೀಕಾಂತ್ ಎಂಬವರು ಕೇಳಿದ್ದಾರೆ.
ಆರು ಏಳು ಬಾರಿ ಬೊಮ್ಮಾಯಿ ಸಾರ್ ದೆಹಲಿಗೆ ಹೋಗಿ ಬಂದರೂ ಸಂಪುಟ ವಿಸ್ತರಣೆ ಮಾಡಲಾಗಲಿಲ್ಲ. ಎಲ್ಲ ಪಕ್ಷದಲ್ಲಿ ಹೈ ಕಮಾಂಡ್ ನಿರ್ಧಾರ ಅಂತಿಮ ಬಿಜೆಪಿ ರಾಜ್ಯ ಅಧ್ಯಕ್ಷರೇ- ಎಂದು ಸಾಯಿ ಅಮೃತಧಾರಾ ಎಂಬವರು ಬುದ್ಧಿಮಾತು ಹೇಳಿದ್ದಾರೆ.
ನಿಮಗೆ ಸ್ವಾತಂತ್ರ ಕೊಟ್ಟಿದ್ರು ಕೂಡ ಬಿಜೆಪಿ ಹೀನಾಯವಾಗಿ ಸೋತಿದೆ, ಅದಕ್ಕೆ ಕಾರಣ ಯಾರು ಅಂತ ಕಾರ್ಯಕರ್ತರಿಗೆ ಗೊತ್ತು, ಈಗ ಅದ್ರು ನಿಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮನೇಲಿ ಮೀನ್ ಸಾರ್ ತಿಂಕೊಂಡ್ ಇದ್ರೆ ಉತ್ತಮ ಎಂದು ಒಬ್ಬರು ಸಲಹೆ ಕೊಟ್ಟಿದ್ದಾರೆ.
ಹೆಚ್ಚಿನವರು ನೀವು ಪುತ್ತೂರು ಕಡೆಗೆ ಒಮ್ಮೆ ಬನ್ನಿ ಎಂದು ಕರೆದಿದ್ದಾರೆ.
ಇದನ್ನೂ ಓದಿ: PM Modi : ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆಶಿ ಅಭಿನಂದಿಸಿದ ಪ್ರಧಾನಿ ಮೋದಿ