Site icon Vistara News

Namma Clinic | ರಾಜ್ಯದಲ್ಲಿ 48 ಹೊಸ ಪಿಎಚ್‌ಸಿ, 12 ಕಿಮೋಥೆರಪಿ ಸೆಂಟರ್‌ಗಳ ಸ್ಥಾಪನೆ: ಸಿಎಂ ಬೊಮ್ಮಾಯಿ ಘೋಷಣೆ

Namma clinic inauguration

ಹುಬ್ಬಳ್ಳಿ: ರಾಜ್ಯದಲ್ಲಿ ಹೊಸದಾಗಿ ೪೮ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆರೆಯಲಾಗುವುದು, ಕಿಮೋಥೆರಪಿಗಾಗಿ ೧೨ ಕ್ಯಾನ್ಸರ್‌ ಸೆಂಟರ್‌ಗಳನ್ನು ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಹುಬ್ಬಳ್ಳಿ ತಾಲೂಕಿನ ಬೈರೀದೇವರಕೊಪ್ಪದಲ್ಲಿ ಬುಧವಾರ ಅವರು ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ನಮ್ಮ ಕ್ಲಿನಿಕ್‌ (Namma clinic) ಚಿಕಿತ್ಸಾಲಯ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.

ಬಡವರ ಸಂಜೀವಿನಿ ಎಂದೇ ಗುರುತಿಸಲ್ಪಟ್ಟಿರುವ ಈ ಯೋಜನೆಯಡಿ ರಾಜ್ಯ ಸರ್ಕಾರ ರಾಜ್ಯಾದ್ಯಂತ ೪೩೮ ಚಿಕಿತ್ಸಾಲಯಗಳನ್ನು ಆರಂಭಿಸಲು ಮುಂದಾಗಿದೆ. ಮೊದಲ ಹಂತದಲ್ಲಿ ೧೧೪ ಕ್ಲಿನಿಕ್‌ಗಳಿಗೆ ಬುಧವಾರ ಚಾಲನೆ ನೀಡಲಾಗಿದೆ. ಈ ಯೋಜನೆಯನ್ನು ಕಳೆದ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು.

ಸ್ಪಂದನಶೀಲ ಸರಕಾರದ ಕ್ರಮ
ಆರೋಗ್ಯದ ವಿಚಾರದಲ್ಲಿ ಜನ ಕಷ್ಟಪಡುತ್ತಿದ್ದಾರೆ. ಚಿಕಿತ್ಸೆಗೆ ಬಹಳ ಕಷ್ಟವಾಗುತ್ತಿದೆ. ಕೆಲವರಿಗೆ ಪೌಷ್ಟಿಕಾಂಶ ಕೊರತೆಯಿಂದಲೂ ತೊಂದರೆ ಆಗುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಬಡವರಿಗೆ ಆರೋಗ್ಯ ಸಮಸ್ಯೆ ಬಂದಾಗ ಅದಕ್ಕೆ ಚಿಕಿತ್ಸೆ ಪಡೆಯಲು ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ನಮ್ಮ ಕ್ಲಿನಿಕ್‌ ಯೋಜನೆ ಜಾರಿ ಮಾಡಿದ್ದೇವೆ. ಒಂದು ಸ್ಪಂದನಶೀಲ ಸರ್ಕಾರ ಮಾತ್ರ ಈ ರೀತಿ ಯೋಚನೆ ಮಾಡಲು ಸಾಧ್ಯ ಎಂದು ನಮ್ಮ ಕ್ಲಿನಿಕ್‌ ಯೋಜನೆ ಉದ್ಘಾಟಿಸಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಹಿರಿಯರಿಗೆ ಕಣ್ಣಿನ ಉಚಿತ ಚಿಕಿತ್ಸೆ
ಆರೋಗ್ಯಕ್ಕಾಗಿ ಈ ಬಾರಿ ಬಜೆಟ್‌ನಲ್ಲಿ ೧೦,೦೦೦ ಕೋಟಿ ರೂ. ಮೀಸಲು ಇಡಲಾಗಿದೆ. ಹೊಸದಾಗಿ 48 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆರೆಯಲಿದ್ದೇವೆ. ಕಿಮೋಥೆರಪಿಗಾಗಿ 12 ಕ್ಯಾನ್ಸರ್ ಸೆಂಟರ್‌ಗಳನ್ನು ತೆರೆಯಲಿದ್ದೇವೆ. ಜನವರಿ ತಿಂಗಳಿನಿಂದ 60 ವರ್ಷ ಮೇಲ್ಪಟ್ಟವರಿಗೆ ಕಣ್ಣಿನ ಕ್ಯಾಂಪ್ ಮಾಡಲಾಗುತ್ತದೆ. ಕಣ್ಣಿನ ಸರ್ಜರಿ ಸೇರಿದಂತೆ ಎಲ್ಲವನ್ನೂ ಉಚಿತವಾಗಿ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.

ಹುಟ್ಟು ಕಿವುಡುತನ ಹೊಂದಿದವರಿಗೆ 500 ಕೋಟಿ ವೆಚ್ಚದಲ್ಲಿ ಉಚಿತ ಮಷಿನ್ ನೀಡಲು ತೀರ್ಮಾನಿಸಲಾಗಿದೆ. ಹೆಣ್ಣು ಮಕ್ಕಳ ಆರೋಗ್ಯ ಚಿಕಿತ್ಸೆಗೆ ವಿಶೇಷ ಆಸ್ಪತ್ರೆ ತೆರೆಯುವ ತೀರ್ಮಾನ ಆಗಿದೆ. ಹುಬ್ಬಳ್ಳಿಯಲ್ಲಿ 350 ಕೋಟಿ ರೂ. ವೆಚ್ಚದಲ್ಲಿ ಜಯದೇವ ಆಸ್ಪತ್ರೆ ಸ್ಥಾಪಿಸಲಾಗುತ್ತಿದ್ದು, ಜನವರಿಯಲ್ಲಿ ಅಡಿಗಲ್ಲು ಹಾಕಲಾಗುತ್ತದೆ ಎಂದು ಸಿಎಂ ತಿಳಿಸಿದರು.

ನಮ್ಮ ಕ್ಲಿನಿಕ್‌ ಯೋಜನೆ ಉದ್ಘಾಟಿಸಿದ ಖುಷಿಯಲ್ಲಿ

ವೈದ್ಯಕೀಯ ಸಮುದಾಯಕ್ಕೆ ಮನವಿ
ಕ್ಯಾನ್ಸರ್‌ ಆಸ್ಪತ್ರೆಗಳ ನಿರ್ಮಾಣಕ್ಕೆ 10 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು ತಿಳಿಸಿದ ಅವರು, ಬಡವರಿಗೆ ಕೈಗೆಟಕುವ ಬೆಲೆಯಲ್ಲಿ ಔಷಧಗಳನ್ನು ಒದಗಿಸುವ ನಿಟ್ಟಿನಲ್ಲಿ ಸಂಶೋಧನೆ ನಡೆಸುವಂತೆ ಅವರು ವೈದ್ಯಕೀಯ ಸಮುದಾಯಕ್ಕೆ ಮನವಿ ಮಾಡಿದರು.

ಗೇಮ್‌ ಚೇಂಜರ್‌ ಎಂದ ಸುಧಾಕರ್‌
ಮೊದಲ ಹಂತದಲ್ಲಿ ಒಟ್ಟು 114 ಕ್ಲಿನಿಕ್ ಗಳಿಗೆ ಚಾಲನೆ ನೀಡಿದ್ದು, ಜನವರಿ ಅಂತ್ಯದ ಹೊತ್ತಿಗೆ ಎಲ್ಲಾ 438 ಆಸ್ಪತ್ರೆಗಳನ್ನು ಉದ್ಘಾಟನೆ ಮಾಡಲಿರುವುದಾಗಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದರು. ಇದೊಂದು ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ಐತಿಹಾಸಿಕವಾಗಿ ಉಳಿಯುವ ಕ್ರಮವಾಗಿದ್ದು, ಗೇಮ್ ಚೇಂಜರ್ ಆಗಲಿದೆ ಎಂದುಹೇಳಿದರು.ಹೊಸ ವರ್ಷಕ್ಕೆ ಮಹಿಳೆಯರಿಗಾಗಿ ವಿಶೇಷ ಕ್ಲಿನಿಕ್ ತೆರೆಯುವುದಾಗಿ ಪ್ರಕಟಿಸಿದರು.

ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಸಚಿವರಾದ ಹಾಲಪ್ಪ ಆಚಾರ್, ಸಿ.ಸಿ. ಪಾಟೀಲ್, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಶಾಸಕ ಅರವಿಂದ ಬೆಲ್ಲದ್ ಹಾಗೂ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ | Ayushman Bharat Yojana | ಡಿ.8ರಂದು 5.09 ಕೋಟಿ ಜನರಿಗೆ ಆಯುಷ್ಮಾನ್‌ ಭಾರತ್‌‌ ಕಾರ್ಡ್ ವಿತರಣೆಗೆ ಚಾಲನೆ: ಡಾ.ಕೆ. ಸುಧಾಕರ್‌

Exit mobile version