ಬೆಂಗಳೂರು: ನಂದಿನಿ ಹಾಲಿನ ದರವನ್ನು (Nandini Milk Price Hike) ಲೀಟರ್‌ಗೆ 3 ರೂ.ನಂತೆ ಹೆಚ್ಚಿಸಲಾಗಿತ್ತು. ಸೋಮವಾರ ಮಧ್ಯರಾತ್ರಿಯಿಂದಲೇ ಈ ಪರಿಷ್ಕೃತ ದರ ಜಾರಿಗೆ ಬರಲಿದೆ ಎಂದು ಹೇಳಲಾಗಿತ್ತು. ಆದರೆ ಸೋಮವಾರ ಮಧ್ಯಾಹ್ನದ ಹೊತ್ತಿಗೆ ಸಿಎಂ ಬೊಮ್ಮಾಯಿ ಅವರು ಈ ನಿರ್ಧಾರಕ್ಕೆ ತಡೆ ಹಾಕಿದರು.
ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ ನಿಯಮಿತ (ಕೆಎಂಎಫ್) ಈ ಕುರಿತು ಪ್ರಕಟಣೆ ಹೊರಡಿಸಿತ್ತು. ಒಂದು ಲೀಟರ್ ಟೋನ್ಡ್ ಹಾಲಿನ ದರ 37 ರೂ.ಗಳಿಂದ 40 ರೂ.ಗಳಿಗೆ ಏರಲಿದೆ. ಮೊಸರಿನ ದರವನ್ನೂ ಮೂರು ರೂ. ಹೆಚ್ಚಿಸಲಾಗಿದ್ದು, ಒಂದು ಕೇಜಿ ಮೊಸರಿನ ದರ 45ರೂ.ಗಳಿಂದ 48ರೂ.ಗಳಿಗೆ ಏರಿಸಲಾಗಿತ್ತು.
ಹಾಲಿನ ದರದಲ್ಲಿ ಏರಿಕೆ ಮಾಡುವಂತೆ ಕೆಎಂಎಫ್ ಕಳೆದ ಸೆಪ್ಟೆಂಬರ್‌ನಲ್ಲಿಯೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ರಾಜ್ಯ ಸರ್ಕಾರ ಈ ಬಗ್ಗೆ ಇದುವರೆಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಈಗ ಸರ್ಕಾರ ಅನುಮತಿ ನೀಡಿರುವುದರಿಂದ ದರ ಹೆಚ್ಚಿಸುವ ತೀರ್ಮಾನ ತೆಗೆದುಕೊಳ್ಳಲಾಗಿತ್ತು.
ಹಸುವಿಗೆ ನೀಡುವ ಮೇವಿನ ದರ ಹೆಚ್ಚಳವಾಗಿದೆ, ಚರ್ಮ ಗಂಟು ರೋಗ ಬಂದಿರುವುದರಿಂದ ರೈತರು ನಷ್ಟ ಅನುಭವಿಸುತ್ತಿದ್ದು, ಅವರಿಗೆ ನೆರವಾಗುವ ಉದ್ದೇಶದಿಂದ, ಜೊತೆಗೆ ಸಾಗಾಣಿಕೆ, ವಿದ್ಯುತ್, ಪ್ಯಾಕಿಂಗ್, ಸಲಕರಣೆ ವೆಚ್ಚ ಶೇ.25 ರಿಂದ 35 ಹೆಚ್ಚಳವಾಗಿರುವುದರಿಂದ ಈ ದರ ಹೆಚ್ಚಿಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಕೆಎಂಎಫ್ ಹೇಳಿತ್ತು.
ಯಾವ ಹಾಲಿನ ದರ ಎಷ್ಟು ಏರಿಕೆಗೆ ನಿರ್ಧರಿಸಲಾಗಿತ್ತು?
ಟೋನ್ಡ್ ಹಾಲು 37ರೂ. ರಿಂದ 40 ರೂ.
ಹೊಮೋಜಿನೈಸ್ಡ್ಹಾಲು 38ರೂ. ರಿಂದ 41ರೂ.
ಹೊಮೊಜಿನೈಸ್ಡ್ ಹಸುವಿನ ಹಾಲು 42ರೂ. ರಿಂದ 45ರೂ.
ಸ್ಪೆಷಲ್ ಹಾಲು 43ರೂ. ರಿಂದ 46ರೂ.
ಶುಭಂ ಹಾಲು 43ರೂ. ರಿಂದ 46ರೂ.
ಹೊಮೊಜಿನೈಸ್ಡ್ ಸ್ಟ್ಯಾಂಡಡೈಸ್ಡರ್ ಹಾಲು 44ರೂ. ರಿಂದ 47ರೂ.
ಸಮೃದ್ಧಿ ಹಾಲು 48ರೂ. ರಿಂದ 51ರೂ.
ಸಂತೃಪ್ತಿ ಹಾಲು 50ರೂ. ರಿಂದ 53ರೂ.
ಡಬಲ್ ಟೋನ್ಡ್ ಹಾಲು 36ರೂ. ರಿಂದ 39ರೂ.
ಮೊಸರು ಪ್ರತಿ ಕೆಜಿಗೆ 45ರೂ. ರಿಂದ 48ರೂ.
ಗ್ರಾಹಕರ ತುಟಿ ಸುಡಲಿದೆ ಟೀ-ಕಾಫಿ
ನಂದಿನಿ ಹಾಲಿನ ದರ ಏರಿಕೆಯಾಗಿರುವುದರಿಂದ ಹೋಟೆಲ್ ಉದ್ಯಮಗಳು ಟೀ-ಕಾಫಿ ದರವನ್ನು ಏರಿಕೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಹೀಗಾದಲ್ಲಿ ಹೋಟೆಲ್‌ಗಳಲ್ಲಿ ಟೀ- ಕಾಫಿ ಕುಡಿಯುವವರ ತುಟಿ ಸುಡಲಿದೆ.
ದರ ಏರಿಕೆಯಿಂದ ಉದ್ಯಮಿಗಳಿಗೆ ಹೊರೆಯಾಗುವುದು ನಿಜ. ಆದರೆ ಕೂಡಲೇ ಟೀ ಕಾಫಿ ದರ ಏರಿಕೆ ಮಾಡುವುದಿಲ್ಲ. ಹೋಟೆಲ್ ಅಸೋಸಿಯೇಷನ್‌ನಿಂದ ಸದ್ಯಕ್ಕೆ ಕಾಫಿ/ಟೀ ದರ ಏರಿಕೆ ಇಲ್ಲ. ಸಭೆ ಸೇರಿ ಎಲ್ಲರ ಅಭಿಪ್ರಾಯ ಪಡೆದು ಈ ಸಂಬಂಧ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಹೋಟೆಲ್ ಅಸೋಸಿಯೇಶನ್ ಅಧ್ಯಕ್ಷ ಪಿ ಸಿ ರಾವ್ “ವಿಸ್ತಾರ ನ್ಯೂಸ್ʼʼಗೆ ತಿಳಿಸಿದ್ದಾರೆ.
ಇದನ್ನೂ ಓದಿ | ನಂದಿನಿ ತುಪ್ಪದ ದರದಲ್ಲಿ ₹100 ಹೆಚ್ಚಳ ಮಾಡಿದ ಕೆಎಂಎಫ್