ಬೆಂಗಳೂರು: ನಂದಿನಿ ಹಾಲಿನ ದರ ಲೀಟರ್‌ಗೆ 3 ರೂಪಾಯಿ ಏರಿಕೆಯಾಗಿದೆ. ಆಗಸ್ಟ್ 1ರಿಂದ ಪರಿಷ್ಕೃತ ದರ ಜಾರಿಯಾಗಲಿದೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಶುಕ್ರವಾರ ಏರ್ಪಡಿಸಿದ್ದ ಹಾಲು ಒಕ್ಕೂಟಗಳು ಮತ್ತು ಕೆಎಂಎಫ್ ಪದಾಧಿಕಾರಿಗಳ ಸಭೆಯಲ್ಲಿ ದರ ಹೆಚ್ಚಳ (Nandini Milk Price Hike) ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ಸಂಗ್ರಹವಾದ ಹಣವನ್ನು ರೈತರಿಗೆ ವರ್ಗಾವಣೆ ಮಾಡುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ.
ಪ್ರತಿ ಲೀಟರ್‌ಗೆ ಕೆಎಂಎಫ್ ಆಡಳಿತ ಮಂಡಳಿ 5 ರೂಪಾಯಿ ಹೆಚ್ಚಳ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ 5 ರೂ. ಬದಲಾಗಿ 3 ರೂಪಾಯಿ ಹೆಚ್ಚಳಕ್ಕೆ ಸರ್ಕಾರ ತೀರ್ಮಾನ ಮಾಡುತ್ತದೆ ಅಥವಾ ಸದ್ಯಕ್ಕೆ ಸಿಎಂ ದರ ಹೆಚ್ಚಳ ಪ್ರಸ್ತಾಪ ಬೇಡ ಎನ್ನುತ್ತಾರಾ ಎಂಬ ಕುರಿತೂ ಚರ್ಚೆಗಳು ನಡೆದಿದ್ದವು. ಇದೀಗ 3 ರೂಪಾಯಿ ಹೆಚ್ಚಳ ಆಗುವುದು ಖಚಿತವಾಗಿದೆ. ಹಾಲು ಒಕ್ಕೂಟ ನಷ್ಟ ಸರಿದೂಗಿಸಲು ದರ ಹೆಚ್ಚಳಕ್ಕೆ ಒಕ್ಕೂಟ ಪ್ರಸ್ತಾಪ ಮಾಡಿತ್ತು. ಹೀಗಾಗಿ ರಾಜ್ಯ ಸರ್ಕಾರ ಹಾಲಿನ ದರ ಹೆಚ್ಚಳದ ನಿರ್ಧಾರ ಮಾಡಿದೆ.
ರೈತರಿಂದ ಖರೀದಿ ಮಾಡುವ ಹಾಲಿಗೆ ಪ್ರತಿ ಲೀಟರ್‌ಗೆ 3 ರೂ. ಹೆಚ್ಚಳ ಮಾಡಲಾಗಿದೆ. ಹೆಚ್ಚಳವಾಗಿರುವ ಹಾಲಿನ ದರವನ್ನು ರೈತರಿಗೆ ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ.
ಸಭೆಯಲ್ಲಿ ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್, ಸಹಕಾರ ಸಚಿವ ರಾಜಣ್ಣ, ಕೆಎಂಎಫ್ ಅಧ್ಯಕ್ಷ ಭೀಮಾ ನಾಯಕ್, ಸಹಕಾರ ಸಚಿವ ಕೆ.ಎನ್. ರಾಜಣ್ಣ, ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್, ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಪಶುಸಂಗೋಪನಾ ಇಲಾಖೆ ಕಾರ್ಯದರ್ಶಿ ಸಲ್ಮಾ ಫಾಹಿಂ, ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಜಗದೀಶ್, ಕೆಎಂಎಫ್ ನಿರ್ದೇಶಕ ಎಚ್.ಡಿ.ರೇವಣ್ಣ, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಮಾಲೂರು ಶಾಸಕ ನಂಜೇಗೌಡ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
ಸಭೆ ನಂತರ ಎಚ್.ಡಿ. ರೇವಣ್ಣ ಮಾತನಾಡಿ, 5 ರೂ. ದರ ಏರಿಕೆಗೆ ಪ್ರಸ್ತಾಪವಿತ್ತು. 3 ರೂ. ಹೆಚ್ಚಳಕ್ಕೆ ಸಿಎಂ ಒಪ್ಪಿಗೆ ನೀಡಿದ್ದಾರೆ. ರೈತರಿಂದ ಖರೀದಿ ಮಾಡುವ ಹಾಲಿಗೆ ಪ್ರತಿ ಲೀಟರ್‌ಗೆ 3 ರೂಪಾಯಿ ಹೆಚ್ಚಳ ಮಾಡಲಾಗಿದೆ ಎಂದು ತಿಳಿಸಿದರು.
ಕೆಎಂಎಫ್ ಅಧ್ಯಕ್ಷ ಭೀಮಾ ನಾಯಕ್ ಪ್ರತಿಕ್ರಿಯಿಸಿ, ಆಗಸ್ಟ್ 1 ರಿಂದ 3 ರೂ. ಹೆಚ್ಚಳದ ತೀರ್ಮಾನ ಮಾಡಿದ್ದಾರೆ. ಪ್ರತಿ ಲೀಟರ್‌ಗೆ 3 ರೂ. ಜಾಸ್ತಿ ಕೊಡಲು ಒಪ್ಪಿದ್ದಾರೆ. ಈ ಬಗ್ಗೆ ಕ್ಯಾಬಿನೆಟ್ ಸಭೆಯಲ್ಲಿ ಒಪ್ಪಿಗೆ ಪಡೆದು ನಿರ್ಧಾರ ಪ್ರಕಟವಾಗಲಿದೆ ಎಂದು ಹೇಳಿದರು.
ಸಹಕಾರ ಸಚಿವ ರಾಜಣ್ಣ ಮಾತನಾಡಿ, ಹಾಲು ಒಕ್ಕೂಟವು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ರೈತರು, ಉತ್ಪಾದಕರಿಗೆ ದರ ಏರಿಕೆ ಅನಿವಾರ್ಯತೆ ಇದೆ ಎಂದು ಮನವರಿಕೆ ಮಾಡಿದೆ. ನಮ್ಮ ರಾಜ್ಯದಲ್ಲಿ ಅತಿ ಕಡಿಮೆ ದರದಲ್ಲಿ ಹಾಲು ಮಾರಾಟ ಮಾಡುತ್ತಿದ್ದೇವೆ. ರೈತರಿಂದ ಖರೀದಿ ದರವೂ ಕಡಿಮೆ ಇದೆ ಎಂದು ಗಮನಕ್ಕೆ ತಂದಿದ್ದೇವೆ. 5 ರೂ. ಜಾಸ್ತಿ ಮಾಡಲು ಒತ್ತಾಯ ಮಾಡಿದ್ದೇವೆ, 3 ರೂ. ಜಾಸ್ತಿ ಮಾಡುವ ಭರವಸೆ ಇದೆ ಎಂದು ತಿಳಿಸಿದರು.
ನಾವು 39 ರೂ.ಗೆ ಪ್ರತಿ ಲೀಟರ್ ಹಾಲು ಮಾರಾಟ ಮಾಡುತ್ತಿದ್ದೇವೆ. ಬೇರೆ ರಾಜ್ಯದಲ್ಲಿ ಹಾಲಿನ ದರ ಇಲ್ಲಿಗಿಂತಲೂ ಹೆಚ್ಚಾಗಿದೆ. ಹೀಗಾಗಿ ಉತ್ಪಾದಕರ ಹಿತ ಕಾಯಲು ದರ ಏರಿಕೆ ಅನಿವಾರ್ಯ. ಹೊಸ ದರ ಆಗಸ್ಟ್ 1 ರಂದು ಜಾರಿ ಮಾಡುವ ಭರವಸೆ ನೀಡಿದ್ದಾರೆ. ಕ್ಷೀರ ಭಾಗ್ಯ ಚಾಲನೆಗೊಂಡು 10 ವರ್ಷ ಆದ ಹಿನ್ನೆಲೆಯಲ್ಲಿ ದಶಮಾನೋತ್ಸವ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.