ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ರಾಜ್ಯದ ಹಲವೆಡೆ ಅಬ್ಬರದ ಪ್ರಚಾರ ಕೈಗೊಂಡಿದ್ದಾರೆ. ಕೋಲಾರ, ಚನ್ನಪಟ್ಟಣ, ಬೇಲೂರಿನಲ್ಲಿ ಸಮಾವೇಶ ನಡೆಸುವ ಜತೆಗೆ, ಮೈಸೂರಿನಲ್ಲಿ ಬೃಹತ್ ರೋಡ್ ಶೋ ಮೂಲಕ ಅಲೆ ಸೃಷ್ಟಿಸಿದ್ದಾರೆ. ಹೀಗೆ, ಒಂದೇ ದಿನ ನಾಲ್ಕು ಜಿಲ್ಲೆಗಳಲ್ಲಿ ತೆರಳಿದ ಮೋದಿ ಅವರಿಗೆ ಹಲವು ವಿಶೇಷ ಉಡುಗೊರೆಗಳನ್ನು ನೀಡಲಾಗಿದೆ. ಅದರಲ್ಲೂ, ಆಯಾ ಸ್ಥಳೀಯ ವೈಶಿಷ್ಟ್ಯವನ್ನು ಸಾರುವ ಉಡುಗೊರೆಗಳನ್ನು ಬಿಜೆಪಿ ನಾಯಕರು ಮೋದಿ ಅವರಿಗೆ ನೀಡಿದರು.
ಕೋಲಾರದಲ್ಲಿ ಬುದ್ಧನ ಪ್ರತಿಮೆ ಉಡುಗೊರೆ
ಮೊದಲಿಗೆ ಕೋಲಾರಕ್ಕೆ ತೆರಳಿದ ಪ್ರಧಾನಿ ಅವರಿಗೆ ಶಾಂತಿಯ ಸಂಕೇತವಾಗಿ ಬಿಜೆಪಿ ನಾಯಕರು ಬುದ್ಧನ ಪ್ರತಿಮೆಯನ್ನು ನೀಡಿದರು. ಇದಾದ ಬಳಿಕ ಮೋದಿ ಅವರಿಗೆ ಬಿಜೆಪಿ ಅಭ್ಯರ್ಥಿ ವರ್ತೂರು ಪ್ರಕಾಶ್ ಅವರು ಕಂಬಳಿ ಹೊದಿಸಿದರು. ಕಂಬಳಿಯನ್ನು ಹೆಗಲಿಗೆ ಹಾಕಿಕೊಂಡೇ ಮೋದಿ ಅವರು ವೇದಿಕೆ ಮೇಲೆ ಕುಳಿತರು.
ಚನ್ನಪಟ್ಟಣದ ಬೊಂಬೆ ನೀಡಿ ಸನ್ಮಾನ
ಚನ್ನಪಟ್ಟಣದಲ್ಲಿ ನರೇಂದ್ರ ಮೋದಿ ಅವರಿಗೆ ಸಿ.ಪಿ.ಯೋಗೇಶ್ವರ್ ಅವರು ಸೇರಿ ವಿವಿಧ ನಾಯಕರು ಕೃಷ್ಣನ ಮೂರ್ತಿಯನ್ನು ಉಡುಗೊರೆ ನೀಡಿದರು. ವಿಶ್ವವಿಖ್ಯಾತ ಅಂಬೆಗಾಲು ಕೃಷ್ಣನ ವಿಗ್ರಹವನ್ನು ಮೋದಿ ಅವರಿಗೆ ನೀಡಿದರು. ಹಾಗೆಯೇ, ಚನ್ನಪಟ್ಟಣದಲ್ಲಿ ತಯಾರಿಸಿದ ಆಂಜನೇಯನ ಬೊಂಬೆ ನೀಡುವ ಮೂಲಕ ಸನ್ಮಾನಿಸಿದರು.
ಮೈಸೂರಿನಲ್ಲೂ ವಿಶೇಷ ಗಿಫ್ಟ್
ಭಾನುವಾರ ಸಂಜೆ ರೋಡ್ ಶೋನಲ್ಲಿ ಭಾಗವಹಿಸಲು ಮೈಸೂರಿಗೆ ತೆರಳಿದ ಮೋದಿ ಅವರಿಗೆ ಹಲವು ಉಡುಗೊರೆ ನೀಡಲಾಯಿತು. ರಾಮದಾಸ್ ಅವರು ಮೊದಲಿಗೆ ಮೋದಿ ಅವರಿಗೆ ಮೈಸೂರು ಪೇಟ ನೀಡಿದರು.
ಹಾಗೆಯೇ, ಮೈಸೂರಿನ ಪರಂಪರೆ ಸಾರುವ ನಂಜನಗೂಡಿನ ರಸಬಾಳೆ, ಮೈಸೂರು ಪಾಕ್, ಮೈಸೂರಿನ ವೀಳ್ಯದೆಲೆ, ಮೈಸೂರಿನ ಗಂಧದ ಸಾಬೂನು ಸೇರಿ ಮೈಸೂರು ಬ್ರ್ಯಾಂಡ್‌ನ 18 ವಿಶೇಷ ವಸ್ತುಗಳನ್ನು ಉಡುಗೊರೆ ನೀಡಲಾಯಿತು.
ಇದನ್ನೂ ಓದಿ: Modi In Karnataka: ಮೈಸೂರಿನಲ್ಲಿ ಮೋದಿ ರೋಡ್ ಶೋ ಝಲಕ್ ಹೇಗಿತ್ತು? ಇಲ್ಲಿವೆ ಫೋಟೊಗಳು