Site icon Vistara News

Narendra Modi: ಏ.27ರಂದು 50 ಲಕ್ಷ ಬಿಜೆಪಿ ಕಾರ್ಯಕರ್ತರ ಜತೆ ಪ್ರಧಾನಿ ನರೇಂದ್ರ ಮೋದಿ ಸಂವಾದ

Shobha Karandlaje press meet in Bangalore

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಏಪ್ರಿಲ್‌ 27ರಂದು ಬೆಳಗ್ಗೆ 9.30ಕ್ಕೆ ರಾಜ್ಯದ 50 ಲಕ್ಷ ಬಿಜೆಪಿ ಕಾರ್ಯಕರ್ತರೊಂದಿಗೆ ವಚ್ರ್ಯುವಲ್ ಮೂಲಕ ಸಂವಾದ ನಡೆಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಮಾಧ್ಯಮ ಕೇಂದ್ರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 58,112 ಬೂತ್‍ಗಳಲ್ಲಿ, 1,680 ಜಿಲ್ಲಾ ಪಂಚಾಯತ್ ಮಟ್ಟದಲ್ಲಿ ಈ ಸಂವಾದವನ್ನು ಹಮ್ಮಿಕೊಳ್ಳಲಾಗಿದೆ. ಬೂತ್‍ಗಳಲ್ಲಿ ಟಿ.ವಿಗಳನ್ನು, ಜಿಲ್ಲಾ ಪಂಚಾಯತ್ ಮಟ್ಟದಲ್ಲಿ ಎಲ್‍ಇಡಿ ಸ್ಕ್ರೀನ್ ಅಳವಡಿಸಲಾಗುವುದು. ಈ ಸಂವಾದಕ್ಕಾಗಿ ಈಗಾಗಲೇ 24 ಲಕ್ಷ ಕಾರ್ಯಕರ್ತರು ಮೋದಿ ಆ್ಯಪ್ ಡೌನ್‍ಲೋಡ್ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.

ಬೂತ್ ಮಟ್ಟದಲ್ಲಿ 58 ಸಾವಿರ ಸ್ಥಳಗಳಲ್ಲಿ ಈ ಆ್ಯಪ್ ಗಳ ಮೂಲಕ ಕಾರ್ಯಕರ್ತರು ಸಂವಾದವನ್ನು ವೀಕ್ಷಿಸಲಿದ್ದಾರೆ. ಎಲ್‍ಇಡಿ ಸ್ಕ್ರೀನ್ ಇರುವ ಕಡೆ ಸುಮಾರು 1,000 ಕಾರ್ಯಕರ್ತರನ್ನು, ಬೂತ್‍ಗಳಲ್ಲಿ 200 ಕಾರ್ಯಕರ್ತರನ್ನು ಈ ಕಾರ್ಯಕ್ರಮಕ್ಕಾಗಿ ಸಂಯೋಜಿಸಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 5,000 ನಮೋ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ 15 ಕಡೆ ಪ್ರಧಾನಿಯವರು ಕಾರ್ಯಕರ್ತರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.

ಹೊಸ ತಂತ್ರಜ್ಞಾನ ಬಳಸಿಕೊಂಡು ಇದೇ ಮೊದಲ ಬಾರಿ ಬೃಹತ್ ಪ್ರಮಾಣದಲ್ಲಿ ನೇರ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಬಿಜೆಪಿ ಮಾತ್ರ ಗರಿಷ್ಠ ಕಾರ್ಯಕರ್ತರನ್ನು ಹೊಂದಿದೆ. ಕಾರ್ಯಕರ್ತರ ಆಧಾರಿತ ಬಿಜೆಪಿ, ಈ ಶ್ರಮದ ಮೇಲೆ ಗೆಲ್ಲುವ ಪಕ್ಷವಾಗಿದೆ. ನರೇಂದ್ರ ಮೋದಿಯವರು ರಾಜ್ಯದಲ್ಲಿ ಪೂರ್ಣ ಬಹುಮತದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಅಪೇಕ್ಷೆ ಹೊಂದಿದ್ದಾರೆ.

ಕಾರ್ಯಕರ್ತರ ಶ್ರಮಕ್ಕೆ ನರೇಂದ್ರ ಮೋದಿಯವರು ಬೆನ್ನೆಲುಬಾಗಿರಲು ಸಿದ್ಧರಾಗಿದ್ದಾರೆ. ಕಡಿಮೆ ಅವಧಿಯಲ್ಲಿ ಅಭ್ಯರ್ಥಿಗಳು ಎಲ್ಲ ಮನೆಗಳಿಗೆ ಭೇಟಿ ನೀಡಲು ಕಷ್ಟ ಸಾಧ್ಯವಾದ್ದರಿಂದ ಕಾರ್ಯಕರ್ತರು ಒಂದೊಂದು ಮನೆಯನ್ನು ಎರಡರಿಂದ ಮೂರು ಬಾರಿ ಸಂಪರ್ಕಿಸಿ, ಡಬಲ್ ಇಂಜಿನ್ ಸರ್ಕಾರದ ಸಾಧನೆ ಮತ್ತು ಯೋಜನೆಗಳನ್ನು ತಿಳಿಸಲಿದ್ದಾರೆ ಎಂದು ಶೋಭಾ ಕರಂದ್ಲಾಜೆ ವಿವರಿಸಿದರು.

ಮಂಗಳವಾರದಿಂದ ಎರಡು ದಿನದ ‘ವಿಶೇಷ ಮಹಾ ಪ್ರಚಾರ ಅಭಿಯಾನ’ ಆರಂಭವಾಗಿದೆ. ಎಲ್ಲ 224 ಕ್ಷೇತ್ರಗಳಲ್ಲಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಬೆಳಿಗ್ಗೆ ಮಠ-ಮಂದಿಗಳಿಗೆ ಭೇಟಿ ನೀಡಿ ಆ ನಂತರ ರಾಷ್ಟ್ರ ನಾಯಕರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದ್ದಾರೆ. ಮನೆ-ಮನೆಗೂ ಭೇಟಿ ನೀಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಧನೆಗಳು ಮತ್ತು ಯೋಜನೆಗಳ ಬಗ್ಗೆ ತಿಳಿಸುತ್ತಿದ್ದಾರೆ. ಅಭಿಯಾನದ ಭಾಗವಾಗಿ ಸುದ್ದಿಗೋಷ್ಠಿಗಳು, ವಿವಿಧ ಸಮುದಾಯಗಳ ಮುಖಂಡರೊಂದಿಗೆ ಸಂವಾದ, ರೋಡ್‍ ಶೋಗಳು, ಸಾರ್ವಜನಿಕ ಸಭೆಗಳನ್ನು ಆಯೋಜಿಸಲಾಗಿದೆ ಎಂದು ಅವರು ಹೇಳಿದರು.

ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ನವ ಕರ್ನಾಟಕ ನಿರ್ಮಾಣದ ಸಂಕಲ್ಪವನ್ನು ಹೊಂದಿದ್ದಾರೆ. ಆದರೆ ಕಾಂಗ್ರೆಸ್ ಸುಳ್ಳು, ಒಡೆದಾಳುವ, ದಾರಿತಪ್ಪಿಸುವ, ಒಂದು ಸಮುದಾಯವನ್ನು ಓಲೈಸುವ ಕೆಲಸವನ್ನು ಮಾಡುತ್ತಿದೆ. ಜನರು ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣ ತಿರಸ್ಕರಿಸಲಿದ್ದಾರೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ವಿನಯ್ ಬಿದರೆ ಉಪಸ್ಥಿತರಿದ್ದರು.

ಇದನ್ನೂ ಓದಿ: Vande Bharat Express: ಕೇರಳದಲ್ಲಿ ಇಂದು ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ; ದೇಶದ 11ನೇ ಟ್ರೇನ್​ ಇದು

Exit mobile version