ಬೆಂಗಳೂರು: ಏರೋ ಇಂಡಿಯಾ ಶೋ ಉದ್ಘಾಟನೆಗೆ ಬೆಂಗಳೂರಿಗೆ ಬಂದಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ರಾಜಭಾವನದಲ್ಲಿ ಕನ್ನಡದ ಕೆಲವೇ ಸಿನಿಮಾ ತಾರೆಯರನ್ನು ಆಹ್ವಾನಿಸಿ ಔತಣಕೂಟ ನೀಡಿದ್ದಾರೆ.
ಈ ಔತಣಕೂಟಕ್ಕೆ ಅಶ್ವಿನಿ ಪುನೀತ್ ರಾಜ್‌ಕುಮಾರ್, ಯಶ್ (Yash), ರಿಷಬ್ ಶೆಟ್ಟಿ (Rishab shetty), ವಿಜಯ್ ಕಿರಗಂದೂರು ಅವರಿಗೆ ಆಹ್ವಾನ ನೀಡಲಾಗಿತ್ತು. ರಾಜಭವನದಲ್ಲಿ ರಾತ್ರಿ 8.30ರಿಂದ 9 ಗಂಟೆವರೆಗೂ ಪಿಎಂ ಈ ತಾರೆಯರ ಜತೆಗೆ ನಡೆದ ಚರ್ಚೆ ನಡೆಸಿದ್ದರು. ಕೆಜಿಎಫ್, ಕಾಂತಾರ ಚಿತ್ರಗಳನ್ನು ನೋಡಿ ಮೆಚ್ಚಿಕೊಂಡಿರುವ ಮೋದಿ, ಭಾರತೀಯ ಚಿತ್ರರಂಗದ ಕುರಿತು ಚರ್ಚೆ ನಡೆಸಿದ್ದಾರೆ.
ನಮ್ಮ ಚಿತ್ರರಂಗವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಏನು ಮಾಡಬೇಕು ಎಂದು ಚರ್ಚಿಸಿದ್ದಾರೆ. ಅಪ್ಪು ಅಗಲಿಕೆಯ ಹಿನ್ನೆಲೆಯಲ್ಲಿ ಅಶ್ವಿನಿ ಪುನೀತ್ ಅವರೊಂದಿಗೆ ಮಾತುಕತೆ ನಡೆಸಿ ಸಾಂತ್ವನ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ಮೋದಿ ಜತೆ ಔತಣಕೂಟಕ್ಕೆ ಕನ್ನಡದ ಹಿರಿಯ ನಟರಾದ ಶಿವರಾಜಕುಮಾರ್ (Shivaraj Kumar) ಮತ್ತು ಸುದೀಪ್‌ಗೆ (Kichcha Sudeep) ಆಹ್ವಾನ ನೀಡಿಲ್ಲ. ಈ ಬಗ್ಗೆ ಕುತೂಹಲಕಾರಿ ಚರ್ಚೆಗಳು ಸ್ವತಃ ಚಿತ್ರರಂಗ ಹಾಗೂ ರಾಜಕೀಯದಲ್ಲಿ ನಡೆಯುತ್ತಿವೆ.
ಸುದೀಪ್ ಅವರು ಇತ್ತೀಚೆಗೆ ಕಾಂಗ್ರೆಸ್ ನಾಯಕರ ಜತೆ ಕಾಣಿಸಿಕೊಂಡಿದ್ದರು. ಸುದೀಪ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ರಾಜ್ಯ ಕಾಂಗ್ರೆಸ್‌ನಲ್ಲಿ ಚರ್ಚೆಯಿದೆ. ಇನ್ನು ಶಿವರಾಜಕುಮಾರ್ ಅವರು ಕಾಂಗ್ರೆಸ್‌ನಲ್ಲಿರುವ ಮಧು ಬಂಗಾರಪ್ಪ ಅವರ ಹತ್ತಿರದ ಸಂಬಂಧಿ. ಹೀಗಾಗಿಯೇ ಹಿರಿಯ ಕಲಾವಿದರಾದರೂ ಇವರನ್ನು ಮೀಟಿಂಗ್‌ನಿಂದ ಮೋದಿ ದೂರವಿಟ್ಟರು ಎಂದು ತರ್ಕಿಸಲಾಗಿದೆ.
ಇದನ್ನೂ ಓದಿ: Modi In Bangalore: ರಾಜ ಭವನದಲ್ಲಿ ಮೋದಿ ಔತಣಕೂಟ; ಯಶ್, ರಿಷಬ್ ಶೆಟ್ಟಿ ಸೇರಿ ಹಲವರು ಭಾಗಿ