Site icon Vistara News

Narendra Modi: ಕರ್ನಾಟಕವನ್ನು ನಂಬರ್‌ ವನ್‌ ಆಗಿಸಲು ಬಿಜೆಪಿಗೆ ನೆರವಾಗಿ: ಮತದಾರರಿಗೆ ಟ್ವಿಟರ್‌ನಲ್ಲಿ ಪ್ರಧಾನಿ ಕರೆ

Narendra Modi

ಹೊಸ ದಿಲ್ಲಿ: ಹೆಚ್ಚಿನ ಪ್ರಗತಿಗಾಗಿ, ಕರ್ನಾಟಕವನ್ನು ದೇಶದ ನಂಬರ್‌ ವನ್‌ ಅರ್ಥಶಕ್ತಿಯಾಗಿ ರೂಪಿಸಲು ಬಿಜೆಪಿ ಸರ್ಕಾರವನ್ನು ಆರಿಸುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕರ್ನಾಟಕದ ಜನತೆಗೆ ಕರೆ ನೀಡಿದ್ದಾರೆ.

ರಾಜ್ಯ ವಿಧಾನಸಭೆ ಚುನಾವಣೆ (Karnataka Election 2023) ಮತದಾನದ ಮುನ್ನಾ ದಿನ ಬಿಜೆಪಿಯ ಟ್ವಿಟರ್‌ ಖಾತೆಯಲ್ಲಿ ಕಾಣಿಸಿಕೊಂಡ ಅವರು, ಈ ಕುರಿತು ಸಂದೇಶ ನೀಡಿದರು. ʼʼಕರ್ನಾಟಕದ ನನ್ನ ಸಹೋದರ ಸಹೋದರಿಯರೇ, ನಮಸ್ಕಾರʼʼ ಎಂದು ಅವರು ಕನ್ನಡದಲ್ಲಿ ಮಾತು ಆರಂಭಿಸಿ ಬಳಿಕ ಹಿಂದಿಯಲ್ಲಿ ತಮ್ಮ ಸಂದೇಶ ನೀಡಿದ್ದಾರೆ.

ʼʼನೀವು ನನಗೆ ಯಾವಾಗಲೂ ಆಶೀರ್ವಾದ ನೀಡಿದ್ದೀರಿ. ಕನ್ನಡಿಗರು ನನಗೆ ನೀಡಿದ ಆಶೀರ್ವಾದ, ಈಶ್ವರದ ಆಶೀರ್ವಾದಕ್ಕೆ ಸಮಾನ. ಈ ಬಾರಿಯ ನಿರ್ಧಾರ, ಬಹುಮತದ ಬಿಜೆಪಿ ಸರ್ಕಾರ. ಕರ್ನಾಟಕವು ಅಭಿವೃದ್ಧಿ ಹೊಂದಿದ ಭಾರತದ ಭಾಗವಾಗುವುದಕ್ಕೆ ತಕ್ಕ ಶಕ್ತಿಯನ್ನು ಹೊಂದಿದೆ. ಇಂದು ಭಾರತ ವಿಶ್ವದ ಐದನೇ ದೊಡ್ಡ ಅರ್ಥವ್ಯವಸ್ಥೆಯಾಗಿದೆ. ನಾವು ಶೀಘ್ರವೇ ಟಾಪ್‌ 3 ಅರ್ಥವ್ಯವಸ್ಥೆಯಲ್ಲಿ ಒಂದಾಗಬೇಕು. ಕರ್ನಾಟಕದ ಆರ್ಥಿಕ ಶಕ್ತಿ ವೇಗವಾಗಿ ಅಭಿವೃದ್ಧಿ ಹೊಂದಿದರೆ ಇದು ಸಾಧ್ಯವಿದೆ. ಒಂದು ಟ್ರಿಲಿಯನ್‌ ಡಾಲರ್‌ ಎಕಾನಮಿಯ ಲಕ್ಷ್ಯವನ್ನು ಸಾಧಿಸಬೇಕಿದೆ. ಇದಕ್ಕಾಗಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವನ್ನು ಚುನಾಯಿಸಬೇಕಿದೆ. ಬಿಜೆಪಿಯ ನಿರ್ಧಾರಾತ್ಮಕ, ಭವಿಷ್ಯದ ದೃಷ್ಟಿಯುಳ್ಳ, ಫೋಕಸ್‌ ಆದ ನೀತಿಗಳು ಕರ್ನಾಟಕದ ಅರ್ಥವ್ಯವಸ್ಥೆಯನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಲಿವೆʼʼ ಎಂದು ಪ್ರಧಾನಿ ಹೇಳಿದ್ದಾರೆ.

ʼʼಬಿಜೆಪಿಯ ಅವಧಿಯಲ್ಲಿ ರಾಜ್ಯಕ್ಕೆ 90,000 ಕೋಟಿ ರೂ. ವಿದೇಶಿ ನೇರ ಹೂಡಿಕೆ ಬಂದಿದೆ. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಕೇವಲ 30,000 ಕೋಟಿ ರೂ. ಬಂದಿತ್ತು. ಇದು ಯುವಜನತೆಯ ಉಜ್ವಲ ಭವಿಷ್ಯಕ್ಕಾಗಿ ಬಿಜೆಪಿಯ ಸಂಕಲ್ಪ. ಕರ್ನಾಟಕವನ್ನು ಉದ್ಯಮದಲ್ಲಿ, ಹೂಡಿಕೆಯಲ್ಲಿ ನಂಬರ್‌ ವನ್‌ ಮಾಡುವುದು ನಮ್ಮ ಸಂಕಲ್ಪ. ಶಿಕ್ಷಣ, ಮನರಂಜನೆ, ಉದ್ಯಮಶೀಲತೆಯಲ್ಲಿ ರಾಜ್ಯವನ್ನು ನಂಬರ್‌ ವನ್‌ ಮಾಡಬೇಕಿದೆ. ʼಬೀಜದಿಂದ ಬಜಾರ್‌ವರೆಗೆʼ ರೈತರಿಗೆ ಸಕಲ ಸೌಲಭ್ಯಗಳನ್ನು ಒಳಗೊಂಡ ಸೌಕರ್ಯ ಕಲ್ಪಿಸುವಲ್ಲಿ ಸಾಕಷ್ಟು ಕೆಲಸವನ್ನು ಬಿಜೆಪಿ ಮಾಡಿದೆ. ಹೊಸ ನೀರಾವರಿ ಯೋಜನೆಗಳು, ಸಂಗ್ರಹಾಗಾರಗಳು, ಇಥೆನಾಲ್‌ ಬ್ಲೆಂಡಿಂಗ್‌, ಡ್ರೋನ್‌ನಂಥ ಆಧುನಿಕ ಮಾಧ್ಯಮಗಳು ಹೀಗೆ ಕರ್ನಾಟಕವನ್ನು ಕೃಷಿಯಲ್ಲಿ ನಂಬರ್‌ ವನ್‌ ಮಾಡುವುದು ನಮ್ಮ ಗುರಿ.ʼʼ

ʼʼಡಬಲ್‌ ಇಂಜಿನ್‌ ಸರ್ಕಾರದ ಆಗಮನದ ಬಳಿಕ ಕರ್ನಾಟಕದಲ್ಲಿ ರಸ್ತೆಗಳಲ್ಲಿ, ವಿದ್ಯುತ್‌ನಲ್ಲಿ, ಬದುಕಿನ ಶೈಲಿ, ಉದ್ಯಮಶೀಲತೆ ಇತ್ಯಾದಿಗಳಲ್ಲಿ ನಂಬರ್‌ ವನ್‌ ರಾಜ್ಯ ಮಾಡುತ್ತದೆ ಎಂಬುದಕ್ಕೆ ಆಧಾರಗಳು ಸಿಕ್ಕಿವೆ. ಇಲ್ಲಿನ ಸಾಂಸ್ಕೃತಿಕ ಸಾಮರ್ಥ್ಯ ಇಡೀ ದೇಶಕ್ಕೆ ಪೂಜನೀಯವಾದುದು. ಭಗವಾನ್‌ ಬಸವೇಶ್ವರ, ನಾಡಪ್ರಭು ಕೆಂಪೇಗೌಡ, ಭಕ್ತ ಕನಕದಾಸ, ಒನಕೆ ಓಬವ್ವ ಇವರೆಲ್ಲ ಈ ಮಣ್ಣಿಗೆ ಪ್ರತೀ ಕಾಲಘಟ್ಟದಲ್ಲೂ ನೀಡಿದ ವ್ಯಕ್ತಿತ್ವವು ಇಡೀ ದೇಶಕ್ಕೆ ದಿಕ್ಕು ಒದಗಿಸಿದೆ. ಕರ್ನಾಟಕವನ್ನು ಇನ್ನೂ ಆಧುನಿಕತೆಯತ್ತ ಸಾಗಿಸುವುದು ಬಿಜೆಪಿಯ ಆಶಯ.ʼʼ

ʼʼಎಲ್ಲ ಕನ್ನಡಿಗರ ಕನಸು ನನ್ನ ಕನಸು, ನಿಮ್ಮ ಸಂಕಲ್ಪವೇ ನನ್ನ ಸಂಕಲ್ಪವಾಗಿದೆ. ನಾವೆಲ್ಲರೂ ಸೇರಿ ದುಡಿಯೋಣ. ವಿಶ್ವದ ಯಾವುದೇ ಶಕ್ತಿ ನಮ್ಮನ್ನು ತಡೆಯಲಾರದು. ನಾನು ಕರ್ನಾಟಕವನ್ನು ದೇಶದ ನಂ.ವನ್‌ ರಾಜ್ಯ ಮಾಡಲು ನಿಮ್ಮ ಆಶೀರ್ವಾದ, ಸಹಯೋಗ ಬೇಡುತ್ತಿದ್ದೇನೆ. ಆಂಜನೇಯ ಸ್ವಾಮಿಯ ಸ್ಮರಣೆ ಮಾಡುತ್ತ ನಿಮ್ಮ ನೆರವು ಕೋರುತ್ತಿದ್ದೇನೆ. ಹತ್ತನೇ ತಾರೀಕಿನಂದು ನಿಮ್ಮ ಅಮೂಲ್ಯ ಮತದಾನ ಮಾಡಿ. ಉಜ್ವಲ ಭವಿಷ್ಯಕ್ಕಾಗಿ ಬಿಜೆಪಿಗೆ ಮತ ಹಾಕಿʼʼ ಎಂದು ಪ್ರಧಾನಿ ಹೇಳಿದ್ದಾರೆ.

ಇದನ್ನೂ ಓದಿ: Karnataka Election: ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್‌ ಕೈಗೊಂಡ ಒಟ್ಟು ರ‍್ಯಾಲಿ, ರೋಡ್‌ ಶೋ ಎಷ್ಟು? ಇಲ್ಲಿದೆ ಪೂರ್ತಿ ಮಾಹಿತಿ

Exit mobile version