ಬೆಂಗಳೂರು: ಬೆಂಗಳೂರಿನ ರಸ್ತೆಗಳಲ್ಲಿ 26 ಕಿ.ಮೀ ದೂರ ಸಾಗಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ರೋಡ್ ಶೋ ಸೋಮೇಶ್ವರ ಸಮುದಾಯ ಭವನದ ಬಳಿಯಿಂದ ಆರಂಭವಾಯಿತು. ಜನ ಹೂಮಳೆಗರೆದು ಮೋದಿಯನ್ನು ಸ್ವಾಗತಿಸಿದರು.
ಲೊಯೋಲ ಶಾಲೆ ಆವರಣದಲ್ಲಿರುವ ಹೆಲಿಪ್ಯಾಡ್‌ಗೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಪ್ರಧಾನಿ ಮೋದಿ, ಅಲ್ಲಿಂದ ರಸ್ತೆ ಮೂಲಕ ಜೆ.ಪಿ. ನಗರದ ಸೋಮೇಶ್ವರ ಸಮುದಾಯ ಭವನದ ಬಳಿ ಆಗಮಿಸಿದರು. ಅಲ್ಲಿಂದ ತಮ್ಮ ಖಾಸಗಿ ವಾಹನ ಬದಲಾಯಿಸಿ ತೆರೆದ ವಾಹನಕ್ಕೆ ಏರಿದರು.
ಈ ಸಂದರ್ಭದಲ್ಲಿ ಸಂಸದರಾದ ತೇಜಸ್ವಿ ಸೂರ್ಯ ಮತ್ತು ಪಿ.ಸಿ. ಮೋಹನ್ ಅವರು ಮೋದಿಯವರಿಗೆ ಕೇಸರಿ ಪೇಟಾ ತೊಡಿಸಿ, ಹಾರ ಹಾಕಿದರು. ಜನರು ಹಾಗೂ ಕಾರ್ಯಕರ್ತರ ಜಯಘೋಷದ ನಡುವೆ ಮೋದಿ ರೋಡ್ ಶೋ ಆರಂಭಿಸಿದರು.
ಹೆಲಿಪ್ಯಾಡ್‌ನಿಂದ ಹೊರಟ ಮೋದಿ ಅವರನ್ನು ನೋಡಲು ಮಾರ್ಗ ಮಧ್ಯೆ ಜನ ಮುಗಿಬಿದ್ದರು. ʼಮೋದಿ, ಮೋದಿʼ ಎಂದು ಜೈಕಾರ ಹಾಕುತ್ತಿರುವ ಜನರತ್ತ ಕೈ ಬೀಸಿ ಪ್ರಧಾನಿ ಮೋದಿ ಹೊರಟಿದ್ದಾರೆ. ಅವರು ಸಾಗುವ ದಾರಿಯಲ್ಲಿ ಕಟ್ಟುನಿಟ್ಟಾದ ಪಹರೆ ಹಾಗೂ ಸಂಚಾರ ನಿರ್ಬಂಧ ವಿಧಿಸಲಾಗಿದೆ.
ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ರೋಡ್ ಶೋ ಸಾಗಲಿದ್ದು, ಸುಮಾರು ಹತ್ತು ಲಕ್ಷ ಜನ ಸೇರಿ ಇದನ್ನು ವೀಕ್ಷಿಸುವ ಸಾಧ್ಯತೆ ಇದೆ. ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ, ಜಯನಗರ, ಬಸವನಗುಡಿ, ಬಿಟಿಎಂ ಲೇಔಟ್, ಪದ್ಮನಾಭನಗರ, ಚಿಕ್ಕಪೇಟೆ, ಗಾಂಧಿನಗರ, ವಿಜಯ ನಗರ, ಗೋವಿಂದರಾಜು ನಗರ, ರಾಜಾಜಿನಗರ, ಮಲ್ಲೇಶ್ವರಂನಲ್ಲಿ ಕ್ಷೇತ್ರ ವ್ಯಾಪ್ತಿಗಳಲ್ಲಿ ರೋಡ್ ಶೋ ಮುಂದುವರಿಯಲಿದೆ.