ಬೆಂಗಳೂರು/ ಶಿವಮೊಗ್ಗ/ ಮೈಸೂರು: ರಾಜ್ಯ ವಿಧಾನಸಭೆ ಚುನಾವಣೆ (Karnataka Election 2023) ಪ್ರಚಾರದ ಅಂಗವಾಗಿ ರಾಜಧಾನಿಯಲ್ಲಿ ಇಂದು ಎರಡನೇ ಸುತ್ತಿನ ಮೆಗಾ ರೋಡ್ ಶೋ ನಡೆಸುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಅದನ್ನು ಮುಗಿಸಿ ಶಿವಮೊಗ್ಗ ಹಾಗೂ ನಂಜನಗೂಡುಗಳಲ್ಲಿ ನಡೆಯಲಿರುವ ಬೃಹತ್ ಪ್ರಚಾರ ಕಾರ್ಯಕ್ರಮಗಳಲ್ಲೂ ಭಾಗವಹಿಸಲಿದ್ದಾರೆ.
ಬೆಂಗಳೂರಿನಲ್ಲಿ ಬೆಳಗ್ಗೆ 10 ಗಂಟೆಯಿಂದ 11.30ರವರೆಗೆ ರೋಡ್ ಶೋ ನಡೆಸಿದ ಬಳಿಕ ಮೋದಿ ಇಲ್ಲಿಂದ ಮಲೆನಾಡಿಗೆ ಹಾರಲಿದ್ದಾರೆ. ಶಿವಮೊಗ್ಗದ ಆಯನೂರಿನಲ್ಲಿ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಜಿಲ್ಲೆಯ 7 ಕ್ಷೇತ್ರ, ದಾವಣಗೆರೆಯ 1, ಚಿಕ್ಕಮಗಳೂರಿನ 2 ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.
ಶಿವಮೊಗ್ಗ: ಇಂದು ಮಧ್ಯಾಹ್ನ 1.25ಕ್ಕೆ ಬೆಂಗಳೂರಿನಿಂದ ಹೆಲಿಕ್ಯಾಪ್ಟರ್‌ನಲ್ಲಿ ಶಿವಮೊಗ್ಗಕ್ಕೆ ಆಗಮಿಸಲಿರುವ ಮೋದಿ, 50 ನಿಮಿಷಗಳ ಕಾಲ ಭಾಷಣ ಮಾಡಲಿದ್ದಾರೆ. ಆಯನೂರಿನ ಸರ್ಕಾರಿ ಪ.ಪೂ. ಕಾಲೇಜು ಪಕ್ಕದ ಮೈದಾನದಲ್ಲಿ 100 ಎಕರೆ ಜಾಗದಲ್ಲಿ ಸಮಾವೇಶದ ಸಿದ್ಧತೆ ಮಾಡಲಾಗಿದೆ. ಜಿಲ್ಲಾ ಬಿಜೆಪಿ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮದ ವೇದಿಕೆ ಪಕ್ಕದಲ್ಲಿ ನಿರ್ಮಿಸಿರುವ ಹೆಲಿಪ್ಯಾಡ್‌ನಲ್ಲಿ ಲ್ಯಾಂಡಿಂಗ್ ಮಾಡಲಿದ್ದಾರೆ ಮೋದಿ. 10 ಕ್ಷೇತ್ರದ ಮತದಾರರು ಸಭೆಯಲ್ಲಿ ಭಾಗಿಯಾಗಲಿದ್ದು, ಮೂರು ಲಕ್ಷ ಜನರು ಸೇರುವ ನಿರೀಕ್ಷೆ ಇದೆ. 2.30ಕ್ಕೆ ಪ್ರಧಾನಿ ವಾಪಸ್ ತೆರಳಲಿದ್ದಾರೆ.
ಮೈಸೂರು: ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಇಂದು ಬಿಜೆಪಿ ಬೃಹತ್ ಪ್ರಚಾರ ಸಭೆ ನಡೆಯಲಿದ್ದು, ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯನವರ ನೆಲದಲ್ಲಿ ನಿಂತು ಮೋದಿ ಭರ್ಜರಿ ಮತ ಬೇಟೆ ನಡೆಸಲಿದ್ದಾರೆ.
ಮೈಸೂರು, ಚಾಮರಾಜನಗರ, ಮಡಿಕೇರಿ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಸಭೆ ನಡೆಯಲಿದ್ದು, ವೇದಿಕೆಯಲ್ಲಿ ಮೂರು ಜಿಲ್ಲೆಗಳ 17 ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗುತ್ತಿದೆ. ನಂಜನಗೂಡು ತಾಲ್ಲೂಕಿನ ಎಲಚಗೆರೆ ಬೋರೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿನ ಮೋದಿ ಭಾಷಣದತ್ತ ಎಲ್ಲರ ಚಿತ್ತವಿದೆ.
ವರುಣದಲ್ಲಿ ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟಿರುವ ವಿ.ಸೋಮಣ್ಣ ಅವರಿಗೂ ಮೋದಿ ಜತೆಗೆ ಭಾಷಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಿದ್ದರಾಮಯ್ಯನವರನ್ನು ಸೋಲಿಸಲು ಮೋದಿ ಸ್ಪಷ್ಟ ಸಂದೇಶ ಕೊಡುವ ನಿರೀಕ್ಷೆ ಇದೆ. ಸಂಜೆ 4.30ಕ್ಕೆ ನಡೆಯುವ ಸಮಾವೇಶದಲ್ಲಿ ಒಂದು ಲಕ್ಷ ಜನ ಸೇರಿಸುವ ಗುರಿಯಿದೆ. ಸಮಾವೇಶದ ನಂತರ ನಂಜನಗೂಡು ಶ್ರೀಕಂಠೇಶ್ವರನ ದರ್ಶನವನ್ನು ಪ್ರಧಾನಿ ಪಡೆಯಲಿದ್ದಾರೆ.
ಇದನ್ನೂ ಓದಿ: ವಿಸ್ತಾರ Top 10 News: ದಾಖಲೆ ಬರೆದ ಮೋದಿ ರೋಡ್ ಶೋ, ಕೈಗೆ ಬಲ ತುಂಬಿದ ಸೋನಿಯಾ: ಪ್ರಮುಖ ಸುದ್ದಿಗಳ ಸಂಚಯ