ಬೆಂಗಳೂರು: ರಾಜಧಾನಿಯಲ್ಲಿ ಇಂದು ಎರಡನೇ ಸುತ್ತಿನ ಮೆಗಾ ರೋಡ್ ಶೋ ಅನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಆರಂಭಿಸಿದರು.
ನಿನ್ನೆ ಬೊಮ್ಮನಹಳ್ಳಿಯಿಂದ ಮಲ್ಲೇಶ್ವರಂ ವರೆಗೂ 26 ಕಿ.ಮೀ ಐತಿಹಾಸಿಕ ರೋಡ್ ಶೋ ಮಾಡಿದ್ದ ಪ್ರಧಾನಿ, ಇಂದು ನ್ಯೂ ತಿಪ್ಪಸಂದ್ರದಿಂದ ತಮ್ಮ ಶೋ ಆರಂಭಿಸಿದರು. ನಿಗದಿತ ಸಮಯಕ್ಕೆ ಸರಿಯಾಗಿ ರಸ್ತೆ ಮೂಲಕ ರಾಜಭವನದಿಂದ ಆಗಮಿಸಿದ ಪ್ರಧಾನಿ, ಕೆಂಪೇಗೌಡ ಸರ್ಕಲ್‌ನಲ್ಲಿರುವ ಕೆಂಪೇಗೌಡರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು. ಬಳಿಕ ಹೂವುಗಳಿಂದ ಅಲಂಕೃತವಾದ ತೆರೆದ ವಾಹನ ಏರಿದರು. ಅವರಿಗೆ ಸಂಸದ ರಾಜೀವ್ ಚಂದ್ರಶೇಖರ್ ಹಾಗೂ ಪಿ.ಸಿ ಮೋಹನ್ ಸಾಥ್ ನೀಡಿದರು.
ಸರ್ಕಲ್‌ನ ಸುತ್ತಮುತ್ತ ಸಾವಿರಾರು ಜನ ಸೇರಿ ʼಮೋದಿ, ಮೋದಿʼ ಎಂಬ ಜೈಕಾರದೊಂದಿಗೆ ಮೋದಿಯವರನ್ನು ಸ್ವಾಗತಿಸಿದರು. ಹೂವಿನ ಮಳೆಯನ್ನು ಚೆಲ್ಲಿದರು. ಇಕ್ಕೆಲಗಳಲ್ಲಿ ಸೇರಿದ ಜನತೆಯತ್ತ ಕೈಬೀಸುತ್ತ, ನಮಸ್ಕಾರ ಮಾಡುತ್ತ ಮೋದಿ ರೋಡ್ ಶೋ ಆರಂಭಿಸಿದರು.
12 ಗಂಟೆ ವರೆಗೂ ಸುಮಾರು 6.5 ಕಿ.ಮೀ ರೋಡ್ ಶೋ ನಡೆಯಲಿದೆ. ಕೆಂಪೇಗೌಡ ಪ್ರತಿಮೆ, ತಿಪ್ಪಸಂದ್ರ ರೋಡ್‌ನಿಂದ ಶುರುವಾಗಿ ಎಂ.ಜಿ ರೋಡ್‌ನ ಟ್ರಿನಿಟಿ ಸರ್ಕಲ್‌ವರೆಗೂ ನಡೆಯಲಿದೆ. ತಿಪ್ಪಸಂದ್ರ ರೋಡ್, ಎಚ್‌ಎಎಲ್ 2ನೇ ಹಂತ, 100 ಫೀಟ್ ರೋಡ್, ಇಂದಿರಾನಗರ, ಸುಬ್ರಮಣ್ಯ ಸ್ವಾಮಿ ದೇವಸ್ಥಾನ, ಎಂ.ಜಿ ರೋಡ್, ಟ್ರಿನಿಟಿ ಸರ್ಕಲ್ ಬಳಿ ನಮೋ ಪ್ರಚಾರ ನಡೆಯಲಿದೆ.
ಸಿ.ವಿ. ರಾಮನ್ ನಗರ ವಿಧಾನಸಭಾ ಕ್ಷೇತ್ರ, ಕೆ.ಆರ್ ಪುರಂ ವಿಧಾನಸಭಾ ಕ್ಷೇತ್ರ, ಶಿವಾಜಿನಗರ ವಿಧಾನಸಭಾ ಕ್ಷೇತ್ರ, ಶಾಂತಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಮನ ಗೆಲ್ಲಲು ಮೋದಿ ಕೊನೇ ಹಂತದ ಕಸರತ್ತು ಮಾಡಲಿದ್ದಾರೆ. ಏಪ್ರಿಲ್ 29ರಂದು ಮೋದಿಯವರು ಸುಂಕದಕಟ್ಟೆವರೆಗೂ ರೋಡ್ ಶೋ ನಡೆಸಿದ್ದರು. ಇದು ಬೆಂಗಳೂರಿನಲ್ಲಿ ಮೋದಿಯವರ ಮೂರನೇ ರೋಡ್ ಶೋ ಆಗಿದೆ.