Site icon Vistara News

Modi In Karnataka: ಬೆಂಗಳೂರಿನಲ್ಲಿ ಮೋದಿ 2 ದಿನ ರೋಡ್‌ ಶೋ; ಇಲ್ಲಿದೆ ಫೈನಲ್‌ ರೂಟ್‌ ಮ್ಯಾಪ್

‌Narendra Modi Roadshows In Karnataka; here is a final routemap

‌Narendra Modi Roadshows In Karnataka; here is a final routemap

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ (Modi In Karnataka) ಪ್ರಧಾನಿ ನರೇಂದ್ರ ಮೋದಿ ಅವರು ಮೇ 6 ಹಾಗೂ 7ರಂದು ಬೆಂಗಳೂರಿನಲ್ಲಿ ರೋಡ್‌ ಶೋ ನಡೆಸಲಿದ್ದಾರೆ. ಇದಕ್ಕೂ ಮೊದಲು ಒಂದೇ ದಿನ ಎರಡು ಹಂತದಲ್ಲಿ ರೋಡ್‌ ಶೋ ಆಯೋಜಿಸಲು ತೀರ್ಮಾನಿಸಲಾಗಿತ್ತು. ಆದರೆ, ಜನರಿಗೆ ತೊಂದರೆ ಸೇರಿ ಹಲವು ಕಾರಣಗಳಿಂದಾಗಿ ಎರಡು ದಿನ ಆಯೋಜಿಸಲು ತೀರ್ಮಾನಿಸಿದೆ. ಈಗ ಬಿಜೆಪಿಯು ರೋಡ್‌ ಶೋ ನಡೆಯುವ ರೂಟ್‌ ಮ್ಯಾಪ್‌ ನೀಡಿದೆ. ಮೋದಿ ಅವರು ಯಾವ ಮಾರ್ಗದಲ್ಲಿ, ಯಾವ ಪ್ರದೇಶಗಳಲ್ಲಿ ಸಂಚರಿಸಲಿದ್ದಾರೆ ಎಂಬುದರ ಮಾಹಿತಿ ಹೀಗಿದೆ.

ಮೇ 6ರ ರೂಟ್‌ ಮ್ಯಾಪ್‌

ಮೇ 6ರ ಶನಿವಾರ ನರೇಂದ್ರ ಮೋದಿ ಅವರು ಬೆಳಗ್ಗೆ 10 ಗಂಟೆಗೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಹಳೇ ವಿಮಾನ ನಿಲ್ದಾಣ ರಸ್ತೆ, ಸುರಂಜನ್‌ ದಾಸ್‌ ರಸ್ತೆ ಜಂಕ್ಷನ್‌ನಿಂದ ಮೋದಿ ಅವರ ರೋಡ್‌ ಶೋ ಆರಂಭವಾಗಲಿದೆ. ಕೆ.ಆರ್.ಪುರ, ಸಿ.ವಿ.ರಾಮನ್‌ ನಗರ, ಶಾಂತಿನಗರ ಹಾಗೂ ಶಿವಾಜಿನಗರದ ಮೂಲಕ ರೋಡ್‌ ಶೋ ಸಾಗಲಿದೆ. ಬ್ರಿಗೇಡ್‌ ರಸ್ತೆಯ ಸೇನಾ ಸ್ಮಾರಕದ ಬಳಿ ಮೊದಲ ದಿನದ ರೋಡ್‌ ಶೋ ಅಂತ್ಯವಾಗಲಿದೆ.

https://twitter.com/BJP4Karnataka/status/1654084218090037248?s=20

ಮೇ 7ರ ರೂಟ್‌ ಮ್ಯಾಪ್‌

ಮೇ 7ರ ಭಾನುವಾರ ಕೂಡ ಮೋದಿ ಅವರು ಬೆಳಗ್ಗೆ 10 ಗಂಟೆಯಿಂದ ರೋಡ್‌ ಶೋ ನಡೆಸಲಿದ್ದಾರೆ. ಆರ್‌ಬಿಐ ಲೇಔಟ್‌ನ ಶ್ರೀ ಸೋಮೇಶ್ವರ ಸಭಾ ಭವನದಿಂದ ರೋಡ್‌ ಶೋ ಆರಂಭವಾಗಲಿದೆ. ಬೊಮ್ಮನಹಳ್ಳಿ, ಜಯನಗರ, ಬಸವನಗುಡಿ, ಚಾಮರಾಜಪೇಟೆ, ಗೋವಿಂದರಾಜನಗರ, ರಾಜಾಜಿನಗರದ ಮೂಲಕ ಸಾಗಿ, ಮಲ್ಲೇಶ್ವರದ ಕಾಡು ಮಲ್ಲೇಶ್ವರ ದೇವಸ್ಥಾನದ ಬಳಿ ರೋಡ್‌ ಶೋ ಅಂತ್ಯವಾಗಲಿದೆ.

ಇದನ್ನೂ ಓದಿ: Modi in Karnataka: ಮೋದಿ ರೋಡ್‌ ಶೋಗೆ ಕಾಂಗ್ರೆಸ್‌ ಕ್ಯಾತೆ; ಅನುಮತಿ ಕೊಡ್ಲೇಬೇಡಿ ಎಂದು ಎಲೆಕ್ಷನ್‌ ಕಮಿಷನ್‌ಗೆ ಮನವಿ

ಮಾರ್ಗ ಬದಲು

ನರೇಂದ್ರ ಮೋದಿ ಅವರ ಆಗಮನದ ಹಿನ್ನೆಲೆಯಲ್ಲಿ ಮೇ 5ರ ಸಂಜೆ 5.30ರಿಂದ 7 ಗಂಟೆವರೆಗೆ ವಾಹನಗಳ ಸಂಚಾರಕ್ಕೆ ಮಾರ್ಗ ಬದಲಾವಣೆ ಮಾಡಲಾಗಿದೆ. ಹಳೆಯ ವಿಮಾನ ನಿಲ್ದಾಣ ರಸ್ತೆ, ಎಂ.ಜಿ.ರಸ್ತೆ, ಡಿಕನ್‌ಸನ್‌ ರಸ್ತೆ, ಮಣಿಪಾಲ್‌ ಸೆಂಟರ್‌, ಕೆಂಬ್ರಿಡ್ಜ್‌ ಲೇಔಟ್‌ ರಸ್ತೆ, ಇಂದಿರಾನಗರ 100 ಅಡಿ ರಸ್ತೆ, ಅರಳಿಕಟ್ಟೆ, ಎ.ಎಸ್‌.ಸಿ ಸೆಂಟರ್‌, ಕಬ್ಬನ್‌ ರಸ್ತೆ, ಬಿ.ಆರ್.ವಿ. ಜಂಕ್ಷನ್‌, ಟ್ರಿನಿಟಿ ಸರ್ಕಲ್‌, ರಾಜಭವನ ರಸ್ತೆ, ಸಿ.ಟಿ.ಒ ಜಂಕ್ಷನ್‌ ಹಾಗೂ ಇನ್‌ಫೆಂಟ್ರಿ ರಸ್ತೆಯಲ್ಲಿ ಸಂಚರಿಸುವವರು ಪರ್ಯಾಯ ಮಾರ್ಗದಲ್ಲಿ ಸಂಚರಿಸಬೇಕು ಎಂದು ಬೆಂಗಳೂರು ನಗರ ಸಂಚಾರ ಪೊಲೀಸ್‌ ಪ್ರಕಟಣೆ ತಿಳಿಸಿದೆ.

ಇದಕ್ಕೂ ಮೊದಲು, ಶನಿವಾರ ಒಂದೇ ದಿನ ಎರಡು ರೋಡ್‌ ಶೋ ಆಯೋಜನೆ ಮಾಡಲಾಗಿತ್ತು. ಎರಡು ಹಂತಗಳಲ್ಲಿ ರೋಡ್‌ ಶೋ ನಡೆಯಬೇಕಿತ್ತು. ಆದರೆ, ಒಂದೇ ದಿನ 36 ಕಿ.ಮೀ ರೋಡ್‌ ಶೋ ನಡೆಸುವುದರಿಂದ ಸಂಚಾರ ದಟ್ಟಣೆ, ಜನರ ಓಡಾಟ, ಭದ್ರತೆ ಸೇರಿ ಹಲವು ಸಮಸ್ಯೆ ಎದುರಾಗಲಿವೆ. ಅದರಲ್ಲೂ, ಜನರಿಗೆ ತೊಂದರೆ ಆಗಬಾರದು, ಸಂಚಾರ ದಟ್ಟಣೆ ಉಂಟಾಗಬಾರದು ಎಂದು ಬಿಜೆಪಿ ನಾಯಕರಿಗೆ ಮೋದಿ ಸೂಚಿಸಿದ ಕಾರಣ, ಒಂದು ದಿನದ ಬದಲು ಎರಡು ದಿನ ರೋಡ್‌ ಶೋ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.

Exit mobile version