ಉಡುಪಿ: ಮಹಾತ್ಮಾ ಗಾಂಧೀಜಿಯವರನ್ನು ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆ ಹೆಸರನ್ನು ರಸ್ತೆಯೊಂದಕ್ಕೆ ಇಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ. ಕಾರ್ಕಳದ ಬೋಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ʼಪಡುಗಿರಿ – ನಾಥೂರಾಮ್ ಗೋಡ್ಸೆ ರಸ್ತೆʼ ಎಂಬ ನಾಮಫಲಕವನ್ನು ಅಳವಡಿಸಲಾಗಿತ್ತು.
ಈ ರೀತಿ ನಾಮಫಲಕವನ್ನು ಅಳವಡಿಸಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ವಿವಾದ ಸೃಷ್ಟಿಯಾಗಿತ್ತು. ಈ ಕುರಿತು ಸ್ಥಳೀಯ ಕಾಂಗ್ರೆಸ್ ಘಟಕ ಎಚ್ಚರಿಕೆ ನೀಡಿತ್ತು. ʼದೇಶದ ಪಿತಾಮಹ ಅಹಿಂಸಾ ತತ್ವವಾದಿ ಮಹಾತ್ಮಾ ಗಾಂಧಿಯವರನ್ನು ಕೊಂದ ನಾಥೂರಾಮ್ ಗೋಡ್ಸೆ ಹೆಸರನ್ನು ಕಾರ್ಕಳದ ಬೋಳ ಗ್ರಾಮ ಪಂಚಾಯಿತಿ ರಸ್ತೆಗೆ ನಾಮಕರಣ ಮಾಡುವ ಮೂಲಕ ದೇಶದ ನಾಗರಿಕರು ತಲೆತಗ್ಗಿಸುವ ಕೆಲಸ ಮಾಡಿದ್ದಾರೆ. ಪ್ರತಿ ಭಾರತೀಯರೂ ಇದನ್ನು ಖಂಡಿಸಬೇಕು. ಇದನ್ನು ತೆರವುಗೊಳಿಸಲು ಹೋರಾಟ ಮಾಡುತ್ತೇವೆʼ ಎಂದು ದೀಪು ಗೌಡ್ರು ಎಂಬುವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು.
ಇದನ್ನೂ ಓದಿ | ಗಾಂಧಿ ಹತ್ಯೆಯಾದಾಗ ಆರೆಸ್ಸೆಸ್ ಸಿಹಿ ಹಂಚಿದ್ದಕ್ಕೆ ಕಾಂಗ್ರೆಸ್ ದಾಖಲೆ ಕೊಡಲಿ
ವಿವಾದ ತೀವ್ರವಾಗುತ್ತಿರುವುದನ್ನು ಕಂಡ ಕಾರ್ಕಳ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಕೂಡಲೆ ನಾಮಫಲಕವನ್ನು ಕಿತ್ತು ಕೊಂಡೊಯ್ದರು. ಪೊಲೀಸರು ನಾಮಫಲಕ ತೆರವುಗೊಳಿಸುತ್ತಿರುವ ವಿಡಿಯೊ ಕೂಡ ಪ್ರಸಾರವಾಗುತ್ತಿದೆ.
ಇದಕ್ಕೂ ಮುನ್ನ ಪ್ರತಿಕ್ರಿಯೆ ನೀಡಿದ್ದ ಕನ್ನಡ ಮತ್ತು ಸಂಸ್ಕೃತಿ ಸಚಿವ ಹಾಗೂ ಸ್ಥಳೀಯ ಶಾಸಕ ವಿ. ಸುನೀಲ್‌ಕುಮಾರ್ ʼʼಈ ಫಲಕವನ್ನು ಗ್ರಾಮ ಪಂಚಾಯಿತಿಯವರು ಅಳವಡಿಸಿಲ್ಲ. ಖಾಸಗಿ ವ್ಯಕ್ತಿಗಳು ಅಳವಡಿಸಿದ್ದಾರೆ. ಈ ಕುರಿತು ತನಿಖೆ ನಡೆಸಿ ಗ್ರಾಮ ಪಂಚಾಯಿತಿಯಿಂದಲೇ ವಿವರಣೆ ನೀಡಲಾಗುತ್ತದೆʼʼ ಎಂದಿದ್ದರು.
ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿ ʼʼಇದಕ್ಕೆ ಏನು ಹೇಳಬೇಕು? ಗಾಂಧಿಯನ್ನು ಕೊಂದವರ ಹೆಸರನ್ನ ಇಡ್ತಾರೆ ಅಂದ್ರೆ ಹೇಗೆ? ಗಾಂಧೀಜಿ ಹಾಗಾದ್ರೆ ದೇಶದ್ರೋಹಿಯೇ? ನಾಥೂರಾಮ್ ಗೋಡ್ಸೆ ರಾಷ್ಟ್ರಭಕ್ತರಾದ್ರಾ? ಕುರ್ಚಿ ಉಳಿಸಿಕೊಳ್ಳೋಕೆ ಏನುಬೇಕಾದ್ರೂ ಮಾಡ್ತಾರೆ. ಇದನ್ನ ನಾವು ಖಂಡಿಸುತ್ತೇವೆʼʼ ಎಂದಿದ್ದರು.
ಸದ್ಯಕ್ಕೆ ಪೊಲೀಸರು ನಾಮಫಲಕ ತೆರವುಗೊಳಿಸಿದ್ದಾರಾದರೂ ಇದನ್ನು ಅಳವಡಿಸಿದವರು ಯಾರು ಎಂಬ ಮಾಹಿತಿ ಲಭಿಸಿಲ್ಲ.
ಇದನ್ನೂ ಓದಿ: ಅಯೋಧ್ಯಾ ರಾಮನ ಗರ್ಭಗುಡಿ ಶಿಲಾನ್ಯಾಸಕ್ಕೆ ಉಡುಪಿ ಕೃಷ್ಣ ಪ್ರಸಾದ