Site icon Vistara News

National Flag | ಕೆಂಪು, ಬಿಳಿ, ಹಸಿರು ಎಂದ ಸಿದ್ದರಾಮಯ್ಯ ವಿರುದ್ಧ ಪೊಲೀಸ್‌ ಠಾಣೆಗೆ ದೂರು!

National flag

ಚಿಕ್ಕಮಗಳೂರು: ರಾಷ್ಟ್ರ ಧ್ವಜದ ಬಣ್ಣ ಕೇಸರಿ, ಬಿಳಿ, ಹಸಿರು ಎಂದು ಹೇಳುವ ಬದಲು ಕೆಂಪು, ಬಿಳಿ, ಹಸಿರು ಎಂದ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಸಾಕಷ್ಟು ಟ್ರೋಲ್‌, ಟೀಕೆ, ವ್ಯಂಗ್ಯ, ವಾಗ್ದಾಳಿ ಎಲ್ಲವೂ ನಡೆಯುತ್ತಿದೆ. ಇದರ ಬೆನ್ನಿಗೇ ಅವರ ಮೇಲೆ ಪೊಲೀಸ್‌ ಠಾಣೆಗೆ ದೂರು ಕೂಡಾ ನೀಡಲಾಗಿದೆ.

ಚಿಕ್ಕಮಗಳೂರು ತಾಲೂಕಿನ ಆಲ್ದೂರು ಪೊಲೀಸ್‌ ಠಾಣೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮೇಲೆ ದೂರು ನೀಡಲಾಗಿದೆ. ಜಿಲ್ಲಾ ಬಿಜೆಪಿ ವತಿಯಿಂದ ಠಾಣೆಗೆ ದೂರು ನೀಡಲಾಗಿದೆ. ಸಿದ್ದರಾಮಯ್ಯ ಅವರು ರಾಷ್ಟ್ರ ಧ್ವಜಕ್ಕೇ ಅಪಮಾನ ಮಾಡಿದ್ದಾರೆ ಎನ್ನುವುದು ದೂರಿನ ಮುಖ್ಯಾಂಶ.

ಕೇಸರಿ ಬಣ್ಣದ ಬದಲು ಕೆಂಪು ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಅವರು ಧ್ವಜಕ್ಕೆ ಅಪಮಾನ ಮಾಡಿದ್ದಾರೆ. ಹಾಗಾಗಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಕೋರಲಾಗಿದೆ. ಬಿಜೆಪಿ ಮುಖಂಡ ಗಿರೀಶ್ ಹಾಗೂ ಬಜರಂಗದಳದ ಶಿವಕುಮಾರ್ ಅವರ ನೇತೃತ್ವದಲ್ಲಿ ಠಾಣೆಗೆ ಭೇಟಿ ನೀಡಿದ ತಂಡ ಪಿಎಸ್ಐ ಭುವನೇಶ್ ಅವರಿಗೆ ದೂರು ನೀಡಿತು.

ಚಿಕ್ಕಮಗಳೂರಿನಲ್ಲೂ ಸಿದ್ದುಗೆ ಡಿಮ್ಯಾಂಡ್‌
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಚಿಕ್ಕಮಗಳೂರಿನಿಂದ ವಿಧಾನಸಭೆಗೆ ಸ್ಪರ್ಧಿಸುವಂತೆ ಕಾಂಗ್ರೆಸ್‌ ನಾಯಕರು ಆಹ್ವಾನಿಸುತ್ತಿದ್ದಾರೆ. ಕಿಸಾನ್‌ ಕಾಂಗ್ರೆಸ್‌ ಘಟಕ ಮತ್ತು ಅದರ ಅಧ್ಯಕ್ಷ ಸಚಿನ್‌ ಮೀಗಾ ಅವರು ಈಗಾಗಲೇ ಸಿದ್ದರಾಮಯ್ಯ ಅವರು ಚಿಕ್ಕಮಗಳೂರಿನಿಂದ ಸ್ಪರ್ಧಿಸಬೇಕು ಎಂದು ಮನವಿ ಮಾಡಿದ್ದರು. ಇಲ್ಲಿನ ಜನ ಬಿಜೆಪಿಯ ಸಿ.ಟಿ. ರವಿ ಅವರ ನಡವಳಿಕೆಗಳಿಂದ ಬೇಸತ್ತಿದ್ದಾರೆ ಎಂದು ಅವರು ಹೇಳಿದ್ದರು. ಈ ಬೇಡಿಕೆ ಹಿನ್ನೆಲೆಯಲ್ಲಿಯೂ ಸಿದ್ದರಾಮಯ್ಯ ಅವರ ವಿರುದ್ಧ ನೀಡಿದ ದೂರು ಮಹತ್ವ ಪಡೆದುಕೊಂಡಿದೆ.

ಸಿ.ಟಿ. ರವಿ ಏನು ಹೇಳಿದರು?
ಸಿದ್ದರಾಮಯ್ಯ ಅವರಿಗೆ ಚಿಕ್ಕಮಗಳೂರಿನಿಂದ ಸ್ಪರ್ಧಿಸುವಂತೆ ಆಹ್ವಾನ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಒಂದೊಮ್ಮೆ ಸಿದ್ದರಾಮಯ್ಯ ಅವರು ಇಲ್ಲಿಗೆ ಬಂದರೆ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದ್ದಾರೆ.

ʻʻಜನ ನನ್ನನ್ನು ಗೆಲ್ಲಿಸುತ್ತಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೆಲಸ ಮಾಡಿದ್ದೇನೆ. ಸಿದ್ದರಾಮಯ್ಯ ಅಂದರೆ ದತ್ತಪೀಠಕ್ಕೆ ಅನ್ಯಾಯ ಮಾಡಿದವರು ಅಂತಾನೇ ಜನ ಮಾತನಾಡಿಕೊಳ್ಳುತ್ತಾರೆ. ನಾನು ಅನ್ಯಾಯ ಮಾಡಬೇಡಿ ಅಂತ ಮನವಿ ಮಾಡಿದರೂ ಕೇಳಲಿಲ್ಲʼʼ ಎಂದು ಸಿ.ಟಿ. ರವಿ ಹೇಳಿದರು. ಜತೆಗೆ ಈ ಬಾರಿ ಚಿಕ್ಕಮಗಳೂರಿನ ಐದಕ್ಕೆ ಐದೂ ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಲಿದೆ ಎಂದರು.

ಇದನ್ನೂ ಓದಿ| ಸಿದ್ದರಾಮಯ್ಯ ಮಜಾವಾದಿ, ಆರ್‌ಎಸ್‌ಎಸ್‌ ಎಂದರೆ ಅರ್ಥವಾಗಲ್ಲ: ಸಿ ಟಿ ರವಿ

Exit mobile version