Site icon Vistara News

National herald case | ಕೈ ನಾಯಕರಿಂದ ಜು.21ರಂದು ರಾಜಭವನ ಮುತ್ತಿಗೆ

‌ ಡಿ.ಕೆ.ಶಿವಕುಮಾರ್ siddaramaiah

ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣದ (National herald case) ಹೆಸರಲ್ಲಿ ಕೇಂದ್ರ ಸರ್ಕಾರವು ಸಾಂವಿಧಾನಿಕ ಸಂಸ್ಥೆಯಾಗಿರುವ ಜಾರಿ ನಿರ್ದೇಶನಾಲಯವನ್ನು ದುರುಪಯೋಗ ಮಾಡಿಕೊಂಡು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ವಿಚಾರಣೆ ನೆಪದಲ್ಲಿ ಕಿರುಕುಳ ನೀಡಲು ಮುಂದಾಗಿದೆ. ಇದನ್ನು ಖಂಡಿಸಿ ಬೆಂಗಳೂರಿನಲ್ಲಿ ಜುಲೈ 21 ರಂದು ರಾಜಭವನ ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಶನಿವಾರ ಸಂಜೆ ಪಕ್ಷದ ಎಲ್ಲರೊಂದಿಗೆ ತುರ್ತು ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಕೇಂದ್ರ ಸರ್ಕಾರ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ನಾಯಕರ ಮೇಲೆ ನಡೆಸುತ್ತಿರುವ ದೌರ್ಜನ್ಯ ಕುರಿತು ಚರ್ಚಿಸಲಾಯಿತು ಎಂದರು.

ಜುಲೈ 21ರಿಂದ ಸಂಸತ್ತಿನಲ್ಲಿ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಇದೇ ಸಮಯದಲ್ಲಿ ಸೋನಿಯಾ ಗಾಂಧಿಯವರಿಗೆ ವಿಚಾರಣೆ ನೆಪದಲ್ಲಿ ಕಿರುಕುಳ ನೀಡುವ ಪ್ರಯತ್ನ ನಡೆಯುತ್ತಿದೆ. ಕಳೆದ ತಿಂಗಳು ಐದು ದಿನ 50 ಗಂಟೆಗಳ ಕಾಲ ರಾಹುಲ್ ಗಾಂಧಿ ಅವರಿಗೆ ವಿಚಾರಣೆ ಹೆಸರಲ್ಲಿ ಕಿರುಕುಳ ನೀಡಲಾಗಿತ್ತು. ಅಧಿಕಾರಿಗಳು ಸುದೀರ್ಘ ತನಿಖೆ ನಡೆಸಿದರೂ ರಾಹುಲ್ ಗಾಂಧಿಯವರ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳನ್ನು ಒದಗಿಸಲು ಸಾಧ್ಯವಾಗಲಿಲ್ಲ. ಇದು ಸರಿಯಲ್ಲ ಎಂದು ಕಿಡಿಕಾರಿದರು.

ಇದನ್ನೂ ಓದಿ | ವಿಸ್ತಾರ Explainer | ಕಾಂಗ್ರೆಸ್‌ ಕೊರಳಿಗೆ ಮತ್ತೆ ಸುತ್ತಿಕೊಂಡಿದೆ ನ್ಯಾಷನಲ್‌ ಹೆರಾಲ್ಡ್‌ ಉರುಳು!

ನಮ್ಮ ಪಕ್ಷ ಹಾಗೂ ನಾಯಕರ ಘನತೆಗೆ ಕಪ್ಪು ಚುಕ್ಕೆ ಇಡುವ ಪ್ರಯತ್ನ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರದೆಲ್ಲೆಡೆ ಪಕ್ಷದ ನಾಯಕರು ಜುಲೈ 21 ರಂದು ಪ್ರತಿಭಟನೆ ನಡೆಸಲಿದ್ದಾರೆ. ಬೆಂಗಳೂರಿನಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಎಲ್ಲ ಶಾಸಕರು, ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ಶಿವಕುಮಾರ್‌ ತಿಳಿಸಿದರು.

ಫ್ರೀಡಂ ಪಾರ್ಕ್‌ನಿಂದ ರ‍್ಯಾಲಿ

ಜುಲೈ 21ರಂದು ಎಲ್ಲ ನಾಯಕರು ಫ್ರೀಡಂ ಪಾರ್ಕ್‌ನಲ್ಲಿ ಸೇರಲಿದ್ದೇವೆ. ಅಲ್ಲಿಂದ ರಾಜಭವನ ಚಲೋ ಪ್ರತಿಭಟನೆ ನಡೆಯಲಿದ್ದು, ರಾಜ್ಯಭವನಕ್ಕೆ ಮುತ್ತಿಗೆ ಹಾಕಲಿದ್ದೇವೆ. ಬೆಂಗಳೂರು ಮಾತ್ರವಲ್ಲದೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿಯೂ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ನಾನು ಸೇರಿದಂತೆ ಪಕ್ಷದ ಪ್ರಮುಖ ನಾಯಕರಾದ ಸಿದ್ದರಾಮಯ್ಯ, ಹರಿಪ್ರಸಾದ್, ಎಂ.ಬಿ ಪಾಟೀಲ್ ಮತ್ತಿತರ ನಾಯಕರು, ಕಾರ್ಯಾಧ್ಯಕ್ಷರು ಒಂದೊಂದು ಜಿಲ್ಲೆಗೆ ಹೋಗಿ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದೇವೆ ಎಂದು ಮಾಹಿತಿ ನೀಡಿದರು.

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಹುರುಳಿಲ್ಲ

ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷ ನೀಡಿರುವ ಅಂಕಿ ಅಂಶಗಳು ಪ್ರಕರಣದಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಎಂಬ ಬಿಜೆಪಿ ಆರೋಪಕ್ಕೆ ಉತ್ತರಿದ ಡಿಕೆಶಿ, ಈ ಪ್ರಕರಣದಲ್ಲಿ ಯಾವುದೇ ಹುರಳಿಲ್ಲ ಎಂದು ಬಿಜೆಪಿಯವರಿಗೆ ತಿಳಿದಿದೆ. ಸ್ವತಃ ಅರುಣ್ ಜೇಟ್ಲಿ ಅವರೇ ಸಂಸತ್ತಿನಲ್ಲಿ ಈ ಪ್ರಕರಣದಲ್ಲಿ ಯಾವುದೇ ಅಕ್ರಮವಿಲ್ಲ ಎಂದು ಹೇಳಿದ್ದರು.

ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ನ್ಯಾಷನಲ್ ಹೆರಾಲ್ಡ್ ಆಸ್ತಿಯನ್ನು ತಮ್ಮ ಆಸ್ತಿ ಎಂದು ಹೇಳಿಕೊಂಡಿದ್ದಾರಾ? ನಾನು ಪ್ರದೇಶ ಕಾಂಗ್ರೆಸ್ ಅಧ್ಯಕ್ಷನಾಗಿರುವ ಹಿನ್ನೆಲೆಯಲ್ಲಿ ಪಕ್ಷದ ಸಂಸ್ಥೆಗಳ ಜವಾಬ್ದಾರಿ ನನ್ನ ಮೇಲಿರುತ್ತದೆ. ಹಾಗೆಂದು ಪಕ್ಷದ ಆಸ್ತಿಯೆಲ್ಲ ನನ್ನದು ಎಂದು ಹೇಳಲು ಸಾಧ್ಯವೇ? ನೆಹರೂ ಅವರ ಕಾಲದಿಂದಲೂ ಕಾಂಗ್ರೆಸ್ ಪಕ್ಷದ ಆಚಾರ, ವಿಚಾರಗಳನ್ನು ಜನರಿಗೆ ತಿಳಿಸಿಕೊಂಡು ಬರುವ ಈ ಮಾಧ್ಯಮ ಸಂಸ್ಥೆಯ ಒಡೆತನವನ್ನು ಕಾಂಗ್ರೆಸ್ ಪಕ್ಷವೇ ಹೊಂದಿದೆ ಎಂದರು.

ಖಾಸಗಿ ಕಂಪನಿಗಳೇ ಬೇರೆ, ಚಾರಿಟಬಲ್ ಟ್ರಸ್ಟ್‌ಗಳ ವತಿಯಿಂದ ನಡೆಯುವ ಸಂಸ್ಥೆಗಳೇ ಬೇರೆ. ಟ್ರಸ್ಟ್‌ಗಳ ವತಿಯಿಂದ ನಡೆಯುವ ಸಂಸ್ಥೆಗಳ ಜವಾಬ್ದಾರಿ ಆ ಟ್ರಸ್ಟ್ ನ ಮುಖ್ಯಸ್ಥರು ಬದಲಾದಂತೆ ಬದಲಾಗುತ್ತದೆ. ಈ ಹಿಂದೆ ಈ ಸಂಸ್ಥೆಗಾಗಿ ಖರೀದಿಸಿದ್ದ ಆಸ್ತಿಯ ಮೌಲ್ಯ ಇಂದು ಹೆಚ್ಚಾಗಿದೆ. ಬಂಗಾರಪ್ಪ ಅವರ ಕಾಲದಲ್ಲಿ ನನಗೆ ಒಂದು ಲಕ್ಷ ರೂ. ಮೊತ್ತಕ್ಕೆ ಒಂದು ನಿವೇಶನ ನೀಡಿದ್ದರು. ಈಗ ಅದರ ಮೌಲ್ಯ ನಾಲ್ಕರಿಂದ ಐದು ಕೋಟಿಗೆ ಏರಿಕೆಯಾಗಿದೆ. ಹೀಗೆ ನ್ಯಾಷನಲ್ ಹೆರಾಲ್ಡ್ ಸಂಸ್ಥೆ ಆಸ್ತಿಯ ಮೌಲ್ಯ ದಿನೇದಿನೆ ಏರಿಕೆಯಾಗಿದೆ. ಈ ಆಸ್ತಿಯನ್ನು ಗುಳುಂ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬ ಸುಳ್ಳು ಆರೋಪ ಮಾಡಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ | ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಇ.ಡಿ. ಕಿರುಕುಳ ವಿರೋಧಿಸಿ ಪ್ರತಿಭಟನೆ: ಡಿ ಕೆ ಶಿವಕುಮಾರ್

Exit mobile version