ಮಂಡ್ಯ: “ನಿಗದಿಯಾದ ಕಟ್ಟಡವನ್ನಷ್ಟೇ ಒಡೆಯಬೇಕು, ಒಂದಿಂಚು ಜಾಸ್ತಿ ಕೆಡವಿದರೂ ನಾನು ನಿನಗೆ ಕಲ್ಲಿನಲ್ಲಿ ಹೊಡೆಯುತ್ತೇನೆ…”. ಇದು ಬೆಂಗಳೂರು-ಮೈಸೂರು ದಶಪಥ (National Highway) ರಸ್ತೆ ಕಾಮಗಾರಿಯಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಹಿನ್ನೆಲೆಯಲ್ಲಿ ಮನೆ ಕೆಡವಲು ಬಂದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಮನೆ ಮಾಲೀಕರೊಬ್ಬರು ಕೊಟ್ಟ ಎಚ್ಚರಿಕೆ.
ಮಂಡ್ಯ ತಾಲೂಕಿನ ಇಂಡುವಾಳು ಗ್ರಾಮದಲ್ಲಿ ಸೋಮವಾರ (ಅ.31) ರಸ್ತೆ ಕಾಮಗಾರಿಗಾಗಿ ಮನೆಗಳ ತೆರವಿಗೆ ಅಧಿಕಾರಿಗಳು ಮುಂದಾದರು. ಈ ವೇಳೆ ಜೆಸಿಬಿ ಗರ್ಜಿಸಲು ಮುಂದಾಗುತ್ತಿದ್ದಂತೆ, ಮನೆ ಮಾಲೀಕ ರಾಜೇಗೌಡ ಎಂಬುವವರು ಕಲ್ಲು ತೋರಿಸಿ, ನನ್ನ ಮನೆ ಒಂದಿಂಚು ಜಾಸ್ತಿ ಒಡೆದರೂ, ಕಲ್ಲಿನಲ್ಲಿ ಹೊಡೆಯುತ್ತೇನೆ. ನಿಗದಿಯಾದಷ್ಟೇ ಕಟ್ಟಡವನ್ನು ಒಡೆಯಬೇಕೆಂದು ಎಚ್ಚರಿಕೆ ನೀಡಿದರು.
ಪೊಲೀಸರನ್ನು ಮುಂದೆ ಬಿಟ್ಟು ಅಕ್ರಮವಾಗಿ ಮನೆ ತೆರವು
ಸೋಮವಾರ ಜೆಸಿಬಿ ಗರ್ಜಿಸಲು ಮುಂದಾಗುತ್ತಿದ್ದಂತೆ ಗ್ರಾಮಸ್ಥರು ಆಕ್ರೋಶ ಹೊರಹಾಕಿದರು. ಗ್ರಾಮದಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಪರಿಹಾರ ನೀಡಿದ್ದು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಾರತಮ್ಯ ಎಸಗಿದ್ದಾರೆಂದು ಆರೋಪ ಮಾಡಿದರು. ಪೊಲೀಸರನ್ನು ಮುಂದೆ ಬಿಟ್ಟು ಅಕ್ರಮವಾಗಿ ರೈತರ ಮನೆಯನ್ನು ಒಡೆಸಿ ಹಾಕುತ್ತಿದ್ದಾರೆಂದು ಹೆದ್ದಾರಿ ಪ್ರಾಧಿಕಾರದ ವಿರುದ್ಧ ಮನೆ ಮಾಲೀಕರು ಅಸಮಾಧಾನ ಹೊರಹಾಕಿದರು. ಈ ವೇಳೆ ಮನೆ ಮಾಲೀಕರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.
ಕಡಿಮೆ ಹಣ ಬರಬೇಕಾದ ನಿವೇಶನದವರಿಗೆ ಹೆಚ್ಚು ಪರಿಹಾರ ನೀಡಲಾಗಿದೆ. ಹೆಚ್ಚು ಪರಿಹಾರ ನೀಡಬೇಕಾದವರಿಗೆ ಕಡಿಮೆ ಪರಿಹಾರ ಹಣ ನೀಡುತ್ತಿದ್ದಾರೆಂದು ಸ್ಥಳೀಯರು ಕಿಡಿಕಾಡಿದರು. ಈ ವೇಳೆ ತೆರವಿಗೆ ಬಂದ ಅಧಿಕಾರಿಗಳನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.
ಇಂಡುವಾಳು ಗ್ರಾಮದಲ್ಲಿ ಮನೆ ಕಳೆದುಕೊಂಡಿರುವ ರಾಜೇಗೌಡ ಎಂಬುವವರು ಮಾತನಾಡಿ, ಬೆಂಗಳೂರು- ಮೈಸೂರು ಹೆದ್ದಾರಿಗಾಗಿ ನಿವೇಶನ, ಮನೆಗಳನ್ನು ತೆರವು ಮಾಡಿಸಿದ್ದರು. ಕೇವಲ ಕಟ್ಟಡದ 30 ಮೀಟರ್ ಅಳತೆಗೆ ಮಾತ್ರ ಪರಿಹಾರ ಕೊಟ್ಟಿದ್ದಾರೆ. ಹೆದ್ದಾರಿಗಾಗಿ ಮೂರು ಕಡೆ ನನ್ನ ಆಸ್ತಿ ಭೂ-ಸ್ವಾಧೀನ ಮಾಡಿಕೊಂಡಿದ್ದಾರೆ. ಈ ಪೈಕಿ ನನಗೆ ಕೇವಲ 50 ಲಕ್ಷ ರೂಪಾಯಿ ಪರಿಹಾರ ಕೊಟ್ಟಿದ್ದು, ಬಾಕಿ ಪರಿಹಾರದ ಹಣವನ್ನು ಉಳಿಸಿಕೊಂಡಿದ್ದಾರೆ. ಮೂರು ಕಡೆಯಿಂದ ನನಗೆ 3 ಕೋಟಿ ರೂಪಾಯಿಗೂ ಅಧಿಕ ಪರಿಹಾರದ ಹಣ ಬರಬೇಕು. ಆದರೆ, ನೀಡಿಲ್ಲ ಎಂದು ಆರೋಪಿಸಿದರು.
ಪರಿಹಾರದ ಹಣ ನೀಡುವಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಕ್ರಮವನ್ನು ಅನುಸರಿಸಲಾಗಿದೆ. ಪ್ರಭಾವಿಗಳಿಗೆ ಒಂದು ರೀತಿಯಾದರೆ ನಮ್ಮಂತಹವರಿಗೆ ಒಂದು ರೀತಿಯ ಪರಿಹಾರ ನೀಡಲಾಗಿದೆ. ಈ ಸಂಬಂಧ ಅರ್ಜಿ ಹಾಕಿ ಏಳು ವರ್ಷ ಆಗಿದೆ. ಶಾಸಕರು ಸಭೆ ಕರೆದು ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಹೇಳಿದರು. ಇವರು ಬಲವಂತವಾಗಿ ಮನೆಯನ್ನು ಒಡೆದು ಹಾಕುತ್ತಿದ್ದಾರೆ ಎಂದು ರಾಜೇಗೌಡ ಆರೋಪಿಸಿದರು.
ಇದನ್ನೂ ಓದಿ | Channapatna doll | ದಶಪಥ ಹೆದ್ದಾರಿಯ ವೇಗದೊಳಗೆ ಕಳೆದು ಹೋಗುತ್ತಿರುವ ಚನ್ನಪಟ್ಟಣದ ಬೊಂಬೆ!