ಬೆಂಗಳೂರು: ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಈ ಕುರಿತು ನವದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೇಖಾವತ್ ಭರವಸೆ ನೀಡಿದ್ದಾರೆ ಎಂದು ರಾಜ್ಯ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಅವರು, ಈ ಪ್ರಸ್ತಾವನೆಗೆ ಅನುಮೋದನೆ ದೊರೆತರೆ ಭದ್ರಾ ಮೇಲ್ದಂಡೆ ಯೋಜನೆ ಕರ್ನಾಟಕದ ಮೊದಲ ರಾಷ್ಟ್ರೀಯ ಯೋಜನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ನವದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿವಿಧ ಹಂತಗಳಲ್ಲಿ ಬಾಕಿ ಇರುವ ರಾಜ್ಯದ ಪ್ರಸ್ತಾವನೆಗಳನ್ನು ಅನುಮೋದಿಸಲು, ಮಂಜೂರಾತಿ ಪಡೆಯಲು ಸಂಬಂಧಿಸಿದ ಕೇಂದ್ರ ಸಚಿವರಾದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರೊಂದಿಗೆ ಚರ್ಚಿಸಿ ಮನವರಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ಭದ್ರಾ ಮೇಲ್ದಂಡೆ ಯೋಜನೆಯು ಬೃಹತ್ ನೀರಾವರಿ ಯೋಜನೆಯಾಗಿದ್ದು, 29.90 ಟಿಎಂಸಿ ನೀರಿನ ಬಳಕೆಯೊಂದಿಗೆ (ತುಂಗಾ ನದಿಯಿಂದ 17.40 ಟಿಎಂಸಿ ಮತ್ತು ಭದ್ರಾ ಜಲಾಶಯದಿಂದ 12.50 ಟಿಎಂಸಿ ) ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಹಾಗೂ ದಾವಣಗೆರೆ ಜಿಲ್ಲೆಗಳ 2,25,515 ಹೆಕ್ಟೇರ್ (5,57,022 ಎಕರೆ ) ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಮೂಲಕ ನೀರಾವರಿ ಸೌಲಭ್ಯವನ್ನು ಕಲ್ಪಿಸಲು ಹಾಗೂ ಈ ಜಿಲ್ಲೆಗಳ 367 ಕೆರೆಗಳನ್ನು ಅವುಗಳ ಸಾಮರ್ಥ್ಯದ ಶೇ.50 ತುಂಬಿಸುವ ಯೋಜನೆಯಾಗಿದೆ.
ಭದ್ರಾ ಮೇಲ್ದಂಡೆ ಯೋಜನೆಯು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಲು ಎಲ್ಲ ಅರ್ಹತೆ ಹೊಂದಿದ್ದು, ಈಗಾಗಲೇ ಅವಶ್ಯವಿರುವ ಎಲ್ಲ ಪೂರಕ ಅನುಮೋದನೆಗಳನ್ನು ಕೇಂದ್ರ ಜಲ ಆಯೋಗ ಮತ್ತು ಕೇಂದ್ರ ಸರ್ಕಾರದ ವಿವಿಧ ನಿರ್ದೇಶನಾಲಯಗಳಿಂದ ಪಡೆದುಕೊಂಡಿರುತ್ತದೆ. ಕೇಂದ್ರದ ಜಲಶಕ್ತಿ ಮಂತ್ರಾಲಯ ಫೆಬ್ರವರಿ 15, 2020 ರಂದು ನಡೆದ 14ನೇ ಉನ್ನತಾಧಿಕಾರ ಸಮಿತಿಯ ಸಭೆಯಲ್ಲಿ(14th High powered steering committee)ಸದರಿ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಪರಿಗಣಿಸಲು ಕೇಂದ್ರ ಸಚಿವ ಸಂಪುಟಕ್ಕೆ ಶಿಫಾರಸು ಮಾಡಿದೆ.
ಸದರಿ ಯೋಜನೆಗೆ ತಗಲುವ ಒಟ್ಟಾರೆ ವೆಚ್ಚವು 21,473.67 ಕೋಟಿ ರೂಪಾಯಿಗಳಾಗಿದ್ದು, ರಾಷ್ಟ್ರೀಯ ಯೋಜನೆಯಾಗಿ ಪರಿಗಣಿತವಾದ ನಂತರ ಕೇಂದ್ರ ಸರ್ಕಾರ ಈ ಯೋಜನೆಗೆ ರೂ 16125.48 (ಸೂಕ್ಷ್ಮ ನೀರಾವರಿ ಹೊರತುಪಡಿಸಿ) ಕೋಟಿ ರೂಪಾಯಿ ವೆಚ್ಚದಲ್ಲಿ ಶೇ. 60 ಅಂದರೆ 9675.29 ಕೋಟಿ ರೂ.ಗಳನ್ನು ಭರಿಸಲಿದೆ.
ಇನ್ನು ಮಹದಾಯಿ ಯೋಜನೆಯ ಕುರಿತು ಕೇಂದ್ರ ಜಲಸಂಪನ್ಮೂಲ ಸಚಿವ ಗಜೆಂದ್ರ ಸಿಂಗ್ ಶೇಖಾವತ್ ಅವರಿಗೆ ವಿಶೇಷ ಮನವಿ ಸಲ್ಲಿಸಲಾಯಿತು. ಕೇಂದ್ರ ಜಲಸಂಪನ್ಮೂಲ ಸಚಿವರು ಮಹಾದಾಯಿ ಯೋಜನೆಗೆ ಅನುಮೋದನೆ ನೀಡುವ ಕುರಿತು ಸಕಾರಾತ್ಮಕ ಪ್ರತಿಕ್ರಿಯೆ ನೀಡಿ, ಅಧಿಕಾರಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಿದ್ದಾರೆ.
ಹಾಗೆಯೇ ಮೇಕೆದಾಟು ಯೋಜನೆ ಕುರಿತು ವಿವರವಾಗಿ ಪ್ರಸ್ತಾಪಿಸಲಾಯಿತು. ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ(ಜೂನ್ 17 ಮತ್ತು 23, 2022) ಚರ್ಚೆಯಾಗಲಿದೆ. ಅದೇ ರೀತಿ ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಕಾಮಗಾರಿಗಳಿಗೆ 13 ಸಾವಿರ ಕೋಟಿ ರೂ.ಗಳನ್ನು ಈಗಾಗಲೇ ವೆಚ್ಚ ಮಾಡಲಾಗಿದ್ದು, ಕೇಂದ್ರ ಸರ್ಕಾರದ ಅಧಿಕೃತ ಗೆಜೆಟ್‌ನಲ್ಲಿ ಕೃಷ್ಣಾ ಜಲ ವಿವಾದ ಎರಡನೇ ನ್ಯಾಯಾಧೀಕರಣದ ಐತೀರ್ಪನ್ನು ಗೆಜೆಟ್‌ನಲ್ಲಿ ಪ್ರಕಟಿಸುವ ಮೂಲಕ ಕರ್ನಾಟಕದ ಈ ಪ್ರತಿಷ್ಠಿತ ಯೋಜನೆಗೆ ನ್ಯಾಯ ಒದಗಿಸಬೇಕೆಂದು ವಿನಂತಿಸಲಾಯಿತು. ಕೇಂದ್ರ ಸರ್ಕಾರ ಕರ್ನಾಟಕದ ಎಲ್ಲ ಮನವಿಗಳನ್ನು ಪುರಸ್ಕರಿಸಿ ಕರ್ನಾಟಕಕ್ಕೆ ಅನುಕೂಲವಾಗುವ ರೀತಿಯಲ್ಲಿ ನಿರ್ಣಯಗಳನ್ನು ಕೈಗೊಳ್ಳಲಿದೆ ಎಂಬ ವಿಶ್ವಾಸವಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ | ಮಲಿನಗೊಂಡ ತುಂಗಭದ್ರಾ: ಅಕ್ಷರಶಃ ಚರಂಡಿಯಂತಾದ ಪವಿತ್ರ ಜಲ
ಏನಿದು ಯೋಜನೆ: ವಾಣಿ ವಿಲಾಸ ಸಾಗರ ಜಲಾಶಯ ಶತಮಾನದ ಹಿಂದೆ ನಿರ್ಮಾಣವಾದರೂ ಚಿತ್ರದುರ್ಗ ಜಿಲ್ಲೆ ಬರದ ಹಣೆಪಟ್ಟಿಯಿಂದ ಹೊರಬರಲು ಸಾಧ್ಯವಾಗಿಲ್ಲ. ಬದಲಾದ ಹವಾಮಾನ, ಕಾಲಕಾಲಕ್ಕೆ ಸರಿಯಾಗಿ ಮಳೆ ಆಗದಿರುವುದರಿಂದ ವಾಣಿ ವಿಲಾಸ ಸಾಗರ ಡ್ಯಾಂ ಭರ್ತಿಯಾಗಿದ್ದು ವಿರಳ. ಮಳೆಯಾಶ್ರಿತ ಕೃಷಿಯನ್ನೇ ನಂಬಿಕೊಂಡ ರೈತರ ಬದುಕು ತೀರ ದುರ್ಬರವೆಂಬುವುದು ಸರ್ಕಾರಕ್ಕೆ ಮನವರಿಕೆಯಾದ ಬಳಿಕ ರೂಪುಗೊಂಡ ಯೋಜನೆಯೇ ʼಭದ್ರಾ ಮೇಲ್ದಂಡೆʼ ಯೋಜನೆʼ.
ಚಿಕ್ಕಮಗಳೂರು-ಶಿವಮೊಗ್ಗ ಜಿಲ್ಲೆಯಲ್ಲಿರುವ ಭದ್ರಾ ಜಲಾಶಯದಿಂದ ಮಧ್ಯ ಕರ್ನಾಟಕಕ್ಕೆ ನೀರುಣಿಸುವುದೇ ಭದ್ರಾ ಯೋಜನೆಯ ಉದ್ದೇಶ. ವರ್ಷಕ್ಕೆ 29.9 ಟಿಎಂಸಿ ನೀರನ್ನು ಮೇಲ್ದಂಡೆಗೆ ಮೀಸಲಿಟ್ಟು ಯೋಜನೆ ರೂಪಿಸಲಾಗಿದೆ. ಹೆಸರು ಭದ್ರಾ ಮೇಲ್ದಂಡೆಯಾದರೂ ತುಂಗಾ ನದಿಯ ಪಾಲು ಹೆಚ್ಚಿದೆ. ಶಿವಮೊಗ್ಗ ಜಿಲ್ಲೆಯ ಗಾಜನೂರು ಸಮೀಪದ ತುಂಗಾ ಜಲಾಶಯದ ನೀರನ್ನು ತರೀಕೆರೆ ಲಕ್ಕವಳ್ಳಿ ಸಮೀಪದ ಭದ್ರಾ ಜಲಾಶಯಕ್ಕೆ ಹರಿಸಲಾಗುತ್ತದೆ. ಪ್ರತಿ ವರ್ಷ ಜೂನ್‌ನಿಂದ 17.4 ಟಿಎಂಸಿ ನೀರನ್ನು ಮೇಲೆತ್ತಿ ಭದ್ರಾ ಜಲಾಶಯಕ್ಕೆ ತರುವ ಕೆಲಸ ಯೋಜನೆಯ ಭಾಗವಾಗಿದೆ. ಈ ಜಲಾಶಯದಿಂದ ಭದ್ರಾ ಮೇಲ್ದಂಡೆ ಯೋಜನೆಗೆ 12.5 ಟಿಎಂಸಿ ನೀರನ್ನು ಭದ್ರಾ ಮೇಲ್ದಂಡೆಗೆ ಹರಿಸಲಾಗುತ್ತದೆ. ಇದರಿಂದ ಚಿತ್ರದುರ್ಗ, ಚಿಕ್ಕಮಗಳೂರು, ತುಮಕೂರು ಹಾಗೂ ದಾವಣಗೆರೆ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದು ಇದರ ಉದ್ದೇಶವಾಗಿದೆ.
ರಾಷ್ಟ್ರೀಯ ಮಾನ್ಯತೆಯ ಪ್ರಯೋಜನೆಗಳೇನು?
1.ಭದ್ರಾ ಮೇಲ್ದಂಡೆಗೆ ಸಂಬಂಧಿಸಿದ ಅಂತಾರಾಜ್ಯ ನೀರು ಹಂಚಿಕೆಯ ವಿವಾದಕ್ಕೆ ತೆರೆ ಬೀಳಲಿದೆ.
2.ನೀರಾವರಿ ಯೋಜನೆಯ ಒಟ್ಟು ವೆಚ್ಚದ ಶೇ.60 ಕೇಂದ್ರ ಸರ್ಕಾರ ಭರಿಸಲಿದೆ.
3.ಯೋಜನಾ ವೆಚ್ಚದ 21,000 ಕೋಟಿ ರೂ.ಗಳಲ್ಲಿ ಕೇಂದ್ರ ಸರ್ಕಾರ 12,000 ಕೋಟಿ ರೂ.ಗಳು ನೀಡಲಿದೆ. 4.ಯೋಜನೆಯ ಅನುಷ್ಠಾನಕ್ಕೆ ಕಾಲಮಿತಿ ನಿಗದಿಯಾಗಲಿದ್ದು, ಕಾಮಗಾರಿ ವೇಗ ಪಡೆಯಲಿದೆ.
5.ರಾಜ್ಯ ಸರ್ಕಾರದ ಮೇಲಿನ ಆರ್ಥಿಕ ಹೊರೆ ಕಡಿಮೆಯಾಗಲಿದ್ದು, ಕಾಮಗಾರಿಯ ವೇಗಕ್ಕೆ ಅನುಗುಣವಾಗಿ ಅನುದಾನ ಬಿಡುಗಡೆಯಾಗಲಿದೆ.
ಇದನ್ನೂ ಓದಿ | ಬೇಡ್ತಿ ವರದಾ ನದಿ ಕುರಿತು ಹೋರಾಟದ ಎಚ್ಚರಿಕೆ ನೀಡಿದ ಸೋಮಶೇಖರ ಕೋತಂಬರಿ