Site icon Vistara News

National Youth Festival | ಡಿಜಿಟಲ್‌ ಪೇಮೆಂಟ್‌ ಅಸಾಧ್ಯ ಎಂದರು; ಈಗ ನಾವೇ ನಂ.1: ಎದುರಾಳಿಗಳಿಗೆ ಮೋದಿ ತಿರುಗೇಟು

PM Narendra Modi

ಹುಬ್ಬಳ್ಳಿ: ಯಾರು ಎಷ್ಟೇ ಅಪಹಾಸ್ಯ ಮಾಡಿದರೂ ಯುವಕರು ತಾವಿಟ್ಟ ಗುರಿಯಿಂದ ವಿಚಲಿತರಾಗಬಾರದು ಎಂದು ಕರೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ಡಿಜಿಟಲ್‌ ಪಾವತಿ ಹಾಗೂ ಕೋವಿಡ್‌ ಲಸಿಕೆಯನ್ನು ಅಪಹಾಸ್ಯ ಮಾಡಿದವರಿಗೆ ತಿರುಗೇಟು ನೀಡಿದರು. ಉತ್ತರ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಿರುವ 26ನೇ ರಾಷ್ಟ್ರೀಯ ಯುವ ಜನೋತ್ಸವದಲ್ಲಿ (National Youth Festival) ಭಾಗವಹಿಸಿ, ನೆರೆದಿದ್ದ ಅಪಾರ ಯುವ ಸಮೂಹವನ್ನುದ್ದೇಶಿಸಿ ಮಾತನಾಡಿದರು.

ನಾರಿ ಶಕ್ತಿಯು ಎಂದಿಗೂ ರಾಷ್ಟ್ರ ಶಕ್ತಿಗೆ ಪ್ರೇರಣೆ ನೀಡಿದೆ. ಈ ಅಮೃತ ಕಾಲದಲ್ಲಿ ನಮ್ಮ ದೇಶದ ಹೆಣ್ಣು ಮಕ್ಕಳು ಹೊಸ ಪರಾಕ್ರಮ ತೋರುತ್ತಿದ್ದಾರೆ. ಜೆಟ್‌ ವಿಮಾನಗಳನ್ನು ಚಲಾಯಿಸುತ್ತಿದ್ದಾರೆ, ವಿಜ್ಞಾನ, ತಂತ್ರಜ್ಞಾನ ಸೇರಿ ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಭಾರತವು ತನ್ನ ಪೂರ್ಣ ಶಕ್ತಿಯ ಮೂಲಕ ಗುರಿಯೆಡೆಗೆ ಸಾಗುತ್ತಿದೆ. 21ನೇ ಶತಮಾನವನ್ನು ಭಾರತದ ಶತಮಾನವನ್ನಾಗಿ ಮಾಡಬೇಕು.

ನಾವು ವರ್ತಮಾನದಿಂದ ಹತ್ತು ಹೆಜ್ಜೆ ಮುಂದೆ ಯೋಚನೆ ಮಾಡಬೇಕು. ಯುವಕರ ಮುಂದಾಲೋಚನೆಯ ಮೂಲಕವೇ ಧನಾತ್ಮಕ ಬದಲಾವಣೆಗಳನ್ನು ತರಬೇಕು. ಇಂದು ನಮ್ಮ ಮುಂದಿರುವ ಅನೇಕ ವಿಚಾರಗಳು ಹತ್ತಿಪ್ಪತ್ತು ವರ್ಷಗಳ ಹಿಂದೆ ನಮಗೆ ತಿಳಿದೇ ಇರಲಿಲ್ಲ. ಈ ದಶಕ ಮುಗಿಯವ ವೇಳೆಗೆ ನಮ್ಮ ವಿಶ್ವವೇ ಬದಲಾಗುತ್ತದೆ. ಕೃತಕ ಬುದ್ಧಿಮತ್ತೆ, ಎಆರ್‌-ವಿಆರ್‌ ತಂತ್ರಜ್ಞಾನಗಳು, ದತ್ತಾಂಶ ವಿಜ್ಞಾನ, ಸೈಬರ್‌ ಭದ್ರತೆ ವಿಷಾರಗಳು ನಮ್ಮೆಲ್ಲ ಜೀವನದಲ್ಲಿ ಹೆಚ್ಚು ಜೋಡಿಸಿಕೊಂಡಿರುತ್ತದೆ.

ಇಂದು ಅಸ್ತಿತ್ವದಲ್ಲೇ ಇಲ್ಲದ ಅನೇಕ ಉದ್ಯೋಗಗಳು ಭವಿಷ್ಯದಲ್ಲಿ ಪ್ರಮುಖ ಉದ್ಯೋಗವಾಗಲಿವೆ. ಯುವಕರು ಭವಿಷ್ಯದ ಉದ್ಯೋಗಕ್ಕೆ ಸಿದ್ಧವಾಗಬೇಕು. ಯಾರೂ ಮಾಡದ ಕೆಲಸವನ್ನೂ ನಾವು ಮಾಡಬೇಕಾಗುತ್ತದೆ. ಈ ಮನಃಸ್ಥಿತಿಯನ್ನು ಯುವಕರು ಮೂಡಿಸಿಕೊಳ್ಳಬೇಕು ಎಂದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಲಾಗುತ್ತಿದೆ. ಶಾಲಾ ಮಟ್ಟದಿಂದಲೇ ಸಂಶೋಧನೆ ಹಾಗೂ ಕೌಶಲ್ಯಕ್ಕೆ ಒತ್ತು ನೀಡಲಾಗುತ್ತಿದೆ. ಆಯ್ಕೆಗಳ ಮೂಲಕ ಮುನ್ನಡೆಯುವ ಸ್ವಾತಂತ್ರ್ಯ ಈ ಶಿಕ್ಷಣ ವ್ಯವಸ್ಥೆಯಲ್ಲಿದೆ. ಭವಿಷ್ಯಕ್ಕೆ ಸಿದ್ಧವಾದ ಯುವಕರನ್ನು ನಾವು ರೂಪಿಸುತ್ತಿದ್ದೇವೆ.

ಸಂಸ್ಥೆಗಳು ಹಾಗೂ ಸಂಶೋಧನೆಗಳ ಕುರಿತು ನಾವು ಅಭಿವೃದ್ಧಿಯತ್ತ ಗಮನ ನೀಡಬೇಕು. ನಾವು ತಂಡವಾಗಿ ಕೆಲಸ ಮಾಡಿದಾಗ ಸಂಸ್ಥೆಯು ನಿರ್ಮಾಣ ಆಗುತ್ತದೆ. ಯುವಕರು ತಮ್ಮ ವೈಯಕ್ತಿಕ ಸಫಲತೆಯನ್ನು ತಂಡವಾಗಿಯೂ ಕೊಂಡೊಯ್ಯಬೇಕು. ಸಂಶೋಧನೆಗಳ ಕುರಿತು ಆಲೋಚಿಸಬೇಕು. ದೇಶದಲ್ಲಿ ಡಿಜಿಟಲ್‌ ಪೇಮೆಂಟ್‌, ಸ್ವಚ್ಛ ಭಾರತ್‌, ಜನಧನ ಖಾತೆ, ಸ್ವದೇಶಿ ಲಸಿಕೆ ತಂದಾಗ ಅನೇಕರು ಅಪಹಾಸ್ಯ ಮಾಡಿದರು. ಭಾರತದಲ್ಲಿ ಡಿಜಿಟಲ್‌ ಆರ್ಥಿಕತೆ ಸಫಲವಾಗದು ಎಂದರು. ಈ ಲಸಿಕೆ ಕೆಲಸ ಮಾಡುತ್ತದೆಯೇ ಎಂದು ಅನುಮಾನಿಸಿದರು. ಆದರೆ ಇಂದು ಡಿಜಿಟಲ್‌ ಆರ್ಥಿಕತೆಯಲ್ಲಿ ಭಾರತವೇ ಮುಂಚೂಣಿಯಲ್ಲಿದೆ. ನಿಮ್ಮ ಆಲೋಚನೆಯ ಮೇಲೆ ವಿಶ್ವಾಸ ಇದ್ದರೆ ಅದಕ್ಕೆ ಬದ್ಧವಾಗಿರಿ. ನಿಮ್ಮನ್ನು ಅಪಹಾಸ್ಯ ಮಾಡುವವರನ್ನು ಅದು ಮೆಟ್ಟಿ ನಿಲ್ಲುತ್ತದೆ ಎಂದು ಯುವಕರಿಗೆ ಕರೆ ನೀಡಿದರು.

ಈ ಯುವಜನೋತ್ಸವದಲ್ಲಿ ಅನೇಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಇಲ್ಲಿ ಯಾರು ಗೆದ್ದರು ಎನ್ನುವುದು ಮಹತ್ವವಲ್ಲ. ಯಾರೇ ಗೆದ್ದರೂ ಭಾರತವೇ ಗೆಲ್ಲುತ್ತದೆ. ಎಲ್ಲ ಯುವಕರ ಸಾಮರ್ಥ್ಯ ಇಲ್ಲಿ ಹೊರಹೊಮ್ಮುತ್ತದೆ. ಪರಸ್ಪರ ಸ್ಪರ್ಧೆ ಮೂಲಕ ಸಹಕಾರ ಭಾವದಲ್ಲಿಯೂ ಕಾರ್ಯನಿರ್ವಹಿಸಬೇಕು. ನಮ್ಮ ಪ್ರತಿ ಗುರಿಯಲ್ಲೂ, ಇದರಿಂದ ದೇಶಕ್ಕೆ ಏನು ಲಾಭ ಎಂದು ಆಲೋಚಿಸಬೇಕು. ದೇಶವನ್ನು ಅಭಿವೃದ್ಧಿಯ ಗುರಿ ಮುಟ್ಟಿಸುವವರೆಗೆ ನಾವು ವಿರಮಿಸಬಾರದು. ಪ್ರತಿ ಯುವಕರೂ ಈ ಹೊಣೆಯನ್ನು ಹೊರುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಇದನ್ನೂ ಓದಿ | National Youth Festival | ಯುವಶಕ್ತಿಯೇ ಭಾರತದ ಪಯಣದ ಚಾಲಕ ಶಕ್ತಿ: ಪ್ರಧಾನಿ ನರೇಂದ್ರ ಮೋದಿ ಬಣ್ಣನೆ

Exit mobile version