ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ 292 ಸ್ಥಾನಗಳನ್ನು ಪಡೆದುಕೊಳ್ಳುವ ಮೂಲಕ ಬಿಜೆಪಿ ನೇತೃತ್ವದ ಎನ್‌ಡಿಎ (National Democratic Alliance) ಸತತ ಮೂರನೇ ಬಾರಿಗೆ ಅಧಿಕಾರದ ಗದ್ದುಗೆಗೆ ಏರಿದೆ. ಈಗಾಗಲೇ ಎನ್‌ಡಿಎ ಮಿತ್ರಪಕ್ಷಗಳು ಬೆಂಬಲ ಸೂಚಿಸಿದ್ದು, ಸರ್ಕಾರ ರಚನೆಗೆ ಸಿದ್ಧತೆ ಆರಂಭಿಸಿವೆ (NDA 3.0). ನಾಳೆ (ಜೂನ್ 9) ಮೂರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಮಧ್ಯೆ ಕರ್ನಾಟಕದಿಂದ ಯಾರಿಗೆ ಕೇಂದ್ರ ಸಚಿವ ಸ್ಥಾನದ ಭಾಗ್ಯ ಒಲಿಯಲಿದೆ ಎಂಬ ಚರ್ಚೆ ಜೋರಾಗಿದೆ.
ಮಂಡ್ಯ ಲೋಕಸಭಾ ಕ್ಷೇತ್ರದಿಂದ ಜಯಗಳಿಸಿರುವ ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಕೇಂದ್ರ ಕ್ಯಾಬಿನೆಟ್ ಮಂತ್ರಿ ಹುದ್ದೆ ಬಹುತೇಕ ಖಚಿತಗೊಂಡಿದೆ ಎನ್ನಲಾಗಿದ್ದು, ಬಿಜೆಪಿಯಿಂದ ಯಾರಿಗೆ ಮಂತ್ರಿ ಸ್ಥಾನ ಸಿಗಲಿದೆ ಎಂಬ ಕುತೂಹಲ ಹೆಚ್ಚಿದೆ.
ಮೂವರಿಗೆ ಸಚಿವ ಸ್ಥಾನ?
ಕುಮಾರಸ್ವಾಮಿ ಸೇರಿದಂತೆ ಬಿಜೆಪಿಯ ಇಬ್ಬರು ಸಂಸದರಿಗೆ ಸಚಿವ ಸ್ಥಾನ ನೀಡಿದಲ್ಲಿ ರಾಜ್ಯದ ಮೂವರಿಗೆ ಮಂತ್ರಿ ಪಟ್ಟ ಸಿಕ್ಕಂತಾಗಲಿದೆ. ಈಗಿನ ಸನ್ನಿವೇಶದಲ್ಲಿ ಮೂರಕ್ಕಿಂತ ಹೆಚ್ಚು ಸಚಿವ ಸ್ಥಾನ ರಾಜ್ಯಕ್ಕೆ ಸಿಗುವುದು ಕಷ್ಟ ಎನ್ನುವ ಮಾತೂ ಕೇಳಿ ಬಂದಿದೆ. ಮುಂಬರುವ ಚುನಾವಣಾ ರಾಜ್ಯದ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಹೈ ಕಮಾಂಡ್, ಮಹಾರಾಷ್ಟ್ರ, ಹರಿಯಾಣ ಸಂಸದರಿಗೆ ಹೆಚ್ಚಿನ ಸಚಿವ ಸ್ಥಾನ ನೀಡಲು ಚಿಂತನೆ ನಡೆಸಿದೆ ಎನ್ನಲಾಗಿದೆ. ಜತೆಗೆ ಮಿತ್ರ ಪಕ್ಷಗಳಿಗೂ ಆದ್ಯತೆ ನೀಡಬೇಕಿದೆ.
ಪ್ರಲ್ಹಾದ್ ಜೋಶಿಗೆ ಮತ್ತೆ ಅವಕಾಶ?
ರಾಜ್ಯದಲ್ಲಿ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ, ದಲಿತ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಲು ಎನ್‌ಡಿಎ ಬಯಸಿದೆ ಎನ್ನಲಾಗಿದೆ. ಪ್ರಹ್ಲಾದ ಜೋಶಿ (Prahlad Joshi) ಅವರು ಎನ್‌ಡಿಎ ಮೂರನೆಯ ಅವಧಿಯಲ್ಲೂ ಸಚಿವರಾಗುವುದು ಬಹುತೇಕ ಖಚಿತವಾಗಿದೆ. ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ನಿರರ್ಗಳತೆ ಹೊಂದಿರುವ ಪ್ರಹ್ಲಾದ್ ಜೋಶಿ, ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಪ್ರಭಾವ ಹೊಂದಿದ್ದಾರೆ. ನಾಲ್ಕನೇ ಬಾರಿಗೆ ಹುಬ್ಬಳ್ಳಿ- ಧಾರವಾಡದ ಸಂಸದರಾಗಿ ಆಯ್ಕೆಯಾಗಿರುವ ಜೋಶಿ, ಬ್ರಾಹ್ಮಣ ಕೋಟಾವನ್ನು ತುಂಬಲಿದ್ದಾರೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಗೆದ್ದ ʼಹೃದಯವಂತʼ ಡಾಕ್ಟರ್ ಸಿ.ಎನ್. ಮಂಜುನಾಥ್ (Dr CN Manjunath) ಅವರೂ ಸಚಿವ ಸ್ಥಾನ ಪಡೆಯಬಲ್ಲವರ ಯಾದಿಯಲ್ಲಿ ಇದ್ದಾರೆ ಎನ್ನಲಾಗಿದೆ. ಮಂಜುನಾಥ್ ಅವರ ಹಿರಿತನ, ಆರೋಗ್ಯ ಕ್ಷೇತ್ರದ ಅನುಭವ ಸರಕಾರದಲ್ಲಿ ನೆರವಾಗಲಿದೆ ಎಂಬ ಮುಂದಾಲೋಚನೆ. ಜತೆಗೆ ಹಲವು ಬಾರಿಯ ಸಂಸದರಾಗಿರುವ, ಕಾಂಗ್ರೆಸ್‌ನ ಹೆಬ್ಬಂಡೆ ಡಿ.ಕೆ ಸುರೇಶ್ (DK Suresh) ಅವರನ್ನು ದೊಡ್ಡ ಅಂತರದಲ್ಲಿ ಸೋಲಿಸಿ ಮಣ್ಣು ಮುಕ್ಕಿಸಿ ಕಾಂಗ್ರೆಸ್‌ಗೆ ದೊಡ್ಡ ಹೊಡೆತ ನೀಡಿದ ಹೆಗ್ಗಳಿಕೆ ಜತೆಗಿದೆ.
ಸದ್ಯ ಕರ್ನಾಟಕಕ್ಕೆ 2+1+1 ಫಾರ್ಮುಲಾ ಅನುಸರಿಸಲು ಬಿಜೆಪಿ ಹೈ ಕಮಾಂಡ್ ಚಿಂತನೆ ಎನ್ನಲಾಗಿದ್ದು, ಬಿಜೆಪಿಯಿಂದ 2 ಸಚಿವರು, ಜೆಡಿಎಸ್‌ಗೆ 1 ಹಾಗೂ 1 ರಾಜ್ಯ ಸಚಿವರನ್ನಾಗಿ ಮಾಡಲೂ ಬಿಜೆಪಿ ಚಿಂತನೆ ನಡೆಸಿದೆ ಎನ್ನುವ ಮಾತೂ ಕೇಳಿ ಬಂದಿದೆ.
ಇದನ್ನೂ ಓದಿ: Shivamogga News: ಸೊರಬದಲ್ಲಿ ಆಡಳಿತ ಯಂತ್ರ ಸಂಪೂರ್ಣ ಸ್ಥಗಿತ ಆರೋಪ