Site icon Vistara News

NEET UG 2024: ವಿದ್ಯಾರ್ಥಿಗಳಿಗೆ ಅನ್ಯಾಯ; ನೀಟ್ ಮರು ಪರೀಕ್ಷೆ, ತನಿಖೆಗೆ ಸಿಎಂ ಆಗ್ರಹ

cm Siddaramaiah

ಮೈಸೂರು: ನೀಟ್ ಪರೀಕ್ಷೆಯಲ್ಲಿ ರ‍್ಯಾಂಕ್ ನೀಡುವುದರಲ್ಲಿ ಹಾಗೂ ನಿರಂತರ ಅಭ್ಯಾಸ ಮಾಡಿ ಬರೆದ ವಿದ್ಯಾರ್ಥಿಗಳಿಗೆ ದೊಡ್ಡ ಅನ್ಯಾಯವಾಗಿದೆ. ಈ ಬಗ್ಗೆ ತನಿಖೆಯಾಗಬೇಕು ಹಾಗೂ ಮರು ಪರೀಕ್ಷೆ (NEET UG 2024) ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೃಪಾಂಕ ಕೊಟ್ಟು ಉತ್ತೀರ್ಣ ಮಾಡುವುದು ಕೆಟ್ಟ ಅಭ್ಯಾಸ. ಎನ್‌ಟಿಎ ಪರೀಕ್ಷೆಯನ್ನು ಸರಿಯಾಗಿ ನಡೆಸದೇ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದು ತಿಳಿಸಿದರು.

ಬರ ಪರಿಹಾರದ ಬಗ್ಗೆ ಪ್ರತಿಕ್ರಿಯಿಸಿ, ಬರ ಪರಿಹಾರದ ಬಾಕಿ ಮೊತ್ತವನ್ನು ರೈತರಿಗೆ ವಿತರಿಸಲಾಗುತ್ತಿದೆ ಎಂದು ಉತ್ತರಿಸಿದರು.

ದಕ್ಷಿಣ ಭಾರತದಲ್ಲಿ ಜನ ಬಿಜೆಪಿಯನ್ನು ಬೆಂಬಲಿಸುವುದಿಲ್ಲ

ದಕ್ಷಿಣ ಭಾರತದ ಏಳು ಜನರು ಕೇಂದ್ರದಲ್ಲಿ ಸಚಿವರಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಏನು ಮಾಡಿದರೂ ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಜನ ಬೆಂಬಲಿಸುವುದಿಲ್ಲ. ಏಕೆಂದರೆ ಬಿಜೆಪಿಯು ಆರ್‌ಎಸ್‌ಎಸ್‌ನ ರಾಜಕೀಯ ಮುಖವಾಡ. ಹಾಗಾಗಿ ಉತ್ತರ ಭಾರತದಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಆರ್‌ಎಸ್‌ಎಸ್‌ನ ಮುಖ್ಯಸ್ಥರು ಅಹಂಕಾರಕ್ಕೆ ಜನ ಸರಿಯಾದ ಪಾಠ ಕಲಿಸಿದ್ದಾರೆ ಎಂದು ಹೇಳಿದ್ದಾರೆ ಎಂದರು.

ಅರುಂಧತಿ ರಾಯ್ ವಿರುದ್ಧ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿ, ಬಿಜೆಪಿಯದ್ದು ದ್ವೇಷದ ರಾಜಕಾರಣ. ಹೆದರಿಸುವುದು ಬೆದರಿಸುವುದು, ಇಡಿ, ಸಿಬಿಐ ಬಳಕೆ ಮಾಡುವುದನ್ನು ಮೊದಲಿನಿಂದಲೂ ಮಾಡಿಕೊಂಡು ಬರುತ್ತಿದ್ದಾರೆ. ಅದಕ್ಕಾಗಿ ಜನ ಈ ಬಾರಿ ಅವರಿಗೆ ಬಹುಮತ ಕೊಡಲಿಲ್ಲ ಎಂದರು.

ದ್ವೇಷದ ರಾಜಕಾರಣ ಬಿಜೆಪಿ ಕೆಲಸ

ದೇವೇಗೌಡರ ಕುಟುಂಬದ ನಂತರ ಯಡಿಯೂರಪ್ಪ ಅವರ ಕುಟುಂಬವನ್ನು ಗುರಿಮಾಡಲಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ನಮ್ಮ ಮೇಲೆ, ಡಿ.ಕೆ. ಶಿವಕುಮಾರ್, ರಾಹುಲ್ ಗಾಂಧಿ ಅವರ ಮೇಲೆ ಕೇಸು ಹಾಕಿರುವುದನ್ನು ಏನೆಂದು ಕರೆಯಬೇಕು. ರಾಹುಲ್ ಗಾಂಧಿ ಅವರ ಸಂಸದ ಸ್ಥಾನವನ್ನೇ ರದ್ದುಗೊಳಿಸಿದ್ದನ್ನು ಏನೆಂದು ಕರೆಯುವುದು ಎಂದು ಪ್ರಶ್ನಿಸಿದರು.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಜೈಲಿಗೆ ಕಲಿಸಿದ್ದನ್ನು ಏನೆಂದು ಕರೆಯಬೇಕು. ದ್ವೇಷದ ರಾಜಕಾರಣವೂ ಇಲ್ಲ, ಪ್ರೀತಿಯ ರಾಜಕಾರಣ ಎಂದು ಕರೆಯಬೇಕೋ. ಸೇಡಿನ ರಾಜಕಾರಣ ಮಾಡುವುದು ಅವರು, ನಾವು ಯಾವತ್ತೂ ಸೇಡಿನ ರಾಜಕಾರಣ ಮಾಡುವುದಿಲ್ಲ ಎಂದರು.

ದ್ವೇಷದ ರಾಜಕಾರಣವನ್ನು ಯಾರ ಮೇಲೂ ಮಾಡಿಲ್ಲ

ನಾನು ನಿನ್ನೆ ಮೊನ್ನೆ ರಾಜಕೀಯಕ್ಕೆ ಬಂದಿಲ್ಲ. ದ್ವೇಷದ ರಾಜಕಾರಣವನ್ನು ನಾನು ಇಂದಿನವರೆಗೆ ಯಾರ ಮೇಲೂ ಮಾಡಿಲ್ಲ. ಅದು ಬಿಜೆಪಿಯವರ ಕೆಲಸ ಎಂದರು.

ಎಸ್‌ಸಿ- ಎಸ್‌ಟಿ ವಿದ್ಯಾರ್ಥಿ ವೇತನದ ಸೀಲಿಂಗ್ ಬಗ್ಗೆ ಚರ್ಚೆ

ಎಸ್.ಸಿ.ಎಸ್.ಟಿ ಮೆರಿಟ್ ವಿದ್ಯಾರ್ಥಿ ವೇತನವನ್ನು ಶೇ. 60ರಿಂದ ಶೇ 75 ಕ್ಕೆ ಏರಿಸಿದ್ದು, 6 ಲಕ್ಷ ಸೀಲಿಂಗ್ ಲಿಮಿಟ್ ನಿಗದಿಪಡಿಸಿರುವುದರಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ ಎಂಬ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.

ಇದನ್ನೂ ಓದಿ | NEET UG 2024: ನೀಟ್ ಯುಜಿ ವಿವಾದದ ಬಗ್ಗೆ ಸಿಬಿಐ ತನಿಖೆಗೆ ಮನವಿ; ಕೇಂದ್ರ, ಎನ್‌ಟಿಎಗೆ ಸುಪ್ರೀಂ ಕೋರ್ಟ್‌ ನೋಟಿಸ್

ಎಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜಿನ ಶುಲ್ಕ ಶೇ.10%ರಷ್ಟು ಹೆಚ್ಚಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ಬಗ್ಗೆ ನನಗೆ ಗೊತ್ತಿಲ್ಲ ವಿಚಾರ ಮಾಡುವುದಾಗಿ ತಿಳಿಸಿದರು.

ಶೀಘ್ರದಲ್ಲೇ ಜಿ.ಪಂ, ತಾ.ಪಂ ಚುನಾವಣೆ

ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಗಳ ಚುನಾವಣೆ ಬಗ್ಗೆ ಪ್ರತಿಕ್ರಿಯೆ ನೀಡಿ, ಚುನಾವಣೆಯನ್ನು ಆದಷ್ಟೂ ಶೀಘ್ರದಲ್ಲಿ ಮಾಡುತ್ತೇವೆ ಎಂದರು.

Exit mobile version