ತುಮಕೂರು: ಇದೊಂದು ಘೋರ ಪ್ರಮಾದ. ಜೀವಗಳನ್ನು ಉಳಿಸಬೇಕಾದ ವೈದ್ಯರ ಅಮಾನವೀಯ ಪ್ರಕರಣ. ತಾಯಿ ಕಾರ್ಡ್ ಇಲ್ಲವೆಂಬ ಒಂದೇ ಒಂದು ಕಾರಣಕ್ಕೆ ತುಂಬಿ ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸಿಕೊಳ್ಳಲು ನಿರಾಕರಿಸಿದ ಆ ಒಂದು ತಪ್ಪು ಮೂವರ ಪ್ರಾಣವನ್ನೇ ಕಿತ್ತುಕೊಂಡಿದೆ. ಆಸ್ಪತ್ರೆಗೆ ಬಂದು ಮನೆಗೆ ವಾಪಸಾಗಿದ್ದ ತುಂಬು ಗರ್ಭಿಣಿಯು ಮನೆಯಲ್ಲಿಯೇ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು, ತೀವ್ರ ರಕ್ತಸ್ರಾವದಿಂದ ಅಲ್ಲೇ ಜೀವ ಬಿಟ್ಟಿದ್ದಾರೆ. ಅಲ್ಲದೆ, ಆಗಷ್ಟೇ ಹುಟ್ಟಿದ ಅವಳಿ ಹಸುಳೆಗಳೂ ಉಸಿರು ಚೆಲ್ಲಿವೆ.
ಇಲ್ಲಿನ ಭಾರತಿನಗರದ ಅಭಯ ಆಂಜನೇಯನ ಸ್ವಾಮಿ ದೇವಸ್ಥಾನದ ಬಳಿ ಮನೆಯೊಂದರಲ್ಲಿ ಅವಳಿ ಮಕ್ಕಳ ಸಹಿತ ತಾಯಿಯೊಬ್ಬಳು ಮೃತಪಟ್ಟಿರುವ (Negligence) ಘಟನೆ ನಡೆದಿದೆ. 30 ವರ್ಷದ ಕಸ್ತೂರಿ ಎಂಬಾಕೆ ಮೃತ ದುರ್ದೈವಿ.
ತುಮಕೂರು ನಗರದ ಭಾರತಿನಗರದಲ್ಲಿ ಒಂದು ಹೆಣ್ಣು ಮಗು ಜತೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಕಸ್ತೂರಿ, 9 ತಿಂಗಳ ತುಂಬು ಗರ್ಭಿಣಿ ಆಗಿದ್ದರು. ಬುಧವಾರ ಸಂಜೆ ಮನೆಯಲ್ಲಿ ಕಸ್ತೂರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಈ ವೇಳೆ ಆಕೆಯ ಕಷ್ಟ ನೋಡಲಾರದೇ ಸ್ಥಳೀಯರು ಸೇರಿ ಹಣ ಸಂಗ್ರಹಿಸಿ ಪಕ್ಕದ ಮನೆಯ ಅಜ್ಜಿಯ ಜತೆ ತುಮಕೂರು ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದಾರೆ.
ಈ ವೇಳೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯೆಯೊಬ್ಬರು ತಾಯಿ ಕಾರ್ಡ್ ಇಲ್ಲ ಎಂದು ಚಿಕಿತ್ಸೆ ಕೊಡದೆ ವಾಪಸ್ ಕಳುಹಿಸಿದ್ದಾರೆ. ವೈದ್ಯೆಯ ಬಳಿ ಅಂಗಲಾಚಿದರೂ ಚಿಕಿತ್ಸೆ ಕೊಡದೇ ನಿರ್ಲಕ್ಷ್ಯ ವಹಿಸಿದ್ದಾರೆ. ನಾವು ಚಿಕಿತ್ಸೆ ಕೊಡುವುದಿಲ್ಲ, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಬರೆದುಕೊಡುತ್ತೇನೆ ಎಂದಿದ್ದಾರೆ ಎಂಬ ಆರೋಪ ಕೇಳಿಬಂದಿದ್ದಾರೆ.
ಹಣವಿಲ್ಲದೆ ಹೊಟ್ಟೆ ನೋವಿನಲ್ಲೇ ಗರ್ಭಿಣಿ ಮನೆಗೆ ವಾಪಸ್ ಬಂದಿದ್ದಾರೆ. ಆದರೆ, ಗುರುವಾರ ಬೆಳಗಿನ ಜಾವ ಹೊಟ್ಟೆ ನೋವಿನಿಂದ ಕಿರುಚಾಡಿ ಒಂದು ಮಗುವಿಗೆ ಜನ್ಮ ನೀಡಿದ್ದಾರೆ. ಮತ್ತೊಂದು ಮಗುವಿಗೆ ಜನ್ಮ ನೀಡುವಾಗ ತೀವ್ರ ರಕ್ತಸ್ರಾವವಾಗಿ ಅವಳಿ ಗಂಡು ಮಕ್ಕಳೊಂದಿಗೆ ತಾಯಿ ಕೂಡ ಕೊನೆಯುಸಿರೆಳೆದಿದ್ದಾರೆ.
ಸ್ಥಳೀಯರ ಆಕ್ರೋಶ
ತಾಯಿ ಕಾರ್ಡ್, ಆಧಾರ್ ಕಾರ್ಡ್ ಕೊಡುವಂತೆ ಜಿಲ್ಲಾಸ್ಪತ್ರೆ ಸಿಬ್ಬಂದಿ ಸೂಚಿಸಿದ್ದರಂತೆ. ತಾಯಿ ಕಾರ್ಡ್ ಹೊಂದಿರದ ಕಾರಣಕ್ಕೆ ಕಸ್ತೂರಿಯನ್ನು ದಾಖಲು ಮಾಡಿಕೊಳ್ಳಲು ಸಿಬ್ಬಂದಿ ನಿರಾಕರಿಸಿದ್ದಾರೆ. ತಮಿಳುನಾಡು ಮೂಲದ ಕಸ್ತೂರಿ, ಕಳೆದ ಒಂದು ತಿಂಗಳಿನಿಂದ ಭಾರತಿನಗರದಲ್ಲಿ ವಾಸ ಇದ್ದರಂತೆ. ಇವರ ಪತಿ ಕೆಲವು ತಿಂಗಳ ಹಿಂದಷ್ಟೇ ತೀರಿ ಹೋಗಿದ್ದಾರೆಂದು ಹೇಳಲಾಗಿದೆ. ಉಳಿದ ಅವರ ಪೂರ್ವಪರ ಯಾವ ಮಾಹಿತಿಯೂ ಲಭ್ಯವಾಗಿಲ್ಲ.
ಗರ್ಭಿಣಿ ಹಾಗೂ ಇಬ್ಬರು ಮಕ್ಕಳ ಸಾವಿಗೆ ತುಮಕೂರು ಜಿಲ್ಲಾಸ್ಪತ್ರೆ ವೈದ್ಯರೇ ಕಾರಣ ಎಂದು ಸ್ಥಳೀಯರು ಆರೋಪಿಸಿ ಆಕ್ರೋಶ ಹೊರಹಾಕಿದ್ದಾರೆ. ತುಮಕೂರಿನ ಎನ್‌ಇಪಿಎಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷಗೆ ರವಾನೆ ಮಾಡಲಾಗಿದೆ.
ಕರ್ತವ್ಯ ಲೋಪ ಒಪ್ಪಿಕೊಂಡ ಡಿಎಚ್‌ಒ
ಈ ಘಟನೆ ನಡೆಯುತ್ತಿದ್ದಂತೆ ಡಿಎಚ್ಒ ಡಾ.ಮಂಜುನಾಥ್ ಹಾಗೂ ಡಾ. ವೀಣಾ ಘಟನಾ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ಈ ವೇಳೆ ಆಕ್ರೋಶಗೊಂಡ ಸ್ಥಳೀಯರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದರು. ವೈದ್ಯರನ್ನು ಹಾಗೂ ಸಿಬ್ಬಂದಿಯನ್ನು ಅಮಾನತುಗೊಳಿಸದೆ ಇದ್ದರೆ ಶವ ಎತ್ತಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಸ್ಥಳೀಯರ ಒತ್ತಡಕ್ಕೆ ಮಣಿದ ಡಿಎಚ್‌ಒ ಡಾ.ಮಂಜುನಾಥ್ ಕರ್ತವ್ಯದಲ್ಲಿದ್ದ ವೈದ್ಯೆ ಡಾ.ಉಷಾ ಹಾಗೂ ಇಬ್ಬರು ನರ್ಸ್‌ಗಳನ್ನು ಅಮಾನತುಗೊಳಿಸುವುದಾಗಿ ತಿಳಿಸಿದ್ದಾರೆ. ಅಲ್ಲದೇ ತಮ್ಮ ಸಿಬ್ಬಂದಿಯಿಂದ ಕರ್ತವ್ಯ ಲೋಪ ಆಗಿರುವುದನ್ನು ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ | New parents | ಹೊಸ ಅಪ್ಪ ಅಮ್ಮಂದಿರಿಗೆ ನಿದ್ದೆಯ ಆರು ಅಮೂಲ್ಯ ಸಲಹೆಗಳು!