ಆರೋಗ್ಯ
Negligence | ಅವಳಿ ಮಕ್ಕಳ ಸಹಿತ ತಾಯಿ ಸಾವು; ತಾಯಿ ಕಾರ್ಡ್ ಇಲ್ಲವೆಂದು ವಾಪಸ್ ಕಳಿಸಿದ ಸರ್ಕಾರಿ ಆಸ್ಪತ್ರೆ
ತುಮಕೂರು ಜಿಲ್ಲಾಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ (Negligence) ಅವಳಿ ಮಕ್ಕಳ ಸಹಿತ ಗರ್ಭಿಣಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಈ ಸಂಬಂಧ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದು, ಪ್ರಕರಣಕ್ಕೆ ಕಾರಣವಾದ ವೈದ್ಯರನ್ನು ಅಮಾನತು ಮಾಡಿ ಆದೇಶ ನೀಡಲಾಗಿದೆ.
ತುಮಕೂರು: ಇದೊಂದು ಘೋರ ಪ್ರಮಾದ. ಜೀವಗಳನ್ನು ಉಳಿಸಬೇಕಾದ ವೈದ್ಯರ ಅಮಾನವೀಯ ಪ್ರಕರಣ. ತಾಯಿ ಕಾರ್ಡ್ ಇಲ್ಲವೆಂಬ ಒಂದೇ ಒಂದು ಕಾರಣಕ್ಕೆ ತುಂಬಿ ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸಿಕೊಳ್ಳಲು ನಿರಾಕರಿಸಿದ ಆ ಒಂದು ತಪ್ಪು ಮೂವರ ಪ್ರಾಣವನ್ನೇ ಕಿತ್ತುಕೊಂಡಿದೆ. ಆಸ್ಪತ್ರೆಗೆ ಬಂದು ಮನೆಗೆ ವಾಪಸಾಗಿದ್ದ ತುಂಬು ಗರ್ಭಿಣಿಯು ಮನೆಯಲ್ಲಿಯೇ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು, ತೀವ್ರ ರಕ್ತಸ್ರಾವದಿಂದ ಅಲ್ಲೇ ಜೀವ ಬಿಟ್ಟಿದ್ದಾರೆ. ಅಲ್ಲದೆ, ಆಗಷ್ಟೇ ಹುಟ್ಟಿದ ಅವಳಿ ಹಸುಳೆಗಳೂ ಉಸಿರು ಚೆಲ್ಲಿವೆ.
ಇಲ್ಲಿನ ಭಾರತಿನಗರದ ಅಭಯ ಆಂಜನೇಯನ ಸ್ವಾಮಿ ದೇವಸ್ಥಾನದ ಬಳಿ ಮನೆಯೊಂದರಲ್ಲಿ ಅವಳಿ ಮಕ್ಕಳ ಸಹಿತ ತಾಯಿಯೊಬ್ಬಳು ಮೃತಪಟ್ಟಿರುವ (Negligence) ಘಟನೆ ನಡೆದಿದೆ. 30 ವರ್ಷದ ಕಸ್ತೂರಿ ಎಂಬಾಕೆ ಮೃತ ದುರ್ದೈವಿ.
ತುಮಕೂರು ನಗರದ ಭಾರತಿನಗರದಲ್ಲಿ ಒಂದು ಹೆಣ್ಣು ಮಗು ಜತೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಕಸ್ತೂರಿ, 9 ತಿಂಗಳ ತುಂಬು ಗರ್ಭಿಣಿ ಆಗಿದ್ದರು. ಬುಧವಾರ ಸಂಜೆ ಮನೆಯಲ್ಲಿ ಕಸ್ತೂರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಈ ವೇಳೆ ಆಕೆಯ ಕಷ್ಟ ನೋಡಲಾರದೇ ಸ್ಥಳೀಯರು ಸೇರಿ ಹಣ ಸಂಗ್ರಹಿಸಿ ಪಕ್ಕದ ಮನೆಯ ಅಜ್ಜಿಯ ಜತೆ ತುಮಕೂರು ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದಾರೆ.
ಈ ವೇಳೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯೆಯೊಬ್ಬರು ತಾಯಿ ಕಾರ್ಡ್ ಇಲ್ಲ ಎಂದು ಚಿಕಿತ್ಸೆ ಕೊಡದೆ ವಾಪಸ್ ಕಳುಹಿಸಿದ್ದಾರೆ. ವೈದ್ಯೆಯ ಬಳಿ ಅಂಗಲಾಚಿದರೂ ಚಿಕಿತ್ಸೆ ಕೊಡದೇ ನಿರ್ಲಕ್ಷ್ಯ ವಹಿಸಿದ್ದಾರೆ. ನಾವು ಚಿಕಿತ್ಸೆ ಕೊಡುವುದಿಲ್ಲ, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಬರೆದುಕೊಡುತ್ತೇನೆ ಎಂದಿದ್ದಾರೆ ಎಂಬ ಆರೋಪ ಕೇಳಿಬಂದಿದ್ದಾರೆ.
ಹಣವಿಲ್ಲದೆ ಹೊಟ್ಟೆ ನೋವಿನಲ್ಲೇ ಗರ್ಭಿಣಿ ಮನೆಗೆ ವಾಪಸ್ ಬಂದಿದ್ದಾರೆ. ಆದರೆ, ಗುರುವಾರ ಬೆಳಗಿನ ಜಾವ ಹೊಟ್ಟೆ ನೋವಿನಿಂದ ಕಿರುಚಾಡಿ ಒಂದು ಮಗುವಿಗೆ ಜನ್ಮ ನೀಡಿದ್ದಾರೆ. ಮತ್ತೊಂದು ಮಗುವಿಗೆ ಜನ್ಮ ನೀಡುವಾಗ ತೀವ್ರ ರಕ್ತಸ್ರಾವವಾಗಿ ಅವಳಿ ಗಂಡು ಮಕ್ಕಳೊಂದಿಗೆ ತಾಯಿ ಕೂಡ ಕೊನೆಯುಸಿರೆಳೆದಿದ್ದಾರೆ.
ಸ್ಥಳೀಯರ ಆಕ್ರೋಶ
ತಾಯಿ ಕಾರ್ಡ್, ಆಧಾರ್ ಕಾರ್ಡ್ ಕೊಡುವಂತೆ ಜಿಲ್ಲಾಸ್ಪತ್ರೆ ಸಿಬ್ಬಂದಿ ಸೂಚಿಸಿದ್ದರಂತೆ. ತಾಯಿ ಕಾರ್ಡ್ ಹೊಂದಿರದ ಕಾರಣಕ್ಕೆ ಕಸ್ತೂರಿಯನ್ನು ದಾಖಲು ಮಾಡಿಕೊಳ್ಳಲು ಸಿಬ್ಬಂದಿ ನಿರಾಕರಿಸಿದ್ದಾರೆ. ತಮಿಳುನಾಡು ಮೂಲದ ಕಸ್ತೂರಿ, ಕಳೆದ ಒಂದು ತಿಂಗಳಿನಿಂದ ಭಾರತಿನಗರದಲ್ಲಿ ವಾಸ ಇದ್ದರಂತೆ. ಇವರ ಪತಿ ಕೆಲವು ತಿಂಗಳ ಹಿಂದಷ್ಟೇ ತೀರಿ ಹೋಗಿದ್ದಾರೆಂದು ಹೇಳಲಾಗಿದೆ. ಉಳಿದ ಅವರ ಪೂರ್ವಪರ ಯಾವ ಮಾಹಿತಿಯೂ ಲಭ್ಯವಾಗಿಲ್ಲ.
ಗರ್ಭಿಣಿ ಹಾಗೂ ಇಬ್ಬರು ಮಕ್ಕಳ ಸಾವಿಗೆ ತುಮಕೂರು ಜಿಲ್ಲಾಸ್ಪತ್ರೆ ವೈದ್ಯರೇ ಕಾರಣ ಎಂದು ಸ್ಥಳೀಯರು ಆರೋಪಿಸಿ ಆಕ್ರೋಶ ಹೊರಹಾಕಿದ್ದಾರೆ. ತುಮಕೂರಿನ ಎನ್‌ಇಪಿಎಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷಗೆ ರವಾನೆ ಮಾಡಲಾಗಿದೆ.
ಕರ್ತವ್ಯ ಲೋಪ ಒಪ್ಪಿಕೊಂಡ ಡಿಎಚ್‌ಒ
ಈ ಘಟನೆ ನಡೆಯುತ್ತಿದ್ದಂತೆ ಡಿಎಚ್ಒ ಡಾ.ಮಂಜುನಾಥ್ ಹಾಗೂ ಡಾ. ವೀಣಾ ಘಟನಾ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ಈ ವೇಳೆ ಆಕ್ರೋಶಗೊಂಡ ಸ್ಥಳೀಯರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದರು. ವೈದ್ಯರನ್ನು ಹಾಗೂ ಸಿಬ್ಬಂದಿಯನ್ನು ಅಮಾನತುಗೊಳಿಸದೆ ಇದ್ದರೆ ಶವ ಎತ್ತಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಸ್ಥಳೀಯರ ಒತ್ತಡಕ್ಕೆ ಮಣಿದ ಡಿಎಚ್‌ಒ ಡಾ.ಮಂಜುನಾಥ್ ಕರ್ತವ್ಯದಲ್ಲಿದ್ದ ವೈದ್ಯೆ ಡಾ.ಉಷಾ ಹಾಗೂ ಇಬ್ಬರು ನರ್ಸ್‌ಗಳನ್ನು ಅಮಾನತುಗೊಳಿಸುವುದಾಗಿ ತಿಳಿಸಿದ್ದಾರೆ. ಅಲ್ಲದೇ ತಮ್ಮ ಸಿಬ್ಬಂದಿಯಿಂದ ಕರ್ತವ್ಯ ಲೋಪ ಆಗಿರುವುದನ್ನು ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ | New parents | ಹೊಸ ಅಪ್ಪ ಅಮ್ಮಂದಿರಿಗೆ ನಿದ್ದೆಯ ಆರು ಅಮೂಲ್ಯ ಸಲಹೆಗಳು!
ಆರೋಗ್ಯ
Eggs VS Paneer: ಮೊಟ್ಟೆ- ಪನೀರ್: ಯಾವುದು ಒಳ್ಳೆಯದು?
ಬೆಲೆಯನ್ನು ಹೋಲಿಸಿದಲ್ಲಿ ಮೊಟ್ಟೆಗಿಂತಲೂ ಪನೀರ್ ದುಬಾರಿ. ಆದರೆ ಪೋಷಕ ಸತ್ವಗಳು ಸಮೃದ್ಧವಾಗಿಯೇ ದೊರೆಯುತ್ತವೆ. ಕ್ಯಾಲ್ಶಿಯಂ ಯಥೇಚ್ಛವಾಗಿ ದೊರೆಯುವಂಥ ಆಹಾರವಿದು. ಮಾತ್ರವಲ್ಲ, ವಿಟಮಿನ್ ಬಿ 12, ಸೆಲೆನಿಯಂ, ರೈಬೊಫ್ಲೇವಿನ್‌ಗಳೂ ದೇಹ ಸೇರುತ್ತವೆ.
ಈ ಎರಡೂ ವ್ಯಾಪಕವಾಗಿ ಉಪಯೋಗದಲ್ಲಿರುವ ಪ್ರೊಟೀನ್ ಮೂಲಗಳು. ಪ್ರೊಟೀನ್ ಸಂಪೂರ್ಣಗೊಳ್ಳುವುದಕ್ಕೆ ಅಗತ್ಯವಾದ ಎಲ್ಲ ಒಂಬತ್ತು ಸತ್ವಗಳು ಇವೆರಡರಲ್ಲೂ ಇವೆ. ಇವೆರಡಕ್ಕೂ ಸೂಪರ್‌ಫುಡ್ ಎನ್ನುವ ಹಣೆಪಟ್ಟಿಯೂ ಉಂಟು (Health tips). ಇವುಗಳ ಬಳಕೆಯಿಂದ ಆಹಾರದಲ್ಲಿ ಪೌಷ್ಟಿಕಾಂಶವನ್ನು ಸುಲಭವಾಗಿ ಹೆಚ್ಚಿಸಬಹುದು.
ತೂಕ ಇಳಿಕೆ ಎನ್ನುತ್ತಿದ್ದಂತೆ ಆಹಾರದಲ್ಲಿ ಕಾರ್ಬ್ ಮತ್ತು ಕೊಬ್ಬು ಕಡಿಮೆ ಮಾಡಿ, ಪ್ರೊಟೀನ್ ಮತ್ತು ನಾರು ಹೆಚ್ಚಿಸಬೇಕು ಎಂಬ ಸರಳ ವಾದದಲ್ಲಿ ಹುರುಳಿಲ್ಲದಿಲ್ಲ. ಆದರೆ ಪ್ರೊಟೀನ್ ಹೆಚ್ಚಿಸುವುದು ಎಂದರೆ ಹೇಗೆ, ಏನು ಎಂಬ ಬಗೆಗೆ ಗೊಂದಲ ಇದ್ದರೆ ಅದೇನು ತಪ್ಪಲ್ಲ. ಉದಾ, ಮೊಟ್ಟೆಯಲ್ಲಿ ಪ್ರೊಟೀನ್ ಸಾಂದ್ರವಾಗಿದೆ, ಪನೀರ್‌ನಲ್ಲೂ ಪ್ರೊಟೀನ್ ಭರಪೂರ ಇದೆ. ಹಾಗಾದರೆ ತೂಕ ಇಳಿಸುವವರ ಪಾಲಿಗೆ ಅಥವಾ ಆಹಾರದಲ್ಲಿ ಪ್ರೊಟೀನ್ ಹೆಚ್ಚುಸುವ ಉದ್ದೇಶ ಇರುವವರಿಗೆ (Health tips) ಯಾವುದು ಒಳ್ಳೆಯದು ಎಂಬುದೀಗ ಜಿಜ್ಞಾಸೆ.
ಇದಕ್ಕಾಗಿ ಈ ಎರಡೂ ಆಹಾರಗಳ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ. ಈ ಎರಡೂ ವ್ಯಾಪಕವಾಗಿ ಉಪಯೋಗದಲ್ಲಿರುವ ಪ್ರೊಟೀನ್ ಮೂಲಗಳು. ಪ್ರೊಟೀನ್ ಸಂಪೂರ್ಣಗೊಳ್ಳುವುದಕ್ಕೆ ಅಗತ್ಯವಾದ ಎಲ್ಲಾ ಒಂಬತ್ತು ಸತ್ವಗಳು ಇವೆರಡರಲ್ಲೂ ಇವೆ. ಇವೆರಡಕ್ಕೂ ಸೂಪರ್‌ಫುಡ್ ಎನ್ನುವ ಹಣೆಪಟ್ಟಿಯೂ ಉಂಟು. ಇವುಗಳ ಬಳಕೆಯಿಂದ ಆಹಾರದಲ್ಲಿ ಪೌಷ್ಟಿಕಾಂಶವನ್ನು ಸುಲಭವಾಗಿ ಹೆಚ್ಚಿಸಬಹುದು. ವ್ಯಾಯಾಮದ ಮೊದಲು ಮತ್ತು ನಂತರ- ಎರಡೂ ಸಂದರ್ಭಗಳಲ್ಲಿ (Health tips) ಇವುಗಳ ಬಳಕೆ ರೂಢಿಯಲ್ಲಿದೆ. ಸಸ್ಯಾಹಾರಿಗಳಿಗೆ ಪ್ರೊಟೀನ್‌ಗಾಗಿ ಪನೀರ್‌ನತ್ತ ಒಲವಿದ್ದರೆ, ಮಾಂಸಾಹಾರಿಗಳಿಗೆ ಮೊಟ್ಟೆ, ಚಿಕನ್ ಇತ್ಯಾದಿಗಳು ಪ್ರಿಯ.
ಪೌಷ್ಟಿಕಾಂಶಗಳು ಹೀಗಿವೆ
ಒಂದು ಬೇಯಿಸಿದ ಮೊಟ್ಟೆಯ (ಸುಮಾರು 45 ಗ್ರಾಂ) ಸತ್ವಗಳನ್ನು ಪರಾಂಬರಿಸಿದರೆ, ಪ್ರೊಟೀನ್ ಅಂದಾಜು 6 ಗ್ರಾಂ, ಕೊಬ್ಬು, 4 ಗ್ರಾಂ, ಕ್ಯಾಲ್ಶಿಯಂ 24.6 ಮಿ.ಗ್ರಾಂ, ಕಬ್ಬಿಣ 0.8 ಮಿ.ಗ್ರಾಂ, ಮೆಗ್ನೀಶಿಯಂ 5.2 ಮಿ.ಗ್ರಾಂ, ಫಾಸ್ಫರಸ್ 86 ಮಿ.ಗ್ರಾಂ, ಪೊಟಾಶಿಯಂ 60 ಮಿ.ಗ್ರಾಂ, ಜಿಂಕ್ 0.6 ಮಿ.ಗ್ರಾಂ, ಕೊಲೆಸ್ಟ್ರಾಲ್ 162 ಮಿ.ಗ್ರಾಂ, ಸೆಲೆನಿಯಂ 134 ಮೈಕ್ರೊ ಗ್ರಾಂ ದೊರೆಯುತ್ತವೆ.
ಕಡಿಮೆ ಕೊಬ್ಬಿನ (ಲೋ ಫ್ಯಾಟ್) ಪನೀರ್‌ನಲ್ಲಿರುವ (ಅಂದಾಜು 40 ಗ್ರಾಂ) ಸತ್ವಗಳು ಏನೇನು ಎಂದು ನೋಡಿದರೆ- ಪ್ರೊಟೀನ್ 7.5 ಗ್ರಾಂ, ಕೊಬ್ಬು 5.8 ಗ್ರಾಂ, ಕಾರ್ಬ್ 5 ಗ್ರಾಂ, ಕ್ಯಾಲ್ಶಿಯಂ 190 ಮಿ.ಗ್ರಾಂ, ಫೋಲೇಟ್ 37.3 ಮಿ.ಗ್ರಾಂ, ಫಾಸ್ಫರಸ್ 132 ಮಿ.ಗ್ರಾಂ, ಪೊಟಾಶಿಯಂ 50 ಮಿ.ಗ್ರಾಂ ಸತ್ವಗಳು ದೊರೆಯುತ್ತದೆ.
ಬೆಲೆಯನ್ನು ಹೋಲಿಸಿದಲ್ಲಿ ಮೊಟ್ಟೆಗಿಂತಲೂ ಪನೀರ್ ದುಬಾರಿ. ಆದರೆ ಪೋಷಕ ಸತ್ವಗಳು ಸಮೃದ್ಧವಾಗಿಯೇ ದೊರೆಯುತ್ತವೆ. ಕ್ಯಾಲ್ಶಿಯಂ ಯಥೇಚ್ಛವಾಗಿ ದೊರೆಯುವಂಥ ಆಹಾರವಿದು. ಮಾತ್ರವಲ್ಲ, ವಿಟಮಿನ್ ಬಿ೧೨, ಸೆಲೆನಿಯಂ, ರೈಬೊಫ್ಲೇವಿನ್‌ಗಳೂ ದೇಹ ಸೇರುತ್ತವೆ. ಹಲವಾರು ರೀತಿಯ ಖಾದ್ಯಗಳಲ್ಲಿ ಇವುಗಳನ್ನು ಬಳಸಲಾಗುತ್ತದೆ. ಈ ಮೂಲಕ ರುಚಿಯೂ ಹೆಚ್ಚು ಮತ್ತು ಪೋಷಕಾಂಶದ ಪ್ರಮಾಣವೂ ವೃದ್ಧಿಸುತ್ತದೆ.
ಇದನ್ನೂ ಓದಿ: Skin Health Tips: ಚರ್ಮದ ಆರೋಗ್ಯಕ್ಕೂ ಕಾರ್ಬೋನೇಟೆಡ್ ಪೇಯಗಳಿಗೂ ಏನು ಸಂಬಂಧ ಗೊತ್ತೇ?
ಮೊಟ್ಟೆಯ ಹಳದಿ ಭಾಗದಲ್ಲಿ ಹೆಚ್ಚು ಪ್ರಮಾಣದ ಕೊಲೆಸ್ಟ್ರಾಲ್ ಇರುವುದು ಹೌದು. ಹಾಗೆಂದು ಹಳದಿ ಭಾಗವನ್ನು ತಿನ್ನದೇ ಬಿಟ್ಟರೆ, ಸೂಕ್ಷ್ಮ ಪೋಷಕಾಂಶಗಳು ಕೈತಪ್ಪಿ ಹೋಗುತ್ತವೆ. ಬಿಳಿಯ ಭಾಗದಲ್ಲಿ ಸಾಂದ್ರವಾಗಿರುವುದು ಪ್ರೊಟೀನ್ ಅಂಶ. ಉಳಿದಂತೆ, ವಿಟಮಿನ್ ಬಿ 12, ವಿಟಮಿನ್ ಡಿಯಂಥ ಬಹಳಷ್ಟು ಉತ್ತಮ ಸತ್ವಗಳು ಮೊಟ್ಟೆಯಲ್ಲೂ ದೊರೆಯುತ್ತವೆ. ಬೆಳಗಿನ ತಿಂಡಿಯಲ್ಲಿ ಜನಪ್ರಿಯವಾಗಿರುವ ಆಮ್ಲೆಟ್‌ನಿಂದ ಹಿಡಿದು ಹಲವು ರೀತಿಯ ಅಡುಗೆಗಳಲ್ಲಿ ಮೊಟ್ಟೆ ಬಳಕೆಯಾಗುತ್ತದೆ. ಬೆಲೆಯೂ ಹೆಚ್ಚಿಲ್ಲದಿರುವುದರಿಂದ ಎಲ್ಲರ ಕೈಗೆಟುಕುವಂಥ ಪುಷ್ಟಿಯ ಆಹಾರವಿದು. ಈ ಎರಡೂ ಆಹಾರಗಳನ್ನು ತಿನ್ನುವ ಅಭ್ಯಾಸವಿದ್ದರೆ, ಎರಡನ್ನೂ ಜಾರಿಯಲ್ಲಿಡುವುದು ತಪ್ಪೇನಿಲ್ಲ. ತೂಕ ಇಳಿಸುವ ಉದ್ದೇಶಕ್ಕಾದರೆ ಎರಡರಲ್ಲೂ ಹೇಳುವಂಥ ವ್ಯತ್ಯಾಸವೂ ಇಲ್ಲ.
ಆರೋಗ್ಯ
Mansoon Health Tips : ಮಳೆಗಾಲದಲ್ಲಿ ವೈರಲ್ ಸೋಂಕು ತಡೆಯುವುದು ಹೇಗೆ?
Mansoon Health Tips: ಮಳೆಗಾಲದಲ್ಲಿ ಶೀತ, ಜ್ವರ ಇತ್ಯಾದಿ ಆರೋಗ್ಯ ಸಮಸ್ಯೆಗಳು ಬರದಂತೆ ಮುನ್ನೆಚ್ಚರಿಕೆ ವಹಿಸಲು ಇಲ್ಲಿದೆ ಉಪಯುಲ್ತ ಟಿಪ್ಸ್
ಮಳೆಗಾಲ ಸುಂದರವಾಗಿರುತ್ತದೆ. ನಿಸರ್ಗ ಹಸಿರಿನಿಂದ ಕಂಗೊಳಿಸುತ್ತದೆ. ಕೆರೆ ಕಟ್ಟೆಗಳು, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತವೆ. ಅದನ್ನು ನೋಡುವುದೇ ಸೊಗಸು. ಜತೆಗೆ ಎಲ್ಲೆಡೆ ತಾಪಮಾನ ಕೂಡ ತಗ್ಗಿ ಮೈಮನ ತಂಪಾಗಿಸುತ್ತದೆ. ಮನಸ್ಸಿಗೆ ಮತ್ತು ಶರೀರಕ್ಕೆ ಆಹ್ಲಾದವೆನ್ನಿಸುತ್ತದೆ. ಹರಿಯುವ ತೊರೆಯಲ್ಲಿ ನೀರಾಟವಾಡಿ ಬರಬೇಕು ಎನ್ನಿಸುತ್ತದೆ. ಹೀಗಿದ್ದರೂ ಶರೀರದ ರೋಗ ನಿರೋಧಕ ಶಕ್ತಿ (Mansoon Health Tips) ಉತ್ತಮ ಸ್ಥಿತಿಯಲ್ಲಿರುವುದು ಅವಶ್ಯಕ. ಏಕೆಂದರೆ ಹವಾಮಾನದಲ್ಲಿ ಉಂಟಾಗುವ ಬದಲಾವಣೆಯಿಂದ ಮಕ್ಕಳಿಂದ ವಯಸ್ಕರ ತನಕ ಎಲ್ಲರಿಗೂ ಆರೋಗ್ಯದಲ್ಲಿ ಏರುಪೇರಾಗುವುದು ಸಾಮಾನ್ಯ. ಶೀತ, ಜ್ವರ, ಕಫ, ಕೆಮ್ಮು , ಗಂಟಲು ನೋವು ಇತ್ಯಾದಿ ತೊಂದರೆಗಳು ಮಳೆಗಾಲದಲ್ಲಿ ಬಂದು ಹೋಗುತ್ತವೆ. ಇದಕ್ಕೆ ಕಾರಣವಾಗುವ ವೈರಲ್ ಸೋಂಕು ಬರದಂತೆ ತಡೆಯಲು ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ನೀವು ಕೈಗೊಳ್ಳಬಹುದು. ಈ ಕುರಿತ ಉಪಯುಕ್ತ ವಿವರ ಇಲ್ಲಿದೆ.
ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ: ಮಳೆಗಾಲದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಮುಖ್ಯ. ಇದರಿಂದ ವೈರಲ್ ಸೋಂಕು ತಗುಲದಂತೆ ನೋಡಿಕೊಳ್ಳಬಹುದು. ಊಟ, ತಿಂಡಿಗಳನ್ನು ಸೇವಿಸುವುದಕ್ಕೆ ಮೊದಲು ಹಾಗೂ ಬಳಿಕ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಿ. ಸೀನಿದ್ದರೆ, ಕಫ ಹೊರ ಹಾಕಿದ್ದರೆ, ಕೈತೋಟದಲ್ಲಿ ಕೆಲಸ ಮಾಡಿ ಬಂದಿದ್ದರೆ ಕೈಗಳನ್ನು ತೊಳೆಯಿರಿ. ಬ್ಯಾಕ್ಟೀರಿಯಾ ಹರಡುವುದನ್ನು ತಡೆಯಬಹುದು.
ಮನೆಯಲ್ಲಿಯೇ ತಯಾರಿಸಿದ ಅಡುಗೆಯನ್ನು ಸೇವಿಸಿ: ಹೊರಗಿನ ಊಟೋಪಚಾರ, ತಿಂಡಿಗಳಿಂದ ದೂರವಿರಿ. ಗಲೀಜು, ಕಶ್ಮಲ ಇರುವ ಜಾಗದಿಂದ ದೂರ ಇರಿ. ಮಳೆಗಾಲದಲ್ಲಿ ಇಂಥ ಸ್ಥಳಗಳಲ್ಲಿ ಕೀಟಾಣುಗಳ ಉತ್ಪತ್ತಿ ಜಾಸ್ತಿ.
ಪೌಷ್ಟಿಕಾಹಾರ ಸೇವಿಸಿ. ಇದು ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಸೋಂಕಿನಿಂದ ತಡೆಯುತ್ತದೆ.
ಚೆನ್ನಾಗಿ ನಿದ್ರಿಸಿ: ಮಳೆಗಾಲದಲ್ಲಿ ಶರೀರದ ರೋಗ ನಿರೋಧಕತೆ ಹೆಚ್ಚಿಸಲು ಉತ್ತಮ ನಿದ್ದೆ ಅಗತ್ಯ. ಸಾಮಾನ್ಯವಾಗಿ ದಿನಕ್ಕೆ ಸರಾಸರಿ 6 ಗಂಟೆಗಳ ನಿದ್ದೆ ಅವಶ್ಯಕ ಎನ್ನುತ್ತಾರೆ. ಇದು ನಿಮ್ಮನ್ನು ಚೇತೋಹಾರಿಯಾಗಿಸುತ್ತದೆ. ಸ್ವಚ್ಛ ವಾದ ನೀರನ್ನು ಸೇವಿಸುವುದು ಕೂಡ ಅತ್ಯಂತ ಮುಖ್ಯ. ಕಲುಷಿತ ನೀರು ಬಳಸದಿರಿ.
ತರಕಾರಿ, ಹಣ್ಣು ಹಂಪಲುಗಳನ್ನು ತೊಳೆದು ಬಳಸಿ: ಮಳೆಗಾಲದಲ್ಲಿ ಆಗಲಿ ಇತರ ಯಾವುದೇ ಕಾಲದಲ್ಲಾಗಲಿ ತರಕಾರಿ ಮತ್ತು ಹಣ್ಣು ಹಂಪಲುಗಳನ್ನು ಸೇವಿಸುವ ಮುನ್ನ ಅವುಗಳನ್ನು ಚೆನ್ನಾಗಿ ತೊಳೆಯಬೇಕು. ಏಕೆಂದರೆ ಅವುಗಳು ನಿಮ್ಮನ್ನು ತಲುಪುವುದಕ್ಕೆ ಮುನ್ನ ಧೂಳು, ಕಲುಷಿತ ವಾತಾವರಣಕ್ಕೆ ತೆರೆದಿರುತ್ತವೆ. ಅಪಾಯಕಾರಿ ಬ್ಯಾಕ್ಟೀರಿಯಾಗಳಿಗೆ ಒಡ್ಡಿರುತ್ತವೆ. ಇದು ವೈರಲ್ ಸೋಂಕಿಗೆ ಕಾರಣವಾದೀತು. ಮಾರುಕಟ್ಟೆಯಲ್ಲಿ ಕತ್ತರಿಸಿ ತೆರೆದಿಟ್ಟಿರುವ ತರಕಾರಿ, ಹಣ್ಣುಗಳನ್ನು ಸೇವಿಸುವುದರಿಂದ ದೂರ ಇದ್ದುಬಿಡಿ.
ಆಹಾರ ಹಂಚಿಕೆ ಬೇಡ: ನೀವು ಒಂದು ವೇಳೆ ವೈರಲ್ ಸೋಂಕಿಗೆ ಒಳಗಾಗಿದ್ದರೆ, ಶೀತ, ಕಫ ಬಂದಿದ್ದರೆ ಆಗ ಇತರರೊಡನೆ ಆಹಾರ-ವಿಹಾರ, ವಿನಿಮಯ ಬೇಡ. ಇದರಿಂದ ಆರೋಗ್ಯವಂತ ವ್ಯಕ್ತಿಗೆ ಸೋಂಕು ಹರಡುವ ಸಾಧ್ಯತೆ ಇದೆ.
ಮುನ್ನೆಚ್ಚರಿಕೆ ಕ್ರಮ ಸೂಕ್ತ: ಮಳೆಗಾಲದಲ್ಲಿ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದು, ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ. ಬಿಸಿ ನೀರು, ಬಿಸಿಯಾದ ಸೂಪ್, ಹಸಿರು ತರಕಾರಿ, ಕುಚ್ಚಿಲಕ್ಕಿ ಗಂಜಿ, ಒಣಹಣ್ಣುಗಳನ್ನು ಸೇವಿಸಬಹುದು. ಒಂದು ವೇಳೆ ಪದೇಪದೆ ಜ್ವರ ಬಂದರೆ ತಕ್ಷಣ ವೈದ್ಯರನ್ನು ಭೇಟಿಯಾಗಿ ಸೂಕ್ತ ಸಲಹೆ, ಔಷಧಗಳನ್ನು ಪಡೆಯಿರಿ. ಹೆಚ್ಚು ವಿಶ್ರಾಂತಿ ಪಡೆಯಿರಿ.
ಇದನ್ನೂ ಓದಿ: World Bicycle Day : ಸೈಕಲ್ ಹೊಡೆಯಿರಿ, ಆರೋಗ್ಯ ಹೆಚ್ಚಿಸಿಕೊಳ್ಳಿ
ಆರೋಗ್ಯ
Skin Health Tips: ಚರ್ಮದ ಆರೋಗ್ಯಕ್ಕೂ ಕಾರ್ಬೋನೇಟೆಡ್ ಪೇಯಗಳಿಗೂ ಏನು ಸಂಬಂಧ ಗೊತ್ತೇ?
ಬನ್ನಿ, ಚರ್ಮದ ಮೇಲೆ ಕಾಳಜಿ ಇರುವ ಮಂದಿ ಯಾಕೆ ಕಾರ್ಬೋನೇಟೆಡ್ ಪೇಯಗಳನ್ನು ಕುಡಿಯುವುದನ್ನು ಕಡಿಮೆ ಮಾಡಬೇಕು ಎಂಬುದಕ್ಕೆ ಕಾರಣಗಳನ್ನು ನೋಡೋಣ
ನಮ್ಮ ಚರ್ಮದ ಆರೋಗ್ಯದ (skin care) ಮೇಲೆ ಹತ್ತು ಹಲವು ಅಂಶಗಳು ಪರಿಣಾಮ ಬೀರುವುದರಿಂದ ಚರ್ಮ ಹಲವು ಸಮಸ್ಯೆಗಳನ್ನು ಕಾಲಕಾಲಕ್ಕೆ ಎದುರಿಸಬೇಕಾಗುತ್ತದೆ. ಮೇಲ್ನೋಟಕ್ಕೆ ವಿಷಯ ತೀರಾ ಸಣ್ಣದೆನಿಸಿದರೂ, ಬೇರೆ ಅನಾರೋಗ್ಯದ ಸಮಸ್ಯೆಗಳಂತೆ ಇದು ತೀರಾ ತಲೆಕೆಡಿಸುವಷ್ಟು ಗಂಭೀರವಲ್ಲದಿದ್ದರೂ ಮಾನಸಿಕವಾಗಿ, ನಮ್ಮ ಒಟ್ಟು ಮನಸ್ಥಿತಿಯ ಮೇಲೆ ಬೀರುವ ಪರಿಣಾಮ ದೊಡ್ಡದು. ಚರ್ಮದ ಸೌಂದರ್ಯ ಅಥವಾ ಆರೋಗ್ಯ ಬಹುತೇಕರಿಗೆ ಆತ್ಮವಿಶ್ವಾಸ ಹಾಗೂ ಒಟ್ಟು ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುವುದರಿಂದ ಇದು ಬಹಳ ಮುಖ್ಯವೂ ಆಗುತ್ತದೆ. ಚರ್ಮದ ಆರೋಗ್ಯದ ಮೇಲೆ ಪರಿಣಾಮ ಬೀರುವ ಅಂಶಗಳ ಪೈಕಿ ಬಹುಮುಖ್ಯವಾದುದು ನಾವು ಸೇವಿಸುವ ಆಹಾರ. ಇಂದು ಬದಲಾದ ಆಹಾರ ಪದ್ಧತಿ ಸೇರಿದಂತೆ ನಾನಾ ಕಾರಣಗಳು ನಮ್ಮ ಚರ್ಮದ ಆರೋಗ್ಯ ಹದಗೆಡಲು ಕಾರಣವಾಗುತ್ತದೆ. ಕಾರ್ಬೋನೇಟೆಡ್ ಪೇಯಗಳ ಸೇವನೆಯೂ ನಮ್ಮ ಚರ್ಮದ ಆರೋಗ್ಯದ ಮೇಲೆ (Skin Health Tips) ಸಾಕಷ್ಟು ಕೆಟ್ಟ ಪರಿಣಾಮ ಬೀರುತ್ತದೆ. ಚರ್ಮ ಆರೋಗ್ಯದಿಂದ ಕಂಗೊಳಿಸಲು ಇವುಗಳಿಂದ ದೂರವಿರುವುದೂ ಮುಖ್ಯವಾಗುತ್ತದೆ. ಹಾಗಾದರೆ ಬನ್ನಿ, ಚರ್ಮದ ಮೇಲೆ ಕಾಳಜಿ ಇರುವ ಮಂದಿ ಯಾಕೆ ಕಾರ್ಬೋನೇಟೆಡ್ ಪೇಯಗಳನ್ನು ಕುಡಿಯುವುದನ್ನು ಕಡಿಮೆ ಮಾಡಬೇಕು ಎಂಬುದಕ್ಕೆ ಕಾರಣಗಳನ್ನು ನೋಡೋಣ.
1. ಅತಿ ಹೆಚ್ಚು ಸಕ್ಕರೆ ಇರುತ್ತದೆ: ಫ್ಲೇವರ್ಡ್ ಡ್ರಿಂಕ್‌ಗಳು ಹಾಗೂ ಕಾರ್ಬೋನೇಟೆಡ್ ಪೇಯಗಳಲ್ಲಿ ಅತ್ಯಂತ ಹೆಚ್ಚು ಸಕ್ಕರೆ ಇರುವುದರಿಂದ ಇದು ಚರ್ಮಕ್ಕೆ ಖಂಡಿತಾ ಒಳ್ಲೇಯದು ಮಾಡುವುದಿಲ್ಲ. ಹೆಚ್ಚು ಸಕ್ಕರೆಯ ಪ್ರಮಾಣ ಚರ್ಮದ ಒಟ್ಟಾರೆ ಲುಕ್ ಮೇಲೆ ಅಡ್ಡ ಪರಿಣಾಮಗಳನ್ನು ಬೀರುವುದರಿಂದ ಚರ್ಮ ಊದಿಕೊಂಡಂತೆ, ಹಾಗೂ ಪೇಲವವಾಗಿ ಕಾಣುವಂತೆ ಮಾಡುತ್ತದೆ. ಹಾಗಾಗಿ ದಿನವೂ ಕೋಲಾ, ಸೋಡಾದಂತಹ ಪೇಯಗಳಿಗೆ ಮೊರೆ ಹೋಗುವ ಮಂದಿ ಮತ್ತೊಮ್ಮೆ ಯೋಚಿಸಿ.
2. ಇದು ಚರ್ಮವನ್ನು ಒಣಗಿಸುತ್ತದೆ: ಚರ್ಮದ ಆರೋಗ್ಯದಲ್ಲಿ ಬಹಳ ಮುಖ್ಯವಾದದ್ದು ಎಂದರೆ ಚರ್ಮಕ್ಕೆ ಸಿಗಬೇಕಾದ ನೀರಿನಂಶ ಸಿಗಲೇಬೇಕು. ಸಿಗದಿದ್ದರೆ ಹಲವು ಸಮಸ್ಯೆಗಳು ಚರ್ಮದ ಮೂಲಕ ಕಾಣತೊಡಗುತ್ತದೆ. ಚರ್ಮ ಒಣಗಿದಂತಾಗುವುದೂ ಕೂಡಾ ಚರ್ಮ ಅನುಭವಿಸುವ ನೀರಿನ ಕೊರತೆಯೇ ಆಗಿದೆ. ಇದರಲ್ಲಿರುವ ಸಕ್ಕರೆ ಹಾಗೂ ಕೆಫಿನ್ ಅಂಶ ಚರ್ಮವನ್ನು ಒಣಗಿಸುವುದರಿಂದ ಚರ್ಮ ನಿಸ್ತೇಜವಾಗಿ, ಕಳಾಹೀನವಾಗಿ ಕಾಣಲಾರಂಭಿಸುತ್ತದೆ.
3. ಮೊಡವೆಗಳುಂಟಾಗಬಹುದು: ಕಾರ್ಬೋನೇಟೆಡ್ ಪೇಯಗಳು ಹಾರ್ಮೋನಿನ ವೈಪರೀತ್ಯಕ್ಕೂ ಕಾರಣವಾಗುವುದರಿಂದ ಚರ್ಮದಲ್ಲಿ ಮೊಡವೆಗಳು ಏಳಲೂ ಕಾರಣವಾಗಬಹುದು. ಹಾರ್ಮೋನ್ ಏರುಪೇರು ಮೊಡವೆಗೆ ಇರುವ ಬಹುದೊಡ್ಡ ಕಾರಣಗಳಲ್ಲಿ ಒಂದು. ಇಂತಹ ಪೇಯಗಳು ಸೆಬಮ್ ಉತ್ಪತ್ತಿಯನ್ನು ಪ್ರೇರೇಪಿಸುವ ಮೂಲಕವೂ ಮೊಡವೆ ಹೆಚ್ಚಲು ಕಾರಣೀಭೂತವಾಗುತ್ತದೆ. ಇದರಲ್ಲಿರುವ ಕೆಫಿನ್ ಕಾರಣದಿಂದಲೂ ಮೊಡವೆ ಹೆಚ್ಚಾಗಬಹುದು.
ಇದನ್ನೂ ಓದಿ: Health Tips: ತೇಗುವುದೇ ನಿಮ್ಮ ಸಮಸ್ಯೆಯೇ? ಹಾಗಾದರೆ ಇಲ್ಲಿದೆ ನಿಮಗೆ ಉತ್ತರ!
4. ಚರ್ಮದಲ್ಲಿ ಸುಕ್ಕು ಬಹುಬೇಗನೆ ಆಗಬಹುದು: ವಯಸ್ಸಾಗುತ್ತಿದ್ದಂತೆ ಚರ್ಮ ಸುಕ್ಕಾಗುವುದು ಸಹಜ. ಆದರೆ, ಕಾರ್ಬೋನೇಟೆಡ್ ಪೇಯಗಳ ಸೇವನೆ ಹೆಚ್ಚಾದರೆ ಚರ್ಮದ ಸುಕ್ಕಾಗುವಿಕೆ ಪ್ರಕ್ರಿಯೆ ಬೇಗನೆ ಆಗಬಹುದು. ಪರಿಣಾಮ ಚರ್ಮಕ್ಕೆ ಬಿಗಿತನ ಕಡಿಮೆಯಾಗಿ ಸಣ್ಣ ವಯಸ್ಸಿನಲ್ಲಿಯೇ ವಯಸ್ಸಾದವರಂತೆ ಕಾಣಬಹುದು. ಹಾಗಾಘಿ ನಿಮಗೆ ಸುಕ್ಕುರಹಿತ ನುಣುಪಾದ ಚರ್ಮ ಬೇಕಿದ್ದರೆ, ಇಂತಹ ಡ್ರಿಂಕ್‌ಗಳಿಂದ ದೂರವಿರಿ.
5. ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ: ಇಂತಹ ಪೇಯಗಳ ಸೇವನೆ ಒಟ್ಟಾರೆ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ದೇಹದಲ್ಲಿರುವ ವಿಷಕಾರಕಗಳು ಅಥವಾ ಕಲ್ಮಶಗಳು ಹೊರಹೋಗದೆ, ಅವುಗಳ ಪರಿಣಾಮ ಚರ್ಮದ ಆರೋಗ್ಯವೂ ಹದಗೆಡುತ್ತದೆ. ಪೋಷಕಾಂಶಗಳ ಹೀರಿಕೆಯೂ ಸರಿಯಾಗಿ ಆಗದು. ಇದರಿಂದಾಗಿ ಮೊಡವೆ, ಕಜ್ಜಿ, ಕಪ್ಪುಕಲೆಗಳಂತಹ ಸಮಸ್ಯೆಗಳು, ಸುಕ್ಕು, ಕುಳಿಗಳು ಇತ್ಯಾದಿಗಳೂ ಕೂಡಾ ಕಾಣಿಸಿಕೊಳ್ಳುತ್ತವೆ.
ಇದನ್ನೂ ಓದಿ: Health Tips: ಏರ್ ಫ್ರೈಯರ್‌ನಲ್ಲಿ ಯಾವೆಲ್ಲ ಆಹಾರವನ್ನು ತಯಾರಿಸಬಾರದು ಗೊತ್ತಾ?
ಆರೋಗ್ಯ
Allergy: ನೆಲಗಡಲೆ ತಿನ್ನುವ ಮೂಲಕ ನೆಲಗಡಲೆಯ ಅಲರ್ಜಿಯಿಂದ ದೂರವಿರಿ!
ಬಡವರ ಬಾದಾಮಿ ನೆಲಕಡಲೆಯನ್ನು ಪುಟಾಣಿ ಮಕ್ಕಳ ಆಹಾರಕ್ರಮದಲ್ಲಿ ಸೇರಿಸಿದರೆ ಅವುಗಳ ಬಗೆಗಿನ ಅಲರ್ಜಿಯಿಂದ ದೂರವಿರಬಹುದಂತೆ. ಹಾಗಂತ ಸಂಶೋಧನೆಯೊಂದು ದೃಢಪಡಿಸಿದೆ.
ನಿಮಗೆ ನೆಲಗಡಲೆ ಅಲರ್ಜಿಯೆಂಬ (groundnut Allergy) ಸಮಸ್ಯೆಯ ಬಗ್ಗೆ ಕೇಳಿ ಗೊತ್ತಾ? ನೆಲಗಡಲೆ ಅಲರ್ಜಿಯಾ, ಇದೇನಿದು ಹೊಸ ವಿಷಯ ಎಂದು ಹುಬ್ಬೇರಿಸಬೇಡಿ. ಇಂಥದ್ದೊಂದು ಆರೋಗ್ಯ ಸಮಸ್ಯೆ ಹಲವು ರಾಷ್ಟ್ರಗಳಲ್ಲಿ ಮಕ್ಕಳಿಗೆ ಸಾಮಾನ್ಯ. ಇಂತಹ ಬಹು ವಿಚಿತ್ರವಾದ ತೊಂದರೆಗೆ ಈಗ ನೆಲಗಡಲೆಯೇ ಪರಿಹಾರ ಎಂದು ಸಂಶೋಧನೆಯೊಂದು ಪರಿಹಾರ ಘೋಷಿಸಿದೆ!
ಹೌದು. ಬಡವರ ಬಾದಾಮಿ ನೆಲಕಡಲೆಯನ್ನು ಪುಟಾಣಿ ಮಕ್ಕಳ ಆಹಾರಕ್ರಮದಲ್ಲಿ ಸೇರಿಸಿದರೆ ಅವುಗಳ ಬಗೆಗಿನ ಅಲರ್ಜಿಯಿಂದ ದೂರವಿರಬಹುದಂತೆ. ಹಾಗಂತ ಸಂಶೋಧನೆಯೊಂದು ದೃಢಪಡಿಸಿದೆ. ಈ ಸಂಶೋಧನೆಯ ಸಾರ ಇಷ್ಟೇ, ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಿರಿ ಅಂತಾರಲ್ಲ, ಹಾಗೆಯೇ, ನೆಲಗಡಲೆಯೇ ಅಲರ್ಜಿಯಾಗುವ ಮಂದಿಗೆ ಸಣ್ಣ ವಯಸ್ಸಿನಲ್ಲಿಯೇ ನೆಲಗಡಲೆಯನ್ನು ತಿನ್ನಿಸುತ್ತಾ ಬಂದಲ್ಲಿ ಇಂತಹ ಅಲರ್ಜಿಯೇ ಇಲ್ಲವಾಗುತ್ತದೆ ಎಂಬುದೇ ಇದರ ತಾತ್ಪರ್ಯ.
ಪಾಶ್ಚಿಮಾತ್ಯ ದೇಶಗಳಲ್ಲಿ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುವ ಸಾಮಾನ್ಯ ಸಮಸ್ಯೆಯೆಂದರೆ ನೆಲಗಡಲೆ ಅಲರ್ಜಿ. ನೆಲಗಡಲೆ ತಿಂದರೆ ಕಾಡುವ ಅಲರ್ಜಿ ಬೆಳೆಯುತ್ತಾ ಹೋದಂತೆ ಉಲ್ಬಣಿಸುತ್ತಾ ಹೋಗುತ್ತದೆ. ನೆಲಗಡಲೆ ತಿಂದ ಕೂಡಲೇ, ಬಾಯಿಯಲ್ಲಿ ಗಂಟಲಲ್ಲಿ ತುರಿಕೆ, ಬಾವು ಗೋಚರಿಸಲಾರಂಭಿಸುತ್ತದೆ. ಕೆಂಪಗೆ ಊದಿಕೊಂಡ ಬಾಯಿ, ನಾಲಗೆ, ಹಾಗೂ ಗಂಟಲು ತೊಂದರೆ ಕೊಟ್ಟರೆ, ಇನ್ನೂ ಕೆಲವರಿಗೆ ಇಷ್ಟಕ್ಕೇ ನಿಲ್ಲುವುದಿಲ್ಲ. ಹೊಟ್ಟೆಯಲ್ಲಿ ಕೆಲವೆಡೆ ನೋವು, ವಾಂತಿ, ತಲೆಸುತ್ತು, ತಲೆನೋವು, ಅತಿಸಾರದಂತಹ ತೊಂದರೆಯೂ ಕಾಣಿಸತೊಡಗುತ್ತದೆ. ಇನ್ನೂ ಕೆಲವರಿಗೆ ಉಸಿರು ಕಟ್ಟಿದಂತೆ, ಉಸಿರಾಡಲು ಕಷ್ಟವಾಗುವ ಅನುಭವವೂ ಆಗಬಹುದು. ಉಬ್ಬಸದಂತಹ ಅನುಭವ, ಇದ್ದಕ್ಕಿದ್ದಂತೆ ನೆಗಡಿ ಇತ್ಯಾದಿಗಳ ಅನುಭವವೂ ಆಗುತ್ತದೆ. ದೇಹದ ರೋಗ ನಿರೋಧಕ ವ್ಯವಸ್ಥೆಯೇ ನೆಲಗಡಲೆಯ ಪ್ರೊಟೀನು ದೇಹಕ್ಕೆ ಮಾರಕ ಎಂಬ ನಿರ್ಧಾರವನ್ನು ತಪ್ಪಾಗಿ ತೆಗೆದುಕೊಳ್ಳುವುದರಿಂದ ಆಗುವ ಪರಿಣಾಮವಿದು. ಇದರಿಂದ ಜೀವಮಾನ ಪರ್ಯಂತೆ ನೆಲಗಡಲೆಯೇ ಇವರಿಗೆ ಶಾಪವಾಗಿ ಪರಿಣಮಿಸುತ್ತದೆ. ಇಂಥದ್ದೊಂದು ಆರೋಗ್ಯ ಸಮಸ್ಯೆಗೆ ಯಾವ ಔಷಧಿಯೂ ಇಲ್ಲದೆ ಮಕ್ಕಳು ಜೀವನ ಪರ್ಯಂತ ತೊಂದರೆ ವಹಿಸಬೇಕಾಗುತ್ತದೆ. ತಮ್ಮ ಆಹಾರಕ್ರಮದ ಬಗ್ಗೆ ಜಾಗರೂಕತೆ ವಹಿಸಬೇಕಾಗುತ್ತದೆ.
ಇದನ್ನೂ ಓದಿ: Heath Tips For Weight Loss: ತೂಕ ಇಳಿಸುವ ಪ್ರಯತ್ನವೇ? ಹೀಗೆ ಮಾಡಿ
ಈ ಸಂಶೋಧನೆಯ ಪ್ರಕಾರ ಬಹಳ ಸಣ್ಣ ವಯಸ್ಸಿನಿಂದಲೇ ಮಕ್ಕಳಿಗೆ ನೆಲಗಡಲೆಯನ್ನು ನಿಯಮಿತವಾಗಿ ಕೊಡುತ್ತಾ ಬಂದಲ್ಲಿ ಇಂತಹ ಅಲರ್ಜಿಯ ಸಮಸ್ಯೆಯೇ ಬರುವುದಿಲ್ಲ ಎಂದು ಹೇಳಲಾಗಿದೆ. ಈ ಸಂಶೋಧನೆಯ ಸಂದರ್ಭ ಸುಮಾರು ಈ ಮೊದಲು ನೆಲಗಡಲೆಯ ಅಲರ್ಜಿಯಿದೆಯೆಂದು ಹೇಳಲಾಗಿದ್ದ ಮೂರು ವರ್ಷದೊಳಗಿನ ೧೪೬ ಮಕ್ಕಳಿಗೆ ನೆಲಗಡಲೆ ಪುಡಿಯನ್ನು ನಿಯಮಿತವಾಗಿ ನೀಡಲಾಗಿದೆ. ಇದರಲ್ಲಿ ೯೬ ಮಕ್ಕಳಿಗೆ ದಿನಕ್ಕೆ ಆರು ನೆಲಗಡಲೆಯ ಪ್ರಮಾಣದ ನೆಲಗಡಲೆ ಪ್ರೊಟೀನ್ ಪುಡಿಯನ್ನು ನೀಡಲಾಗಿದ್ದು ಈ ಮಕ್ಕಳಲ್ಲಿ ನಿಧಾನವಾಗಿ ನೆಲಗಡಲೆ ವಿರುದ್ಧದ ಅಲರ್ಜಿ ಕಡಿಮೆಯಾಗುತ್ತಾ ಸಾಗಿದೆ. ೨೦ ಮಕ್ಕಳಲ್ಲಿ ಆರು ತಿಂಗಳಲ್ಲಿ ಅಲರ್ಜಿಯ ಯಾವುದೇ ಪರಿಣಾಮಗಳೂ ಕಂಡು ಬಂದಿಲ್ಲ. ಒಬ್ಬ ಮಗುವಿಗೆ ಮಾತ್ರ ಇದರಿಂದ ಯಾವ ಪ್ರಯೋಜನವೂ ಆಗಿಲ್ಲವಾಗಿದ್ದು ಅಲರ್ಜಿಯೆಂಬ ತೊಂದರೆ ಹಾಗೆಯೇ ಉಳಿದುಕೊಂಡಿದೆ.
ನೆಲಗಡಲೆಯ ಅಂಶಗಳು ಇರುವ ಆಹಾರ ಸೇವನೆಯಿಂದಲೂ ಪಾಶ್ಚಿಮಾಥ್ಯ ಮಕ್ಕಳಲ್ಲಿ ಅಲರ್ಜಿ ಉಲ್ಬಣಿಸಿಬಿಡುತ್ತದೆ. ಹಾಗಾಗಿ ಬಹಳಷ್ಟು ಸಂದರ್ಭಗಳಲ್ಲಿ ಆಆರ ಸೇವನೆಯ ಸಂದರ್ಭ ಜಾಗರೂಕತೆ ಬಯಸುವ ಈ ಪರಿಸ್ಥಿತಿಗೆ ಕೇವಲ ಒಂದು ಇಂಜೆಕ್ಷನ್ ಮಾತ್ರದಿಂದ ಪರಿಹಾರ ಲಭ್ಯವಿತ್ತು. ಈಗ, ಚಿಕ್ಕ ಮಗುವಾಗಿದ್ದಾಗಿನಿಂದಲೇ, ನೆಲಗಡಲೆಯನ್ನೇ ಆಹಾರ ಕ್ರಮದಲ್ಲಿ ಸೇರಿಸುವ ಮೂಲಕ ಮಕ್ಕಳ ದೇಹ ನೆಲಗಡಲೆಯ ವಿರುದ್ಧ ಹೋರಾಡುವ ಗುಣವನ್ನು ಬೆಳೆಸಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ ಎಂದು ತಿಳಿದು ಬಂದಿದೆ. ದಿ ಲಾನ್ಸೆಟ್ ಎಂಬ ಸಂಶೋಧನಾ ಪತ್ರಿಕೆ ಈ ಸಂಶೋಧನೆಯ ವಿವರವನ್ನು ಪ್ರಕಟ ಮಾಡಿದೆ.
ಇದನ್ನೂ ಓದಿ: Improve Oral Health: ಹಣ್ಣುಗಳ ಸೇವನೆಯಿಂದ ಬಾಯಿಯ ಆರೋಗ್ಯ ಸುಧಾರಿಸುತ್ತದೆಯೆ?
-
ಕರ್ನಾಟಕ19 hours ago
Odisha Train Accident: ಒಡಿಶಾ ರೈಲು ದುರಂತಕ್ಕೆ ಕೋಮು ಬಣ್ಣ ನೀಡಿದ ಮಹಿಳೆ, ಒಡಿಶಾ ಪೊಲೀಸರಿಂದ ತನಿಖೆ
-
ಕರ್ನಾಟಕ17 hours ago
ವಿಶ್ವ ಪರಿಸರ ದಿನ: ಸಸಿ ನೆಡಿ, ಫೋಟೊ ಕಳುಹಿಸಿ; ವಿಸ್ತಾರ ನ್ಯೂಸ್ ಅಭಿಯಾನ
-
ಕರ್ನಾಟಕ14 hours ago
Murder Case: ಟೋಲ್ ವಿಚಾರಕ್ಕೆ ಕಿರಿಕ್; ಹಾಕಿ ಸ್ಟಿಕ್ನಿಂದ ಬಡಿದು ಕೊಂದೇಬಿಟ್ಟರು ದುರುಳರು
-
ಕರ್ನಾಟಕ10 hours ago
DK Shivakumar: ಹೊಸಕೆರೆಹಳ್ಳಿ ಕೆರೆ ಮಧ್ಯೆ ರಸ್ತೆ ಮಾಡಿದ್ದಕ್ಕೆ ಜಾಡಿಸಿದ ಡಿಕೆಶಿ; ಅಧಿಕಾರಿಗಳ ಅಮಾನತಿಗೆ ಆದೇಶ
-
ದೇಶ15 hours ago
Odisha Train Accident: ಗಾಯದ ಮೇಲೆ ಬರೆ ಎಂದರೆ ಇದೇ; ಒಡಿಶಾದಲ್ಲಿ ಹಳಿ ತಪ್ಪಿದ ಮತ್ತೊಂದು ರೈಲು
-
ಕರ್ನಾಟಕ8 hours ago
ಸರ್ಕಾರಿ ಬಸ್ ಓಡಿಸಿದ ಖಾಸಗಿ ವ್ಯಕ್ತಿ; ಕ್ರೂಸರ್ಗೆ ಡಿಕ್ಕಿ, ತಪ್ಪಿತು ಭಾರೀ ಅನಾಹುತ
-
ದೇಶ19 hours ago
world environment day : ಇಂದು ವಿಶ್ವ ಪರಿಸರ ದಿನ 2023: ಈ ದಿನದ ಮಹತ್ವ, ಇತಿಹಾಸ, ಥೀಮ್ ತಿಳಿಯಿರಿ
-
ಪರಿಸರ11 hours ago
ವಿಶ್ವ ಪರಿಸರ ದಿನ: ‘ಸಸಿ ನೆಡಿ, ಫೋಟೊ ಕಳುಹಿಸಿ’ ವಿಸ್ತಾರ ಅಭಿಯಾನ; ನಿಮ್ಮ ಮತ್ತಷ್ಟು ಫೋಟೊಗಳು ಇಲ್ಲಿವೆ