Site icon Vistara News

Neha Murder Case: ಹುಬ್ಬಳ್ಳಿಯಲ್ಲಿ ಸಿಐಡಿ ಸ್ಥಳ ಮಹಜರು; ಫಯಾಜ್‌ನ ಗಲ್ಲಿಗೇರಿಸಲು ಎಬಿವಿಪಿ ಕಾರ್ಯಕರ್ತರ ಆಗ್ರಹ

Neha Murder Case

ಹುಬ್ಬಳ್ಳಿ: ನೇಹಾ ಹತ್ಯೆ ಪ್ರಕರಣ (Neha Murder Case) ಸಂಬಂಧ ಹುಬ್ಬಳ್ಳಿಯ ಬಿವಿಬಿ ಕಾಲೇಜಿಗೆ ಆರೋಪಿ ಫಯಾಜ್‌ನನ್ನು ಸಿಐಡಿ ಅಧಿಕಾರಿಗಳು ಬುಧವಾರ ಕರೆದೊಯ್ದು ಸ್ಥಳ ಮಹಜರು ನಡೆಸಿದರು. ಆರು ದಿನಗಳ‌ ಕಾಲ‌ ಕಸ್ಟಡಿಗೆ ನೀಡಿದ ಹಿನ್ನೆಲೆ ಆರೋಪಿಯನ್ನು ಧಾರವಾಡದ ಕಾರಾಗೃಹದಿಂದ ಕರೆದೊಯ್ದು ಸ್ಥಳ ಮಹಜರು ನಡೆಸಲಾಗಿದೆ. ಈ ವೇಳೆ ಕಾಲೇಜು ಬಳಿ ಜಮಾಯಿಸಿದ ಎಬಿವಿಪಿ ಕಾರ್ಯಕರ್ತರು, ಆರೋಪಿ ಫಯಾಜ್‌ನನ್ನು ಗಲ್ಲಿಗೇರಿಸಿ ಎಂದು ಆಗ್ರಹಿಸಿದರು.

ಧಾರವಾಡದ ಕಾರಾಗೃಹದಲ್ಲಿದ್ದ ಆರೋಪಿಯನ್ನು ವಿಚಾರಣೆಗಾಗಿ ಸಿಐಡಿ ಕಸ್ಟಡಿಗೆ ನೀಡಿ ಒಂದನೇ ಜೆಎಂಎಫ್‌ಸಿ‌‌‌ ನ್ಯಾಯಾಲಯ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಕೊಲೆ‌ ನಡೆದ ಸ್ಥಳಕ್ಕೆ ಆರೋಪಿಯನ್ನು ಸಿಐಡಿ ಕರೆದೊಯ್ದು ಮಹಜರು ನಡೆಸಿದ್ದಾರೆ. ಭಾರೀ ಪೊಲೀಸ್ ಭದ್ರತೆ ಬಡುವೆ ಸಿಐಡಿ ಎಡಿಜಿಪಿ ಬಿ.ಕೆ. ಸಿಂಗ್ ನೇತೃತ್ವದಲ್ಲಿ ಆರೋಪಿಯಿಂದ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದರು.

ಇದನ್ನೂ ಓದಿ | Neha Murder Case: ಫಯಾಜ್‌ ಜೈಲಲ್ಲಿ ಇರೋವಾಗ ಮೊಬೈಲ್ ಫೋಟೊ ಲೀಕ್ ಆಗಲು ಹೇಗೆ ಸಾಧ್ಯ?

ಬಿವಿಬಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮಹಜರು ನಡೆಸುವಾಗ ಎಬಿವಿಪಿ ಕಾರ್ಯಕರ್ತರು ಆಗಮಿಸಿ ಫಯಾಜ್‌ನನ್ನು ಗಲ್ಲಿಗೇರಿಸಬೇಕು ಎಂದು ಘೋಷಣೆ ಕೂಗಿದರು. ಈ ವೇಳೆ ಸ್ಥಳದಲ್ಲಿ ಘೋಷಣೆ ಕೂಗಬೇಡಿ ಎಂದು ಡಿಸಿಪಿ ರವೀಶ್, ಸಿಪಿಐ ದಯಾನಂದ ಸೂಚಿಸಿದರು. ಪೊಲೀಸರ ಮಾತಿಗೆ ಸ್ಪಂದಿಸದ ಎಬಿವಿಪಿ ಕಾರ್ಯಕರ್ತರು ಸ್ಥಳದಲ್ಲೇ ಪ್ರತಿಭಟನೆ ನಡೆಸಲು ಮುಂದಾದರು. ನಂತರ ಅವರನ್ನು ಕ್ಯಾಂಪಸ್‌ನಿಂದ ಹೊರಕಳುಹಿಸಲಾಯಿತು.

ವಿದ್ಯಾರ್ಥಿನಿ ನೇಹಾ ಹತ್ಯೆ ಖಂಡಿಸಿ ಗಂಗಾವತಿ ಬಂದ್

ಗಂಗಾವತಿ: ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ್‌ ಹತ್ಯೆ (Neha Murder Case) ಖಂಡಿಸಿ, ಇಲ್ಲಿನ ಸಾರ್ವಜನಿಕ ಹಿತರಕ್ಷಣಾ ವೇದಿಕೆ ಬುಧವಾರ ಕರೆ ನೀಡಿದ್ದ ಗಂಗಾವತಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ನಗರದ ಪ್ರಮುಖ ವೃತ್ತ, ರಸ್ತೆಗಳಲ್ಲಿರುವ ಅಂಗಡಿ-ಮುಂಗಟ್ಟುಗಳನ್ನು ಸ್ವಯಂ ಪ್ರೇರಣೆಯಿಂದ ಬಂದ್ ಮಾಡಿದ ವ್ಯಾಪಾರಿಗಳು ಬಂದ್‌ಗೆ ಸಹಕಾರ ನೀಡಿದರು. ಅತ್ಯವಶ್ಯಕ ಸೇವೆಗಳಾದ ಹಾಲಿನ ಕೇಂದ್ರ, ಆರೋಗ್ಯ ಸೇವೆ, ಮೆಡಿಕಲ್ ಶಾಪ್, ತರಕಾರಿ ಅಂಗಡಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು.

ಬಂದ್ ಕರೆ ನೀಡಿದ್ದ ಸಂಘಟನೆಯವರು, ಸಾರ್ವಜನಿಕ ಹಿತದೃಷ್ಟಿಯಿಂದ ಸಂಚಾರಕ್ಕೆ ಅಡ್ಡಿಪಡಿಸದ ಹಿನ್ನೆಲೆ ಜನರ ಓಡಾಟ ಸಹಜವಾಗಿತ್ತು.

ಇದನ್ನೂ ಓದಿ: Summer Tour: ಬೇಸಿಗೆ ಪ್ರವಾಸಕ್ಕೆ ಸೂಕ್ತ ಈ 5 ಅದ್ಭುತ ಗಿರಿಧಾಮಗಳು!

ನಗರದ ಪ್ರಮುಖ ವೃತ್ತ, ರಸ್ತೆಗಳಲ್ಲಿ ಬಹುತೇಕ ಅಂಗಡಿ-ಮುಂಗಟ್ಟು ಬಂದ್ ಆಗಿದ್ದವು. ಬಂದ್ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಬಳ್ಳಾರಿ ವಲಯದ ಐಜಿಪಿ ಆರ್.ಎಸ್. ಲೋಕೇಶ್‌ ಕುಮಾರ್, ಎಸ್ಪಿ ಯಶೋಧಾ ವಂಟೆಗೋಡೆ ಸ್ಥಳದಲ್ಲಿ ಬಿಡಾರ ಹೂಡಿದ್ದರು.

ಬೃಹತ್ ಮೆರವಣಿಗೆ

ಇದಕ್ಕೂ ಮೊದಲು ವಿದ್ಯಾರ್ಥಿನಿ ನೇಹಾ ಹಿರೇಮಠ್‌ ಹತ್ಯೆ ಖಂಡಿಸಿ, ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ, ಸಾರ್ವಜನಿಕ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಎಪಿಎಂಸಿಯ ಮೊದಲ ಗೇಟ್‌ನಿಂದ ಮಹಾತ್ಮಗಾಂಧಿ ವೃತ್ತದವರೆಗೆ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಲಾಯಿತು.

ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಕನ್ನಡಪರ ಸಂಘಟನೆ, ವಿವಿಧ ಪಕ್ಷಗಳ ಮುಖಂಡರು, ಮಹಿಳಾ ಸಂಘಟನೆಗಳು, ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಇದನ್ನೂ ಓದಿ: Namma Metro: ಏಪ್ರಿಲ್‌ 26ರಂದು ಮೆಟ್ರೋ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌; ತಡರಾತ್ರಿವರೆಗೂ ಸೇವೆ ವಿಸ್ತರಣೆ

ಈ ಸಂದರ್ಭದಲ್ಲಿ ಮಾಜಿ ಸಂಸದ ಎಸ್. ಶಿವರಾಮಗೌಡ, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಜಿ. ವೀರಪ್ಪ, ಕಾಡಾದ ಮಾಜಿ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ರಾಘವೇಂದ್ರ ಶೆಟ್ಟಿ, ಶಂಕರೇಗೌಡ ಹೊಸಳ್ಳಿ, ಅಶ್ವಿನಿ ದೇಸಾಯಿ, ಮನೋಹರಸ್ವಾಮಿ, ಕವಿತಾ ಗುರುಮೂರ್ತಿ ಸೇರಿದಂತೆ ನಾನಾ ಸಮಾಜದ ಮುಖಂಡರು ಭಾಗಿಯಾಗಿದ್ದರು.

Exit mobile version