Site icon Vistara News

Neha Murder Case: ಲವ್ ಜಿಹಾದ್ ಸಮರ್ಥಿಸಿಕೊಂಡಿದ್ದ ಕೈಗಳಿಂದಲೇ ಆರೋಪಿ ರಕ್ಷಣೆಗೆ ಹೊಂಚು: ಜೆಡಿಎಸ್‌ ಕಿಡಿ

Neha hiremath Murder case

ಬೆಂಗಳೂರು: ಹುಬ್ಬಳ್ಳಿಯ ಬಿವಿಬಿ ಕಾಲೇಜು ಕ್ಯಾಂಪಸ್‌ನಲ್ಲಿ ಯುವತಿಯೊಬ್ಬಳನ್ನು ಪ್ರೀತಿಸಲು ನಿರಾಕರಣೆ ಮಾಡಿದಳು ಎಂಬ ಕಾರಣಕ್ಕೆ ಮಾಡಿದ ಹತ್ಯೆ (‌Neha Murder Case) ಪ್ರಕರಣ ಖಂಡನೀಯ. ಜೀವ ತೆಗೆದ ಪಾಪಿಯನ್ನು ಸುಮ್ಮನೆ ಬಿಡಬಾರದು. ಆರೋಪಿಯನ್ನು ರಕ್ಷಣೆ ಮಾಡಲು ಕಾಣದ ಕೈಗಳು ಪ್ರಯತ್ನಿಸುತ್ತಿವೆ. ಲವ್ ಜಿಹಾದ್ (Love Jihad) ಮೋಹದ ಪಾಶವನ್ನು ಸಮರ್ಥನೆ ಮಾಡಿಕೊಂಡಿದ್ದ ಇದೇ ಕಾಣದ ಕೈಗಳು, ಈಗ ನೇಹಾ ಹಿರೇಮಠ (Neha Heremath) ಅವರನ್ನು ಕೊಲೆ ಮಾಡಿದ ವಿಕೃತ ಪಾಪಿಯನ್ನು ರಕ್ಷಿಸಲು ಹೊಂಚು ಹಾಕುತ್ತಿವೆ ಎಂದು ಜೆಡಿಎಸ್‌ (JDS Karnataka) ಕಿಡಿಕಾರಿದೆ.

ಈ ಬಗ್ಗೆ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಜೆಡಿಎಸ್‌, ಪ್ರೀತಿ ನಿರಾಕರಿಸಿದ ಕಾಲೇಜು ವಿದ್ಯಾರ್ಥಿನಿಯನ್ನು ಕಾಲೇಜು ಆವರಣದಲ್ಲಿಯೇ ಬರ್ಬರವಾಗಿ ಕೊಲೆ ಮಾಡಿದ ಆರೋಪಿಯನ್ನು ರಕ್ಷಣೆ ಮಾಡಲು ಕಾಣದ ಕೈಗಳು ಪ್ರಯತ್ನಿಸುತ್ತಿವೆ ಎಂದು ಆರೋಪ ಮಾಡಿದೆ.

ಜೆಡಿಎಸ್‌ ಪೋಸ್ಟ್‌ನಲ್ಲೇನಿದೆ?

ಲವ್ ಜಿಹಾದ್ ಮೋಹದ ಪಾಶವನ್ನು ಸಮರ್ಥನೆ ಮಾಡಿಕೊಂಡಿದ್ದ ಇದೇ ಕಾಣದ ಕೈಗಳು, ಈಗ ಹುಬ್ಬಳ್ಳಿ ವಿದ್ಯಾರ್ಥಿನಿ ಕುಮಾರಿ ನೇಹಾ ಹಿರೇಮಠ ಅವರನ್ನು ಹಾಡಹಗಲೇ ಕಾಲೇಜು ಆವರಣದಲ್ಲಿಯೇ ಬರ್ಬರವಾಗಿ ಕೊಲೆ ಮಾಡಿದ ವಿಕೃತ ಪಾಪಿಯನ್ನು ರಕ್ಷಿಸಲು ಹೊಂಚು ಹಾಕುತ್ತಿವೆ ಎಂದು ದೂರಿದೆ.

ಇದನ್ನೂ ಓದಿ: Neha Murder Case: ನೇಹಾ ಕೇಸ್‌ನಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ; ಡಿಜಿಗೆ ಸಿಎಂ ಸೂಚನೆ

ಈ ಘಟನೆ ಅತ್ಯಂತ ಆಘಾತಕಾರಿ. ಕಾನೂನು ಸುವ್ಯವಸ್ಥೆ ಹಳಿತಪ್ಪಿದೆ ಎನ್ನುವುದಕ್ಕೆ ಇದೇ ಜ್ವಲಂತ ಉದಾಹರಣೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಅತಿಯಾದ ತುಷ್ಟೀಕರಣವು ಅಪರಾಧ ಮನೋಭಾವದ ಕಿಡಿಗೇಡಿಗಳಿಗೆ ಅಫೀಮಿನಂತಾಗಿದೆ. ಕೆಲವರಿಗಂತೂ ಈ ನೆಲದ ಕಾನೂನು ಕಟ್ಟಳೆ ಅನ್ವಯ ಆಗುತ್ತಿಲ್ಲವೇನೋ ಎಂಬ ಅನುಮಾನವೂ ಕಾಡುತ್ತಿದೆ. ಈ ಸರ್ಕಾರವೂ ಹಾಗೆಯೇ ವರ್ತಿಸುತ್ತಿದೆ ಎಂದು ಜೆಡಿಎಸ್ ಟೀಕಿಸಿದೆ.

ಪ್ರೀತಿ ನಿರಾಕರಿಸಿದ ಕಾರಣಕ್ಕೆ ಜೀವ ತೆಗೆದ ಪರಮ ಪಾಪಿಯನ್ನು ಸುಮ್ಮನೆ ಬಿಡಬಾರದು. ಮುಂದೆ ಇಂತಹ ಘಟನೆಗಳು ನಡೆಯದಂತೆ ಸರಕಾರ ಕಟ್ಟೆಚ್ಚರ ವಹಿಸಬೇಕು. ಆ ನತದೃಷ್ಟ ವಿದ್ಯಾರ್ಥಿನಿಯ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಜೆಡಿಎಸ್ ತಿಳಿಸಿದೆ.

ಐಸಿಸ್‌ ಮಾದರಿಯಲ್ಲಿ ನೇಹಾಗೆ ಚಾಕು ಇರಿತ; ಲವ್‌ ಜಿಹಾದ್‌ ಫಲಿಸದ್ದಕ್ಕೆ ಕೃತ್ಯ: ಪ್ರಮೋದ್‌ ಮುತಾಲಿಕ್

ಕೊಲೆ ಎನ್ನುವುದು ಇಸ್ಲಾಮ್‌ನಲ್ಲಿ ಸಹಜ ಪ್ರಕ್ರಿಯೆಯಾಗಿದೆ. ವಿದ್ಯಾರ್ಥಿನಿಯರಿಗೆ ರಕ್ಷಣೆ ಇಲ್ಲ ಎನ್ನುವಂತಾಗಿದೆ. ಆತ ಐಸಿಸ್ ಮಾದರಿಯಲ್ಲಿ ಕುತ್ತಿಗೆಗೆ ಚಾಕು ಹಾಕಿದ್ದಾನೆ. ಆರೋಪಿ ಫಯಾಜ್‌ ಲವ್ ಮಾಡಿ ಮತಾಂತರ ಮಾಡಲು ಮುಂದಾಗಿದ್ದ. ಲವ್ ಜಿಹಾದ್ ಯಶಸ್ವಿಯಾಗಲಿಲ್ಲವೆಂದು ಈಗ ಕೊಲೆ ಮಾಡಿದ್ದಾನೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗಂಭೀರ ಆರೋಪ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಮೋದ್‌ ಮುತಾಲಿಕ್‌, ಫಯಾಜ್‌ ಐಸಿಸ್‌ ಮಾದರಿಯಲ್ಲಿ ಕುತ್ತಿಗೆಗೆ ಚಾಕು ಹಾಕಿದ್ದಾನೆ. ಚಾಕು ಹಾಕಲು ಆತ ಎಲ್ಲಿ ತರಬೇತಿ ಪಡೆದಿದ್ದಾನೆ? ಈ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಬೆಳೆಸಿದ ವಿಷಬೀಜವಿದು. ಕಾಂಗ್ರೆಸ್ ಹುಟ್ಟಿದಾಗ ಆ ಪಕ್ಷದ ನಾಯಕರು ಬ್ರಿಟಿಷರ ಪರವಿದ್ದರು. ಈಗ ಮುಸ್ಲಿಮರು, ಕೊಲೆಗಡುಕರ ಪರ‌ ಇದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಿಜವಾಗಿ ಕಳಕಳಿ ಇದ್ದರೆ ಕೊಲೆಗಡುಕನನ್ನು ಎನ್ಕೌಂಟರ್ ಮಾಡಿಸಬೇಕು. ಕೊಲೆಗಡುಕನ ಮನೆಗೆ ಬುಲ್ಡೋಜರ್ ಹಚ್ಚಿಸಿ ಕಿತ್ತು ಬಿಸಾಕಬೇಕು. ಜಮಾತೆ ಇಸ್ಲಾಮಿನವರು ಕೂಡಲೇ ಫತ್ವಾ ಹೊರಡಿಸಿ ಅವರ ಮನೆಯನ್ನು ಬಹಿಷ್ಕರಿಸಬೇಕು. ವಕೀಲರು ಅವನ ಪರ ವಾದ ಮಾಡಲು ನಿಲ್ಲಬಾರದು. ಎಲ್ಲಿಯವರೆಗೆ ಕಾಂಗ್ರೆಸ್ ಇರುತ್ತೆದೆಯೋ ಅಲ್ಲಿಯವರೆಗೆ ಈ ರೀತಿ ಕೊಲೆಗಳು ಆಗುತ್ತಲೇ ಇರುತ್ತವೆ ಎಂದು ಪ್ರಮೋದ್‌ ಮುತಾಲಿಕ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಮತ್ತೊಂದು ಬಿಹಾರವಾಗುತ್ತಿದೆ: ಬಸವರಾಜ ಬೊಮ್ಮಾಯಿ

ಹಾಡಹಗಲೇ ಕಾಲೇಜು ಕ್ಯಾಂಪಸ್‌ನಲ್ಲಿ ಯುವತಿಯ ಹತ್ಯೆ ಮಾಡಿರುವುದು ಅತ್ಯಂತ ಆಘಾತಕಾರಿಯಾಗಿದೆ. ಸಮಾಜಘಾತುಕ ಶಕ್ತಿಗಳಿಗೆ ಪೊಲೀಸ್ ಠಾಣೆಗಳಲ್ಲಿ ರಾಜ ಮರ್ಯಾದೆ ಸಿಗುತ್ತಿರುವುದರಿಂದ ರಾಜಾರೋಷವಾಗಿ ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿವೆ. ಕಾಲೇಜು ಯುವತಿಯ ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ಎಸ್‌ಐಟಿ ಮೂಲಕ ತನಿಖೆ ನಡೆಸಬೇಕು. ಕರ್ನಾಟಕವು ಇನ್ನೊಂದು ಬಿಹಾರ ಆಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಆಗ್ರಹಿಸಿದ್ದಾರೆ.

ಹುಬ್ಬಳ್ಳಿಯ ಕಿಮ್ಸ್‌ಗೆ ಭೇಟಿ ನೀಡಿ ನೇಹಾ ಕುಟುಂಬದವರಿಗೆ ಸಾಂತ್ವನ ಹೇಳಿದ ಬಸವರಾಜ ಬೊಮ್ಮಾಯಿ, ಇದೊಂದು ಆಘಾತಕರ ವಿಚಾರ. ಈ ರೀತಿ ಹುಬ್ಬಳ್ಳಿಯಲ್ಲಿ ಯಾವತ್ತೂ ನಡೆದಿಲ್ಲ. ಇದೊಂದು ಸಮಾಜದ ನಡುವೆ ಇರುವ ಕ್ಷೋಭೆ. ಸಮಾಜಗಳ ನಡುವೆ ಸಾಮರಸ್ಯ ಕಡಿಮೆಯಾಗಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಗದಗಿನಲ್ಲಿ ನಮ್ಮ ನಗರ ಸಭೆಯ ಉಪಾಧ್ಯಕ್ಷರ ಕುಟುಂಬದವರು ಕಗ್ಗೊಲೆಯಾಗಿದೆ. ಬೆಂಗಳೂರಿನಲ್ಲಿ ಜೈ ಶ್ರೀರಾಮ್ ಹೇಳಿದವರ ಮೇಲೆ ಹಲ್ಲೆಯಾಗಿದೆ. ಸಮಾಜಘಾತುಕ ಶಕ್ತಿಗಳಿಗೆ ಪೊಲೀಸ್ ಠಾಣೆಗಳಲ್ಲಿ ರಾಜ ಮರ್ಯಾದೆ ಸಿಗುತ್ತಿದೆ. ಈ ಸರ್ಕಾರದಲ್ಲಿ ಗೂಂಡಾಗಳನ್ನು ರಕ್ಷಿಸುವವರು ಇದ್ದಾರೆ ಎನ್ನುವ ನಂಬಿಕೆ ಇರುವುದರಿಂದ ಈ ರೀತಿ ಘಟನೆ ನಡೆಯುತ್ತಿವೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದು ಟ್ವೀಟ್ ಮಾಡಿ ಕೈತೊಳೆದುಕೊಳ್ಳಬಾರದು ಎಂದು ಹೇಳಿದರು.

ಇದನ್ನು ಕೇವಲ ವೈಯಕ್ತಿಕ ಘಟನೆ ಎಂದು ನೋಡಬಾರದು. ಇಂಥದ್ದು ಇಡೀ ಸಮಾಜದ ಮೇಲೆ ಪರಿಣಾಮ ಬೀರುತ್ತವೆ. ಕರ್ನಾಟಕವು ಇನ್ನೊಂದು ಬಿಹಾರ ಆಗುತ್ತಿದೆ. ಗೃಹ ಸಚಿವರು, ಡಿಜಿಪಿ ಏನು ಮಾಡುತ್ತಿದ್ದಾರೆ? ಈ ಸರ್ಕಾರದ ಅವಧಿಯಲ್ಲಿ ವಿಧಾನಸೌಧದಲ್ಲಿಯೇ ಪಾಕಿಸ್ತಾನ ಜಿಂದಾಬಾದ್ ಹೇಳುತ್ತಾರೆ. ಗದಗಿನಲ್ಲಿ ಕುಟುಂಬದ ಕಗ್ಗೊಲೆಯಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ವಾಗ್ದಾಳಿ ನಡೆಸಿದರು.

ಹುಬ್ಬಳ್ಳಿ ಕಮಿಷನರ್ ಹೇಳಿಕೆಗಳನ್ನು ನೋಡಿದಾಗ ಅವರು ಯಾವುದೇ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ನೇಹಾ ಹತ್ಯೆ ಪ್ರಕರಣವನ್ನು ಎಸ್‌ಐಟಿ ಮೂಲಕ ತನಿಖೆ ನಡೆಸಬೇಕು. ರಾಜ್ಯದಲ್ಲಿ ಎಲ್ಲ ಕುಟುಂಬಗಳು ಭಯಭೀತರಾಗಿದ್ದಾರೆ. ಅಪರಾಧ ವಿಭಾಗದ ಡಿಜಿಪಿ ಇದರ ಮುಂದಾಳತ್ವ ವಹಿಸಿ ತನಿಖೆ ನಡೆಸಬೇಕು. ಆರೋಪಿಗೆ ತಕ್ಕ ಶಿಕ್ಷೆಯಾಗಬೇಕು. ಈ ಪ್ರಕರಣದ ತಾರ್ಕಿಕ ಅಂತ್ಯ ಆಗುವವರೆಗೂ ಹೋರಾಟ ಮಾಡುತ್ತೇವೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಕುಟುಂಬಕ್ಕೆ ಸಾಂತ್ವನ

ಹತ್ಯೆಗೀಡಾದ ನೇಹಾ ಅವರ ತಂದೆಗೆ ದೂರವಾಣಿ ಮೂಲಕ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಈ ರೀತಿಯ ಘಟನೆ ದುರದೃಷ್ಟಕರ ನಾವು ನಿಮ್ಮೊಂದಿಗಿದ್ದೇವೆ. ಧೈರ್ಯವಾಗಿರಿ ಎಂದು ಸಾಂತ್ವನ ಹೇಳಿದರು.

ಇದನ್ನೂ ಓದಿ: Neha Murder Case: ನೇಹಾ ಕೊಲೆಗಾರ ಫಯಾಜ್‌ಗೆ 14 ದಿನ ನ್ಯಾಯಾಂಗ ಬಂಧನ; ʼಲವ್‌ ಜಿಹಾದ್‌ ಕೊಲೆʼ ವಿರೋಧಿಸಿ ಮೂರು ದಿನ ಮುನವಳ್ಳಿ ಬಂದ್

ಏನಿದು ಪ್ರಕರಣ?

ಪ್ರೀತಿಸಲು‌ ನಿರಾಕರಿಸಿದಳು (Refusal to love) ಎಂಬ ಕಾರಣಕ್ಕಾಗಿ ಪಾಗಲ್‌ ಪ್ರೇಮಿ ಫಯಾಜ್‌, ಕಾರ್ಪೋರೇಟರ್‌ ಮಗಳನ್ನು ಭೀಕರವಾಗಿ ಕೊಲೆ (Stab wound) ಮಾಡಿದ್ದ. ಚಾಕುವಿನಿಂದ 9 ಬಾರಿ ಇರಿದು (Murder Case) ಕೊಂದಿದ್ದಾನೆ. ಹುಬ್ಬಳ್ಳಿಯ ಬಿವಿಬಿ ಕಾಲೇಜು (Hubballi BVB College) ಆವರಣದಲ್ಲಿ ಕೊಲೆ ನಡೆದಿದೆ. ನೇಹಾ ಹಿರೇಮಠ ಕೊಲೆಯಾದ ಯುವತಿ. ನೇಹಾ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಮಗಳಾಗಿದ್ದಾಳೆ.

ಪ್ರೀತಿಸಲು ನಿರಾಕರಿಸಿದ್ದಕ್ಕೆ ಕೊಲೆ

ನೇಹಾ ಹಿರೇಮಠ ಹುಬ್ಬಳ್ಳಿಯ ಬಿವಿಬಿ‌ ಕಾಲೇಜಿನಲ್ಲಿ ಓದುತ್ತಿದ್ದಾಳೆ. ಈ ವೇಳೆ ಆರೋಪಿ ಪ್ರೀತಿಸುವಂತೆ ಹಿಂದೆ ಬಿದ್ದಿದ್ದ. ಆದರೆ, ನೇಹಾ ನಿರಾಕರಣೆ ಮಾಡುತ್ತಲೇ ಬಂದಿದ್ದಾಳೆ. ಇದರಿಂದ ರೊಚ್ಚಿಗೆದ್ದ ಆತ ಗುರುವಾರ ಕಾಲೇಜು ಕ್ಯಾಂಪಸ್‌ಗೆ ಬಂದಿದ್ದಾನೆ. ಪುನಃ ಆಕೆ ಬಳಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ. ಆದರೆ, ನೇಹಾ ಪ್ರೀತಿಸಲು‌ ನಿರಾಕರಿಸಿದ್ದಾಳೆ. ಹೀಗಾಗಿ ಮೊದಲೇ ನಿರ್ಧರಿಸಿ ಬಂದಿದ್ದ ಆರೋಪಿಯು ನೇಹಾಳಿಗೆ ಕಾಲೇಜು ಕ್ಯಾಂಟೀನ್‌ನಲ್ಲಿಯೇ ಚಾಕುವಿನಿಂದ ಇರಿದಿದ್ದಾನೆ. ಯುವತಿಗೆ ಮನಬಂದಂತೆ ಚಾಕುವಿನಿಂದ ಇರಿದಿದ್ದಾನೆ. ಒಟ್ಟು ಒಂಭತ್ತು ಬಾರಿ ಚಾಕುವಿನಿಂದ ಚುಚ್ಚಿದ್ದು, ನೇಹಾಳಿಗೆ ತೀವ್ರ ರಕ್ತಸ್ರಾವವಾಗಿದೆ. ಸ್ಥಳೀಯರು ತಕ್ಷಣವೇ ಕಿಮ್ಸ್ ಆಸ್ಪತ್ರೆಗೆ ಆಕೆಯನ್ನು ರವಾನೆ ಮಾಡಿದ್ದಾರೆ. ಆದರೆ, ಅಷ್ಟರಲ್ಲಾಗಲೇ ನೇಹಾ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ.

Exit mobile version