ಹುಬ್ಬಳ್ಳಿ: ಪ್ರೀತಿ ನಿರಾಕರಿಸಿದ ಕಾರಣಕ್ಕೆ ಹತ್ಯೆಗೀಡಾದ ನೇಹಾ ಪ್ರಕರಣದಲ್ಲಿ (Neha Murder Case) ನ್ಯಾಯ ಕೋರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಸಲ್ಲಿಸಲಾಗಿದೆ. ಹುಬ್ಬಳ್ಳಿಗೆ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್ ಜೋಶಿ ಪರ ಪ್ರಚಾರಕ್ಕೆಂದು ಬುಧವಾರ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ನೇಹಾ ತಂದೆ-ತಾಯಿ ನೇರವಾಗಿ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ್ದಾರೆ.
ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ವೇದಿಕೆ ಹಿಂಭಾಗದಲ್ಲಿ ಗೃಹ ಸಚಿವರನ್ನು ಭೇಟಿ ಮಾಡಿರುವ ನೇಹಾ ಕುಟುಂಬ ಮಗಳ ಹತ್ಯೆ ಕುರಿತು ಸಂಪೂರ್ಣ ಮಾಹಿತಿ ಒದಗಿಸಿದರು. ನೇಹಾ ತಂದೆ ನಿರಂಜನ್ ಹಿರೇಮಠ ಅವರು, ತಾವೊಬ್ಬ ಕಾಂಗ್ರೆಸ್ ಕಾರ್ಪೊರೇಟರ್ ಆಗಿದ್ದರೂ ಮಗಳ ಹತ್ಯೆ ಪ್ರಕರಣದಲ್ಲಿ ಸರಿಯಾಗಿ ನ್ಯಾಯ ದಕ್ಕಿಸಿಕೊಳ್ಳಲು ಆಗುತ್ತಿಲ್ಲವೆಂದು ಅಮಿತ್ ಶಾ ಅವರೆದುರು ದುಃಖ ತೋಡಿಕೊಂಡಿದ್ದಾರೆ.
ಮಗಳು ನೇಹಾಳ ಹತ್ಯೆ ಹಿನ್ನೆಲೆ ಮತ್ತು ಈವರೆಗೆ ಆದ ಬೆಳವಣಿಗೆಗಳ ಕುರಿತು ಕಾರ್ಪೊರೇಟರ್ ನಿರಂಜನ್ ಅವರು ಕೇಂದ್ರ ಗೃಹ ಸಚಿವರೆದುರು ವಿವರಿಸಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನೇಹಾ ತಂದೆ-ತಾಯಿಗೆ ಸಾಂತ್ವನ ಹೇಳಿದರಲ್ಲದೆ, ನಾವಿದ್ದೇವೆ ಹೆದರಬೇಡಿ ಎಂದು ಆತ್ಮಸ್ಥೈರ್ಯ ತುಂಬಿದರು.
ಇದನ್ನೂ ಓದಿ | PM Narendra Modi: ನೇಹಾ ಹಿರೇಮಠ ಹತ್ಯೆ ಆತಂಕಕಾರಿ; ಹೊಸಪೇಟೆಯಲ್ಲಿ ಕಾಂಗ್ರೆಸ್‌ಗೆ ಮೋದಿ ಚಾಟಿ!
ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್ ಜೋಶಿ, ಶಾಸಕರಾದ ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ ಮತ್ತಿತರ ಪ್ರಮುಖರು ಈ ಸಂದರ್ಭದಲ್ಲಿ ಇದ್ದರು.
ಮಹಿಳೆಗೆ ಅನ್ಯಾಯ ಮಾಡಿದ್ರೆ ಅಂಥವರ ಜತೆ ಬಿಜೆಪಿ ಇರಲ್ಲ; ಪ್ರಜ್ವಲ್‌ನನ್ನು ಬಿಟ್ಟಿದ್ದು ಕಾಂಗ್ರೆಸ್ ತಪ್ಪು ಎಂದ ಶಾ
ಹುಬ್ಬಳ್ಳಿ: ಹಾಸನ ಸಂಸದ (Hassan MP), ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ (Prajwal Revanna Case) ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್ ಪ್ರಕರಣಕ್ಕೆ (Hassan Pen Drive Case) ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಯಾವುದೇ ಮಹಿಳೆಗೆ ಅನ್ಯಾಯ ಮಾಡಿದರೂ ಅಂಥವರ ಜತೆಗೆ ಬಿಜೆಪಿ ಇರಲ್ಲ. ಸಿಎಂ ಸಿದ್ದರಾಮಯ್ಯ (CM Siddaramaiah), ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ಅವರೇ ಇಲ್ಲಿ ಸ್ವಲ್ಪ ಕೇಳಿಸಿಕೊಳ್ಳಿ. ಪ್ರಜ್ವಲ್ ಮೇಲೆ ಕ್ರಮವನ್ನು ನೀವು ತೆಗೆದುಕೊಳ್ಳಬೇಕಿತ್ತು, ನಾವಲ್ಲ ಎಂದು ಗುಡುಗಿದ್ದಾರೆ.
ಹುಬ್ಬಳ್ಳಿಯಲ್ಲಿ ಬುಧವಾರ ಆಯೋಜಿಸಿದ್ದ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಒಕ್ಕಲಿಗ ಬೆಲ್ಟ್‌ನಲ್ಲಿ ಚುನಾವಣೆ ಆಗುವವರೆಗೂ ಪ್ರಜ್ವಲ್ ರೇವಣ್ಣ ಅವರ ಮೇಲೆ ನೀವು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಈ ವಿಷಯದಲ್ಲಿ ಭಾರಿ ರಾಜಕೀಯ ಮಾಡಿದ್ದೀರಿ. ಆರೋಪಿ ಪ್ರಜ್ವಲ್ ರೇವಣ್ಣ ಅವರನ್ನು ವಿದೇಶಕ್ಕೆ ಹೋಗಲು ಬಿಟ್ಟಿದ್ದೀರಿ. ಧೈರ್ಯವಿದ್ದರೆ ಸತ್ಯವನ್ನು ಜನರ ಮುಂದೆ ಹೇಳಿ. ಇಂತಹ ಕೃತ್ಯ ಮಾಡುವವರಿಗೆ ಕಠೋರವಾದ ಶಿಕ್ಷೆ ಆಗಬೇಕು, ವಿಳಂಬವಾಗಬಾರದು ಅನ್ನೋದು ನಮ್ಮ ನಿಲುವು. ಇಂತಹ ಭಯಾನಕ ಅಪರಾಧದ ನಡುವೆಯೂ ಇವರು ರಾಜಕೀಯ ಮಾಡುತ್ತಿದ್ದಾರೆ ಎಂದು ಗುಡುಗಿದರು.
ನಿಮಗಾಗದಿದ್ದರೆ ಕರ್ನಾಟಕದ ಸುರಕ್ಷತೆಯನ್ನು ನಮಗೆ ಬಿಡಿ
ಏಪ್ರಿಲ್ 18ರಂದು ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಹತ್ಯೆಯಾಯಿತು. ಇದು ವೈಯಕ್ತಿಕ ಕೇಸ್ ಎಂದು ಕಾಂಗ್ರೆಸ್ ನಾಯಕರು ಹೇಳಿದರು. ನಿಮಗೆ ಆಗದಿದ್ದರೆ ಬಿಡಿ, ನಾವು ಕರ್ನಾಟಕವನ್ನು ಸುರಕ್ಷಿತವನ್ನಾಗಿ ಮಾಡುತ್ತೇವೆ. ನಾವು ಕರ್ನಾಟಕದ ಹೆಣ್ಣು ಮಕ್ಕಳಿಗೆ ಸುರಕ್ಷತೆಯನ್ನು ಕೊಡುತ್ತೇವೆ ಎಂದು ಅಮಿತ್ ಶಾ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್‌ನಿಂದ ವೋಟ್ ಬ್ಯಾಂಕ್ ರಾಜಕಾರಣ
ಕಾಂಗ್ರೆಸ್‌ನವರು ವೋಟ್ ಬ್ಯಾಂಕ್‌ಗಾಗಿ ಜನರನ್ನು ಸಂಕಷ್ಟಕ್ಕೆ ಸಿಲುಕಿಸುವ ಕೆಲಸ ಮಾಡಿದ್ದಾರೆ. ಬಾಂಬ್ ಬ್ಲಾಸ್ಟ್ ಆದರೆ ಇವರಿಗೆ ಯಾವುದೇ ಲೆಕ್ಕವಿಲ್ಲ. ನೀವು ಪ್ರಲ್ಹಾದ್ ಜೋಶಿಯವರಿಗೆ ಹಾಕುವ ಒಂದೊಂದು ಮತವೂ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡುತ್ತದೆ. ಮೋದಿಯವರು ಮತ್ತೊಮ್ಮೆ ಪ್ರಧಾನಿಯಾದರೆ ಭಯೋತ್ಪಾದನೆಯು ಸಂಪೂರ್ಣ ನಿರ್ಮೂಲನೆಯಾಗುತ್ತದೆ. ಕಾಂಗ್ರೆಸ್‌ನವರು ವೋಟ್ ಬ್ಯಾಂಕ್ ಕಾರಣಕ್ಕೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದಲ್ಲಿ ಆಯೋಜನೆ ಮಾಡಿದ್ದ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಗೆ ಬರಲಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಹತ್ತು ವರ್ಷದಲ್ಲಿ ಕಾಂಗ್ರೆಸ್‌ನ ತುಷ್ಟೀಕರಣ ರಾಜಕೀಯವನ್ನು ಕಿತ್ತುಹಾಕಿದ್ದಾರೆ ಎಂದು ಅಮಿತ್ ಶಾ ಹೇಳಿದರು.
ಇದನ್ನೂ ಓದಿ: Prajwal Revanna Case: ಏನಿದು ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್? ಕೇಂದ್ರ ರದ್ದು ಮಾಡಿದರೆ ಪ್ರಜ್ವಲ್ ರೇವಣ್ಣ ಅರೆಸ್ಟ್!
ಕಾಂಗ್ರೆಸ್‌ನವರು ಸುಳ್ಳು ಹೇಳುತ್ತಾರೆ
ಪ್ರಲ್ಹಾದ್ ಜೋಶಿಯವರನ್ನು ದೆಹಲಿಗೆ ನೀವು ಕಳುಹಿಸಿ, ಅವರನ್ನು ದೊಡ್ಡವರನ್ನಾಗಿ ನಾವು ಮಾಡುತ್ತೇವೆ. ಜೋಶಿ ನೋಡಲು ಸೀದಾ ಸಾದಾ ಕಾಣುತ್ತಾರೆ. ಹುಬ್ಬಳ್ಳಿ- ಧಾರವಾಡದ ಅಭಿವೃದ್ಧಿ ವಿಷಯ ಬಂದಾಗ ನನ್ನ ಜತೆಗೂ ಜಗಳ ಮಾಡುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬರದ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪರಸ್ಪರ ಜಗಳದಲ್ಲಿ ತೊಡಗಿದ್ದಾರೆ. ನೀತಿ ಸಂಹಿತೆ ಜಾರಿಯಾಗಿದ್ದಕ್ಕೆ ಬರ ಪರಿಹಾರ ವಿಳಂಬವಾಗಿದೆ. ಕಾಂಗ್ರೆಸ್‌ನವರು ಸುಳ್ಳು ಹೇಳಿ ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ. ಈಗ ಹಣ ಬಿಡುಗಡೆಯಾಗಿದೆ ಎಂದು ಹೇಳಿದರು.