ನೆಲಮಂಗಲ (ಬೆಂಗಳೂರು ಗ್ರಾಮಾಂತರ): ಬೆಂಗಳೂರು ಗ್ರಾಮಾಂತರ ಸಮೀಪದ ನೆಲಮಂಗಲದಲ್ಲಿ ಪೊಲೀಸರು ನಡೆಸಿದ ಹಲ್ಲೆಯಿಂದ ತೀವ್ರ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ನಡೆದಿದೆ.
ಪೊಲೀಸರ ಹಲ್ಲೆಯಿಂದ ಬಲರಾಮ ( 35) ಎಂಬುವರು ಮೃತಪಟ್ಟಿದ್ದಾರೆ. ಬೆಂಗಳೂರು ಗ್ರಾಮಾಂತರ ಸಮೀಪವಿರುವ ಸೊಂಡೆಕೊಪ್ಪ ಗ್ರಾಮದಲ್ಲಿ ಘಟನೆ ನಡೆದಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ವಿಜಯ್ ಕುಮಾರ್, ಜನಾರ್ದನ್ ಎಂಬ ಪೊಲೀಸರಿಂದ ಹಲ್ಲೆ ನಡೆದಿದೆ ಎನ್ನಲಾಗಿದೆ.
ಸೆಪ್ಟೆಂಬರ್ 19 ರಂದು ಬೆಳಿಗ್ಗೆ 8.45ರ ವೇಳೆ 112 ERSS ವಾಹನದಲ್ಲಿ ಬಂದಿದ್ದ ಪೊಲೀಸರಿಂದ ಹಲ್ಲೆ ನಡೆದಿದೆ. ದೇವಸ್ಥಾನಕ್ಕೆ ಹೋಗುತ್ತಿರುವುದಾಗಿ ಮನೆಯಲ್ಲಿ ತಿಳಿಸಿ ಹೊರ ಬಂದಿದ್ದ ಬಲರಾಮ ಅವರ ಮೇಲೆ ಹಲ್ಲೆ ನಡೆದಿದೆ. ಪೊಲೀಸರು ಲಾಠಿ ಬೀಸಿದಾಗ ತೊಡೆ, ಕಾಲು ಮತ್ತು ಮರ್ಮಾಂಗಕ್ಕೆ ಏಟು ಬಿದ್ದಿತ್ತು. ಚಿಕಿತ್ಸೆ ಫಲಕಾರಿಯಾಗದೇ ಬಲರಾಮ ಶನಿವಾರ ಮೃತಪಟ್ಟಿದ್ದಾರೆ. ಪೊಲೀಸರ ಹಲ್ಲೆಯಿಂದಲೇ ಬಲರಾಮ ಸಾವನ್ನಪ್ಪಿದ್ದಾಗಿ ಮೃತ ಕುಟುಂಬಸ್ಥರು ಆರೋಪಿಸಿದ್ದಾರೆ.
ಹಲ್ಲೆ ನಡೆಸಿದ ಪೊಲೀಸ್ ಸಿಬ್ಬಂದಿಗಳ ಮೇಲೆ ದೂರು ದಾಖಲಿಸಿಕೊಳ್ಳದ ಪೊಲೀಸರ ವಿರುದ್ಧ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.