Site icon Vistara News

ತವರು ಜಿಲ್ಲೆಗೆ ಸಿಎಂ‌ ಸಿದ್ದರಾಮಯ್ಯ ಭರ್ಜರಿ ಗಿಫ್ಟ್, ಬಿಡಿಎ ಮಾದರಿಯಲ್ಲಿ ಎಂಡಿಎ

mda siddaramaiah

ಬೆಂಗಳೂರು: ತವರು ಜಿಲ್ಲೆ ಮೈಸೂರಿಗೆ ಭರ್ಜರಿ ಗಿಫ್ಟ್ ನೀಡಲು ಸಿಎಂ ಸಿದ್ದರಾಮಯ್ಯ (CM Siddaramaiah) ಸಜ್ಜಾಗಿದ್ದಾರೆ. ಬೆಂಗಳೂರಿನಲ್ಲಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (BDA) ಮಾದರಿಯಲ್ಲೇ ಮೈಸೂರಿನಲ್ಲಿ ಮೈಸೂರು ಅಭಿವೃದ್ಧಿ ಪ್ರಾಧಿಕಾರ (Mysore development authority- MDA) ತರಲು ಚಿಂತನೆ ನಡೆಸಿದ್ದಾರೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ಈಗಾಗಲೇ ಕಾರ್ಯಾಚರಿಸುತ್ತಿದೆ. ಅದನ್ನು ʼಮೈಸೂರು ಅಭಿವೃದ್ಧಿ ಪ್ರಾಧಿಕಾರʼವಾಗಿ ಮಾಡಲು ಸಿದ್ದರಾಮಯ್ಯ ಸಿದ್ಧರಾಗಿದ್ದಾರೆ. ಹೀಗಾಗಿ ಬೆಂಗಳೂರು ಬಳಿಕ 40 ವರ್ಷಗಳ ನಂತರ ಮತ್ತೊಂದು ಜಿಲ್ಲೆಗೆ ಅಭಿವೃದ್ಧಿ ಪ್ರಾಧಿಕಾರ ಲಭ್ಯವಾಗುತ್ತಿದೆ.

ಬೆಂಗಳೂರಿಗೆ ಮಾತ್ರ ಇದ್ದ ವಿಶೇಷ ಅಭಿವೃದ್ಧಿ ಪ್ರಾಧಿಕಾರವನ್ನು ಈಗ ಮೈಸೂರಿಗೂ ನೀಡಲು ಸರ್ಕಾರ ಸಜ್ಜಾಗುತ್ತಿದೆ. ಮೊದಲು ಕ್ಯಾಬಿನೆಟ್‌ನಲ್ಲಿ ಈ ವಿಚಾರ ತಂದು ನಂತರ ಅಧಿವೇಶನದಲ್ಲಿ ಈ ಕುರಿತು ವಿಧೇಯಕ ಮಂಡಿಸಲು ಚಿಂತನೆ ನಡೆಸಲಾಗಿದೆ. ಎಲ್ಲಾ ಅಂದುಕೊಂಡ ಹಾಗೇ ನಡೆದರೆ ಈ ಅಧಿವೇಶನಲ್ಲಿ ಈ MDA ವಿಧೇಯಕ ಮಂಡಿಸುವ ಸಾಧ್ಯತೆ ಇದೆ.

ಮೈಸೂರು ಕೂಡ ಬೆಂಗಳೂರಿನಂತೆಯೇ ಅಭಿವೃದ್ಧಿ ಹೊಂದುತ್ತಿದ್ದು, ಮೂಲಸೌಕರ್ಯಗಳ ವಿಷಯದಲ್ಲಿ ಬೆಂಗಳೂರು ಇದೀಗ ಸಂತೃಪ್ತ ಸ್ಥಿತಿ ತಲುಪಿರುವುದರಿಂದ ಉದ್ಯಮಿಗಳು ಮೈಸೂರಿನ ಕಡೆಗೆ ದೃಷ್ಟಿ ಹಾಯಿಸಿದ್ದಾರೆ. ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ಸವೇ ಹಾಗೂ ವಿಮಾನ ನಿಲ್ದಾಣಗಳಿಂದಾಗಿ ಕನೆಕ್ಟಿವಿಟಿ ಬಹು ಸುಲಭವಾಗಿದೆ. ಹೀಗಾಗಿ ಇನ್ನು ಇಪ್ಪತ್ತು ವರ್ಷಗಳಲ್ಲಿ ಮೈಸೂರು ಕೂಡ ಹೆಚ್ಚಿನ ವೇಗದಲ್ಲಿ ಬೆಳೆದು ನಿಲ್ಲಲಿದೆ ಎಂಬ ಅಭಿಪ್ರಾಯವಿದ್ದು, ಅದಕ್ಕೆ ತಕ್ಕಂತೆ ಅಭಿವೃದ್ಧಿ ಪ್ರಾಧಿಕಾರದ ಅಗತ್ಯವಿದೆ ಎಂದು ನಗರಾಭಿವೃದ್ಧಿ ತಜ್ಞರು ಸೂಚಿಸಿದ್ದರು.

ಸಂಪುಟ ತೀರ್ಮಾನಗಳು

ನಿನ್ನೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ಕೆಲವು ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. 2022-23ನೇ ಸಾಲಿಗೆ ಗುಣಮಟ್ಟ ವಿಚಲನೆ ಹೊಂದಿದ ಒಂದನೇ ಜೊತೆ ಸಮವಸ್ತ್ರ ಪೂರೈಸಿರುವುದಕ್ಕೆ ವಿಳಂಬ ದಂಡ ಮತ್ತು ವಿಚಲನೆಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯಿಂದ ತಡೆಹಿಡಿಯಲಾದ ಮೊತ್ತವನ್ನು ಕೆ.ಎಸ್.ಟಿ.ಐ.ಡಿ.ಸಿ. ಸಂಸ್ಥೆಗೆ ಬಿಡುಗಡೆಗೆ ಸಮ್ಮತಿಸಲಾಗಿದೆ.

2024ನೇ ಸಾಲಿಗೆ ಸಾರ್ವತ್ರಿಕ ರಜೆ ಹಾಗೂ ಪರಿಮಿತ ರಜೆಗಳನ್ನು ಘೋಷಿಸಸಲು ತೀರ್ಮಾನಿಸಲಾಗಿದೆ. ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ ನೀಡುವ ಮುಂಬಡ್ತಿಯಲ್ಲಿ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡುವ ಹೆಚ್ಚುವರಿ ಬಿಂದುಗಳನ್ನು ಗುರುತಿಸಲು ಮತು ಎದ್ದು ಕಾಣುವ ವಿಕಲಚೇತನರ ಮೀಸಲಾತಿಯನ್ನೊಳಗೊಂಡ ಒಂದೇ ರೋಸ್ಟರನ್ನು ಸಿದ್ಧಪಡಿಸಲು ಒಪ್ಪಿಗೆ ನೀಡಲಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 2731 ಆರೋಗ್ಯ ಸಂಸ್ಥೆಗಳಲ್ಲಿ ಜೈವಿಕ ವೈದ್ಯಕೀಯ ಸಲಕರಣೆಗಳ ಮೇಲ್ವಿಚಾರಣೆ ಮತ್ತು ನಿರ್ವಹಣೆಯನ್ನು ವಾರ್ಷಿಕ ವೆಚ್ಚ ರೂ. 32.74 ಕೋಟಿಗಳ ಅಂದಾಜು ವೆಚ್ಚದಲ್ಲಿ 3 ವರ್ಷಗಳ ಅವಧಿಗೆ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ನಿರ್ವಹಣೆ ಮಾಡಲು ಅನುಮೋದನೆ ನೀಡಲು ಒಪ್ಪಿಗೆ ನೀಡಲಾಗಿದೆ.

Exit mobile version