ಮೈಸೂರು: ದಸರಾ ಹಬ್ಬ ಆರಂಭವಾಗಲು ದಿನಗಣನೆ ಆರಂಭವಾಗಿದೆ. ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಆಚರಿಸಲು ಅರಮನೆ ನಗರಿಯೂ ಸಜ್ಜಾಗಿದೆ. ಈ ಮಧ್ಯೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ವಿಶೇಷ ಟೂರ್ ಪ್ಯಾಕೇಜ್ (Tour packages) ಪ್ರಕಟಿಸಿದೆ. ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲು ಆಗಮಿಸುವ ಪ್ರವಾಸಿಗರಿಗೆ ವಿನಾಯಿತಿ ದರದಲ್ಲಿ ಈ ಪ್ಯಾಕೇಜ್ ದೊರೆಯಲಿದೆ. ಈ ಬಾರಿಯ ದಸರಾ ಅಕ್ಟೋಬರ್ 15ರಿಂದ 24ರ ತನಕ ನಡೆಯಲಿದೆ.
ಡಬಲ್ ಡೆಕ್ಕರ್ ಬಸ್ ವಿಶೇಷ ಆಕರ್ಷಣೆ
ಪ್ರವಾಸಿಗರ ವಿಶೇಷ ಆಕರ್ಷಣೆಯಾದ ‘ಅಂಬಾರಿ’ ಡಬಲ್ ಡೆಕ್ಕರ್ ಬಸ್ ಅನ್ನು ಕೆಎಸ್‌ಟಿಡಿಎಸ್ ಮೈಸೂರು ನಗರದಾದ್ಯಂತ ಓಡಿಸಲಿದೆ. ಇದರಿಂದ ಬಸ್ ಮೇಲೆ ಕುಳಿತು ನಗರದ ನೋಟವನ್ನು ಸವಿಯುವ ಅವಕಾಶ ಪ್ರವಾಸಿಗರ ಪಾಲಿಗೆ ಸಿಗಲಿದೆ. ಅಂಬಾರಿ ಬಸ್‌ನ ಓಪನ್ ಅಪ್ಪರ್ ಡೆಕ್ ದರವು ಒಂದು ಗಂಟೆಯ ನಗರ ಪ್ರಯಾಣಕ್ಕೆ ಪ್ರಸ್ತುತ 250 ರೂ.ಗಳ ಬದಲು 500 ರೂ.ಗೆ ಏರಲಿದೆ. ಲೋವರ್ ಡೆಕ್ ಬೆಲೆ 250 ರೂ. ಆಗಿದೆ.
ಅಪ್ಪರ್ ಡೆಕ್ ಪ್ರಯಾಣಕ್ಕೆ ಈ ಬಾರಿ ಹೆಚ್ಚಿನ ಬೇಡಿಕೆ ಕಂಡುಬರುವ ನಿರೀಕ್ಷೆಯಲ್ಲಿದೆ ಕೆಎಸ್‌ಟಿಡಿಸಿ. ಕಳೆದ ವರ್ಷ ದರ 250 ರೂ. ಇತ್ತು ಮತ್ತು ಬಹುತೇಕ ಹೆಚ್ಚಿನ ಪ್ರವಾಸಿಗರು ಉತ್ತಮ ನೋಟಕ್ಕಾಗಿ ಅಪ್ಪರ್ ಡೆಕ್ ಆಯ್ಕೆ ಮಾಡಿಕೊಂಡಿದ್ದರು. ಹೀಗಾಗಿ ಈ ವರ್ಷವೂ ಬೇಡಿಕೆ ಹೆಚ್ಚಿರಲಿದೆ ಎಂದು ನಿರೀಕ್ಷಿಸಲಾಗಿದೆ.
ಕಳೆದ ವರ್ಷ ಅಪ್ಪರ್ ಡೆಕ್ ತುಂಬಿದಾಗ ಕೆಳಗೆ ಕುಳಿತು ಪ್ರಯಾಣಿಸಲು ಪ್ರವಾಸಿಗರು ನಿರಾಕರಿಸಿ ಮುಂದಿನ ಟ್ರಿಪ್‌ಗಾಗಿ ಕಾಯುತ್ತಿದ್ದರು. ಈ ವರ್ಷ ದಸರಾ ದೀಪಾಲಂಕಾರ ಪ್ರಾರಂಭವಾದ ನಂತರವೇ ಅಂಬಾರಿಯ ಅಪ್ಪರ್ ಡೆಕ್‌ನ ಪರಿಷ್ಕೃತ ದರಗಳು ಜಾರಿಗೆ ಬರಲಿವೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ಮೈಸೂರು ಅರಮನೆಯ ದಕ್ಷಿಣ ದ್ವಾರದಿಂದ ಪ್ರಾರಂಭವಾಗುವ ಒಂದು ಅಂಬಾರಿ ಬಸ್ ಮಾತ್ರ ನಗರದೊಳಗೆ ಕಾರ್ಯನಿರ್ವಹಿಸುತ್ತಿದೆ. ಈ ಬಸ್ ಬೆಳಗ್ಗೆ 10.30ಕ್ಕೆ ಪ್ರವಾಸವನ್ನು ಪ್ರಾರಂಭಿಸಿದರೆ ಸಂಜೆ 7.30ಕ್ಕೆ ಕೊನೆಗೊಳಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಸರಾ ಹಬ್ಬ ಆರಂಭವಾಗುತ್ತಿದ್ದಂತೆ 5 ಹೆಚ್ಚುವರಿ ಅಂಬಾರಿ ಬಸ್‌ಗಳನ್ನು ಓಡಿಸಲಾಗುತ್ತದೆ. ಈಗ ಅರಮನೆಯ ದಕ್ಷಿಣ ಗೇಟ್‌ನಿಂದ ಸಂಚರಿಸುವ ಬಸ್ ಮಾಮೂಲಿನಂತೆ ಕಾರ್ಯ ನಿರ್ವಹಿಸಲಿದೆ. ಉಳಿದ 5 ಬಸ್‌ಗಳನ್ನು ಬನ್ನಿಮಂಟಪದ ಕೆಎಸ್‌ಆರ್‌ಟಿಸಿ ಡಿಪೋದ ಬಳಿ ನಿಲ್ಲಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೀಪಾಲಂಕಾರ ವೀಕ್ಷಿಸಲು 3 ಟ್ರಿಪ್
ಒಂದು ಗಂಟೆಯ ಅಂಬಾರಿ ಪ್ರವಾಸವು ಜೆಎಲ್‌ಬಿ ರಸ್ತೆಯಲ್ಲಿರುವ ಹೋಟೆಲ್ ಮಯೂರ ಹೊಯ್ಸಳ ಸಾರಿಗೆ ವಿಭಾಗದಿಂದ ಪ್ರಾರಂಭವಾಗಲಿದೆ. ದಸರಾ ದೀಪಾಲಂಕಾರ ವೀಕ್ಷಿಸಲು 3 ಟ್ರಿಪ್‌ಗಳನ್ನು ಆಯೋಜಿಸಲಾಗುತ್ತಿದೆ. ಸಂಜೆ 6.30, 8 ಮತ್ತು 9.30ಕ್ಕೆ ಪ್ರಯಾಣ ಆರಂಭವಾಗಲಿದೆ. ಪ್ರತಿಯೊಂದು ಬಸ್ 3 ಟ್ರಿಪ್ ಸಂಚಾರ ನಡೆಸಲಿದೆ. 5 ವರ್ಷಕ್ಕಿಂತ ಅಧಿಕ ವಯಸ್ಸಿನ ಮಕ್ಕಳಿಗೆ ಫುಲ್ ಟಿಕೆಟ್ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂಬಾರಿ ಸಂಚರಿಸುವ ಸ್ಥಳಗಳು
ಹಳೆ ಜಿಲ್ಲಾಧಿಕಾರಿ ಕಚೇರಿ, ಕ್ರೌವ್‌ಫೋರ್ಡ್ ಹಾಲ್, ಓರಿಯೆಂಟಲ್ ರಿಸರ್ಚ್ ಇಸ್ಟಿಟ್ಯೂಟ್ (ORI), ಸೆಂಟ್ರಲ್ ಲೈಬ್ರರಿ, ರಾಮಸ್ವಾಮಿ ವೃತ್ತ, ಸಂಸ್ಕೃತ ಪಾಠಶಾಲೆ, ಅರಮನೆಯ ದಕ್ಷಿಣ ಗೇಟ್, ಜಯಮಾರ್ತಾಂಡ ಗೇಟ್, ಜಯಚಾಮರಾಜ ಒಡೆಯರ್ ವೃತ್ತ, ಕೆ.ಆರ್.ವೃತ್ತ, ಸಯ್ಯಜಿ ರಾವ್ ರೋಡ್, ಆಯುರ್ವೇದ ಕಾಲೇಜ್ ವೃತ್ತ, ಮೈಸೂರು ಮೆಡಿಕಲ್ ಕಾಲೇಜ್, ಸಿಟಿ ರೈಲ್ವೇ ಸ್ಟೇಷನ್ ಮೂಲಕ ಸಂಚರಿಸಿ ಅಂಬಾರಿ ಬಸ್ ಮತ್ತೆ ಜೆಎಲ್‌ಬಿ ರಸ್ತೆಯ ಮಯೂರ ಹೊಯ್ಸಳ ಹೊಟೇಲ್ ಬಳಿಗೆ ಬಂದು ನಿಲ್ಲಲಿದೆ.
ಆನ್‌ಲೈನ್ ಮೂಲಕ ಟಿಕೆಟ್
ನೇರವಾಗಿ ಟಿಕೆಟ್ ಮಾರಾಟ ಮಾಡುವುದರಿಂದ ಉಂಟಾಗುವ ಗೊಂದಲ ನಿವಾರಿಸಲು ಕೆಎಸ್‌ಟಿಡಿಸಿ ಈ ಬಾರಿ ಆನ್‌ಲೈನ್ ಮೂಲಕ ಅಂಬಾರಿ ಟಿಕೆಟ್ ಮಾರಾಟ ಮಾಡಲು ನಿರ್ಧರಿಸಿದೆ. www.kstdc.co ವೆಬ್‌ಸೈಟ್ ಮೂಲಕ ಟಿಕೆಟ್ ಖರೀದಿಸಬಹುದು. ಹಬ್ಬದ ದಿನ ಹತ್ತಿರವಾಗುತ್ತಿದ್ದಂತೆ ಟಿಕೆಟ್ ಮಾರಾಟ ಆರಂಭವಾಗಲಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 0821-2423652 ಸಂಪರ್ಕಿಸಬಹುದು.
ಮೈಸೂರಿನ ಹೊರಭಾಗದ ಪ್ರವಾಸ
ಮೈಸೂರು ನಗರದ ಒಳಗೆ ಮಾತ್ರವಲ್ಲ ಸುತ್ತಮುತ್ತಲಿನ ಸ್ಥಳಗಳಿಗೆ ಭೇಟಿ ನೀಡಲೂ ಕೆಲವೊಂದು ಕೊಡುಗೆಗಳನ್ನು ಪ್ರಕಟಿಸಲಾಗಿದೆ. ಕೆಎಸ್‌ಟಿಡಿಸಿಯ ಐಷರಾಮಿ ಮತ್ತು ಮಿನಿ ಬಸ್‌ಗಳು ಮೈಸೂರು ಸಾರಿಗೆ ಡಿಪೋದಿಂದ ಕೆಲವು ಪ್ರವಾಸಿ ತಾಣಗಳಿಗೆ ಸಂಚರಿಸಲಿವೆ.
ಜೋಗ ಜಲಪಾತ, ಗೋಕರ್ಣ ಮತ್ತು ಗೋವಾ ಒಳಗೊಂಡ 5 ದಿನಗಳ ಪ್ರವಾಸಕ್ಕೆ ಪ್ರತಿಯೊಬ್ಬರಿಗೆ 6,358 ರೂ., ಶ್ರವಣ ಬೆಳಗೊಳ, ಶಿವನಸಮುದ್ರ, ತಲಕಾಡು, ಗಗನಚುಕ್ಕಿ-ಭರಚುಕ್ಕಿ ಜಲಪಾತ ಒಳಗೊಂಡ 1 ದಿನದ ಪ್ರವಾಸಕ್ಕೆ ಪ್ರತಿ ವ್ಯಕ್ತಿಗೆ 550 ರೂ., 1 ದಿನದ ನಂಜನಗೂಡು, ಹಿಮವದ್ ಗೋಪಾಲಸ್ವಾಮಿ ದೇವಸ್ಥಾನ ಮತ್ತು ಬಿ.ಆರ್.ಹಿಲ್ ಪ್ರವಾಸಕ್ಕೆ ಪ್ರತಿ ವ್ಯಕ್ತಿಗೆ 728 ರೂ. ನಿಗದಿಯಾಗಿದೆ. ಜತೆಗೆ ಕೆಎಸ್‌ಟಿಡಿಸಿ ಕೆಆರ್‌ಎಸ್ ಹಿನ್ನೀರು, ವೇಣುಗೋಪಾಲ ಸ್ವಾಮಿ ದೇವಸ್ಥಾನ, ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಸ್ಥಾನ, ಯೋಗನರಸಿಂಹಸ್ವಾಮಿ ದೇವಸ್ಥಾನ ಮತ್ತು ಆದಿ ಚುಂಚನಗಿರಿ ಪ್ರವಾಸಕ್ಕೆ ಪ್ರತಿಯೊಬ್ಬರಿಗೆ 660 ರೂ. ಫಿಕ್ಸ್ ಮಾಡಲಾಗಿದೆ. ಮಾತ್ರವಲ್ಲ ಇನ್ನೊಂದು ಪ್ಯಾಕೇಜ್ ಕೂಡ ಘೋಷಿಸಲಾಗಿದೆ. ಕೊಡಗಿನ ದುಬಾರೆ ಆನೆ ಕ್ಯಾಂಪ್, ಅಬ್ಬಿ ಜಲಪಾತ, ರಾಜಾ ಸೀಟ್, ಕಾವೇರಿ ನಿಸರ್ಗ ಧಾಮ, ಬೈಲಕುಪ್ಪೆಯ ಗೋಲ್ಡನ್ ಟೆಂಪಲ್ ಒಳಗೊಂಡ ಪ್ರವಾಸಕ್ಕೆ ಪ್ರತಿ ವ್ಯಕ್ತಿಗೆ 979 ರೂ. ಚಾರ್ಜ್ ಮಾಡಲಾಗುತ್ತದೆ.
ಇದನ್ನೂ ಓದಿ: Mahisha Dasara : ಮಹಿಷ Vs ಚಾಮುಂಡಿ ; ಅ. 13ರಂದು ಬಿಜೆಪಿಯಿಂದ ಚಾಮುಂಡಿ ಚಲೋ
ಮೈಸೂರು ನಗರದೊಳಗಿನ ಟ್ರಿಪ್
ಮೈಸೂರು ನಗರದೊಳಗಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ಯಾಕೇಜ್ ಅನ್ನೂ ಘೋಷಿಸಲಾಗಿದೆ. 440 ರೂ. ಪಾವತಿಸಿದರೆ ಜಗನ್ಮೋಹನ್ ಪ್ಯಾಲೇಸ್ ಆರ್ಟ್ ಗ್ಯಾಲರಿ, ಮೈಸೂರು ಮೃಗಾಲಯ, ಚಾಮುಂಡಿ ಬೆಟ್ಟ, ಮೈಸೂರು ಅರಮನೆ, ಸಂತ ಫಿಲೋಮಿನಾ ಚರ್ಚ್, ಶ್ರೀರಂಗಪಟ್ಟಣ ಗುಂಜ್, ಟಿಪ್ಪು ಸುಲ್ತಾನ್ ಬೇಸಗೆ ಅರಮನೆ, ಶ್ರೀರಂಗನಾಥಸ್ವಾಮಿ ದೇಗುಲ ಮತ್ತು ಬೃಂದಾವನ ಭೇಟಿ ನೀಡಬಹುದು. ಈ ಮೇಲಿನ ಪ್ಯಾಕೇಜ್‌ಗಳ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ. ಆಸಕ್ತರು www.kstdc.co ವೆಬ್‌ಸೈಟ್‌ಗೆ ಭೇಟಿ ನೀಡಿ ಟಿಕೆಟ್ ಕಾಯ್ದಿರಿಸಬಹುದು. 40% ಟಿಕೆಟ್ ಬುಕ್ ಆದ ರೂಟ್ಗಳಲ್ಲಿ ಮಾತ್ರ ಈ ಬಸ್ ಓಡಾಟ ನಡೆಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.