ಬೆಂಗಳೂರು: ಇಲ್ಲಿನ ಚರ್ಚ್ ಸ್ಟ್ರೀಟ್‌ನಲ್ಲಿ Free hug (ಅಪ್ಪಿಕೋ) ಎಂದು ಪೋಸ್ಟರ್ ಹಿಡಿದು ಅಭಿಯಾನವನ್ನು ಯುವತಿಯೊಬ್ಬಳು ಮಾಡಿದ ಘಟನೆ ನಡೆದಿದೆ. ಹೊಸ ವರ್ಷವನ್ನು (New Year 2023) ಸ್ವಾಗತಿಸಲು ರಾಜಧಾನಿ ಬೆಂಗಳೂರಿಗರು ಸಜ್ಜಾಗಿದ್ದಾರೆ.
ಚರ್ಚ್ ಸ್ಟ್ರೀಟ್, ಎಂ.ಜಿ. ರೋಡ್ ಸೇರಿ ವಿವಿಧೆಡೆ ಸಂಭ್ರಮ ಮನೆ ಮಾಡಿದೆ. ವೀಕೆಂಡ್‌ನಲ್ಲಿಯೇ ಹೊಸ ವರ್ಷ ಬಂದಿರುವುದರಿಂದ ಚರ್ಚ್ ಸ್ಟ್ರೀಟ್‌ನತ್ತ ಯುವಕ-ಯುವತಿಯರು ಹೆಜ್ಜೆ ಹಾಕುತ್ತಿದ್ದಾರೆ.
ಇತ್ತ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಕೆಲ ಯುವಕ-ಯುವತಿಯರು ಚರ್ಚ್ ಸ್ಟ್ರೀಟ್ ಬಳಿ Free hug ಅಭಿಯಾನವನ್ನು ಮಾಡಿದರು. Free hug ಎಂದು ಪೋಸ್ಟರ್ ಹಿಡಿದು ನಿಂತಿದ್ದ ಯುವತಿಯನ್ನು ಕಂಡೊಡನೆ, ಎಚ್ಚೆತ್ತ ಕಬ್ಬನ್ ಪಾರ್ಕ್ ಪೊಲೀಸರು ಸ್ಥಳಕ್ಕಾಗಮಿಸಿ ಬುದ್ಧಿವಾದ ಹೇಳಿ ಕಳಿಸಿದ್ದಾರೆ.
ಹಿಂದೊಮ್ಮೆ ಕೆಲ ಪುಂಡರು ಯುವತಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಘಟನೆ ನಡೆದಿತ್ತು. ಹೀಗಾಗಿ ಇಂತಹ ಹುಚ್ಚು ಅಭಿಯಾನ ಮಾಡಿದರೆ ಅಂತಹ ಪುಂಡರನ್ನು ಬರಮಾಡಿಕೊಂಡಂತೆ ಆಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಯುವತಿ ಹಾಗೂ ಸಂಗಡಿಗರ ಬಳಿ ಇದ್ದ ಪೋಸ್ಟರ್ ಕಸಿದು, ಅವರನ್ನು ಅಲ್ಲಿಂದ ಕಳಿಸಲಾಗಿದೆ.
ವಿದೇಶಗಳಲ್ಲಿ ಇಂತಹ ಪೋಸ್ಟರ್ ಅಭಿಯಾನಗಳು ಸಾಮಾನ್ಯವಾಗಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ಯುವ ಜನತೆಯನ್ನು ಸೆಳೆಯುತ್ತದೆ. ಅಲ್ಲದೆ, ಸಹಾಯ ಕೇಳಿ ಪೋಸ್ಟರ್ ಹಿಡಿದು ಅಭಿಯಾನ ನಡೆದರೆ ಜನ ಬೆಂಬಲ ಇರುತ್ತದೆ. ಇಲ್ಲಿ ದೇಶೀಯ ಪರಂಪರೆ ಬಿಟ್ಟು ಯುವತಿಯೊಬ್ಬಳು ವಿದೇಶಿ ಸಂಪ್ರದಾಯವನ್ನು ಅನುಸರಿಸಲು ಹೊರಟಿರುವುದು ಒಳ್ಳೆಯ ಲಕ್ಷಣವಲ್ಲ ಎಂದು ಹಿಂದು ಸಂಘಟನೆಯವರು ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ | New Year 2023 | ಕ್ರೀಡಾಕೂಟದ ವೇಳಾಪಟ್ಟಿ 2023; ಎಲ್ಲಿ, ಯಾವಾಗ ನಡೆಯುತ್ತವೆ ಕ್ರೀಡಾಕೂಟಗಳು?