ಬೆಂಗಳೂರು/ನವದೆಹಲಿ: ಉಗ್ರರಿಗೆ ಹಣಕಾಸು ನೆರವು, ಉಗ್ರ ಚಟುವಟಿಕೆಗೆ ಪ್ರೋತ್ಸಾಹ ಹಾಗೂ ಉಗ್ರರಿಗೆ ತರಬೇತಿ ನೀಡಿದ ಕುರಿತು ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಎನ್ಐಎ, ಇ.ಡಿ ಹಾಗೂ ಆಯಾ ರಾಜ್ಯಗಳ ಪೊಲೀಸರು ಜಂಟಿಯಾಗಿ ಇಡೀ ದಿನ ದೇಶದ ೧೫ ರಾಜ್ಯಗಳಲ್ಲಿ ದಾಳಿ (NIA Raid) ನಡೆಸಿದ್ದಾರೆ.
“ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ದ ನಾಯಕರು ಹಾಗೂ ಸದಸ್ಯರ ನಿವಾಸ, ಕಚೇರಿಗಳ ಮೇಲೆ ೧೫ ರಾಜ್ಯಗಳ ೯೩ ಕಡೆ ಜಂಟಿ ದಾಳಿ ನಡೆಸಲಾಗಿದೆ. ಇಡೀ ದಿನ ನಡೆದ ದಾಳಿಯಲ್ಲಿ ಪಿಎಫ್‌ಐನ ೪೫ ಮುಖಂಡರು ಹಾಗೂ ಸದಸ್ಯರನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ಎನ್‌ಐಎ ತಿಳಿಸಿದೆ.
ಯಾವ ರಾಜ್ಯದಲ್ಲಿ ಎಷ್ಟು ಜನರ ಬಂಧನ?
ಜಂಟಿ ದಾಳಿಯ ವೇಳೆ ಕೇರಳದಲ್ಲಿಯೇ ಅತಿ ಹೆಚ್ಚು ಜನರನ್ನು ಬಂಧಿಸಲಾಗಿದೆ. ಒಟ್ಟು ೪೫ ಬಂಧಿತರಲ್ಲಿ ಕೇರಳದಲ್ಲಿ ೧೯, ತಮಿಳುನಾಡು ೧೧, ಕರ್ನಾಟಕ ೪, ಆಂಧ್ರಪ್ರದೇಶ ೪, ರಾಜಸ್ಥಾನದಲ್ಲಿ ಇಬ್ಬರು ಹಾಗೂ ಉತ್ತರ ಪ್ರದೇಶ ಮತ್ತು ತೆಲಂಗಾಣದಲ್ಲಿ ತಲಾ ಒಬ್ಬರನ್ನು ಬಂಧಿಸಲಾಗಿದೆ. ಪಶ್ಚಿಮ ಬಂಗಾಳ, ಗೋವಾ, ಬಿಹಾರ, ಮಣಿಪುರ, ಮಹಾರಾಷ್ಟ್ರ, ಅಸ್ಸಾಂ, ದೆಹಲಿಯಲ್ಲಿ ಪರಿಶೀಲನೆ ನಡೆದಿದೆ. ಪರಿಶೀಲನೆ ವೇಳೆ ದಾಖಲೆ, ಹಣ, ಶಸ್ತ್ರಾಸ್ತ್ರಗಳು ಹಾಗೂ ಹೆಚ್ಚಿನ ಡಿಜಿಟಲ್ ಡಿವೈಸ್‌ಗಳನ್ನು ಜಪ್ತಿ ಮಾಡಲಾಗಿದೆ.
ಪಿಎಫ್‌ಐ ಗುರಿಯಾಗಿಸಿ ಏಕೆ ದಾಳಿ?
ಪಿಎಫ್‌ಐ ವಿರುದ್ಧ ಉಗ್ರರಿಗೆ ಹಣಕಾಸು ನೆರವು, ಉಗ್ರರಿಗೆ ತರಬೇತಿ, ಉಗ್ರ ಚಟುವಟಿಕೆಗಳಿಗೆ ಉತ್ತೇಜನ, ಹಿಂಸಾತ್ಮಕ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪಗಳಿವೆ. ಮೂಲಭೂತವಾದವನ್ನು ಬಿತ್ತುತ್ತಿರುವ ಆರೋಪವೂ ಇದೆ. ತೆಲಂಗಾಣ ರಾಜ್ಯವೊಂದರಲ್ಲಿಯೇ ಪಿಎಫ್‌ಐನ ೨೫ ಮುಖಂಡರ ವಿರುದ್ಧ ಎಫ್‌ಐಆರ್ ದಾಖಲಾಗಿವೆ. ಪ್ರೊಫೆಸರ್ ಒಬ್ಬರ ಕೈ ಕತ್ತರಿಸಿದ್ದು, ಕೊಲೆ, ಧರ್ಮಗಳ ಮಧ್ಯೆ ದ್ವೇಷ ಹರಡುವುದು, ಸ್ಫೋಟಕ, ಶಸ್ತ್ರಾಸ್ತ್ರಗಳ ಸಂಗ್ರಹ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಸೇರಿ ಹಲವು ಪ್ರಕರಣ ದಾಖಲಾಗಿವೆ. ಒಟ್ಟು ೧೯ ಪ್ರಕರಣಗಳು ಪಿಎಫ್‌ಐ ವಿರುದ್ಧ ದಾಖಲಾಗಿವೆ. ಹಾಗಾಗಿ, ಎನ್‌ಐಎ ದಾಳಿ ನಡೆಸಿ ಹಲವರನ್ನು ವಶಕ್ಕೆ ಪಡೆದು ತನಿಖೆ ನಡೆಯುತ್ತಿದೆ.
ಇದನ್ನೂ ಓದಿ | NIA Raid| ರಾಜ್ಯದಲ್ಲಿ 20 ಪಿಎಫ್‌ಐ ಮುಖಂಡರು ಎನ್‌ಐಎ ವಶದಲ್ಲಿ: ಇನ್ನಷ್ಟು ಮಂದಿಗೆ ಬಲೆ? ವಶದಲ್ಲಿರುವ ನಾಯಕರು ಯಾರು?