Site icon Vistara News

ಹರ್ಷ ಹತ್ಯೆಗೆ ನಡೆದಿತ್ತು 15 ದಿನಗಳ ಸಂಚು: 750 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಸಿದ NIA

ಹರ್ಷ

ಬೆಂಗಳೂರು: ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. ಹತ್ಯೆಗೆ 15 ದಿನದಿಂದಲೂ ಸಂಚು ನಡೆಸಲಾಗಿತ್ತು ಎನ್ನುವುದೂ ಸೇರಿ ಅನೇಕ ಅಂಶಗಳನ್ನು 750ಕ್ಕೂ ಹೆಚ್ಚು ಪುಟಗಳ ಚಾರ್ಜ್ ಶೀಟ್​ನಲ್ಲಿ ಉಲ್ಲೇಖಿಸಲಾಗಿದೆ.

2022ರ ಫೆಬ್ರವರಿ 20 ರಂದು ರಾತ್ರಿ ಶಿವಮೊಗ್ಗದಲ್ಲಿ ನಡೆದ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ರಾಜ್ಯದಲ್ಲಿ ಸಂಚಲನವನ್ನುಂಟು ಮಾಡಿತ್ತು. ಹಿಜಾಬ್ ವಿವಾದದ ಮಧ್ಯೆಯೇ ನಡೆದ ಹತ್ಯೆ ವಿಚಾರವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿತ್ತು.

ಈ ಮಧ್ಯೆಯೇ ಸರ್ಕಾರ ಈ ಕೊಲೆ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಿತ್ತು. ತನಿಖೆಯನ್ನು ಆರಂಭಿಸಿದ ಎನ್​ಐಎ ಅಧಿಕಾರಿಗಳು ಕೈಗೊಂಡಿದ್ದ ವಿಶೇಷ ನ್ಯಾಯಾಲಯಕ್ಕೆ 750 ಕ್ಕೂ ಹೆಚ್ಚು ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.

ವಿಶೇಷ ನ್ಯಾಯಾಲಯಕ್ಕೆ ಹತ್ತು ಮಂದಿ ಆರೋಪಿಗಳ ವಿರುದ್ಧ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಕೆ ಮಾಡಿದ್ದು, ಈ ದೋಷಾರೋಪಣೆ ಪಟ್ಟಿಯಲ್ಲಿ ಆರೋಪಿಗಳಿಗೆ ಹಿಂದೂ ಸಂಘಟನೆಯ ಕಾರ್ಯಕರ್ತನ ಹತ್ಯೆ ಮಾಡೋದೇ ಮುಖ್ಯ ಉದ್ದೇಶ ಆಗಿತ್ತು. ಹಿಂದು ವ್ಯಕ್ತಿಯೊಬ್ಬನ ಹತ್ಯೆ ಮಾಡಿದರೆ ಭಯದ ವಾತಾವರಣ ನಿರ್ಮಾಣವಾಗತ್ತದೆ ಎಂದು ಪ್ಲಾನ್ ಮಾಡಿಕೊಂಡು 15 ದಿನಗಳಿಂದ ಹರ್ಷನ ಹತ್ಯೆಗೆ ಕಾದು ಕುಳಿತಿದ್ದರು.

ಇದನ್ನೂ ಓದಿ | ಹರ್ಷ ಕೊಲೆಗಾರರನ್ನು ಎನ್‌ಕೌಂಟರ್‌ ಮಾಡಿದ್ದರೆ ಪ್ರವೀಣ್ ಹತ್ಯೆ ನಡೆಯುತ್ತಿರಲಿಲ್ಲ: ಚಕ್ರವರ್ತಿ ಸೂಲಿಬೆಲೆ

ಹರ್ಷ ಹಿಂದು ಸಂಘಟನೆಯಲ್ಲಿ ಸಕ್ರಿಯನಾಗಿದ್ದು, ಹಳೆಯ ದ್ವೇಷ ಇಟ್ಟುಕೊಂಡು ಹತ್ಯೆ ಮಾಡುವುದಕ್ಕೆ ಪ್ರಕರಣದ ಮೊದಲ ಆರೋಪಿ ಆಯ್ಕೆ ಮಾಡಿಕೊಂಡಿದ್ದ. ಈ ಹತ್ಯೆ ಹಿಂದೆ ಯಾವುದೇ ಸಂಘಟನೆ ಕೈವಾಡ ಇಲ್ಲ. ಹತ್ಯೆಗೆ ಮಾರಕಾಸ್ತ್ರ ಖರೀದಿ ಮಾಡಲು ಹಣದ ಅಗತ್ಯ ಇತ್ತು. ಅದಕ್ಕಾಗಿ ಆರೋಪಿಗಳು ಕುಂಶಿ ಬಳಿ ಒಂದು ಮನೆ ಕಳ್ಳತನ ಮಾಡಿದ್ದರು. ಮನೆಯಲ್ಲಿ ಸಿಕ್ಕಿದ್ದ ಹಣದಲ್ಲೇ ಮಚ್ಚು, ಲಾಂಗು ಸೇರಿದಂತೆ ಮಾರಕಾಸ್ತ್ರ ಖರೀದಿ ಮಾಡಲಾಗಿತ್ತು ಎಂದು ತಿಳಿಸಲಾಗಿದೆ.

ಬಂಧಿತ ಆರೋಪಿಗಳಲ್ಲಿ ರೋಷನ್ ಭದ್ರಾವತಿಯಲ್ಲಿ ಮಾರಕಾಸ್ತ್ರಗಳನ್ನು ಖರೀದಿ ಮಾಡಿದ್ದ. ಬಂಧಿತ ಆರೋಪಿಗಳಲ್ಲಿ ಮೂವರನ್ನು ಹೊರತುಪಡಿಸಿ ಉಳಿದವರೆಲ್ಲ ಹಿಂದೆ ಹಲವಾರು ಕೇಸ್‌ಗಳಲ್ಲಿ ಭಾಗಿಯಾಗಿದ್ದ ಆರೋಪಿಗಳೇ ಎಂದು ಚಾರ್ಜ್ ಶೀಟ್​ನಲ್ಲಿ ಉಲ್ಲೇಖವಾಗಿದೆ.

ಬಂಧಿತ 10 ಮಂದಿ ಆರೋಪಿಗಳ ಹೇಳಿಕೆಗಳ ಜತೆ ತಾಂತ್ರಿಕ ಸಾಕ್ಷ್ಯಗಳನ್ನು ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಸದ್ಯದ ತನಿಖೆಯಲ್ಲಿ ಆರೋಪಿಗಳು ಕೋಮುಸೌಹಾರ್ದತೆ ಕದಡುವುದರ ಜೊತೆಗೆ ಗಲಾಟೆಯನ್ನುಂಟು ಮಾಡುವ ಉದ್ದೇಶದ ವಿಚಾರ ಬೆಳಕಿಗೆ ಬಂದಿದೆ‌.

ಇದನ್ನೂ ಓದಿ | ಹರ್ಷ ಕೊಲೆ ಆರೋಪಿಗಳು ಪರಪ್ಪನ ಅಗ್ರಹಾರದಿಂದ ವಿವಿಧ ಜೈಲುಗಳಿಗೆ ಶಿಫ್ಟ್‌

Exit mobile version