ಬೆಂಗಳೂರು: ಉಗ್ರ ಚಟುವಟಿಕೆ ನಡೆಸಿ ದೇಶ ದ್ರೋಹಿಗಳಾಗುತ್ತಿರುವ ಯುವಕರ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆ ಪೂರಕ ಎಂಬಂತೆ ಎನ್‌ಐಎನಿಂದ (NIA Investigation) ಬಂಧಿತನಾಗಿರುವ ಶಂಕಿತನ ವಿಚಾರಣೆ ನಡೆಸಿದಾಗ ಮತ್ತಷ್ಟು ಸ್ಫೋಟಕ ಅಂಶಗಳು ಹೊರ ಬಿದ್ದಿವೆ. ಆತ ವಿದೇಶಿಗರ ಜತೆಗೂ ಉಗ್ರ ಚಟುವಟಿಕೆಯಲ್ಲಿ ತೊಡಗಿದ್ದ. ವಿದೇಶಿ ಫಂಡಿಂಗ್ ಅನ್ನು ಆಪ್ಘನ್‌ಗೆ ಕಳುಹಿಸುತ್ತಿದ್ದ ಎಂಬ ಅಂಶ ಬಯಲಿಗೆ ಬಂದಿದೆ. ಇದಕ್ಕೆ ಆತ ಬಳಸಿಕೊಂಡಿದ್ದ ಮಾರ್ಗ ಸೋಷಿಯಲ್ ಮೀಡಿಯಾ!
ಉಗ್ರ ಚಟುವಟಿಕೆಗೆ ಸಾಮಾಜಿಕ ಜಾಲತಾಣ ಈಗ ಬಹು ಮುಖ್ಯ ವೇದಿಕೆಯಾಗಿದೆ. ಕಳೆದ ಫೆಬ್ರವರಿ 15 ರಂದು ಎನ್‌ಐಎ ಅಧಿಕಾರಿಗಳಿಂದ ಬಂಧಿತನಾಗಿರುವ ಶಂಕಿತ ಉಗ್ರ ಮಹಮ್ಮದ್ ಆರೀಫ್ ಈ ವೇದಿಕೆಯನ್ನು ತನಗೆ ಬೇಕಾದಂತೆ ಬಳಕೆ ಮಾಡಿಕೊಂಡಿದ್ದು, ಬಹಳ ಪ್ಲ್ಯಾನ್ಡ್ ಆಗಿ ತನ್ನ ಕೆಲಸವನ್ನು ಮಾಡುತ್ತಿದ್ದ ಎಂಬ ಆಘಾತಕಾರಿ ಅಂಶವು ತನಿಖೆ ವೇಳೆ ಗೊತ್ತಾಗಿದೆ. ಆತನ ವಿಚಾರಣೆ ನಡೆಸಲಾಗುತ್ತಿದ್ದು, ಮತ್ತಷ್ಟು ಸ್ಫೋಟಕ ಮಾಹಿತಿಗಳು ಹೊರ ಬಿದ್ದಿವೆ. ಸ್ಥಳೀಯ ಯುವಕರ ಜತೆಗಲ್ಲದೆ ವಿದೇಶಿಗರ ಜತೆಯೂ ಈತ ಉಗ್ರ ಚಟುವಟಿಕೆಯಲ್ಲಿ ತೊಡಗಿದ್ದ, ಅವರ ಜತೆ ನಿರಂತರ ಸಂಪರ್ಕವನ್ನು ಹೊಂದಿದ್ದ ಎಂಬ ವಿಷಯ ಬೆಳಕಿಗೆ ಬಂದಿದೆ.
ಇದನ್ನೂ ಓದಿ: Bangalore Rain: ಅಬ್ಬಬ್ಬಾ… ಬೆಂಗಳೂರಲ್ಲಿ ದಾಖಲೆ ಬರೆಯಿತು ಮೇ ಮಳೆ; ಇದು 66 ವರ್ಷದಲ್ಲೇ ಅತಿ ಹೆಚ್ಚು!
ಅಲ್ ಖೈದಾ ಮತ್ತು ತೆಹ್ರಿಕ್ ಇ ತಾಲಿಬಾನ್, ಪಾಕಿಸ್ತಾನ ಸಂಘಟನೆಗಳ ಜತೆ ಫಂಡಿಂಗ್
ವಿದೇಶಿ ಪೆಡ್ಲರ್ ಜತೆಗೆ ಸಂಪರ್ಕವನ್ನು ಹೊಂದಿದ್ದ ಮಹಮ್ಮದ್ ಆರೀಫ್, ವಿದೇಶಿಗರಿಂದಲೂ ಹಣವನ್ನು ಫಂಡಿಂಗ್ ಮಾಡಿಸುತ್ತಿದ್ದ. ಹಮ್ರಾಜ್ ವರ್ಷಿದ್ ಎಂಬಾತನ ಜತೆ ಸದಾ ಸಂಪರ್ಕದಲ್ಲಿದ್ದ ಆರೀಫ್, ಭಾರತದಲ್ಲಿ ದೇಶದ್ರೋಹ ಕೃತ್ಯಕ್ಕೆ ಸಂಬಂಧಿಸಿದಂತೆ ಹಣ ಸಂಗ್ರಹ ಮಾಡುತ್ತಿದ್ದ. ಅಲ್ಲದೆ, ವಿದೇಶಿಗರೂ ನೀಡುತ್ತಿದ್ದ ಹಣವನ್ನು ಅಫ್ಘಾನಿಸ್ತಾನದ ಉಗ್ರ ಸಂಘಟನೆಗಳಿಗೆ ಕಳಿಹಿಸುತ್ತಿದ್ದ. ಅಲ್ಲಿ ಸ್ಥಳೀಯ ಹುಡುಗರನ್ನು ಕಳುಹಿಸಿ ನೇಮಕಾತಿ ಮಾಡಿಸಿ ಅವರಿಗೆ ಮಿಲಿಟೆಂಟ್ ಮಾದರಿಯಲ್ಲಿಯೇ ಟ್ರೈನಿಂಗ್ ಕೊಡಿಸುತ್ತಿದ್ದ ಎನ್ನಲಾಗಿದೆ. ಈ ಎಲ್ಲ ಚಟುವಟಿಕೆಗೆ ಆಫ್ಘನ್ ಮೂಲದ ಹಮ್ರಾಝ್ ವರ್ಷಿದ್ ಸಹಾಯ ಮಾಡುತ್ತಿದ್ದ ಎಂದು ಗೊತ್ತಾಗಿದೆ.
ಅಲ್ ಖೈದಾ ಮತ್ತು ತೆಹ್ರಿಕ್ ಇ ತಾಲಿಬಾನ್, ಪಾಕಿಸ್ತಾನ ಸಂಘಟನೆಗಳ ಜತೆ ಕೂಡ ಫಂಡಿಂಗ್ ವ್ಯವಹಾರ ನಡೆದಿದ್ದು, ದೇಶದಲ್ಲಿ ಉಗ್ರ ಚಟುವಟಿಕೆ ನಡೆಸುವ ಉದ್ದೇಶದಿಂದ ಹಾಗೂ ಇಸ್ಲಾಂ ಪರವಾಗಿ ಧ್ವನಿ ಎತ್ತುವ ಸಲುವಾಗಿ ಹಣವನ್ನು ನೀಡಲಾಗುತ್ತಿತ್ತು. ಇಲ್ಲಿ ಪ್ರಮುಖ ಧಾರ್ಮಿಕ ಮುಖಂಡರನ್ನು ಟಾರ್ಗೆಟ್ ಮಾಡಿ ಯಾರು ಇಸ್ಲಾಂ ವಿರುದ್ಧ ಮಾತನಾಡುವರೋ ಅವರನ್ನು ಕಾಫೀರರೆಂದು ಕರೆದು ಅವರ ಹತ್ಯೆಗೆ ಸಂಚು ರೂಪಿಸುವುದು ಇವರ ಉದ್ದೇಶವಾಗಿದೆ.
ಇದನ್ನೂ ಓದಿ:NIA Raid: ಕರ್ನಾಟಕ, ಕೇರಳ, ಬಿಹಾರದಲ್ಲಿ ಎನ್‌ಐಎ ದಾಳಿ ವೇಳೆ 17.5 ಲಕ್ಷ ನಗದು ವಶ; ಇನ್ನೂ ನಡೆದಿದೆ ತನಿಖೆ
ರೈಸಿಂಗ್ ಇಸ್ಲಾಂ ಹೆಸರಲ್ಲಿ ರಚನೆಯಾಗಿದ್ದ ಗ್ರೂಪ್
ಇನ್ನು ಬಹುತೇಕ ಸಾಮಾಜಿಕ ಜಾಲತಾಣವನ್ನೇ ವೇದಿಕೆಯನ್ನಾಗಿಸಿಕೊಂಡಿರುವ ಶಂಕಿತ ಮಹಮ್ಮದ್ ಆರೀಫ್, ರೈಸಿಂಗ್ ಇಸ್ಲಾಂ ಎಂಬ ಗ್ರೂಪ್ ಅನ್ನು ಟೆಲಿಗ್ರಾಂ ಆ್ಯಪ್‌ನಲ್ಲಿ ರಚಿಸಿದ್ದ. ಅಲ್ಲಿ ಉಗ್ರ ಚಟುವಟಿಕೆಗೆ ಸಂಬಂಧಿಸಿದಂತೆ ಪೋಸ್ಟ್‌ಗಳನ್ನು ಮಾಡಿ ಯುವಕರಿಗೆ ಪ್ರಚೋದನೆ ನೀಡುತ್ತಿದ್ದ ಎನ್ನಲಾಗಿದೆ. ಎನ್‌ಐಎ ಅಧಿಕಾರಿಗಳು ತನಿಖೆ ನಡೆಸಿದಾಗ ಆರೀಫ್ ಹಾಗೂ ಹಮ್ರಾಝ್ ವರ್ಷಿದ್ ಅವರ ಮಾಸ್ಟರ್ ಗೇಮ್ ಬಯಲಾಗಿದೆ. ಇನ್ನು ಆರೋಪಿಗಳ ವಿರುದ್ಧ ಐಪಿಸಿ 120ಬಿ, ಯುಎಪಿಎ ಆ್ಯಕ್ಟ್ 17, 18, 18ಬಿ, 38, 39, 40 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.
ಯಾರು ಈ ಆರೀಫ್?
ಮಹಮ್ಮದ್ ಆರೀಫ್ ಉತ್ತರ ಪ್ರದೇಶದವನಾಗಿದ್ದು, ಕೆಲವು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ. ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ಈತ, ಪೇಯಿಂಗ್ ಗೆಸ್ಟ್ ಆಗಿ ಉಳಿದುಕೊಂಡಿದ್ದ. ಸೋಷಿಯಲ್ ಮೀಡಿಯಾ ಮೂಲಕ ಈತ ನಡೆಸುತ್ತಿದ್ದ ಕೃತ್ಯದ ಜಾಡು ಹಿಡಿದು ಹೊರಟಾಗ ಎನ್‌ಐಎ ಬಲೆಗೆ ಈತ ಬಿದ್ದಿದ್ದ.