ಮಂಗಳೂರು/ಬೆಂಗಳೂರು: ಬಿಹಾರದಲ್ಲಿ ಕಳೆದ ವರ್ಷ ನಡೆದಿದ್ದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಕಾರ್ಯಕ್ರಮದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಪ್ರಕರಣ ಸೇರಿದಂತೆ ಇನ್ನಿತರ ಚಟುವಟಿಕೆಯಲ್ಲಿ ಭಾಗಿಯಾಗಿರುವ ಶಂಕೆ ಮೇರೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳ ತಂಡವು ಬುಧವಾರ (ಮೇ 31) ಕರ್ನಾಟಕ, ಕೇರಳ ಹಾಗೂ ಬಿಹಾರದಲ್ಲಿ ಸುಮಾರು 25ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ ನಡೆಸಿದೆ. ದಕ್ಷಿಣ ಕನ್ನಡ ಜಿಲ್ಲೆಯ 16 ಕಡೆಗಳಲ್ಲಿ ಎನ್‌ಐಎ (NIA Raid) ತಂಡ ದಾಳಿ ನಡೆಸಿದ್ದು, ನಾಲ್ವರನ್ನು ವಶಕ್ಕೆ ಪಡೆದುಕೊಂಡಿದೆ.
ಜಿಲ್ಲೆಯಾದ್ಯಂತ ಶೋಧ ಕಾರ್ಯವನ್ನು ಮುಂದುವರಿಸಿರುವ ಎನ್‌ಐಎ ತಂಡದವರು ನಾಲ್ವರನ್ನು ವಶಕ್ಕೆ ಪಡೆದಿರುವ ಮಾಹಿತಿ ಲಭ್ಯವಾಗಿದೆ. ಪುತ್ತೂರಿನ ಮೂರು ಕಡೆ ಶೋಧ ನಡೆಸಿದ ವೇಳೆ ನಾಲ್ವರು ಸಿಕ್ಕಿ ಬಿದ್ದಿದ್ದಾರೆ ಎನ್ನಲಾಗಿದೆ. ಕೂರ್ನಡ್ಕ, ತಾರಿಪಡ್ಪು, ಕುಂಬ್ರದ ಭಾಗದ ನಾಲ್ವರನ್ನು ಎನ್‌ಐಎ ವಶಕ್ಕೆ ಪಡೆದುಕೊಂಡಿದೆ.
ನೀರಕಟ್ಟೆಯಲ್ಲಿ ಶೋಧ
ಪುತ್ತೂರು ಸಹಿತ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎನ್‌ಐಎ ಅಧಿಕಾರಿಗಳ ತಂಡ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಬಜತ್ತೂರು ಗ್ರಾಮದ ನೀರಕಟ್ಟೆ ಎಂಬಲ್ಲಿ
ಮನೆಯೊಂದರ ಶೋಧ ನಡೆಸಲಾಗಿದೆ. ವಿಟ್ಲದಲ್ಲಿ ಫರ್ನಿಚರ್ ಅಂಗಡಿ ಹೊಂದಿರುವ ನೀರಕಟ್ಟೆಯ ಯುವಕನ ಮನೆಗೆ ಬೆಳಗ್ಗೆಯೇ ಎನ್‌ಐಎ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಸುಮಾರು 2 ತಾಸಿಗೂ ಹೆಚ್ಚು ಕಾಲ ಇಲ್ಲಿ ಶೋಧ ನಡೆಸಿ ಪರಿಶೀಲನೆ ನಡೆಸಿದೆ ಎಂದು ವರದಿಯಾಗಿದೆ. ಪುತ್ತೂರು ಚಿಕ್ಕಮುಡ್ನೂರು ಗ್ರಾಮದ ಕೆರೆಮೂಲೆ ಎಂಬಲ್ಲಿ ನಾಲ್ಕು ಜೀಪಿನಲ್ಲಿ ಆಗಮಿಸಿದ ಎನ್‌ಐಎ ತಂಡವು ಕೆರೆಮೂಲೆಯಿಂದ ತುಸು ದೂರ ವಾಹನ ನಿಲ್ಲಿಸಿ ಅಲ್ಲಿಂದ ಕೆರೆಮೂಲೆ ಪರಿಸರದಲ್ಲಿ ನಡೆದು ಕೊಂಡು ಮುಂದೆ ಹೋಗಿ ವಾಪಸಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: 2000 Notes withdrwan : ಬ್ಯಾಂಕ್ ಎಫ್‌ಡಿ ಬಡ್ಡಿ ದರ ಏರಿಕೆ ಶೀಘ್ರ ಅಂತ್ಯ ಸಂಭವ, ಕಾರಣವೇನು?
#WATCH | NIA is conducting raids at about 25 locations in Karnataka, Kerala and Bihar in connection with the Popular Front of India Phulwarisharif case
— ANI (@ANI) May 31, 2023
(Visuals from Mangaluru, Karnataka) pic.twitter.com/JH4fXl5C72
ಸ್ಥಳೀಯ ಪೊಲೀಸರ ಸಹಾಯ
ಈ ಕಾರ್ಯಾಚರಣೆಗೆ ಸ್ಥಳೀಯ ಪೊಲೀಸ್ ಅಧಿಕಾರಿಗಳ ನೆರವು ಪಡೆದಿರುವ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ದಾಳಿ ನಡೆಸಿದೆ. ಅನುಮಾನಿತ ಪ್ರದೇಶಗಳ ಹಲವು ಮನೆಗಳು, ಕಚೇರಿಗಳಲ್ಲಿ ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.
ಭಯೋತ್ಪಾದಕ ಕೃತ್ಯಗಳಿಗೆ ಹವಾಲಾ ಹಣ?
ಭಯೋತ್ಪಾದಕ ಕೃತ್ಯಗಳ ಬಳಕೆಗಾಗಿ ಗಲ್ಫ್ ರಾಷ್ಟ್ರಗಳಿಂದ ಹವಾಲಾ ಹಣ ಸರಬರಾಜಾಗುತ್ತಿರುವ ಮಾಹಿತಿ ಮೇರೆಗೆ ಹಲವು ಕಡೆ ಶೋಧ ನಡೆಸಲಾಗಿದೆ. ದಕ್ಷಿಣ ಭಾರತದ ಪ್ರಬಲ ಸಂಘಟನೆಯಲ್ಲೊಂದಾಗಿದ್ದ, ಈಗ ನಿಷೇಧಕ್ಕೊಳಪಟ್ಟಿರುವ ಪಿಎಫ್ಐ ಸಹ ಇದರಲ್ಲಿ ಭಾಗಿಯಾಗಿರುವ ಶಂಕೆ ಇದ್ದರಿಂದ ಕೆಲವು ಕಡೆ ಪರಿಶೀಲನೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.
ಬಂಟ್ವಾಳ, ಬೆಳ್ತಂಗಡಿ, ಉಪ್ಪಿನಂಗಡಿ, ವೇಣೂರು ಸೇರಿ ಹಲವು ಕಡೆಗಳಲ್ಲಿ ಸಾಕಷ್ಟು ಮನೆ, ಕಚೇರಿಗಳ ಜತೆಗೆ ಆಸ್ಪತ್ರೆಯೊಂದರ ಮೇಲೂ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Lokayukta Raid: ರಾಜ್ಯದ ಹಲವು ಕಡೆ ಏಕಕಾಲಕ್ಕೆ ಲೋಕಾಯುಕ್ತ ದಾಳಿ, ಅಧಿಕಾರಿಗಳಿಗೆ ಶಾಕ್
ಕಳೆದ ಬಾರಿಯೂ ನಡೆದಿತ್ತು ದಾಳಿ
ಈಚೆಗೆ ಹವಾಲಾ, ಫಂಡಿಂಗ್ ಪ್ರಕರಣಗಳಿಗೆ ಸಂಬಂಧಿಸಿ ಬಂಟ್ವಾಳ ಹಾಗೂ ಪುತ್ತೂರಿನಲ್ಲಿ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದ್ದರು. ಬಂಟ್ವಾಳ ನಿವಾಸಿ ಮಹಮ್ಮದ್ ಸಿನಾನ್, ಸಜಿಪ ಮೂಡದ ಸರ್ಫ್ರಾಜ್ ನವಾಜ್, ಇಕ್ಬಾಲ್, ಪುತ್ತೂರಿನ ಅಬ್ದುಲ್ ರಫೀಕ್ ಎಂಬುವವರನ್ನು ವಶಕ್ಕೆ ಪಡೆಯಲಾಗಿತ್ತು. ಕೇರಳದ ಕಾಸರಗೋಡಿನ ಕುಂಜತ್ತೂರು ನಿವಾಸಿ ಅಬೀದ್ ಕೆ.ಎಂ. ಎಂಬಾತನನ್ನೂ ಬಂಧಿಸಲಾಗಿತ್ತು.