ಬೆಂಗಳೂರು: ಯುವ ಜಾತ್ಯತೀತ ಜನತಾದಳ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ನಿಖಿಲ್ ಕುಮಾರಸ್ವಾಮಿ ರಾಜೀನಾಮೆ ಸಲ್ಲಿಸಿದ್ದಾರೆ. ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ (Karnataka Election) ಪಕ್ಷ ಭಾರೀ ಸೋಲು ಕಂಡ ಹಿನ್ನೆಲೆಯಲ್ಲಿ ನಿಖಿಲ್ ರಾಜೀನಾಮೆ ನೀಡಿದ್ದಾರೆ.
ಚುನಾವಣೆಯಲ್ಲಿ ಪಕ್ಷದ ಸೋಲು ಬೇಸರ ಉಂಟು ಮಾಡಿದೆ. ಪಕ್ಷವನ್ನ ಪುನರ್ ಸಂಘಟನೆ ಮಾಡುವ ಅವಶ್ಯಕತೆ ಇದೆ. ನನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರೂ ಪಕ್ಷದ ಸಂಘಟನೆಗೆ ಸದಾ ನಿಲ್ಲುತ್ತೇನೆ. ಈ ಚುನಾವನೆಯ ಸೋಲನ್ನು ಮೆಟ್ಟಿ ನಾವೆಲ್ಲರೂ ಪಕ್ಷವನ್ನು ಬಲವಾಗಿ ಕಟ್ಟುವ ದಿಸೆಯಲ್ಲಿ ಅರ್ಪಣಾ ಮನೋಭಾವದಿಂದ ಕರ್ತವ್ಯ ನಿರ್ವಹಿಸಬೇಕಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಹೊಸ ನಾಯಕತ್ವಕ್ಕೆ ಅವಕಾಶ ಮಾಡಿ ಕೊಡಬೇಕಿದೆ. ಈ ನಿಟ್ಟಿನಲ್ಲಿ ನಾನು ಕರ್ನಾಟಕ ಪ್ರದೇಶ ಜನತಾ ದಳ (ಜೆಡಿಎಸ್) ಯುವ ಘಟಕಕ್ಕೆ ರಾಜೀನಾಮೆ ನೀಡಿದ್ದೇನೆ. ನನ್ನ ಈ ನಿರ್ಧಾರಕ್ಕೆ ಪಕ್ಷದ ಹಿರಿಯರು ಸಮ್ಮತಿ ನೀಡುತ್ತಾರೆ ಎಂದು ಭಾವಿಸಿದ್ದೇನೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ (87,690 ಮತ) ಎದುರು ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ (76,975 ಮತ) ಸೋಲು ಕಂಡಿದ್ದರು. ಪಕ್ಷದ ಸಾಧನೆ ಕೂಡ 19 ಸ್ಥಾನಗಳಿಗೆ ಸೀಮಿತವಾಗಿದೆ.