Site icon Vistara News

Karnataka Election 2023: ನನ್ನಮ್ಮ ಟಿಕೆಟ್‌ ಆಕಾಂಕ್ಷಿಯಲ್ಲ, ಮತ್ತೊಮ್ಮೆ ಸ್ಪರ್ಧೆಗೆ ಆಸಕ್ತಿ ಹೊಂದಿಲ್ಲ: ನಿಖಿಲ್ ಕುಮಾರಸ್ವಾಮಿ

Nikhil Kumaraswamy reacts to defeat in Ramanagara

ರಾಮನಗರ: ಪ್ರಸಕ್ತ ಸಾಲಿನ ವಿಧಾನಸಭಾ ಚುನಾವಣೆಯಲ್ಲಿ (‌Karnataka Election 2023) ನನ್ನ ಅಮ್ಮ ಅನಿತಾ ಕುಮಾರಸ್ವಾಮಿ ಟಿಕೆಟ್ ಆಕಾಂಕ್ಷಿ ಅಲ್ಲ. ಅವರಿಗೆ ಮತ್ತೊಮ್ಮೆ ಸ್ಪರ್ಧಿಸಲು ಆಸಕ್ತಿಯೂ ಇಲ್ಲ ಎಂದು ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಭವಾನಿ ರೇವಣ್ಣ ಅವರಿಗೆ ಹಾಸನ ಟಿಕೆಟ್‌ ಕೊಟ್ಟರೆ ತಾವೂ ಸಹ ಸ್ಪರ್ಧೆ ಮಾಡುವುದಾಗಿ ಅನಿತಾ ಕುಮಾರಸ್ವಾಮಿ ಕುಟುಂಬದಲ್ಲಿ ಪಟ್ಟು ಹಿಡಿದಿದ್ದಾರೆ ಎಂಬ ಚರ್ಚೆಗಳು ಎದ್ದಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪುತ್ರ ನಿಖಿಲ್‌, ಈ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಅನಿತಾ ಕುಮಾರಸ್ವಾಮಿಯವರು ಈಗಾಗಲೇ ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿದ್ದಾರೆ. ಹಿಂದೆ ಮಧುಗಿರಿ ಹಾಗೂ ರಾಮನಗರದಲ್ಲಿ ಅನಿರೀಕ್ಷಿತವಾಗಿ ಸ್ಪರ್ಧೆ ಮಾಡಿದ್ದರು. ಕಳೆದ ಬಾರಿ ರಾಮನಗರದಿಂದ ಸ್ಪರ್ಧೆಗೆ ನನಗೂ ಒತ್ತಡ ಇತ್ತು. ಆಗ ನಾನು ಸಿನಿಮಾದಲ್ಲಿ ಬ್ಯುಸಿಯಾಗಿದ್ದೆ. ಹಾಗಾಗಿ ಅನಿವಾರ್ಯ ಕಾರಣಗಳಿಂದ ತಾಯಿ ಸ್ಪರ್ಧೆ ಮಾಡಿ ಗೆದ್ದರು. ಅದರಂತೆ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕೆಲಸವನ್ನೂ ಮಾಡಿದ್ದಾರೆ. ಮತ್ತೆ ಅವರು ಟಿಕೆಟ್‌ ಆಕಾಂಕ್ಷಿಗಳಲ್ಲ, ಅವರಿಗೆ ಆಸಕ್ತಿಯೂ ಇಲ್ಲ ಎಂದು ತಿಳಿಸಿದ್ದಾರೆ.

ಎಲ್ಲ ಪಕ್ಷದಲ್ಲೂ ಗೊಂದಲಗಳು ಇದ್ದೇ ಇರುತ್ತವೆ. ಅಂತಿಮವಾಗಿ ವರಿಷ್ಠರು ಈ ಬಗ್ಗೆ ನಿರ್ಧಾರ ಮಾಡುತ್ತಾರೆ. ಕುಮಾರಸ್ವಾಮಿ ಅವರು ಹೇಳಿದ ಮೇಲೆಯೇ ನನಗೆ ನಾಮಪತ್ರ ಸಲ್ಲಿಕೆ ವಿಚಾರ ಗೊತ್ತಾಗಿದ್ದು. ನಾನು ನಾಮಪತ್ರ ಸಲ್ಲಿಸುವ ಬಗ್ಗೆ ಇನ್ನೂ ಚರ್ಚೆ ಆಗಿಲ್ಲ. ದೇವೆಗೌಡರ ಬಳಿ‌ ಚರ್ಚೆ ಮಾಡಿ ಸೂಕ್ತ ದಿನಾಂಕವನ್ನು ನಿಗದಿ ಮಾಡುತ್ತೇವೆ. ನಾಮಪತ್ರ ಸಲ್ಲಿಕೆ ದಿನ ದೇವೇಗೌಡರು ಬರುವ ಬಗ್ಗೆ ಚರ್ಚೆ ಆಗಿಲ್ಲ. ದೇವೇಗೌಡರಿಗೆ ಆರೋಗ್ಯದಲ್ಲಿ ಏರುಪೇರಾಗಿದೆ. ಅವರಿಗೆ ಈ ಸಮಯದಲ್ಲಿ ಒತ್ತಡ ಹೇರುವಂತಹದ್ದು ಸರಿಯಲ್ಲ. ಆದರೆ ನಾನು ಭೇಟಿಯಾದ ಸಮಯದಲ್ಲಿ ರಾಮನಗರ ತಂದೆ ತಾಯಿಯರ ಆಶೀರ್ವಾದಕ್ಕಾಗಿ ಬರಬೇಕು ಅಂತ ಹೇಳುತ್ತಾರೆ. ಅವರ ಈ ಉತ್ಸಾಹ ನಮ್ಮಂತಹ ಯುವಕರಿಗೆ ಪಕ್ಷಕಟ್ಟಲು ಸ್ಫೂರ್ತಿಯಾಗಿದೆ. ಮುಂದಿನ ದಿನಗಳಲ್ಲಿ ದೇವೆಗೌಡರು ಪಕ್ಷದ ಪ್ರಚಾರದಲ್ಲಿ ಭಾಗಿಯಾಗುತ್ತಾರೆ ಎಂದರು.

ಇದನ್ನೂ ಓದಿ | Karnataka Election: ಶಿವಲಿಂಗೇಗೌಡ ಕಾಂಗ್ರೆಸ್‌ನ ಡಕೋಟ ಬಸ್‌ ಹತ್ತಿದ್ದಾನೆ, ಎಲ್ಲಿ ನಿಂತ್ಕೊಳ್ಳುತ್ತೋ ಗೊತ್ತಿಲ್ಲ: ಎಚ್‌.ಡಿ.ರೇವಣ್ಣ

ರಾಮನಗರ ಹೊರತುಪಡಿಸಿ ಬೇರೆ ಕ್ಷೇತ್ರದ ಅಭ್ಯರ್ಥಿ ಗೆಲ್ಲಿಸುವ ಟಾಸ್ಕ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಹಳೇ ಮೈಸೂರು ಭಾಗದ ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆ ಮಾಡುವಂತಹ ಕೆಲಸ ಮಾಡುತ್ತಿದ್ದೇನೆ. ಆದರೆ, ಈ ಬಾರಿ ನಾನು ಪ್ರಥಮವಾಗಿ ರಾಮನಗರ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದೇನೆ. ಜತೆಗೆ ಈಗಾಗಲೇ ಕ್ಷೇತ್ರದಲ್ಲಿ 4 ತಿಂಗಳಿಂದ ಮನೆ ಮನೆಗೂ ಭೇಟಿ ನೀಡಿದ್ದೇನೆ. ಅವರು ನನ್ನನ್ನ ಗೆಲ್ಲಿಸುತ್ತಾರೆ ಎಂಬ ಭಾವನೆ ಇಟ್ಟುಕೊಂಡಿದ್ದೇನೆ ಎಂದು ಹೇಳಿದರು.

ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಅವರ ವಿರುದ್ಧ ಯಾರು ಕುತಂತ್ರ ನಡೆಸಲು ಆಗುವುದಿಲ್ಲ. ಕುಮಾರಸ್ವಾಮಿ ಅವರು ಒಬ್ಬರೇ ರಾಜ್ಯದ ಜನರಿಗಾಗಿ ಹೋರಾಟ ಮಾಡುತ್ತಿದ್ದಾರೆ. ನಾನು ಸೇರಿದಂತೆ ತಾಲೂಕಿನ ಮುಖಂಡರು ಎಲ್ಲರೂ ಕುಮಾರಸ್ವಾಮಿ ಅವರ ಪರವಾಗಿದ್ದಾರೆ. ರಾಮನಗರದಂತೆ ಚನ್ನಪಟ್ಟಣಕ್ಕೂ ಕೂಡ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಚನ್ನಪಟ್ಟಣ ಕ್ಷೇತ್ರಕ್ಕೂ ಹಣ ಬಿಡುಗಡೆ ಮಾಡಿಸಿ ಕೆಲಸ ಮಾಡಿಸಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಅವರನ್ನು ಕ್ಷೇತ್ರದ ಜನತೆ ಕೈ ಹಿಡಿಯುತ್ತಾರೆ ಎಂದು ತಿಳಿಸಿದರು.

ಜೆಡಿಎಸ್ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಇಂದು ಮಂಗಳವಾರ. ದೇವೇಗೌಡರು ಹಲವಾರು ರಿಸ್ಟ್ರಿಕ್ಷನ್ ಇಟ್ಟುಕೊಂಡಿದ್ದಾರೆ. ನಾಳೆ ಅಥವಾ ನಾಡಿದ್ದು 2ನೇ ಪಟ್ಟಿ ಬಿಡುಗಡೆ ಮಾಡುತ್ತಾರೆ ಎಂದು ತಿಳಿಸಿದರು.

ಹಾಸನ ಟಿಕೆಟ್ ಗೊಂದಲದ ಬಗ್ಗೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಹಾಸನ ಅಭ್ಯರ್ಥಿ ಬಗ್ಗೆ ದೇವೇಗೌಡರು ಅಂತಿಮವಾಗಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ಕುಮಾರಸ್ವಾಮಿ, ರೇವಣ್ಣ, ಇಬ್ರಾಹಿಂ ಸೇರಿ ಹಾಸನ ಟಿಕೆಟ್ ಬಗ್ಗೆ ತಿರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.

ಭವಾನಿ ರೇವಣ್ಣ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಬಗ್ಗೆ ಭವಾನಿ ರೇವಣ್ಣ ಅವರು ಯೋಚನೆ ಮಾಡಿರುವುದಿಲ್ಲ. ಆ ಬಗ್ಗೆ ಗೊಂದಲ ಮಾಡುವುದು ಸರಿಯಲ್ಲ. ಪಕ್ಷದ ವರಿಷ್ಠರು ಏನೇ ತಿರ್ಮಾನ ಮಾಡಿದರೂ ನಾವು ಬದ್ಧರಾಗಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ನಾನು ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ ಎಂಬುದು ಕೇವಲ ವದಂತಿ: ಅನಿತಾ ಕುಮಾರಸ್ವಾಮಿ

ರಾಮನಗರ: ಹಾಸನ ಟಿಕೆಟ್ ಗೊಂದಲದಲ್ಲಿ ತಮ್ಮ ಹೆಸರು ಚರ್ಚೆಯಾಗುತ್ತಿರುವುದಕ್ಕೆ ಶಾಸಕಿ ಅನಿತಾ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ನಾನು ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ ಎಂಬುದು ಕೇವಲ ವದಂತಿ. ಇದು ಶುದ್ಧ ಸುಳ್ಳು ಮತ್ತು ಅಪಪ್ರಚಾರದ ಮತ್ತೊಂದು ಭಾಗ. ಮತ್ತೊಮ್ಮೆ ನಾನು ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಹಿಂದೆಯೇ ಸ್ಪಷ್ಟಪಡಿಸಿದ್ದೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | BJP Karnataka: ಬಿಜೆಪಿ ಅಭ್ಯರ್ಥಿಗಳ ನಕಲಿ ಪಟ್ಟಿ ಕಾಂಗ್ರೆಸ್‌ ಸೃಷ್ಟಿ ಎಂದ ಬಿಜೆಪಿ: ಪೊಲೀಸ್‌ ದೂರು ದಾಖಲು

ರಾಮನಗರ ಕ್ಷೇತ್ರವನ್ನು ಈಗಾಗಲೇ ನನ್ನ ಪುತ್ರ ನಿಖಿಲ್‌ ಕುಮಾರಸ್ವಾಮಿ ಅವರಿಗೆ ಬಿಟ್ಟುಕೊಟ್ಟಿದ್ದೇನೆ. ನಾನು ಪುನಃ ಸ್ಪರ್ಧಿಸುವ ಮಾತೆಲ್ಲಿ? 2008ರಲ್ಲಿ ಆಪರೇಷನ್‌ ಕಮಲದ ಉಪಚುನಾವಣೆಯಲ್ಲಿ ಪಕ್ಷ ಮತ್ತು ಎಚ್‌ಡಿಕೆ ಅವರ ಆದೇಶಕ್ಕೆ ಗೌರವ ಕೊಟ್ಟು ಮಧುಗಿರಿಯಲ್ಲಿ ಸ್ಪರ್ಧಿಸಿದ್ದೆ. 2018ರಲ್ಲಿ ಮತ್ತೆ ರಾಮನಗರ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದೆ. ಹೀಗೆ ಎರಡು ಸಲವೂ ಪಕ್ಷ ಹಾಗೂ ವರಿಷ್ಠರ ಆದೇಶವನ್ನು ಪಾಲಿಸಿದ್ದೇನೆ. ಚುನಾವಣೆಯ ಕಣದಿಂದ ಹಿಂದೆ ಸರಿದು ಪಕ್ಷದ ಶ್ರೇಯೋಭಿವೃದ್ಧಿ ಹಾಗೂ ನನ್ನ ಕ್ಷೇತ್ರದ ಜನರ ಒಳಿತಿಗಾಗಿಯಷ್ಟೇ ಕೆಲಸ ಮಾಡುತ್ತಿದ್ದೇನೆ.
ಹೀಗಾಗಿ ಯಾರೂ ಇಂಥ ವದಂತಿಗಳನ್ನು ಹಬ್ಬಿಸಬಾರದು ಮತ್ತೂ ನಂಬಬಾರದು. ಎಚ್.ಡಿ.ದೇವೇಗೌಡರು ಕಟ್ಟಿದ ಪಕ್ಷಕ್ಕೆ ಧಕ್ಕೆ ತರುವ ಕೆಲಸ ಮಾಡಿಲ್ಲ. ದಯಮಾಡಿ ನನ್ನ ಭಾವನೆಗಳನ್ನು ಗೌರವಿಸಿ ಎಂದು ಟ್ವೀಟ್ ಮಾಡಿದ್ದಾರೆ.

ಸ್ಪರ್ಧೆ ಬಗ್ಗೆ ಅನಿತಾ ಕುಮಾರಸ್ವಾಮಿ ಟ್ವೀಟ್‌

Exit mobile version